ದಾನದಿಂದ ಧರ್ಮಾರಣ್ಯ ಆರೇಳು ವರ್ಷಗಳ ಹಿಂದೆ ಅದೊಂದು ಏರು ತಗ್ಗುಗಳಿದ್ದ, ಕೇವಲ ನಾಚಿಕೆಮುಳ್ಳು ಬೆಳೆಯುತ್ತಿದ್ದ ಕುರುಚಲು ಪೊದೆಗಳ ಕಾಡು. ಇಂದು ನೋಡಿದರೆ ವಿಸ್ಮಯಕರ ಬದಲಾವಣೆ! ಅಲ್ಲಿ ಸಪ್ತರ್ಷಿ ವನವಿದೆ, ನವಗ್ರಹ ವನವಿದೆ, ಗಣಪತಿ ಪಂಚಾಯತನವಿದೆ, ಪ್ರತಿ ದೇವತೆಗೂ ಸಂಬಂಧಿಸಿದ ವಿಶಿಷ್ಟ ವೃಕ್ಷಜಾತಿಯನ್ನು ಸಂಗ್ರಹಿಸಿ ತಂದು ನೆಟ್ಟು ಬೆಳೆಸಿ ಅದನ್ನೊಂದು ಧಾರ್ಮಿಕ ಮತ್ತು ನಿಸರ್ಗ ಪೋಷಕ ಕ್ಷೇತ್ರವಾಗಿ ಪರಿವರ್ತಿಸುವ ಮಹತ್ಕಾರ್ಯ ಸುಳ್ಯಕ್ಕೆ ಸಮೀಪದ ಆರಂಬೂರಿನಲ್ಲಿ ನಡೆದಿದೆ. ನಿಸರ್ಗ ವೃದ್ಧಿಯ ಮೂಲಕ ಧರ್ಮ ಜಾಗೃತಿಯ ಗುರಿ ಹೊಂದಿದ ಈ ತಾಣಕ್ಕೆ ಧರ್ಮಾರಣ್ಯವೆಂಬ ವಿಶೇಷ ಹೆಸರೂ ಇದೆ. ಇದರ ಪ್ರಾರಂಭಕ್ಕೆ ಮಾರ್ಗದರ್ಶಕರಾಗಿ ಸುವರ್ಣ ಮಂತ್ರಾಕ್ಷತೆಯಿತ್ತು ಹರಸಿದ ಚೈತನ್ಯ ಶಕ್ತಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಯತಿಗಳು. ಧರ್ಮಾರಣ್ಯದ ನಿರ್ಮಾಣಕ್ಕೆ ಒಂದೂಕಾಲು ಎಕರೆ ನೆಲವನ್ನು ದಾನ ಮಾಡಿದವರು ಸುಬ್ಬಮ್ಮ ಶಂಭಟ್ಟರೆಂಬ ಮಹಿಳೆ, ಎಂಟೂವರೆ ಲಕ್ಷಕ್ಕೂ ಅಧಿಕ ಹಣವನ್ನು ನೆರವಾಗಿ ನೀಡಿದ ದಾನಿಗಳು ರಾಜ್ಯದ ಮೂಲೆ ಮೂಲೆಯಲ್ಲಿ ಸಂಚರಿಸಿ ಅಪರೂಪದ ಗಿಡಗಳನ್ನು ಸಂಗ್ರಹಿಸಿ ತಂದುಕೊಟ್ಟ ಕುಂಬೆತ್ತಿವನ ಶಿವರಾಮಭಟ್ಟರು, ಗಿಡಗಳಿಗೆ ನೀರೆರೆದು ಸೇವಾರೂಪದಲ್ಲಿ ಪೋಷಿಸಿದ ತಿಮ್ಮಪ್ಪಗೌಡರು- ಹೀಗೆ ಅಸಂಖ್ಯ ಮಂದಿಯ ದುಡಿಮೆಯಿಂದ ವೈಶಿಷ್ಟ್ಯಪೂರ್ಣ ವನ ರೂಪುಗೊಳ್ಳುತ್ತಿದೆ. ನೆರವಿನಿಂದ ನೆರಳು 2008ರಲ್ಲಿ ವೇದಾರಣ್ಯದ ಸೃಷ್ಟಿಗೆ ಚಾಲನೆ ಸಿಕ್ಕಿತು. ಸಮಾಜ ಸೇವಕ ಗೋಪಾಲಕೃಷ್ಣ ಭಟ್ಟರು ಪ್ರಧಾನ ಸಂಚಾಲಕರಾದರು. ಕೃಷ್ಣ ಕಾಮತ್ ಅಧ್ಯಕ್ಷರಾಗಿ, ದಿವಾಕರ ನಾಯಕ್ ಕಾರ್ಯದರ್ಶಿಗಳಾಗಿರುವ ಸದಸ್ಯರ ಸಮಿತಿಯೂ ನಿರ್ಮಾಣವಾಗಿ 50 ದಿನಗಳ ಶ್ರಮದಾನದಲ್ಲಿ ನೆಲ ಸಮತಟ್ಟಾಯಿತು. ಸುಬ್ಬಮ್ಮನವರೇ ತಮ್ಮ ಜಮೀನಿಂದ ನೀರು ಹರಿಸಿ ಗಿಡಗಳಿಗೆ ಜೀವದಾನವನ್ನೂ ಮಾಡಿದರು. ಪಂಚಾಯತ್ ನೀರು ಸೌಲಭ್ಯ ನೀಡಿತು, ವಿದ್ಯುತ್ ಇಲಾಖೆ ಶಕ್ತಿ ನೀಡಿತು, ಎಲ್ಲರ ನೆರವಿನಿಂದ ಧರ್ಮಾರಣ್ಯದ ಸೊಬಗಿಗೆ ಕಳೆ ಬಂತು ಎನ್ನುತ್ತಾರೆ ಗೋಪಾಲಕೃಷ್ಣ ಭಟ್ಟರು. ಒಳ ಪ್ರವೇಶಿದಾಗ ಆರಂಭದಲ್ಲಿದೆ ನವಗ್ರಹ ವೃಕ್ಷಮಂಟಪ. ಸೂರ್ಯನಿಗೆ ಬಿಳಿ ಎಕ್ಕೆ ಗಿಡ, ಚಂದ್ರನಿಗೆ ಪಾಲಾಶ, ಕುಜನಿಗೆ ಖದಿರ, ಶನಿಗೆ ಬನ್ನಿ, ಗುರುವಿಗೆ ಅರಳಿ, ರಾಹುವಿಗೆ ಗರಿಕೆ, ಬುಧನಿಗೆ ಉತ್ತರಣೆ, ಶುಕ್ರನಿಗೆ ಅತ್ತಿ, ಕೇತುವಿಗೆ ದರ್ಬೆ- ಹೀಗೆ ಆಯಾ ಗ್ರಹದ ಸಸ್ಯವನ್ನು ನೆಟ್ಟ ಬಳಿಕ ಸುತ್ತಲೂ ಕಟ್ಟೆ ಕಟ್ಟಿ ನೀರೆರೆದು ಸಾವಯವ ಗೊಬ್ಬರದಿಂದಲೇ ಬೆಳೆಸಲಾಗುತ್ತಿದೆ. 