ಕರ್ನಲ್ ಗುಡ್ಡ ಗತಕಾಲದ ವಿಷಯಗಳು ಎಲ್ಲವೂ ಇತಿಹಾಸದ ಪುಟಗಳಲ್ಲಿ ಸೇರಿಕೊಳ್ಳುತ್ತವೆ. ನಂತರ ಆ ಪುಟಗಳನ್ನು ತಿರುವಿ ಹಾಕಿದಾಗ ಎಲ್ಲಾ ವಿಷಯಗಳು ಸುರುಳಿಯಂತೆ ಬಿಚ್ಚಿಕೊಳ್ಳುತ್ತವೆ. ಆ ಪುಟಗಳು ನಮ್ಮ ಹಿರಿಯರ ದೇಶಪ್ರೇಮ, ತ್ಯಾಗ, ಬಲಿದಾನಗಳ ಕಥೆಗಳನ್ನೂ ಬಿಚ್ಚಿಡುತ್ತವೆ. ನಮ್ಮ ದೇಶದಲ್ಲಿ ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ನಡೆದ ಘಟನೆಗಳು, ಆಕ್ರಮಣಗಳನ್ನು ನೆನಪಿಸುವ ಹಲವು ಸ್ಮಾರಕಗಳು ಈಗಲೂ ಇವೆ. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತನ್ನದೇ ಆದ ಹಲವಾರು ವಿಶಿಷ್ಟತೆಗಳಿಂದ ಖ್ಯಾತಿ ಗಳಿಸಿರುವ ಪಟ್ಟಣ. ರಾಷ್ಟ್ರೀಯ ಹೆದ್ದಾರಿ 17 ಇದೇ ಊರಿನ ಮೂಲಕ ಸಾಗಿ ಹೋಗುತ್ತದೆ. ವಿಶಾಲವಾದ ಶರಾವತಿಯ ಹರಿವಿನಷ್ಟೇ ಗಮನ ಸೆಳೆಯುವುದು ಕರ್ನಲ್ ಹಿಲ್. ಈ ಗುಡ್ಡಕ್ಕೊಂದು ಕಥೆ ಇದೆ. 1854ರಲ್ಲಿ ಬ್ರಿಟಿಷರ ಆಳ್ವಿಕೆ ಇದ್ದರೂ ಹೊನ್ನಾವರ ಪ್ರಾಂತ್ಯದ ಗೇರುಸೊಪ್ಪೆ ಸ್ವತಂತ್ರ ಆಡಳಿತದಲ್ಲಿಯೇ ಇತ್ತು. ಹೇಳಿಕೇಳಿ ಸಾಂಬಾರ ಪದಾರ್ಥಗಳ ವ್ಯಾಪಾರಕ್ಕೆ ಹೆಸರಾಗಿದ್ದ ಊರು ಇದು. ಬ್ರಿಟಿಷರ ಕಣ್ಣು ಈ ಸಂಸ್ಥಾನದ ಮೇಲೆಯೂ ಬಿತ್ತು. ಅಂದಮೇಲೆ ದಾಳಿಯೂ ನಡೆಯಿತು ಅಂತ ಲೆಕ್ಕ ತಾನೆ? ಮುಂದೆ ನಡೆದ ಯುದ್ಧದಲ್ಲಿ ಗೇರುಸೊಪ್ಪದಗ ಯೋಧರು ಬ್ರಿಟಿಷರ ಮುಖ್ಯ ಕಮಾಂಡರ್ ಆದ ಕರ್ನಲ್‌ರವರನ್ನು ಕೊಂದರು. ಆಗ ಬ್ರಿಟಿಷರು ಕರ್ನಲ್‌ರವರ ಅಂತ್ಯಸಂಸ್ಕಾರವನ್ನು ಈ ಬೆಟ್ಟದಲ್ಲಿ ನಡೆಸಿ, ಅವರ ಸವಿನೆನಪಿಗಾಗಿ ಅಲ್ಲಿಯೇ ಒಂದು ಸ್ತಂಭ ಸ್ಥಾಪಿಸಿದರು. ಹೀಗಾಗಿ ಕರ್ನಲ್ ಹಿಲ್ ಎಂದು ಹೆಸರಾದ ತಾಣ ಇಂದು ಪ್ರವಾಸಿ ತಾಣವಾಗಿ ಜನರನ್ನು ಕೈಬೀಸಿ ಕರೆಯುತ್ತಿದೆ. ಹೊನ್ನಾವರದ ರೋಟರಿ ಕ್ಲಬ್‌ನವರು ಇಲ್ಲಿಯೇ ಒಂದು ದೊಡ್ಡ ಉದ್ಯಾನ ನಿರ್ಮಿಸಿ ಇನ್ನಷ್ಟು ಮೆರಗು ತುಂಬಿದ್ದಾರೆ. ಹೀಗೆ ಬನ್ನಿ ಹೊನ್ನಾವರವು ರಾಜಧಾನಿ ಬೆಂಗಳೂರಿನಿಂದ 420 ಕಿಲೋ ಮೀಟರ್ ದೂರದಲ್ಲಿದೆ. ರಾಜ್ಯ ರಸ್ತೆ ಸಾರಿಗೆ ಬಸ್ಸು, ಖಾಸಗಿ ಬಸ್ಸು ಸೌಲಭ್ಯಗಳು ಎಲ್ಲ ಕಡೆಗಳಿಂದಲೂ ಲಭ್ಯ. ಊಟ, ವಸತಿಗೆ ಹೊನ್ನಾವರದಲ್ಲಿ ಸಮಸ್ಯೆ ಇಲ್ಲ. ಎರಡು ದಿನಗಳ ಪ್ರವಾಸ ಕೈಗೊಂಡರೆ ಹೊನ್ನಾವರ ಸುತ್ತಮುತ್ತಲಿನ ಹಲವು ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು. -ಬಳಕೂರು ವಿ.ಎಸ್. ನಾಯಕ