ಮಂಜಿನ ಕೋಟೆ ಇದು ನಕ್ಷತ್ರಾಕಾರದ ಕೋಟೆ. ಸಾಯಂಕಾಲದಲ್ಲಿ ಇದನ್ನು ನೋಡುವಾಗ ಸಿಗುವ ಗಮ್ಮತ್ತೇ ಬೇರೆ. ಪರಮಾದ್ಭುತ ಶೂಟಿಂಗ್ ತಾಣ. ಹೆಸರು ಮಂಜರಾಬಾದ್ ಕೋಟೆ. ಸಕಲೇಶಪುರದಿಂದ 6 ಕಿ.ಮೀ. ಸಾಗಿದರೆ 1792ರಲ್ಲಿ ಟಿಪ್ಪುಸುಲ್ತಾನ್ ನಿರ್ಮಿಸಿದ ಮಂಜರಾಬಾದ್ ಕೋಟೆ ಸಿಗುತ್ತದೆ. ಟಿಪ್ಪು ಇದನ್ನು ವೀಕ್ಷಿಸಲು ಬಂದಾಗಲೆಲ್ಲ ಮಂಜುಕವಿದ ವಾತಾವರಣ ಇರುತ್ತಿತ್ತಂತೆ. ಹೀಗಾಗಿ ಇದಕ್ಕೆ 'ಮಂಜರಾಬಾದ್‌' ಎಂದು ಕರೆದನಂತೆ. ಕೋಟೆಯ ಸುತ್ತಲೂ ಆಳವಾದ ಕಂದಕ ಹಾಗೂ ಗೋಡೆ. ಇದರ ಒಳಮೈ- ಹೊರಮೈ ಕಲ್ಲು- ಇಟ್ಟಿಗೆಗಳಿಂದ ರಚಿತವಾಗಿದೆ. ಇಂಥ ಮಾದರಿಯ ಕೋಟೆ ಕರ್ನಾಟಕದಲ್ಲಿ ಬೇರೆಲ್ಲೂ ಇಲ್ಲ. ಕೋಟೆಯ ಪ್ರವೇಶದ್ವಾರ ಪೂರ್ವಕ್ಕಿದೆ. ಆರಂಭದಲ್ಲಿ ಹೊರಬಾಗಿಲು, ಮಧ್ಯಬಾಗಿಲು ಮತ್ತು ಒಳಬಾಗಿಲು ಎದುರಾಗುತ್ತದೆ. ಹೊರಬಾಗಿಲಿನ ಹೊರಭಾಗದಲ್ಲಿ ಗೋಡೆ ಕಟ್ಟಿ ಅಂಕುಡೊಂಕಾಗಿರುವ ದಾರಿ. ಶತ್ರುಗಳಿಗೆ ಈ ದಾರಿ ಒಂದು ರೀತಿಯಲ್ಲಿ ದಾಟಲಾಗದ ಲಕ್ಷ್ಮಣ ರೇಖೆಯಂತಿತ್ತು. ಹೊರಬಾಗಿಲ ಮೇಲೆ ಮೇಲೆ ಷಟ್ಕೋನಾಕೃತಿಯ ಕಾವಲು ಗೋಪುರವಿದೆ. ಅಲ್ಲಲ್ಲಿ ಚಿತ್ರಿಸಲಾದ ಕುಂಭ. ಅದರಿಂದ ಹೊರಬಂದ ಹೂ- ಎಲೆಗಳಿರುವ ಬಳ್ಳಿ, ಹುಲಿಯ ಪಟ್ಟೆಗಳ ಅಲಂಕಾರ ಈ ಶಿಲ್ಪಕಲೆಗಳು ಅಂದಿನ ಶಿಲ್ಪಿಗಳ ಸೃಜನಶೀಲತೆಗೆ ಸಾಕ್ಷಿ. ನಕ್ಷತ್ರದ ಮೂಲೆಗಳಲ್ಲಿ ವರ್ತುಲಾಕಾರದ ಗೋಪುರವಿದೆ. ಇದರ ಗೋಡೆಯ ಸುತ್ತ ಬಂದೂಕು ತೂರಿಸುವ ರಂಧ್ರಗಳಿವೆ. ಗೋಪುರಗಳ ಸನಿಹ ಒಬ್ಬ ಮಲಗುವಷ್ಟು ಜಾಗವಿದೆ. ಇಟ್ಟಿಗೆ- ಗಾರೆಗಳಿಂದ ಕಟ್ಟಲಾಗಿರುವ ಅಧಿಕ (೤) ಆಕಾರದ ಬೃಹತ್ ಕೊಳವಿದೆ. ಇದರ ನಾಲ್ಕೂ ದಿಕ್ಕಿನಲ್ಲಿ ಆವರಿಸಿರುವ ಮೆಟ್ಟಿಲುಗಳು ಕೆರೆಯ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ಪಕ್ಕದಲ್ಲಿ ಆಯತಾಕಾರದ ಮದ್ದಿನ ಮನೆಯಿದೆ. ಹೀಗೆ ಮೂರು ಚೌಕಾಕರದ ಕಣಜಗಳಿವೆ. ಮಧ್ಯಭಾಗದಲ್ಲಿ ಎರಡು ಕಮಾನುಗಳ ಪಡಸಾಲೆಯಿದ್ದು, ಕೊನೆಯಲ್ಲಿ ಕೋಟೆಯ ಮೇಲ್ಭಾಗಕ್ಕೆ ಹೋಗಲು ಮೆಟ್ಟಿಲುಗಳಿವೆ. ಕೌಟಿಲ್ಯ ತನ್ನ ಅರ್ಥಶಾಸ್ತ್ರದಲ್ಲಿ ಹೇಳುವಂತೆ ಅಂದು ರಾಜರು ರಾಜ್ಯದ ನಾಲ್ಕು ದಿಕ್ಕುಗಳಲ್ಲೂ ವೈರಿ ಪಡೆಯನ್ನೆದುರಿಸಲು ಸುಸಜ್ಜಿತ ಕೋಟೆಗಳನ್ನು ಕಟ್ಟುತ್ತಿದ್ದರು. ಅವುಗಳಲ್ಲಿ ಔದಕ, ಪಾರ್ವತ, ಧಾನ್ವನ, ವನ ಎಂಬ ನಾಲ್ಕು ಪ್ರಕಾರದ ಕೋಟೆಗಳಿದೆ. ಮಂಜರಾಬಾದ್ ಕೋಟೆ ಪಾರ್ವತ ಶೈಲಿಯದ್ದಾಗಿದೆ. ಇಂದಿನಂತೆ ಆಧುನಿಕ ಯಾಂತ್ರೀಕೃತ ಸೌಲಭ್ಯವಿರದ ಟಿಪ್ಪುಸುಲ್ತಾನನ ಕಾಲದಲ್ಲಿ ಈ ಕೋಟೆಯನ್ನು ಅದ್ಭುತವಾಗಿ ನಿರ್ಮಿಸಿರುವ ನಿರ್ಮಾತೃಗಳ ಶ್ರಮಕ್ಕೆ ನಿಜಕ್ಕೂ ಸಲಾಂ ಎನ್ನಲೇಬೇಕು. ಇಷ್ಟೆಲ್ಲ ವಿಶೇಷತೆ ಹೊಂದಿರುವ ಈ ಕೋಟೆ ಇಂದು ಅಳಿವಿನಂಚಿನಲ್ಲಿರುವುದು ವಿಷಾದ. ಕೋಟೆಯ ದ್ವಾರ, ಗೋಡೆಗಳಲ್ಲಿ ಅನೇಕ ಅಶ್ಲೀಲ ಬರಹಗಳನ್ನು ಕಾಣುತ್ತೇವೆ. ಸರ್ಕಾರ ಇದರ ವಿರುದ್ಧ ಕ್ರಮ ಜರುಗಿಸಬೇಕು. -ನವೀನ್ ಭಟ್ ಇಳಂತಿಲ ಚಿತ್ರ: ಅಭಿಷೇಕ್ ಡಿ.