ಸುತ್ತಿ ಕುರುವತ್ತಿ ಕುರುವತ್ತಿಯಲ್ಲಿ ಮಾ.6ರಿಂದ ಜಾತ್ರೆ ಶುರುವಾಗಿದ್ದು, 12ರ ವರೆಗೆ ನಡೆಯಲಿದೆ. 11ರಂದು ಸಂಜೆ 4.30ಕ್ಕೆ ವೈಭವದ ರಥೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಒಂದು ಕ್ಷೇತ್ರ ದರ್ಶನ... ಹಿರೇಕುರುವತ್ತಿ. ಇದು ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಪಟ್ಟಣದಿಂದ ನೈರುತ್ಯ ದಿಕ್ಕಿನಲ್ಲಿ 36 ಕಿ.ಮೀ. ದೂರವಿದೆ. ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ಪಟ್ಟಣದಿಂದ ಪಶ್ಚಿಮ ದಿಕ್ಕಿಗೆ 35 ಕಿ.ಮೀ. ದೂರದಲ್ಲಿ ತುಂಗ -ಭದ್ರೆಯ ತಟದಲ್ಲಿ ಬೇರೂರಿದೆ. ಬಸವೇಶ್ವರ, ಮಲ್ಲಿಕಾರ್ಜುನ ದೇವರ ದೇಗುಲಗಳು ಇಲ್ಲಿನ ವಿಶೇಷ. ಅಲ್ಲದೆ, ಇದು ದಕ್ಷಿಣದ ವಾರಾಣಸಿ ಅಂತಲೇ ಪ್ರಸಿದ್ಧಿ. ಮಲ್ಲಿಕಾರ್ಜುನ ದೇಗುಲ ಇಲ್ಲಿನ ಮಲ್ಲಿಕಾರ್ಜುನ ದೇಗುಲವನ್ನು ಚಾಲುಕ್ಯರ ಅಹವಮಲ್ಲದೇವನು ನಿರ್ಮಿಸಿದ್ದಾನೆ. ದೇಗುಲ ಸಂಪೂರ್ಣ ಕಪ್ಪು ಶಿಲೆಯಿಂದ ಕೂಡಿದೆ. ಗುಡಿಯ ತಳದಲ್ಲಿ ಸುತ್ತಲು ಸಿಂಹ ಪ್ರತಿಮೆಗಳನ್ನು ಚಿತ್ರಿಸಲಾಗಿದೆ. ಪೂರ್ವ ದಿಕ್ಕಿನ ಪ್ರಥಮ ದ್ವಾರದ ಕಂಬಗಳ ಮೇಲೆ ಮದನಿಕೆಯರ ವಿಗ್ರಹಗಳಿವೆ. ಗರ್ಭಗೃಹದಲ್ಲಿ ಈಶ್ವರ ಲಿಂಗವಿದೆ. ಬಾಗಿಲ ಮೇಲೆ ಎರಡು ಆನೆಗಳ ಮಧ್ಯೆ ಗಜಲಕ್ಷ್ಮಿ ಕಂಗೊಳಿಸಿದರೆ, ಪಾರ್ಶ್ವದಲ್ಲಿ ಮಕರ ತೋರಣಗಳು ಶೋಭಿಸುತ್ತಿವೆ. ನವರಂಗ ಮಂಟಪ, ಈ ಗುಡಿಯು ವೇಸರ ಶೈಲಿಯ ಮಾದರಿ ಎಂಬುದು ಇತಿಹಾಸಕಾರ ಅ. ಸುಂದರ ಅವರ ಅಭಿಪ್ರಾಯ. ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿದ್ದರೂ ಹೊಯ್ಸಳರ ಅರಸರ ಬೇರೆ ಬೇರೆ ಅವಧಿಯಲ್ಲಿ ಹೊಸ ಹೊಸ ಭಾಗ ಸೇರಿಸಿಕೊಂಡು ವಿಸ್ತರಿಸಿ ಚಾಲುಕ್ಯರಿಂದ ಹೊಯ್ಸಳರಿಗೆ ಕೊಂಡಿಯಾಗಿದೆ. ನಂದಿ ಮೂರ್ತಿ ಮಲ್ಲಿಕಾರ್ಜುನ ದೇವರ ಎದುರಿಗೆ ಸುಂದರ ನಂದಿಯ ದೊಡ್ಡ ವಿಗ್ರಹ ವಿರಾಜಮಾನವಾಗಿದೆ. ಇಲ್ಲಿ ಮಲ್ಲಿಕಾರ್ಜುನ ದೇವರಿಗಿಂತ ಬಸವಣ್ಣನೇ ಬಹಳ ಪ್ರಸಿದ್ಧ. ಮಲ್ಲಿಕಾರ್ಜುನಸ್ವಾಮಿ, ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಎಂದು ಕರಪತ್ರ ಹಾಕಿಸಿದ್ದರೂ, ಕುರುವತ್ತಿ ಬಸವಣ್ಣನ ಜಾತ್ರೆಗೆ ಹೋಗುತ್ತೇವೆ ಎಂದು ಭಕ್ತರು ಸಾಮಾನ್ಯಾಗಿ ಹೇಳುತ್ತಾರೆ. ದೇವಸ್ಥಾನದ ಹತ್ತಿರದಲ್ಲಿಯೇ ಭವ್ಯವಾದ ಸಿಂಹಾಸನದ ಕಟ್ಟೆ ಇದೆ. ಈ ಕಟ್ಟೆ ಮಲ್ಲಿಕಾರ್ಜುನ ದೇವರ ಗುಡಿ ನಿರ್ಮಿಸಿದ ಕಾಲದಲ್ಲಿಯೇ ನಿರ್ಮಿಸಿರಬೇಕು ಎಂಬುದು ಸಂಶೋಧಕ ಕುಂ.ಬಾ. ಸದಾಶಿವಪ್ಪ ಹೇಳುತ್ತಾರೆ. 'ಕುಂಟಾ ಕುಂಟಾ ಕುರುವತ್ತಿ, ರಂಟಿ ಹೊಡಿಯೋ ಮಹದೇವ...' ಹೀಗೆ ಈ ಭಾಗದಲ್ಲಿ ರೈತರ ಚಿಕ್ಕಮಕ್ಕಳು ಹಳ್ಳಿಗಳಲ್ಲಿ ಆಟ ಆಡುವಾಗ ಹಾಡುವರು. ಪ್ರತಿವರ್ಷ ಮಾರ್ಚ್ ತಿಂಗಳಲ್ಲಿ ಇಲ್ಲಿ ಒಂದು ವಾರಗಳ ಕಾಲ ಜಾತ್ರೆ ನಡೆಯುತ್ತದೆ. ಅದರಲ್ಲಿ ರಥೋತ್ಸವ ಕೇಂದ್ರ ಬಿಂದು. ಈ ಜಾತ್ರೆಯ ವಿಶೇಷ ವೆಂದರೆ ದೊಡ್ಡ ಮಟ್ಟದ ದನಗಳ ಜಾತ್ರೆ ನಡೆಯುತ್ತದೆ. ಇಲ್ಲಿ ದನಗಳನ್ನು ಮಾರಾಟ ಮಾಡಲು, ರೀದಿ ಮಾಡಲು ದೂರ ದೂರದಿಂದ ಜನರು ಆಗಮಿಸುತ್ತಾರೆ. ಈ ಭಾಗದ ರೈತರು ತಮ್ಮ ಎತ್ತುಗಳಿಗೆ ಕುರುವತ್ತಿ ಮತ್ತು ಮಹದೇವರೆಂದು ಹೆಸರಿಟ್ಟುಕೊಳ್ಳುವರು. ಎತ್ತು ಮುಂದಕ್ಕೆ ಹೋಗದಿದ್ದರೆ, 'ಏ ಕುರುವತ್ತಿ, ಏ ಮಹದೇವ' ಎಂದು ಬೆದರಿಸುತ್ತಾರೆ. - ಬಿ.ರಾಮಪ್ರಸಾದ್ ಗಾಂಧಿ ಚಿತ್ರ: ಕರಿಬಸಪ್ಪ ಪರಶೆಟ್ಟಿ