ಬಿಸಿಲೂರ ಬುದ್ಧ ಗುಲ್ಬರ್ಗ ಎನ್ನುವ ಬಿಸಿಲ ನಾಡು ಮನಕೆ ತಂಪು ನೀಡುವ ಶಾಂತಿ ಸಂದೇಶ ಸಾರುವ ಬೀಡು. ಇದು ಮಹಾಬೋಧಿ ಗೌತಮ .. ಗುಲ್ಬರ್ಗ ಎನ್ನುವ ಬಿಸಿಲ ನಾಡು ಮನಕೆ ತಂಪು ನೀಡುವ ಶಾಂತಿ ಸಂದೇಶ ಸಾರುವ ಬೀಡು. ಇದು ಮಹಾಬೋಧಿ ಗೌತಮ ಬುದ್ಧ ನೆಲೆಸಿರುವ ತಾಣ. ಇಲ್ಲಿನ ಬುದ್ಧವಿಹಾರ ಪ್ರವಾಸಿ ಕೇಂದ್ರವಾಗಿ, ಆಧ್ಯಾತ್ಮಿಕ ತಾಣವಾಗಿ ದೇಶ, ವಿದೇಶಿಗರನ್ನು ಸೆಳೆಯುತ್ತಿದೆ. 75 ಎಕರೆ ಪ್ರದೇಶದಲ್ಲಿ 32,450 ಚದರ ಅಡಿ ವ್ಯಾಪ್ತಿಯಲ್ಲಿ 8 ಕೋಟಿ ವೆಚ್ಚದಲ್ಲಿ ತಲೆ ಎತ್ತಿದೆ ಬುದ್ಧವಿಹಾರ. ಇಲ್ಲಿ ಅಜಂತಾ, ಎಲ್ಲೋರಾ ಮಾದರಿಯ ಕಲಾಶೈಲಿ ಅಳವಡಿಸಿರುವುದು ವಿಶೇಷ. ವಿಹಾರದ ನೆಲಮನೆ ಆವರಣದಲ್ಲಿ ಸುಮಾರು 2 ಸಾವಿರ ಭಕ್ತರು ಏಕಕಾಲಕ್ಕೆ ಪ್ರಾರ್ಥನೆ ಸಲ್ಲಿಸಬಹುದು. ಹೊರ ಭಾಗದಲ್ಲಿರುವ ಸ್ತೂಪಗಳನ್ನು ಇಟಾಲಿಯನ್ ಮಾರ್ಬಲ್ನಿಂದ ತಯಾರಿಸಲಾಗಿದೆ. ಅಶೋಕನ ಕಾಲದ ಮಾದರಿಯಂತೆ ನಾಲ್ಕೂ ದಿಕ್ಕುಗಳಲ್ಲಿ ಸ್ತಂಭಗಳನ್ನು ನಿರ್ಮಿಸಲಾಗಿದೆ. ಬೀಟೆಯ ದ್ವಾರಗಳ ಕೆತ್ತನೆಯೂ ಮನಮೋಹಕ. ಮೈಸೂರು ಅರಮನೆ ಕಲಾವಿದರ ಕುಟುಂಬದ ಕೈಸರ್ ಅಲಿ ಸಾಂಪ್ರದಾಯಿಕ ಮಾದರಿಯಲ್ಲಿ ಈ ದ್ವಾರಗಳನ್ನು ನಿರ್ಮಿಸಿದ್ದಾರೆ. ದಕ್ಷಿಣ ಭಾರತದಲ್ಲಿಯೇ ಅತ್ಯಂತ ದೊಡ್ಡದಾದ ಪಂಚಲೋಹದ ವಿಗ್ರಹಕ್ಕೆ ಬಂಗಾರದ ಲೇಪನ ಮಾಡಲಾಗಿದೆ. ಇದನ್ನು 2004ರಲ್ಲಿ ಬ್ಯಾಂಕಾಕ್ನಿಂದ ತರಿಸಲಾಗಿದ್ದು, ಪ್ರಾರ್ಥನಾಮಂದಿರದಲ್ಲಿ ಇಡಲಾಗಿದೆ. ಇದೇ ಆವರಣದಲ್ಲಿ ವಸ್ತು ಸಂಗ್ರಹಾಲಯ, ಸಭಾಂಗಣ, ಅತಿಥಿಗೃಹ, ಭೋಜನಶಾಲೆಗಳಿವೆ. ವಿಶಾಲ ಉದ್ಯಾನವಿದೆ. ಬಿಸಿಲೂರಿಗೆ ಬಂದಾಗ ಇಲ್ಲಿಗೆ ಭೇಟಿ ಕೊಡಲು ಮರೆಯಬೇಡಿ. ಚಿತ್ರ-ಲೇಖನ: ರಾಜಶೇಖರ ಜೆ.ವನದುರ್ಗಾ