27 ನಕ್ಷತ್ರಗಳಿಗೆ ಸಂಬಂಧಿಸಿದ ಗಿಡಗಳಿರುವ ಇನ್ನೊಂದು ವನವಿದೆ. ಕಾಸರಕ, ನೆಲ್ಲಿ, ಅತ್ತಿ, ಪೇರಳೆ, ಪಾಲಾಶ, ಕಿನ್ನಿಗೋಳಿ ಮುಂತಾದ 27 ಬಗೆಯ ಗಿಡಗಳು ಅಲ್ಲಿ ಬೆಳೆಯುತ್ತಿವೆ. ಏಳು ಮಂದಿ ಋಷಿಗಳಿಗೆ ಸಂಬಂಧಿಸಿದ ರಕ್ತಚಂದನ, ಬಕುಲ ಮುಂತಾದ ಗಿಡಗಳಿರುವ ಸಪ್ತರ್ಷಿವನವಿದೆ. ಬಾಳೆಗಿಡಗಳ ರಂಬಾವನವೂ ಉಂಟು. ಗಣಪತಿ ಪಂಚಾಯತನ ವನದೊಳಗೆ ಖದಿರ, ಕರವೀರ, ತುಲಸಿ, ತುಂಬೆ, ಬಿಲ್ವ ಗಿಡಗಳು ಶೋಭಿಸುತ್ತಿವೆ. 50ಕ್ಕೂ ಅಧಿಕ ವನೌಷಧಿಗಳ ಗಿಡಗಳನ್ನು ಹೊಂದಿದ ಧನ್ವಂತರಿ ವನವೂ ಸಿದ್ಧವಾಗುತ್ತಿದೆ. ದ್ವಾದಶರಾಶಿಗಳ ವನ ಅದರದೇ ಗಿಡಗಳೊಂದಿಗೆ ಇನ್ನೊಂದು ಭಾಗದಲ್ಲಿದೆ. ಇದೆಲ್ಲ ಪರಿಸರ ವೃದ್ಧಿಯ ಕೆಲಸಗಳಾದರೆ ಧರ್ಮವರ್ಧನೆಗಾಗಿಯೂ ಅನೇಕ ಯೋಜನೆಗಳು ಕಾರ್ಯಾರಂಭಗೊಂಡಿದೆ. ಸಿದ್ಧವಾಗಿರುವ ಯಾಗಶಾಲೆಯಲ್ಲಿ ಪ್ರತಿ ತಿಂಗಳು ಭಕ್ತರ ಇಷ್ಟಸಿದ್ಧಿಗಾಗಿ ನಾಲ್ಕು ಗಣೇಶಹವನ ನಡೆಯುತ್ತಿದ್ದು ಸದ್ಯವೇ ಶಾಶ್ವತ ಗಣಪತಿ ಗುಡಿ ಸ್ಥಾಪನೆಯಾಗಲಿದೆ. ಹರಕೆಗಳನ್ನು ಕೈಗೊಳ್ಳುವ ಭಕ್ತರು, ಬ್ರಾಹ್ಮೀ ಮುಹೂರ್ತದಲ್ಲಿ ಸ್ನಾನ ಮಾಡಿ ಬಂದು ಇಲ್ಲಿರುವ ವೃಕ್ಷವನಗಳಿಗೆ ಭಕ್ತಿಯಿಂದ ಪ್ರದಕ್ಷಿಸಿದರೆ ಗ್ರಹದೋಷ ವಿಮುಕ್ತಿ, ವಿದ್ಯೆಗೂ ಪ್ರಗತಿಯಂತೆ. ಗಿಡ ನೆಡುವುದೂ ಹರಕೆ! ಇಲ್ಲಿ ಎಲ್ಲ ಹೋಮ ಹವನಾದಿಗಳಿಗೂ ಅವಕಾಶವಿದೆ,ಅದಕ್ಕೆ ಸಂಬಂಧಿಸಿದ ಸಮಿಧೆಗಳೆಲ್ಲವೂ ಇಲ್ಲೇ ಲಭ್ಯ. ಸಾರ್ವಜನಿಕರ ಸಹಭಾಗಿತ್ವದಿಂದ 300 ಮಂದಿಗೆ ಸ್ಥಳಾವಕಾಶವಿರುವ ಸಭಾಭವನ ಪಾಕಶಾಲೆ, ಸ್ನಾನದ ಕೋಣೆ, ಶೌಚಾಲಯ, ನೀರಿನ ಟ್ಯಾಂಕ್, ವಾಸ್ತವ್ಯದ ಕೋಣೆ, ದಾಸ್ತಾನು