ಪಕ್ಷಿ ಪ್ರೀತಿಯ ಪ್ರಕೃತಿ ಸೆಯಿಚೆಲ್ಸ್ 150 ಚದರ ಮೈಲು ವಿಸ್ತೀರ್ಣವಿರುವ ಚಿಕಣಿ ದ್ವೀಪಗಳ ಸಮುದಾಯ. ಹಿಂದೂ ಮಹಾಸಾಗರದಲ್ಲಿ ಮಡಗಾಸ್ಕರ್ ದ್ವೀಪಕ್ಕೆ ಸನಿಹವಿರುವ ಅದು ಶತಮಾನಗಳಿಂದಲೂ ಮನುಷ್ಯನನ್ನು ಸೆಳೆದಿರಲಿಲ್ಲ. ಕೆಲವು ದಶಕಗಳ ಹಿಂದೆ ತಾನೆ ಪ್ರವಾಸಿಗರ ದೃಷ್ಟಿ ಆ ಕಡೆ ಹರಿಯಿತು. ಅಲ್ಲಿ ಚಿತ್ತಾಕರ್ಷಕ ಕಡಲತೀರವಿದೆ. ಪಾಮ್ಮುರದಂಥ ಹಲವು ಸಸ್ಯಜಾತಿಗಳಿವೆ. ಆದರೆ ಇವೆಲ್ಲದಕ್ಕಿಂತ ಈ ದ್ವೀಪದ ವೈಶಿಷ್ಟ್ಯವಿರುವುದು ಅಲ್ಲಿರುವ ಅತಿ ಅಪರೂಪದ ಪಕ್ಷಿಗಳ ಜಾತಿಯಿಂದಾಗಿ. ಪಕ್ಷಿ ವಿಜ್ಞಾನಿಗಳು ಪೂರ್ಣ ಅಳಿದು ಹೋಗಿದೆಯೆಂದು ಉಲ್ಲೇಖಿಸಿದ 5 ಜಾತಿಯ ಪಕ್ಷಿಗಳೂ ಇಲ್ಲಿ ಸುಖದಿಂದಿವೆ. ಬೃಹದಾಕೃತಿಯ ಆಮೆಗಳಿವೆ. ಆಟೋರಿಕ್ಷಾದಂತಿರುವ ರಾಕ್ಷಸ ಏಡಿಗಳಿವೆ. ಪಕ್ಷಿಗಳಿಗೆ ಅನುಕೂಲವಾದ ಹವೆ ಮತ್ತು ಸುಂದರ ಹೂವರಳಿಸಿ ತಿನ್ನಲು ಹಣ್ಣು ಕೊಡುವ ಮರಗಳು ಸೆಯಿಚೆಲ್ಸ್‌ನಲ್ಲಿರುವ ಕಾರಣ ದೂರದೂರದಿಂದಲೂ ಇಲ್ಲಿಗೆ ವೈವಿಧ್ಯಮಯ ಪಕ್ಷಿಗಳು ಧಾವಿಸಿ ಇಲ್ಲಿಯೇ ನೆಲೆ ನಿಂತು ವಂಶವೃದ್ಧಿ ಮಾಡಿಕೊಳ್ಳುತ್ತಿವೆ. ಶತಮಾನದ ಹಿಂದೆ ನಿರ್ವಂಶವಾಗಿದೆಯೆಂದು ಪಕ್ಷಿಶಾಸ್ತ್ರಜ್ಞರು ಸಾರಿದ ಗೂಬೆಯ ಸಂತತಿ ಇಲ್ಲಿದೆ. ಕಾಲುಗಳಲ್ಲಿ ಗರಿಗಳಿಲ್ಲದೆ ಬೋಳಾಗಿರುವ ಈ ಗೂಬೆಗೆ ತಿನ್ನಲು ಬೇಕಾದ ಹಲ್ಲಿ ಮತ್ತಿತರ ಕೀಟಗಳು ಇಲ್ಲಿ ಹೇರಳವಾಗಿವೆ. ವಾಸಕ್ಕೆ ಅನುಕೂಲವಾದ ಗವಿಯಿರುವ ಬಂಡೆಗಳಿವೆ. ಹಾಗೆಯೇ ಪುಟ್ಟ ಗಿಡುಗನಂತಿರುವ ಕೆಸ್ಟ್ರೆಲ್ ಎಂಬ ಪಕ್ಷಿವಂಶ ಅಳಿದೇ ಹೋಗಿದೆಯೆಂದು