ಒತ್ತಿನೆಣೆ...ನಿಂಗ್ಯಾರೆ ಎಣೆ? ಎತ್ತ ನೋಡಿದರೂ ಹಸಿರು. ತಣ್ಣನೆ ಗಾಳಿ. ಮನಕ್ಕೆ ಮುದ ನೀಡುವ ಗಿರಿತಾಣ. ಕಾನನದ ಹಸಿರಿನ ನಡುವೆ ಸಮುದ್ರದ ಅಬ್ಬರ. ಸಂಜೆಯಂತೂ ಸೂರ್ಯನೇ ಧರೆಗಿಳಿದ ಅನುಭವ. ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಈ ನಿಸರ್ಗಧಾಮವೇ ಒತ್ತಿನೆಣೆ ಕಡಲ ತೀರ. ಉಡುಪಿ ಜಿಲ್ಲೆಯ ಕುಂದಾಪುರದಿಂದ 40 ಕಿ.ಮೀ. ಪಯಣಿಸಿ ಅಲ್ಲಿಂದ ಎಡಕ್ಕೆ ಮಣ್ಣಿನ ರಸ್ತೆಯಲ್ಲಿ 2 ಕಿ.ಮೀ. ಕ್ರಮಿಸಿದರೆ ಒತ್ತಿನೆಣೆ ನಿಸರ್ಗಧಾಮ ಕಣ್ತುಂಬುತ್ತದೆ. ಮುಗಿಲೆತ್ತರ ಚಾಚಿ ನಿಂತಿರುವ ಗುಡ್ಡದ ಮೇಲಿನಿಂದ ವಿಶಾಲವಾದ ಕಡಲನ್ನು ನೋಡುವುದು ಒಂದು ರೋಚಕ ಅನುಭವ. ಸಮುದ್ರದ ದಡಕ್ಕೆ ಇಳಿಯಬೇಕೆಂದಿದ್ದರೆ ಸಾಲು ಮೆಟ್ಟಿಲುಗಳ ಪಯಣ. ತಡೆಯಿಲ್ಲದ ನಿರಂತರವಾಗಿ ಕಿವಿಗಪ್ಪಳಿಸುವ ಅಲೆಗಳ ನರ್ತನವನ್ನು ಅಸ್ವಾದಿಸುತ್ತಾ ಸಮುದ್ರದ ಬದಿಯಲ್ಲಿ ನಡೆದು ಹೋಗುವುದೇ ಒಂದು ಅದ್ಭುತ ಅನುಭವ. ಸಂಜೆಯಾಗುತ್ತಿದ್ದಂತೆ ಸೂರ್ಯ ಮರೆಯಾಗುವ ಸುಂದರ ದೃಶ್ಯ ಮನಸ್ಸನ್ನು ಆಹ್ಲಾದಗೊಳಿಸುತ್ತದೆ. ಬಾನಂಗಳದಿ ಕೆಂಪಾಗಿ ಕತ್ತಲಾಗುವ ನಿಸರ್ಗದ ಅಪೂರ್ವ ಸೌಂದರ್ಯವಂತೂ ಸೋಜಿಗ. ಪ್ರವಾಸಿಗರಿಗೆ ವಿಶ್ರಾಂತಿ ಪಡೆಯಲು ಇಲ್ಲೇ ಕ್ಷಿತಿಜ ನಿಸರ್ಗಧಾಮವಿದೆ. ಬಾಡಿಗೆ ಕೋಣೆಗಳೂ ಇಲ್ಲಿ ಲಭ್ಯವಿದ್ದು, ಸಮುದ್ರ ವೀಕ್ಷಣೆಗೆ ಸಹಕಾರಿಯಾಗಿವೆ. ಇಲ್ಲಿಂದಲೇ ಪ್ರಕೃತಿಯ ಸೌಂದರ್ಯವನ್ನು ಸವಿಯಬಹುದು. ಒತ್ತಿನೆಣೆ ಕಡಲ ತೀರವು ಛಾಯಾಗ್ರಾಹಕರಿಗೆ ಅತ್ಯದ್ಭುತ ದೃಶ್ಯಗಳನ್ನು ದಯಪಾಲಿಸುವ ಜಾಗ. ನಿಸರ್ಗಧಾಮದ ಇಕ್ಕೆಲಗಳಲ್ಲಿ ಯಾವುದೇ ಅಂಗಡಿಗಳೂ ಕಾಣಸಿಗುವುದಿಲ್ಲ. ಆದ್ದರಿಂದ ಆಹಾರ ಬಳಕೆಯ ವಸ್ತುಗಳನ್ನು ಕಟ್ಟಿಕೊಂಡೇ ಹೋಗಬೇಕು. ಸಮುದ್ರಕ್ಕೆ ಹೊಂದಿಕೊಂಡಂತೆ ಸೋಮೇಶ್ವರ ದೇಗುಲವಿದ್ದು, ಕಡಲ ತೀರಕ್ಕೆ ಬರುವ ಪ್ರವಾಸಿಗರೂ ದೇವರ ದರ್ಶನವನ್ನೂ ಪಡೆಯಬಹುದು. ಬೈಂದೂರಿನಿಂದ ಶಿರೂರು ರಸ್ತೆಯಲ್ಲಿ 8 ಕಿ.ಮೀ. ಸಾಗಿದರೆ ತೂದಳ್ಳಿ ಎಂಬ ಊರು ಸಿಗುತ್ತದೆ. ಅಲ್ಲಿಂದ ಸುಮಾರು 15 ನಿಮಿಷ ಕಾಲ್ನಡಿಯಲ್ಲಿ ಕ್ರಮಿಸಿದರೆ ಕೂಸಳ್ಳಿ ಜಲಪಾತವನ್ನು ಸವಿಯಲು ಸಾಧ್ಯ. ಪ್ರವಾಸೋದ್ಯಮ ಇಲಾಖೆಯಿಂದ ಸಂರಕ್ಷಿಸಲ್ಪಟ್ಟ ಜಲಪಾತವಾದ್ದರಿಂದ ಶುಲ್ಕ ಪಾವತಿಸಿ ಜಲವೈಭವವನ್ನು ಆನಂದಿಸಬೇಕು. ವರ್ಷವಿಡೀ ಕೂಸಳ್ಳಿ ಜಲಪಾತದಲ್ಲಿ ನೀರಿರುವುದರಿಂದ ಗ್ರಾಮಸ್ಥರಿಗೆ ಇದುವೇ ಜೀವನಾಧಾರ. - ಸುಪ್ರಿತಾ ಸಾಲ್ಯಾನ್‌ ಚಿತ್ರ: ಅಭಿಷೇಕ್ ಡಿ.