ನಾಟಕದ ಜೀವನ ಚಿಕ್ಕಪ್ಪನ ಇಲೆಕ್ಟ್ರಿಕಲ್ ಕಾಂಟ್ರಾಕ್ಟ್ ಕೆಲಸ ನೀಳಕಾಯದ ಹುಡುಗ ಜೀವನನ್ನು ಆಕರ್ಷಿಸಿತು. ತೆಳ್ಳಗೆ, ಎತ್ತರವಾಗಿರುವ ಇವರ ದೇಹ ಈ ವೃತ್ತಿಗೆ ಸಹಾಯಕವೂ ಆಗಿತ್ತು! ಹೌದು, ಯಾವುದೇ ಮನೆಯ ಸೀಲಿಂಗ್ ಫ್ಯಾನ್ ತಲುಪಲು ಇವರಿಗೆ ಟೇಬಲ್, ಸ್ಟೂಲ್ ಏನೂ ಬೇಕಾಗುವುದಿಲ್ಲ!! ಜೀವನವನ್ನು ಹೇಗೆ ಪ್ರೀತಿಸಬೇಕು ಎಂದು ನಾವು 'ಜೀವನ ಫರ್ನಾಂಡಿಸ್‌' ಇವರಿಂದ ಕಲಿಯಬೇಕು. ಕುಂದಾಪುರದ ಹತ್ತಿರದ ಬೈಂದೂರಿನವರಾದ ಜೀವನ, ಫರ್ನಾಂಡಿಸ್ ದಂಪತಿಗಳ ಜೇಷ್ಠ ಪುತ್ರ. ಹತ್ತನೆ ತರಗತಿವರೆಗೂ ಓದು. ಮುಂದೆ ಜೀವನಾಸಕ್ತಿಯೇ ಹೆಚ್ಚಾಗಿ ದುಡಿಮೆಯ ಕಡೆಗೆ ಗಮನ. ಕೆಲಕಾಲ ಚಿಕ್ಕಪ್ಪನ ಎಲೆಕ್ಟ್ರಿಕಲ್ ಕಾಂಟ್ರ್ಯಾಕ್ಟ್ ಕೆಲಸ ಮಾಡಿದವರು ಈಗ ಪೂರ್ಣ ಪ್ರಮಾಣದ ರಂಗಕರ್ಮಿ. ಬೈಂದೂರಿನ ಹೊರವಲಯದಲ್ಲಿ ದೊಡ್ಡ ಜಮೀನು, ದೊಡ್ಡ ಮನೆ, ಮನೆಯ ಮುಂದೆಯೇ ಅರಬ್ಬಿ ಸಮುದ್ರದ ಬ್ಯಾಕ್‌ವಾಟರ್. ಅದರಲ್ಲಿ ದೋಣಿಯಲ್ಲಿ ಪಯಣಿಸುವುದೆಂದರೆ ಜೀವನ ಮತ್ತು ಅವನ ಗೆಳೆಯರಿಗೆ ಹಾಗೂ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಆದರೆ ಬಾಲ್ಯದಲ್ಲಿ ಏನಾದರೂ ಅವಘಡ ಮಾಡಿಕೊಂಡರೆ ಎಂಬುದು ಅಜ್ಜನ ಆತಂಕ. ಒಂದು ದಿನ ಯಾರೂ ಇಲ್ಲದಾಗ ಜೀವನ ಅವರ ಕ್ಯಾಪ್ಟನ್‌ಶಿಪ್‌ನಲ್ಲಿ ಹುಡುಗರೆಲ್ಲ ದೋಣಿಯಲ್ಲಿ ನೀರಿಗೆ ಇಳಿದರು. ಜಲವಿಹಾರ ಮುಗಿಸಿ ಬಂದಾಗ ಅಜ್ಜ ಬೆತ್ತ ಹಿಡಿದು ಕಾಯುತ್ತಿದ್ದರು. ಕಂಬಕ್ಕೆ ಬಿಗಿದು ಬಾರಿಸಿದರು. ಆದರೆ ಮುಂದೆ ಅಜ್ಜನನ್ನು ದಡದಾಟಿಸುವ ಜವಾಬ್ದಾರಿ ಜೀವನ ಅವರ ಪಾಲಿಗೆ ಬಂದಿತ್ತು. ದಡ ದಾಟಿದಾಗಲೊಮ್ಮೆ ಅಜ್ಜ, ಬಾರಿಸಿದ್ದನ್ನು ನೆನಸಿ ಬೇಸರ ಮಾಡಿಕೊಳ್ಳುತ್ತಿದ್ದರು. ಇಂತಹ ತುಂಟಾಟದ ಬಾಲ್ಯ ಕಳೆದ 'ಜೀವನ' ದುಡಿಮೆಗಾಗಿ ಮುಂಬೈಗೆ ಹೋದರು. ಅಲ್ಲಿ ಚಿಕ್ಕಪ್ಪನ ಮನೆಯಲ್ಲಿ ವಾಸ. ಎಂಟು ವರ್ಷಗಳ ನಂತರ ಬೆಂಗಳೂರಿಗೆ ಬಂದು ಸೇರಿಕೊಂಡದ್ದು ಯಶವಂತ ಸರದೇಶಪಾಂಡೆಯವರ ಗುರು ಇನ್‌ಸ್ಟಿಟ್ಯೂಟ್ ಹುಬ್ಬಳ್ಳಿ ತಂಡಕ್ಕೆ. ಲೈಟ್ ಮತ್ತು ಸೌಂಡ್ ಆಪರೇಟರ್ ಆಗಿ ಕೆಲಸಕ್ಕೆ ಸೇರಿದ ಜೀವನ ಅವರಿಗೆ ರಂಗಭೂಮಿಯ ನೇಪಥ್ಯದ ಎಲ್ಲ ಕೆಲಸದಲ್ಲೂ ಆಸಕ್ತಿ. ಹಾಗಾಗಿ, ರಂಗ ಸಜ್ಜಿಕೆ, ಪರಿಕರಗಳ ನಿರ್ವಹಣೆ, ವಸ್ತ್ರ-ಆಭರಣಾದಿಗಳ ಶೇಖರಣೆ ಮಾಡತೊಡಗಿದರು. ಗುರು ಇನ್‌ಸ್ಟಿಟ್ಯೂಟ್‌ನ ಪ್ರಸಿದ್ಧ ನಾಟಕಗಳಾದ ಆಲ್ ದಿ ಬೆಸ್ಟ್!, ರಾಶಿಚಕ್ರ, ಸಹಿ ರೀ ಸಹಿ, ದಿಲ್ ಮಾಂಗೆ ಮೋರ್, ಹಿಂಗಾದ್ರೆ ಡಾಟ್ ಕಾಮಿಡಿ, ಜಲವೇ ಜೀವನ ಸಾಕ್ಷಾತ್ಕಾರ ಎಲ್ಲ ನಾಟಕದ ಬೆಳಕಿನ ವಿನ್ಯಾಸ ಮತ್ತು ಧ್ವನಿಯ ವ್ಯವಸ್ಥೆ ಜೀವನ ಅವರದ್ದೆ. ರಾಜ್ಯದಲ್ಲಷ್ಟೇ ಅಲ್ಲ, ದೂರದ ಕತಾರ್ ದೇಶದಲ್ಲಿಯೂ ತಂಡದ ಸಹಿ ರೀ ಸಹಿ ಮತ್ತು ಒಂದ್ ಆಟ ಭಟ್ಟರದು ನಾಟಕಗಳ ಸಂಪೂರ್ಣ ನೇಪಥ್ಯದ ಜವಬ್ದಾರಿ ಹೊತ್ತಿದ್ದ ಜೀವನ, ಆ ದೇಶದ ನಾಟಕ ಪ್ರಿಯರು ಗಮನ ಸೆಳೆಯುವಂತಹ ಕೆಲಸ ಮಾಡಿ ಸೈ ಎನಿಸಿಕೊಂಡರು. ಕತಾರದ ರಂಗಕರ್ಮಿ ಅರವಿಂದ ಪಾಟೀಲ ಜೀವನರ ಕೆಲಸ ಮೆಚ್ಚಿ ವಿಶೇಷ ಗೌರವ ಕೊಟ್ಟರು. ತುಂಬ ನಾಚಿಕೆ ಸ್ವಭಾವದ ಜೀವನ, ನಾಟಕದ ನಂತರದ ಕರ್ಟನ್ ಕಾಲ್‌ಗೆ ಸಹ ರಂಗಕ್ಕೆ ಬರುವುದಿಲ್ಲ. ಲೈಟ್ ಸೌಂಡ್ ನಿರ್ವಹಿಸುವ ಜಾಗದಲ್ಲೇ ಕುಳಿತಿದ್ದು ಅಲ್ಲಿಂದಲೇ ಜನರಿಗೆ ನಮಸ್ಕಾರ ಮಾಡುತ್ತಾರೆ. ಒಂದು ಪುಟ್ಟ ನಾಟಕದಲ್ಲಿ ಸಣ್ಣದೊಂದು ಕೆಲಸ ಮಾಡಿದ್ದರೆ ಎಲ್ಲಕಡೆ ಸುದ್ದಿ ಮಾಡಿ ಮೂರು ಪುಟ ಬಯೋಡಾಟ್ ಮಾಡಿಕೊಳ್ಳುವವರ ನಡುವೆ ಜೀವನ ನಿಜವಾಗಿಯೂ ಪ್ರಾಮಾಣಿಕ ಪರಿಶ್ರಮಿ. ಗುರು ಇನಸ್ಟಿಟ್ಯೂಟ್‌ನ ಎಲ್ಲ ರಂಗ ಚಟುವಟಿಕೆಯಲ್ಲಿ ಸಕ್ರಿಯ. ಹಾಗೆಯೇ ಉಳಿದ ಯಾವುದೇ ರಂಗತಂಡ ಆಹ್ವಾನಿಸಿದರೂ ಇಲ್ಲ ಎನ್ನುವುದಿಲ್ಲ. ಸದ್ಯಕ್ಕೆ ಮೈಯ್ಯಾಸ್ ರಂಗಾವಳಿ ಹಾಗೂ ಮನೆಮನೆಗೆ ಮೈಯ್ಯಾಸ್ ಕಾರ್ಯಕ್ರಮದಲ್ಲಿ ಜೀವನ ಬಿಸಿಯಾಗಿದ್ದಾರೆ. -ಖುಷಿ