ಭಾವಿಸಿದ್ದ ನಂಬಿಕೆಗಳು ಸೆಯಿಚೆಲ್ಸ್‌ನಲ್ಲಿ ಹುಸಿಯಾಗಿವೆ. ವರ್ಣರಂಜಿತ ಗರಿಗಳಿರುವ ಮೆಗ್‌ಪೈರೋಬಿನ್ ಪಕ್ಷಿಗಳು ಸೆಯಿಚೆಲ್ಸ್ ದ್ವೀಪದಲ್ಲಿ ಹೇರಳವಾಗಿವೆ. ಜಗತ್ತಿನ ಬೇರೆಲ್ಲೂ ಅವುಗಳ ಸಂತತಿಯಿಲ್ಲವಂತೆ. ವಿರಳವಾದ ಆಲಿವ್ ಬಣ್ಣದ ಬ್ರಷ್ ವಾಬ್ರ್ಲರ್ ಪಕ್ಷಿಯೂ ಅಲ್ಲಿ ಉಳಿದುಕೊಂಡಿದೆ. ಬ್ಲ್ಯಾಕ್ ಪ್ಯಾರಡೈಸ್ ಪಕ್ಷಿ ಕೂಡ ವಿಜ್ಞಾನಿಗಳ ದಾಖಲೆಯಲ್ಲಿ ನಿರ್ವಂಶವಾಗಿತ್ತು. ಆದರೆ ವಿಸ್ಮಯವೆಂದರೆ ಅದರ ಸಂತತಿ ಇಲ್ಲಿ ಬದುಕಿದೆ. ಈ ಹಕ್ಕಿಗಳ ವಿಶೇಷವೇನೆಂದರೆ ಬಾಲದಂತೆ ಜೋತಾಡುವ ಒಂದಡಿ ಗಾತ್ರದ ವರ್ಣಮಯ ಗರಿಗಳು. ನೀಲಿಮಿಶ್ರಿತ ಕಪ್ಪುವರ್ಣದ ಈ ಸುಂದರ ಹಕ್ಕಿ ಎಲ್ಲರ ಕೈಗೆಟಕುವಂತೆ ಮೊಟ್ಟೆಯಿಡುತ್ತಿದ್ದುದೇ ಅದರ ಸಂತತಿ ನಾಶಕ್ಕೆ ಕಾರಣವೆನಿಸಿತ್ತು. ಸೆಯಿಚೆಲ್ಸ್ ದ್ವೀಪದ ಕಡಲತೀರದಲ್ಲಿ ಗಮನ ಸೆಳೆಯುವುದು ಸಾವಿರ ಸಂಖ್ಯೆಯಲ್ಲಿ ಸಾಲಾಗಿ ವಿಹರಿಸುವ ಸಮುದ್ರ ಕೋಳಿಗಳ ಸುಂದರ ನೋಟ. ಇಲ್ಲಿರುವ ಕೋಕೋದೇಮಾರ್ ಮರದ ಕಾಯಿ ಜಗತ್ತಿನಲ್ಲೇ ಅತ್ಯಂತ ದೊಡ್ಡ ಗಾತ್ರದ್ದು ಎಂಬ ಖ್ಯಾತಿ ಪಡೆದಿದೆ. ಇದರ ಬೀಜ ಮತ್ತು ಹಣ್ಣು ತಿನ್ನಲು ರುಚಿಕರವಾಗಿದ್ದರೂ ಹೂ ಬಿಟ್ಟು ಹಣ್ಣಾಗಲು ಹತ್ತು ವರ್ಷ ಬೇಕಾಗುತ್ತದೆ. ಈ ಮರದ ಹೂ ಹಣ್ಣುಗಳನ್ನು ತಿನ್ನುತ್ತ ದೊಡ್ಡ ಮರಗಳ ಪೊಟರೆಯಲ್ಲಿ ವಾಸಿಸುವ ಕಪ್ಪು ವರ್ಣದ ಗಿಳಿಗಳಿವೆ. ಆದರೆ ಪ್ರವಾಸೋದ್ಯಮದಿಂದ ಬರುವ ಭಾರಿ ಆದಾಯದಿಂದಾಗಿ ನಿಶ್ಚಿಂತ ದ್ವೀಪ ನಗರವಾಗುತ್ತಿದೆ. ದ್ವೀಪಸೌಂದರ್ಯ ಮಾಯವಾಗುತ್ತಿದೆ. = ಪ.ರಾಮಕೃಷ್ಣ ಶಾಸ್ತ್ರಿ