ನಂದಳಿಕೆ ನೋಟ ಒಂದು ಕಾಲದಲ್ಲಿ ಕುಗ್ರಾಮದಂತಿದ್ದು, ಕವಿ ಮುದ್ದಣನಿಂದಲೇ ಪ್ರಖ್ಯಾತಿ ಪಡೆದ ಊರು ನಂದಳಿಕೆ. ಈ ಊರಿನವರ ಅರಾಧ್ಯ ದೇವರು ಮಹಾಲಿಂಗೇಶ್ವರ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿಗೆ ಸೇರಿದ ಗ್ರಾಮ. ಈ ದೇಗುಲಕ್ಕೆ ಐದು ಶತಕಗಳ ಇತಿಹಾಸವಿದೆ. ಚಾರಿತ್ರಿಕ ಹಿನ್ನೆಲೆ ನಂದನೆಂಬ ಅರಸನ ಆಡಳಿತಕ್ಕೆ ಒಳಪಟ್ಟಿದ್ದ ಈ ಪ್ರದೇಶ ಮುಂದೆ ನಂದಳಿಕೆ ಎಂಬ ಹೆಸರಿನಿಂದಲೇ ಖ್ಯಾತಿ ಪಡೆಯಿತು. ಜೈನ ವಂಶದ ಗುಣಪಾಲ ನಂದ ಅರಸರ ವಂಶಸ್ಥ. ಈತ ಇಲ್ಲಿ ಜಿನ ಮಂದಿರ ಸ್ಥಾಪಿಸಬೇಕು ಎಂಬ ಉದ್ದೇಶದಿಂದ ಶಿಲಾಮಯ ಮಂದಿರ ಹಾಗೂ ಕೆರೆ ನಿರ್ಮಿಸಿದ. ಆದರೆ, ಬಂಟರು ಮತ್ತು ಜೈನ ಅರಸರ ನಡುವಿನ ವೈಮನಸ್ಸು, ಕದನಗಳಿಂದಾಗಿ ಜೈನ ಅರಸ ತನ್ನವರೊಂದಿಗೆ ಊರು ಬಿಟ್ಟು ಕಾರ್ಕಳಕ್ಕೆ ಹೊರಟುಹೋದ. ಪುರಾಣ ಹಿನ್ನೆಲೆ ತುಳುನಾಡಿನಲ್ಲಿ ದೈವಿಕ ಶಕ್ತಿ ಹೊಂದಿದ್ದವಳು ಸತ್ಯದ ಕುಮಾರಿ ಸಿರಿ. ಆಕೆ ಕೊಟ್ರಾಡಿಯ ಕೊಡ್ಸರಾಳ್ವನನ್ನು ಎರಡನೇ ಮದುವೆಯಾಗಿ ಜನಿಸಿದ ಹೆಣ್ಣು ಮಗುವನ್ನು ಕಾನಬೆಟ್ಟಿನ ಚಂದು ಪೆರ್ಗಡೆಗೆ ಒಪ್ಪಿಸಲು ಹೇಳಿ ಮಾಯವಾಗುತ್ತಾಳೆ. ಅ ಮಗು ಮುಂದೆ ಸೊನ್ನೆ ಎಂಬ ಹೆಸರಿನಿಂದ ಬೆಳೆದು ಅವಳಿಗೆ ಹುಟ್ಟುವ ಮಕ್ಕಳೇ ಅಬ್ಬಗ ಮತ್ತು ದಾರಗ. ಇವರು ದೈವದತ್ತರು. ಕೆಲವು ಸಮಯದ ಬಳಿಕ ಇವರು ಸತ್ತ ಮೇಲೆ, ಚಿತೆಯಿಂದ ಬಂಗಾರದ ಜೋಡು ದುಂಬಿಗಳು ಮೇಲೇರಿ ಹಾರಿ ಮಾಯಾವಾಗುತ್ತದೆ. ಮುಂದೆ ಇವರಿಬ್ಬರು ತಾಯಿ ಸಿರಿ ಮತ್ತು