ಬೆಳ್ಳಂಗಿ ಚೆಂದವೋ... ಮಾನವನು ಆಧುನಿಕ ಯುಗದಲ್ಲಿ ಎಷ್ಟೇ ಸವಲತ್ತು ಪಡೆದರೂ ಬದುಕು ಒತ್ತಡದಿಂದ ಕೂಡಿದೆ. ನೆಮ್ಮದಿ ಇಲ್ಲದೆ ಪರಿತಪಿಸುತ್ತಿದ್ದಾನೆ... ಮಾನವನು ಆಧುನಿಕ ಯುಗದಲ್ಲಿ ಎಷ್ಟೇ ಸವಲತ್ತು ಪಡೆದರೂ ಬದುಕು ಒತ್ತಡದಿಂದ ಕೂಡಿದೆ. ನೆಮ್ಮದಿ ಇಲ್ಲದೆ ಪರಿತಪಿಸುತ್ತಿದ್ದಾನೆ. ನೆಮ್ಮದಿ ಶಾಂತಿಯನ್ನು ಹಣ ಕೊಟ್ಟು ಪೇಟೆಯಿಂದ ತರಲು ಸಾಧ್ಯವೇ? ನೆಮ್ಮದಿಯ ಜೀವನ ಕಳೆಯಲು ಕುಟುಂಬ ಸಮೇತರಾಗಿ ರಜಾ ದಿನ ಕಳೆಯಲು ಇಲ್ಲಿ ಹೇಳಿ ಮಾಡಿಸಿದ ಜಾಗವೊಂದಿದೆ. ಹಾಗಾದರೆ, ಅದು ಎಲ್ಲಿದೆ? ಅದು ಬೆಳ್ಳಂಗಿ ನಿಸರ್ಗ ತಾಣ. ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲೂಕಿನಲ್ಲಿದೆ. ಇಲ್ಲಿ ಪಟ್ಟಣದ ಗದ್ದಲವಿಲ್ಲ, ವಾಹನಗಳ ಕರ್ಕಶ ಸದ್ದಿಲ್ಲ. ಎಲ್ಲೆಲ್ಲೂ ಪ್ರಶಾಂತತೆ ನೆಲೆಯೂರಿದೆ. ವೈವಿಧ್ಯ ಮರ- ಗಿಡಗಳು ಆವರಿಸಿರುವ ಬಳ್ಳಿಗಳು ಹಕ್ಕಿಗಳ ಚಿಲಿಪಿಲಿ ನಮ್ಮನ್ನು ಕಲ್ಪನಾ ಲೋಕಕ್ಕೆ ಕೊಂಡೊಯ್ಯುತ್ತವೆ. ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲೂಕಿನಲ್ಲಿದೆ ಬೆಳ್ಳಂಗಿ ನಿಸರ್ಗ ತಾಣ. ಈ ಜಿಲ್ಲೆಯು ತನ್ನದೇ ಆದ ವಿಶಿಷ್ಟ ಸೊಬಗು ಸೌಂದರ್ಯದ ಗಣಿಯಾಗಿದೆ. ಇಲ್ಲಿ ಪಕ್ಷಿಗಳ ಕೂಜನವೂ ಇದೆ. ತಂಗಾಳಿಯ ನರ್ತನವಿದೆ. ಬೆಳ್ಳಂಗಿ ಪರಿಸರ ಪ್ರಕೃತಿ ಸಹಜ ಮದರಂಗಿಯ ಚಿತ್ತಾರ. ಚಂಡಿಕಾ ನದಿಯ ತೀರದಲ್ಲಿ ಭೀಮಕಾರದ ಮರದ ಕೆಳಗೆ ಕುಳಿತು ನಿಸರ್ಗ ಸೌಂದರ್ಯ ಸವಿಯಲು ನಿರತರಾದರೆ ಹೊತ್ತು ಹೋಗುವುದೇ ತಿಳಿಯದು. ಇಲ್ಲಿ ಬಿದರಿನಿಂದ ನಿರ್ಮಿಸಿದ ನಾಲ್ಕು ಸುಂದರ ಕುಟೀರಗಳು ಅತಿಥಿಗಳನ್ನು ಕೈಬೀಸಿ ಕರೆಯುತ್ತವೆ. ರಾತ್ರಿಯ ಕತ್ತಲನ್ನು ಓಡಿಸಲು ಮೋಡಗಳ ಮರೆಯಿಂದ ಇಣುಕುವ ಚಂದ್ರ, ಮೈಗೆ ತಣ್ಣನೆ ಮುತ್ತಿಕ್ಕುವ ಗಾಳಿ, ಹಕ್ಕಿಗಳ ಕಲರವದ ಶುಭೋದಯ, ಮುಂಜಾನೆಯ ಮಂಜಿನಲ್ಲಿ ಎಳೆ ಬಿಸಿಲಿನ ವಿಹಾರ.... ಎಲ್ಲವೂ ಅದ್ಭುತ. ಇಲ್ಲಿನ ವಿಶಾಲವಾದ ಉದ್ಯಾನವನದ ಉಯ್ಯಾಲೆ, ಸುಸಜ್ಜಿತ ಶೌಚಾಲಯ, ಮಕ್ಕಳ ಆಟದ ಮೈದಾನ- ಇವೆಲ್ಲವೂ ರಜಾ ದಿನವನ್ನು ಪ್ರಕೃತಿಯ ಮಡಿಲಲ್ಲಿ ಕಳೆಯಲು ಹೇಳಿ ಮಾಡಿಸಿದಂತಿದೆ. ಇದರ ನಿರ್ವಹಣೆಯನ್ನು ವನದುರ್ಗ ಗ್ರಾಮಾರಣ್ಯ ಸಮಿತಿ ನೋಡಿಕೊಳ್ಳುತ್ತಿದೆ. ಊಟ, ತಿಂಡಿ, ವಸತಿ ವ್ಯವಸ್ಥೆಯೂ ಇದೆ. ದಾರಿ ಯಾವುದಯ್ಯಾ? ಇದು ರಾಜಧಾನಿ ಬೆಂಗಳೂರಿನಿಂದ 450 ಕಿ.ಮೀ. ದೂರದಲ್ಲಿದೆ. ಕುಮಟ- ಶಿರಸಿ ರಸ್ತೆಯಲ್ಲಿ ಸಾಗಿದರೆ ಯಾಣ ಕ್ರಾಸ್ ಸಿಗುತ್ತದೆ. ಅಲ್ಲಿಂದ 1 ಕಿ.ಮೀ. ದೂರದಲ್ಲಿದೆ ಬೆಳ್ಳಂಗಿ. ಇಲ್ಲಿಗೆ ಬಂದರೆ ಯಾಣ 13 ಕಿಲೋಮೀಟರ್. ಕುಮಟ 16 ಕಿ.ಮೀ., ಗೋಕರ್ಣ 30 ಕಿ.ಮೀ., ಶಿರಸಿ- 45 ಕಿ.ಮೀ. ಮುರ್ಡೇಶ್ವರ- 65 ಕಿ.ಮೀ. ದೂರದಲ್ಲಿದೆ. ಹೆಚ್ಚಿನ ಮಾಹಿತಿಗಾಗಿ ಅಮೃತ್ ಕುಮಾರ್ ನಾಯ್ಕ (9482187394/ 08386264834) ಅವರನ್ನು ಸಂಪರ್ಕಿಸಬಹುದು. - -ಬಳಕೂರು ವಿ.ಎಸ್. ನಾಯಕ್