ಹೊಯ್ಸಳ ಸೆಳೆತ ಕುವೆಂಪು ಅವರ ಆ ಕವಿತೆ ಗೊತ್ತೇ ಇದೆ. 'ಬಾಗಿಲೊಳು ಕೈ ಮುಗಿದು ಒಳಗೆ ಬಾ ಯಾತ್ರಿಕನೇ... ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು'. ಈ ಸಾಲುಗಳನ್ನು ನೆನಪಿಸುವಂಥ ಹಲವು ಐತಿಹಾಸಿಕ ಸ್ಮಾರಕಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿವೆ. ಇಲ್ಲಿನ ಅಮೃತಾಪುರ, ಬೆಳವಾಡಿಗಳಂತೆಯೇ ಹೊಯ್ಸಳರ ಕಾಲದ ಸುಂದರ ದೇಗುಲ ಕಡೂರು ತಾಲೂಕಿನ ಹಿರೇನೆಲ್ಲೂರಿನಲ್ಲೂ ಇದೆ. ಇಲ್ಲಿನ ಮಲ್ಲಿಕಾರ್ಜುನ ಸ್ವಾಮಿ ದೇಗುಲ ಸುಮಾರು 1,200 ವರ್ಷಗಳ ಭವ್ಯ ಇತಿಹಾಸವನ್ನು ತನ್ನಲ್ಲಿ ಹುದುಗಿಸಿಕೊಂಡಿದೆ. ತ್ರಿಕೂಟ ಶಿಖರ ಇಲ್ಲಿನ ವಿಶೇಷ. 8ನೇ ಶತಮಾನದಲ್ಲಿ ಗಂಗರ ಕಾಲದಲ್ಲಿ ಇದು ನಿರ್ಮಾಣವಾಯಿತು. 12ನೇ ಶತಮಾನದಲ್ಲಿ ಹೊಯ್ಸಳರ 2ನೇ ವೀರಬಲ್ಲಾಳ ಪುನರ್ ನಿರ್ಮಿಸಿದನಂತೆ. ಹೀಗಾಗಿ ಹೊಯ್ಸಳ ದೇಗುಲಗಳ ವಿನ್ಯಾಸ, ಶಿಲ್ಪಶೈಲಿಯನ್ನೂ ನಾವಿಲ್ಲಿ ಕಾಣಬಹುದು. ಲಿಂಗರೂಪಿ ಮಲ್ಲಿಕಾರ್ಜುನ ಇಲ್ಲಿನ ಅಗ್ರದೇವತೆ. ಪೂರ್ವ ಭಾಗದಲ್ಲಿ ಪ್ರತಿಷ್ಠಾಪಿತವಾಗಿರುವ ಮಲ್ಲಿಕಾರ್ಜುನನ ಮುಂಭಾಗಕ್ಕೆ ಮಂದಿರದ ಒಳಗೇ ಬೃಹತ್ ನಂದಿಯ ವಿಗ್ರಹ. ಪಶ್ಚಿಮದಲ್ಲಿ ಸೂರ್ಯ ದೇವನ ವಿಗ್ರಹ. ಉತ್ತರಕ್ಕೆ ಚೆನ್ನಕೇಶವಸ್ವಾಮಿ ಉಪಸ್ಥಿತ. ದೇಗುಲದ ಒಳಗೆ ಗಣಪತಿ ಹಾಗೂ ಸಪ್ತಮಾತೃಕೆಯರ ವಿಗ್ರಹಗಳು. ಕಲಾಕುಸುರಿಯ ಕಲ್ಲಿನ ಕಂಬಗಳು. ದೇಗುಲದ ಮಧ್ಯ ಚಾವಣಿಯಲ್ಲಿ ಹಲವು ಸಂಕೀರ್ಣ ಕೆತ್ತನೆಗಳನ್ನು ಕಾಣಬಹುದು. ಸೂಕ್ಷ್ಮವಾಗಿ ಗಮನಿಸಿದರೆ ತಾಂಡವೇಶ್ವರ ಹಾಗೂ ಉಗ್ರನರಸಿಂಹರ ಕೆತ್ತನೆಗಳು ಕಾಣಿಸುತ್ತವೆ. ದೇಗುಲದ ಹೊರಭಾಗದ ಹಾಗೂ ಶಿಖರದ ಭಿತ್ತಿಗಳು ಹೊಯ್ಸಳ ಶೈಲಿಯ ಕೆತ್ತನೆಗಳಿಂದ ಶ್ರೀಮಂತವಾಗಿವೆ.