ಕೋಣೆ ಇದೆಲ್ಲವನ್ನೂ ನಿರ್ಮಾಣ ಮಾಡಲಾಗಿದೆ. ಆರು ಸಾವಿರ ರೂಪಾಯಿಗಳಲ್ಲಿ ಇಲ್ಲಿ ಮದುವೆ ಮಾಡಬಹುದು. ಅವರಾಗಿ ಇಚ್ಛಿಸಿ ಕೊಡುವ ದೇಣಿಗೆಯ ಹೊರತು ಯಾವುದೇ ಶುಲ್ಕಗಳಿಲ್ಲ. ಗೋಪಾಲಕೃಷ್ಣ ಭಟ್ಟರು ಮನೆಮನೆಗೆ ಹೋಗಿ ಬಳಕೆಗೆ ಅಗತ್ಯವಿಲ್ಲದ ಪಾತ್ರೆಗಳನ್ನು ಕಾಡಿಬೇಡಿ ತಂದು ಇಲ್ಲಿ ನಡೆಯುವ ಧಾರ್ಮಿಕ ಕಾರ್ಯಗಳಿಗೆ ಬಳಸುತ್ತಾರೆ. ಗಿಡ ನೆಡಲು ಧನಸಹಾಯ ನೀಡುವುದೂ ಇಲ್ಲಿ ಇಚ್ಛಾಪೂರ್ತಿಯ ಹರಕೆ. ನವರಾತ್ರಿಯಲ್ಲಿ ನಿತ್ಯ ಭಜನಾ ಸತ್ಸಂಗವಿದೆ, ಮಕ್ಕಳಿಗೆ ಸುಸಂಸ್ಕೃತ ಬದುಕಿನ ಬೋಧನೆ ಮಾಡಲಾಗುತ್ತಿದೆ, ಆಗಮಿಸಿದವರಿಗಾಗಿ ಪುರಾಣಗಳು ಮತ್ತು ನೀತಿ ಕಥೆಗಳ ಗ್ರಂಥಾಲಯವನ್ನು ಅಣಿಗೊಳಿಸಿದ್ದಾರೆ. ಇಷ್ಟಾದರೆ ಸಾಲದು ಎನ್ನುತ್ತಾರೆ ಸಂಚಾಲಕರು. ಧರ್ಮ ರಕ್ಷಣೆಗೆ ಅನುಕೂಲವಾಗುವ ಯಜ್ಞಶಾಲೆ, ಅನುಗ್ರಹ ಮಂಟಪ ರಸ್ತೆ ಬದಿಯಲ್ಲೊಂದು ದ್ವಾರ ನಿರ್ಮಾಣವಾಗಬೇಕಿದೆ. ಪಂಚವಟಿ ವನ ನಿರ್ಮಾಣದ ಗುರಿಯೂ ಇದೆ. ಇದಕ್ಕೆಲ್ಲ 5 ಲಕ್ಷ ಬೇಕಾಗುತ್ತದೆಂಬ ಆಶಯ ವ್ಯಕ್ತಪಡಿಸುತ್ತಾರೆ(ದೂ. 9449487846). ಪ್ರತಿ ದೇವತೆಗೂ ಸಂಬಂಧಿಸಿದ ವಿಶಿಷ್ಟ ವೃಕ್ಷಜಾತಿಯನ್ನು ಸಂಗ್ರಹಿಸಿ ತಂದು ನೆಟ್ಟು ಬೆಳೆಸಿ ಅದನ್ನೊಂದು ಧಾರ್ಮಿಕ ಮತ್ತು ನಿಸರ್ಗ ಪೋಷಕ ಕ್ಷೇತ್ರವಾಗಿ ಪರಿವರ್ತಿಸುವ ಮಹತ್ಕಾರ್ಯ ಸುಳ್ಯಕ್ಕೆ ಸಮೀಪದ ಆರಂಬೂರಿನಲ್ಲಿ ನಡೆದಿದೆ. ಪ.ರಾಮಕೃಷ್ಣ ಶಾಸ್ತ್ರಿ