ಹನುಮ ಧಾಮ ಐದು ಮುಖದ ಆಂಜನೇಯ ಈಶ್ವರಮಂಗಲ ಕ್ಷೇತ್ರದಲ್ಲಿ ಹೊಸದಾಗಿ ಕಣ್ತೆರೆದಿದ್ದಾನೆ. ದ.ಕ. ಜಿಲ್ಲೆಯ ಪುತ್ತೂರಿನಿಂದ ಸುಳ್ಯಪದವು, ಪಳ್ಳತ್ತಾರು ರಸ್ತೆಯಲ್ಲಿ 25 ಕಿ.ಮೀ. ದೂರದ ಈ ಆಂಜನೇಯನ ಕ್ಷೇತ್ರವಿದೆ. ಮೇ ತಿಂಗಳಲ್ಲಿ ಆರಂಭವಾದ ಈ ಕ್ಷೇತ್ರ ಈಗ ಭಕ್ತರಿಗೆ ನವಧಾಮ. ಇದರ ಪ್ರತಿಷ್ಠಾಪನೆಗೆ ಹೊಸನಗರ ರಾಮಚಂದ್ರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಅಪೇಕ್ಷೆಯೇ ಕಾರಣ. ಇದರ ಉಸ್ತುವಾರಿ ಧರ್ಮಶ್ರೀ ಪ್ರತಿಷ್ಠಾನ. ಬೆಟ್ಟದ ತುದಿಯಲ್ಲಿ ವಿರಾಜಮಾನವಾಗಿರುವ 11 ಅಡಿ ಎತ್ತರದ ಏಕಶಿಲಾ ಮೂರ್ತಿಯೇ ಈ ಐದು ಮುಖಗಳ ಪಂಚಮುಖಿ ಆಂಜನೇಯ. ಪಂಚಮುಖಿ ವಿಶೇಷ ಸಮುದ್ರೋಲ್ಲಂಘನ ವೇಳೆ ರಾಮನನ್ನು ಧ್ಯಾನಿಸಿದಾಗ ಹನುಮಂತನಿಗೆ ಅರಿವಿಲ್ಲದಂತೆಯೇ ಪಂಚಮುಖ ಶಕ್ತಿ ಆವಾಹನೆಯಾಗುತ್ತದೆ. ಅದೇ ಶಕ್ತಿಯಲ್ಲಿ ಆತ ಸಮುದ್ರ ಲಂಘನ ಮಾಡುತ್ತಾನೆ. ಪಂಚಮುಖ ಮೂರ್ತಿಯಲ್ಲಿ ಹಲವು ದಿವ್ಯ ಶಕ್ತಿ ಅಡಗಿರುತ್ತದೆ ಎಂಬುದು ಪುರಾಣದ ನಂಬಿಕೆ. ಈ ಪಂಚಮುಖಿ ವಿಗ್ರಹದ ಮೇಲ್ಮುಖದಲ್ಲಿ ಹಯಗ್ರೀವ, ಪೂರ್ವಕ್ಕೆ ಆಂಜನೇಯ, ದಕ್ಷಿಣಕ್ಕೆ ನರಸಿಂಹ, ಪಶ್ಚಿಮಕ್ಕೆ ಗರುಡ, ಉತ್ತರಕ್ಕೆ ವರಾಹ ಮುಖವಿದೆ. ಇಲ್ಲಿ ಪಂಚಮುಖಿ ಆಂಜನೇಯನಿಗೆ ಪಂಚಮುಖಗಳಲ್ಲೂ ಭಕ್ತರು ಪೂಜೆ ನೆರವೇರಿಸಿ ದರ್ಶನ ಪಡೆಯಬಹುದು. ಬೆಳಗ್ಗೆ 7ರಿಂದ ರಾತ್ರಿ 7.30ರ ವರೆಗೆ ಪಂಚಮುಖಿ ಪೂಜೆಗೆ ಅವಕಾಶವಿದೆ. ಪ್ರತಿ ಶನಿವಾರ ರಂಗಪೂಜೆ, ರಾಮನವಮಿ, ಹನುಮ ಜಯಂತಿ, ಪ್ರತಿಷ್ಠಾನ ನವರಾತ್ರಿ ಹೀಗೆ ಪರ್ವಕಾಲದಲ್ಲೂ ವಿಶೇಷ ಪೂಜೆ ಇದೆ. ಮಾನಸೋದ್ಯಾನ ಈ ಪಂಚಮುಖಿ ಕ್ಷೇತ್ರ 6.77 ಎಕರೆ ವ್ಯಾಪಿಸಿದ್ದು, ಪ್ರವೇಶದ್ವಾರದಿಂದ ಬೆಟ್ಟಕ್ಕೆ ತೆರಳುವಲ್ಲಿ ಒಂದು ಪಾರ್ಶ್ವದಲ್ಲಿ ಪುತ್ರಕಾಮೇಷ್ಟಿಯಿಂದ ತೊಡಗಿ ರಾಮ ಪಟ್ಟಾಭಿಷೇಕ ವರೆಗಿನ ಘಟನೆಗಳನ್ನು ಶಿಲೆಗಳಲ್ಲಿ ಚಿತ್ರಿಸಲಾಗಿದೆ. ಪಂಚಮುಖಿ ಮೂರ್ತಿಯ ಹಿಂಭಾಗ ಬೆಟ್ಟದಲ್ಲಿ ಮಾನಸೋದ್ಯಾನವನ ಇದ್ದು, ವಿವಿಧ ಬಗೆಯ ಔಷಧೀಯ ಸಸ್ಯಗಳಿವೆ. ಅಧ್ಯಾತ್ಮಿಕ ಪಾರ್ಕ್‌ನಲ್ಲಿ ಬಾಲ ಆಂಜನೇಯನ ಚರಿತ್ರೆ ಕೆತ್ತಲ್ಪಟ್ಟಿದೆ. ಅಲ್ಲೇ ರಾಮಾನಂಜನೇಯನ ಎತ್ತರ ಪ್ರತಿಮೆ ಕಂಗೊಳಿಸುತ್ತಿದೆ. ಕೊದಂಡರಾಮನ ಪ್ರತಿಮೆ ನಿರ್ಮಾಣ ಹಂತದಲ್ಲಿದೆ. ಇಡೀ ಕ್ಷೇತ್ರದ ಕೆತ್ತನೆ ವಿನ್ಯಾಸ ಕಾರ್ಕಳ ಶಿಲ್ಪಿ ಗುಣವಂತೇಶ್ವರ ಶರ್ಮಾ. ಮುಂದಿನ ವರ್ಷ ಅನಾಥ ಮಕ್ಕಳಿಗೆ ಆಶ್ರಮ, ಸುಸಜ್ಜಿತ ಗ್ರಂಥಾಲಯ, ಭೋಜನ ಶಾಲೆ, ಕಲ್ಯಾಣ ಮಂಟಪ ನಿರ್ಮಾಣವಾಗಲಿದೆ. ಭಕ್ತರ ಅನುಕೂಲಕ್ಕೆ ಅತಿಥಿ ಗೃಹ ನಿರ್ಮಿಸಲಾಗಿದೆ. ಮೇ 22ರಂದು ಪ್ರತಿಷ್ಠಾ ವಾರ್ಷಿಕೋತ್ಸವ. ವೆಬ್‌ಸೈಟ್ ವಿಳಾಸ: ... ಸಂಪರ್ಕಕ್ಕೆ-08251-289444, 8105554644. - ಆತ್ಮಭೂಷಣ್