ಮಾವ ಕುಮಾರನೊಂದಿಗೆ ಸೇರಿ ನಂದಳಿಕೆಯಲ್ಲಿ ನೆಲೆ ನಿಲ್ಲುತ್ತಾರೆ ಎಂದು ಇಲ್ಲಿನ ಕಥೆ. ಆಲಡೆ ಎಂದು ಹೆಸರು ಅಬ್ಬಗದಾರಗರು ಮಡಿದ ಕೆದಿಂಜೆ ಉರ್ಕಿದೊಟ್ಟಿನಲ್ಲಿ ಪ್ರತಿದಿನ ಅವರಿಗೆ ಪೂಜೆ ಸಲ್ಲುತ್ತದೆ. ಆಗಿನ ಕಾಲದಲ್ಲಿ ನಂದಳಿಕೆಯಲ್ಲಿ ವೀರಭದ್ರ ಸ್ವಾಮಿ, ನಂದಿಗೋಣ, ರಕ್ತೇಶ್ವರಿ, ಖಡ್ಗೇಶ್ವರಿ ಗುಡಿಗಳಿದ್ದು ಇದನ್ನು ಆಲಡೆಯೆಂದು ಕರೆಯುತ್ತಾರೆ. ಒಂದು ಬಾರಿ ಪರ್ಯಟನೆಗೆಂದು ಹೊರಟಿದ್ದ ಉಡುಪಿ ಸೋದೆ ಮಠದ ಶ್ರೀ ವಾದಿರಾಜ ಸ್ವಾಮಿ ನಂದಳಿಕೆಗೆ ಬರುತ್ತಾರೆ. ಇಲ್ಲಿ ದೇವಸ್ಥಾನವಿಲ್ಲದೆ ಇರುವುದರಿಂದ ಭಿಕ್ಷೆ ಸ್ವೀಕರಿಸಲು ನಿರಾಕರಿಸುತ್ತಾರೆ. ಇದರಿಂದ ನೊಂದುಕೊಂಡ ಹೂವಯ್ಯ ಹೆಗ್ಗಡೆಯ ಕನಸಿನಲ್ಲಿ ಬಂದ ಅಬ್ಬಗ- ದಾರಗರು 'ಗುಣಪಾಲ ಕಟ್ಟಿಸಿದ ಜಿನ ದೇವಾಲಯದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಪಂಚಲೋಹ ವಿಗ್ರಹ ಸ್ಥಾಪಿಸುವಂತೆ ತಿಳಿಸುತ್ತಾರೆ. ಮುಂದೆ ಇದೇ ಪ್ರಕಾರವಾಗಿ ನಡೆದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಿರ್ಮಾಣವಾಗುತ್ತದೆ. ನಂದಳಿಕೆಯಲ್ಲಿ ಏನೇನಿದೆ? ಇಲ್ಲಿ ಪ್ರತಿಮಾಗೃಹ, ವಸಂತ ಮಂಟಪ, ವ್ಯಾಘ್ರ ಚಾಮುಂಡಿ ಗೋಪುರ, ಗಜಮಲ್ಲಿ ಭೂತ ಯೋಧನ ಗುಡಿ, ಮೂಲ ನಾಗಬನ, ಪ್ರತಿವರ್ಷ ನಡೆಯುವ ಉತ್ಸವ, ದೇಗುಲದ ಸುತ್ತ ಹರಿಯುವ ಕಿರುತೊರೆ ಇಲ್ಲಿನ ಪ್ರಮುಖ ಆಕರ್ಷಣೆ. ನಾಗಮಂಡಲ ಕೆತ್ತನೆಯ ಕಲಾಕೃತಿಯುಳ್ಳ ನಾಗ ಕಲ್ಲು ಇಲ್ಲಿರುವ ವಿಶೇಷತೆ. ಚಾವಡಿ ಮನೆ ಇದು