ದಶಾವತಾರದ ಕೆತ್ತನೆಗಳು, ಶಾಲಭಂಜಿಕೆಯರು ಹಾಗೂ ಹುಲಿಯೊಡನೆ ಹೋರಾಡುತ್ತಿರುವ ಹೊಯ್ಸಳರ ಮೂಲಪುರುಷ ಸಳನ ಚಿತ್ರಗಳು ಇಲ್ಲಿವೆ. ದೇಗುಲದ ಇತಿಹಾಸವನ್ನು ಸಾರಿ ಹೇಳುವ ಶಿಲಾಶಾಸನವನ್ನು ಪ್ರವೇಶದ್ವಾರದ ಚಾವಣಿಯಲ್ಲಿ ಕಾಣಬಹುದು. ಗಂಗರ ಕಾಲದ ಶಿಲಾಚಿತ್ರಗಳು, ಹೊಯ್ಸಳರ ಕಾಲದ ವೀರಗಲ್ಲು, ಬೃಹತ್ ಶಿಲಾದೀಪಗಳೂ ಇಲ್ಲಿವೆ. ದೇಗುಲ ಹಾಗೂ ಅದರ ಆವರಣದ ನಿರ್ವಹಣೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ನೆರವಿನಲ್ಲಿ ಸ್ಥಳೀಯ ಟ್ರಸ್ಟ್ ಹೊತ್ತಿದೆ. ದೇಗುಲದ ಸುತ್ತಲೂ ಆಕರ್ಷಕ ಹೂದೋಟ. ಸುಂದರ ಹಸಿರಹಾಸು. ಹೂದೋಟದ ಮಧ್ಯದ ಕಲ್ಲಿನ ಮಂಟಪ ಅತ್ಯಾಕರ್ಷಕ. ಅಪ್ಪಟ ಗ್ರಾಮೀಣ ಪರಿಸರದಲ್ಲಿ ಊರಿನವರ ಕಾಳಜಿಯಿಂದ ಪುರಾತನ ದೇಗುಲ ಹಾಳು ಬೀಳದೇ ಚೆನ್ನಾಗಿ ನಿರ್ವಹಣೆ ಪಡೆದಿದೆ. ನಮ್ಮ ನಾಡಿನಲ್ಲಿ ಎಷ್ಟೋ ಕಡೆಗಳಲ್ಲಿರುವ ಪುರಾತನ ದೇಗುಲಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಇಂಥ ದೇಗುಲಗಳ ಸಂರಕ್ಷಣೆ ಸ್ಥಳೀಯರ ಕರ್ತವ್ಯ. ಅದಕ್ಕೆ ಹಿರೇನಲ್ಲೂರಿನ ಮಲ್ಲಿಕಾರ್ಜುನಸ್ವಾಮಿ ದೇಗುಲ ಮಾದರಿ. ದಾರಿ ಹೇಗೆ? ಹಿರೇನಲ್ಲೂರು ಗ್ರಾಮ ಚಿಕ್ಕಮಗಳೂರು ಜಿಲ್ಲೆ ಕಡೂರಿನಿಂದ ಸುಮಾರು 11 ಕಿ.ಮೀ. ದೂರದಲ್ಲಿದೆ. ಗಿರಿಯಾಪುರ ರಸ್ತೆಯಲ್ಲಿ ಬರುತ್ತದೆ. -ಎಚ್.ಎಸ್. ನವೀನಕುಮಾರ್ ಹೊಸದುರ್ಗ