ಅಘನಾಶಿನಿ ಪುರಾತನ ಕಾಲದಿಂದಲೂ ಪ್ರವಾಸೋದ್ಯಮ, ವಾಣಿಜ್ಯೋದ್ಯಮ ದೃಷ್ಟಿಯಿಂದ ಉತ್ತರ ಕನಡದ... ಪುರಾತನ ಕಾಲದಿಂದಲೂ ಪ್ರವಾಸೋದ್ಯಮ, ವಾಣಿಜ್ಯೋದ್ಯಮ ದೃಷ್ಟಿಯಿಂದ ಉತ್ತರ ಕನ್ನಡದ ಕರಾವಳಿ ಸಂಪದ್ಭರಿತ. ಅಘನಾಶಿನಿ ನದಿಯ ಪೂರ್ವದಲ್ಲಿ ಗೋಚರಿಸುವ ಕಾಡಿನ ಹೂ, ಹಸಿರಿನಿಂದ ಕೂಡಿದ ಪಶ್ಚಿಮ ಘಟ್ಟಗಳು, ದಕ್ಷಿಣೋತ್ತರವಾಗಿ ಹಬ್ಬಿರುವ ಗುಡ್ಡಗಳು, ಮಧ್ಯದಲ್ಲಿ ಪ್ರಶಾಂತವಾಗಿ ಹರಿಯುವ ಅಘನಾಶಿನಿ ನದಿ, ಅರಬ್ಬಿ ಸಮುದ್ರದ ಅಲೆಗಳ ಮೊರೆತಗಳು ಮನಸ್ಸನ್ನು ಪ್ರಫುಲ್ಲಗೊಳಿಸುವಂಥ ಸೊಬಗಿನವು. ಇನು ಅಘನಾಶಿನಿ ಸಂಗಮದ ಸೂರ್ಯಾಸ್ತ ಮನಮೋಹಕ. ಸಂಧ್ಯಾಕಾಲದ ಹೊಂಗಿರಣಗಳು ಎರಡೂ ಗುಡ್ಡದ ಪ್ರತಿಫಲನದಿಂದ ನದಿಯಲ್ಲಿ ಉಂಟುಮಾಡುವ ಚಿತ್ತಾರ ವರ್ಣನಾತೀತ. ನೈಸರ್ಗಿಕ ಪಕ್ಷಿಧಾಮ ಅರಬ್ಬಿ ಸಮುದ್ರ ಮತ್ತು ಅಘನಾಶಿನಿ ನದಿ ಸೇರುವ ಸಂಗಮ ಪ್ರದೇಶದಲ್ಲಿ ಓಡಾಡುವ ಬೋಟ್‌ಗಳು ಇಲ್ಲಿಯ ನೈಸರ್ಗಿಕ ಸೌಂದರ್ಯಕ್ಕೆ ಆಧುನಿಕ ಮೆರುಗು ನೀಡಿವೆ. ನದಿಯ ಹಿನ್ನೀರು ಪ್ರದೇಶವಾದ ಆಗ್ನೇಯ ಮತ್ತು ನೈಋತ್ಯ ದಿಕ್ಕಿನಲ್ಲಿ ಕಾಂಡ್ಲ ಗಿಡಗಳ ವನಗಳು, ಅಕ್ಟೋಬರ್‌ನಿಂದ ಮಾರ್ಚ್ ತನಕ ನೈಸರ್ಗಿಕ ಪಕ್ಷಿಧಾಮವಾಗಿ ಪರಿವರ್ತನೆಯಾಗಿರುತ್ತದೆ. ನೈಜೀರಿಯಾ, ಮಂಗೋಲಿಯಾ, ಶ್ರೀಲಂಕಾ, ಆಸ್ಟ್ರೇಲಿಯಾ, ಇಂಡೋನೇಷಿಯಾದಿಂದ ಆಗಮಿಸುವ ಥರಾವರಿ ಪಕ್ಷಿಗಳು ಇಲ್ಲಿನ ಪರಿಸರದಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ. ಅವುಗಳ ಚಲನವಲನ, ಕಲರವ ಪ್ರವಾಸಿಗರನ್ನು ಸೆಳೆಯುವಂಥದು. ಇಲ್ಲಿಯ ಕಾಂಡ್ಲ ಗಿಡಗಳಲ್ಲಿ ಹಿಡಿಗಾತ್ರದಿಂದ ಚೊಬ್ಬೆಯ ತನಕ ನಿರ್ಮಾಣವಾಗುವ ವಿವಿಧ ಗೂಡುಗಳು, ಇವುಗಳಲ್ಲಿರುವ ಕಡಲೆಕಾಯಿ ಗಾತ್ರದಿಂದ ಕೋಳಿಮೊಟ್ಟೆ ಆಕಾರದವರೆಗಿನ ಬಿಳಿಯ ಮೊಟ್ಟೆಗಳು ಪ್ರವಾಸಿಗರಲ್ಲಿ ಸಂಶೋಧನಾ ಮನೋಭಾವನೆ ಸ್ಫುರಿಸದಿರವು. ಹಕ್ಕಿಗಳ ಕಲರವ, ಮಿಲನ, ಸಮರ, ಮುದ್ದಾಟ ಪ್ರವಾಸಿಗರಲ್ಲಿ ಮನೋಲ್ಲಾಸ ತರಿಸಬಲ್ಲವು. ನದಿಯ ವಾಯವ್ಯ ದಿಕ್ಕಿನಲ್ಲಿನ ಐತಿಹಾಸಿಕ ತದಡಿ ಬಂದರು ಸಹ ಯಾನಿಗಳ ಮನಸೆಳೆಯುವಂಥದು. ಇಲ್ಲಿನ ಸಾವಿರಾರು ಬೋಟುಗಳು ವಾಣಿಜ್ಯ ವ್ಯವಹಾರಕ್ಕೆ ಸಾಕ್ಷಿಯೂ, ಸ್ಥಳೀಯ ಜನಜೀವನದ ನಾಡಿಯೂ ಹೌದು. ಅಘನಾಶಿನಿ ಸಂಗಮದಿಂದ ಹೆಕ್ಕಿ ತರುವ ಅಂದ-ಚಂದದ ಮೀನು, ಕೆಂಬಣ್ಣದ ರಾಣಿ ಮೀನು, ಡಾಲರ್ ಮೌಲ್ಯ ಗಳಿಸುತ್ತಿರುವ ಏಡಿ, ಜಾಲ, ಸಿಗಡಿ ಇಲ್ಲಿ ಪ್ರವಾಸಿಗರು ನೋಡಿ ಅರಿಯಬಹುದು. ತದಡಿಯಿಂದ 2.5 ಕಿ.ಮೀ. ಅಂತರದ ಓಂ ಬೀಚ್, ಧಾರ್ಮಿಕ ಮಹತ್ವದ ಗೋಕರ್ಣ ತಾಣಗಳು ಸನಿಹವಿದ್ದು, ಇಲ್ಲಿಗೂ ಭೇಟಿ ನೀಡಬಹುದು. ಕನ್ನಡದ ಮೊದಲ ದೊರೆ ಮಯೂರವರ್ಮ ನಿರ್ಮಿಸಿದ ಗೋಕರ್ಣನಾಥೇಶ್ವರ ದೇಗುಲ, ಈಶಾನ್ಯ ದಿಕ್ಕಿನಲ್ಲಿ ಅರಬ್ಬೀ ಸಮುದ್ರಕ್ಕೆ ಹೊಂದಿಕೊಂಡಿರುವ ರಾಜಭೈರವ ಕೋಟೆಯಿದೆ. ಅಘನಾಶಿನಿ ಸಂಗಮ ಪ್ರದೇಶದ ದಂಡೆಯ ಮೇಲೆ 400 ವರ್ಷಗಳಷ್ಟು ಹಿಂದಿನ ಆಸ್ತಿಕರ ಆರಾಧ್ಯದೈವ ಚಿಂತಾಮಣಿ ಗಣಪತಿ ದೇಗುಲ, ಕಾಮೇಶ್ವರ ಹಾಗೂ ಈಶ್ವರ ದೇಗುಲಗಳನ್ನೂ ಭೇಟಿ ಮಾಡಲು ಮರೆಯದಿರಿ. ಅಘನಾಶಿನಿಯಿಂದ ತದಡಿ ಕೇವಲ 1 ಕಿ.ಮೀ. ಅಂತರವಿದ್ದು, ರಸ್ತೆ ಮಾರ್ಗ ಅಸಾಧ್ಯ. ಜಲಮಾರ್ಗವೇ ಇಲ್ಲಿಗೆ ತೆರಳಲು ಮೂಲಾಧಾರ. ತಾರಿ ದೋಣಿಗಳಲ್ಲಿ ತದಡಿಗೆ ಸಾಗುವುದು ಮಜಾ ತರಿಸುವಂಥದು. ಯಾನದ ಅನುಭವ ಸವಿಯಲು ಸಮಯ ಮೀಸಲಿಡಿ. ಅರಬ್ಬಿ ಸಮುದ್ರ ಅಂಚಿನಲ್ಲಿ ತೆಂಗುಬಾಳೆ ತೋಟಗಳ ಮಧ್ಯೆ, ಅಘನಾಶಿನಿ ರಸ್ತೆಯಲ್ಲಿ ಸಾಗುವುದೇ ಸೊಬಗು. ಕಡ್ಲೆ, ಕಾಗಾಲ್ ಬೀಚ್‌ಗಳ ಸುಂದರತೆಯೂ ನಿಮಗಿಲ್ಲಿ ಪ್ರಾಪ್ತಿ. ಮಾರ್ಗಮಧ್ಯದ ಗುಡೇಅಂಗಡಿಯ ಶ್ರೀಕಾಂಚಿಕಾ ಪರಮೇಶ್ವರಿ ದೇಗುಲವಿದೆ. ಹೀಗೆ ಬನ್ನಿ ಕುಮಟಾ ಬಸ್ ನಿಲ್ದಾಣದಿಂದ 14 ಕಿ.ಮೀ. ಅಂತರದಲ್ಲಿ ಅಘನಾಶಿನಿ ಸಂಗಮ ಪ್ರದೇಶವಿದೆ. ಮುಂಜಾನೆ 6 ಗಂಟೆಯಿಂದ ಪ್ರತಿ 30 ನಿಮಿಷಕ್ಕೆ ಒಂದರಂತೆ ಅಘನಾಶಿನಿ ಮತ್ತು ಮೊಸಳೆಸಾಲು ಹೆಸರಿನ ಬಸ್ ಸೌಕರ್ಯವಿದೆ. ಗೋಕರ್ಣದಿಂದ ತದಡಿಗೆ ಬಸ್ ಸೌಕರ್ಯವಿದೆ. ಇಲ್ಲಿಂದಲೂ ತಾರಿ ದೋಣಿಯ ಮೂಲಕ ಅಘನಾಶಿನಿಗೆ ತೆರಳಬಹುದು. - ಚಿತ್ರ-ಲೇಖನ: ಸುಬ್ರಾಯ ಭಟ್