ದೇಗುಲದಿಂದ ಎರಡು ಫರ್ಲಾಂಗು ದೂರದಲ್ಲಿದೆ. ಭವ್ಯ ಅರಮನೆಯಂತಿದ್ದು, ವಿಶಾಲ ಚಾವಡಿ ಪೆರ್ಗಡೆಯವರ ದರ್ಬಾರು ಸ್ಥಳ. ಸಿಂಹಾಸನ, ಪಟ್ಟದ ಕತ್ತಿ ಈಗಲೂ ಇಲ್ಲಿದೆ. ವಿವಿಧ ಕಲಾತ್ಮಕ ಕೆತ್ತನೆಯನ್ನು ಇಲ್ಲಿ ಕಾಣಬಹುದು. ಒಂದು ಕೀಲಿಯನ್ನು ಹಿಡಿದೆಳೆದರೆ ಒಂಭತ್ತು ದ್ವಾರಗಳು ತೆರೆದುಕೊಳ್ಳುವ, ಮುಚ್ಚುವ ಶಿಲ್ಪ ಕಲಾ ಪ್ರೌಢಿಮೆ ನಿಜಕ್ಕೂ ಅಚ್ಚರಿಯುಂಟುಮಾಡುತ್ತದೆ. ಮಾತ್ರವಲ್ಲದೆ ಅಬ್ಬಗ- ದಾರಗರ ತೂಗುಯ್ಯಾಲೆ ಇಲ್ಲಿನ ಮಹಡಿಯಲ್ಲಿ ಕಾಣಬಹುದು. ಇಲ್ಲಿ ಮಂತ್ರಿ ಮನೆತನದವರಿಗೆ ಸೇರಿದ ವಿಶಾಲವಾದ ವಸತಿ 'ಮೂಡುಮನೆ' ಇದೆ. ಇಲ್ಲಿ ಉರಿಸಿದ ದೀಪ ಚಾವಡಿ ಅರಮನೆಗೂ, ಚಾವಡಿಯ ದೀಪ ಇಲ್ಲಿಗೂ ಕಾಣಿಸುತ್ತದೆ. ಇಲ್ಲಿನ ಕೊಡ್ಸರಬೆಟ್ಟುವಿನಲ್ಲಿ ಅಣ್ಣಪ್ಪ ಸ್ವಾಮಿಯ ಗುಡಿಯಿದೆ. ಶಾರ್ದೂಲ ವಾಹಿನಿ ದೇವಿ ದೇಗುಲ ಗಮನ ಸಳೆಯುತ್ತದೆ. ನಂದಳಿಕೆ ಎಂಬುದು ಭಕ್ತರಿಗೆ ಮಾತ್ರವಲ್ಲ ಸಾಹಿತ್ಯಸಕ್ತರಿಗೆ, ಪ್ರವಾಸಿಗರಿಗೂ ಆಕರ್ಷಿಣಿಯ ಕೇಂದ್ರ. ಇಲ್ಲಿನ ಮುದ್ದಣ ಸ್ಮಾರಕ, ಮುದ್ದಣನ ಮನೆ ಕೂಡ ನಂದಳಿಕೆ ದೇವಸ್ಥಾನದ ಹತ್ತಿರವೇ ಇದೆ. ಹೀಗೆ ಬನ್ನಿ... ಪಡುಬಿದ್ರಿ- ಕಾರ್ಕಳ- ಕುದುರೆಮುಖ ರಸ್ತೆಯಲ್ಲಿ ನಂದಳಿಕೆ ದೇವಸ್ಥಾನದ ತಿರುವು ಸಿಗುತ್ತದೆ. ಕಾರ್ಕಳದಿಂದ 15 ಕಿ.ಮೀ. ಪಶ್ಚಿಮಕ್ಕೆ, ಪಡುಬಿದ್ರಿಯಿಂದ 16 ಕಿ.ಮೀ. ಪೂರ್ವಕ್ಕೆ ನಂದಳಿಕೆ ದೇವಸ್ಥಾನವಿದೆ. ಮಂಗಳೂರು, ಉಡುಪಿ, ಕಾರ್ಕಳದಿಂದ ಸರ್ವಿಸ್ ಬಸ್ ಸೌಲಭ್ಯವಿದೆ. - ವಿದ್ಯಾ ಇರ್ವತ್ತೂರು