ಸೂಪರ್ ಬೈಕ್ಸ್ ಕಾರು ಮಾರುಕಟ್ಟೆ ಸದ್ಯ ಸ್ವಲ್ಪ ಡಲ್ಲಾಗಿದೆ. ಆದರೆ ಇದ್ದಕ್ಕಿದ್ದಂತೆ ಬೈಕ್ ಮಾರುಕಟ್ಟೆ ಭಾರೀ ಚಟುವಟಿಕೆ ತೋರುತ್ತಿದೆ. ಹಾಗಂತ ಕಾರು ಕೊಳ್ಳುವವರು ಬೈಕ್ನತ್ತ ಗಮನಹರಿಸಿದ್ದಾರೆ ಅಂದುಕೊಳ್ಳಬೇಡಿ. ಹೊಸ ಕಾರುಗಳು ಮಾರುಕಟ್ಟೆ ಪ್ರವೇಶಿಸುತ್ತಿಲ್ಲ. ಬದಲಾಗಿ ಇರುವ ಮಾದರಿಗಳೇ ಕೆಲವು ಬದಲಾವಣೆ, ಹೊಸ ರೂಪದೊಂದಿಗೆ ಮರಾಕಟ್ಟೆ ಪ್ರವೇಶಿಸುತ್ತಿವೆ. 2014ರಲ್ಲಿ ಕೆಲವು ಹೊಸ ಕಾರುಗಳು ಬರಲಿವೆಯಾದರೂ, ಕಾರಿಗಿಂತ ಹೆಚ್ಚು ಬೈಕ್ಗಳು ಮಾರುಕಟ್ಟೆಗೆ ಬರಲಿವೆ. ಅದರಲ್ಲೂ ವಿಶೇಷವಾಗಿ ಹೆಚ್ಚು ಸಾಮರ್ಥ್ಯದ, ದುಬಾರಿ ಅನ್ನಿಸುವಂತಹ, ಕ್ರೂಜ್ (ಪ್ರವಾಸ) ಬೈಕ್ಗಳು ಭಾರತದ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಕವಾಸಾಕಿ ನಿಂಜಾ ಝೆಡ್ಎಕ್ಸ್ 14ಆರ್ ನೋಡಿದ ತಕ್ಷಣ ನಿಮ್ಮನ್ನು ಆಕರ್ಷಿಸುವ ಸೌಂದರ್ಯ ಕವಾಸಾಕಿ ನಿಂಜಾದಲ್ಲಿದೆ. ಕೇವಲ ವೇಗವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಈ ಬೈಕ್ ನಿರ್ಮಿಸಲಾಗಿದ್ದರೂ, ಒಂದಷ್ಟು ಉತ್ತಮ ಅಂಶಗಳನ್ನು ಕೂಡ ಅಳವಡಿಸಲಾಗಿದೆ. 1,441 ಸಿಸಿ ಸಾಮರ್ಥ್ಯದ ಬೈಕ್ 4 ಸಿಲಿಂಡರ್ ಎಂಜಿನ್ ಹೊಂದಿದೆ. ಹೊಸ ಇಸಿಯು ಅಳವಡಿಸಲಾಗಿದ್ದು, ಇದು ಬೈಕ್ನ ಶಕ್ತಿ ನಿರ್ವಹಣೆ ಮೂಲಕ ಫ್ಯುಯೆಲ್ ಬಳಕೆಯನ್ನು ಉತ್ತಮಗೊಳಿಸುತ್ತದೆ. ಹಾಗೆಯೇ ಬೈಕ್ನ ಶಕ್ತಿ ಓಡಿಸುವವರನ್ನು ಖುಷಿಗೊಳಿಸಿ ಅತಿವೇಗದಲ್ಲಿ ಹೋಗುವುದನ್ನು ತಪ್ಪಿಸಲು ಸೂಚನೆ ಫ್ಲ್ಯಾಶ್ ಆಗುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಟ್ರ್ಯಾಕ್ಷನ್ ನಿಯಂತ್ರಣಕ್ಕೆ 3 ಆಯ್ಕೆಗಳನ್ನು ನೀಡಲಾಗಿದೆ. ಬೈಕ್ ಓಡಿಸುವಾತನ ಅನುಭವ, ಓಡಿಸುವ ಪರಿಸರದ ಆಧಾರದ ಮೇಲೆ ಟ್ರ್ಯಾಕ್ಷನ್ ಕಂಟ್ರೋಲ್ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ನೀವು ತುಂಬ ಅನುಭವಿಯಾಗಿದ್ದು ಬೈಕ್ ನಿಯಂತ್ರಿಸಲು ಸಮರ್ಥರಾಗಿದ್ದರೆ ಟ್ರ್ಯಾಕ್ಷನ್ ಕಂಟ್ರೋಲ್ಗಳನ್ನು ಸಂಪೂರ್ಣವಾಗಿ ಆಫ್ ಮಾಡುವ ಆಯ್ಕೆಯನ್ನೂ ನೀಡಲಾಗಿದೆ. 2 ಶಕ್ತಿಯ ಆಯ್ಕೆಯನ್ನೂ ನೀಡಲಾಗಿದೆ. ಫುಲ್ ಮತ್ತು ಲೋ ಪವರ್ ಆಯ್ಕೆಗಳು ಲಭ್ಯವಿದ್ದು, 6500 ಆರ್ಪಿಎಂ ದಾಟುತ್ತಿದ್ದ ಹಾಗೆ ಶೇ.25ರಷ್ಟು ಶಕ್ತಿ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಕೆಲವೊಮ್ಮೆ ಇಂತಹ ಇಲೆಕ್ಟ್ರಾನಿಕ್ ವ್ಯವಸ್ಥೆಗಳು ನಿಜವಾಗಿಯೂ ಪರಿಣಾಮಕಾರಿಯೇ ಎಂಬುದನ್ನು ತಿಳಿದುಕೊಳ್ಳಲು ಬೈಕ್ ಓಡಿಸಿಯೇ ನೋಡಬೇಕು. ಫಸ್ಟ್ ಗೇರ್ ಹಾಕಿ ಹೊರಡುತ್ತಿದ್ದಂತೆ ಅಪಾರ ಶಕ್ತಿಯ ಪರಿಣಾಮವಾಗಿ ಮುಂಬದಿ ಚಕ್ರ ಆಕಾಶದತ್ತ ಮುಖಮಾಡುವುದನ್ನು ಈ ಎಲೆಕ್ಟ್ರಾನಿಕ್ ನಿಯಂತ್ರಣಗಳೇ ತಡೆಯುತ್ತವೆ ಎನ್ನುತ್ತದೆ ಕಂಪನಿ. ಇವುಗಳ ಹೊರತಾಗಿ ಮುಂಬದಿಗೆ ಎರಡು ಸೆಮಿ ಫ್ಲೋಟಿಂಗ್ ಡಿಸ್ಕ್, ಹಿಂಬದಿಗೆ ಒಂದು ಡಿಸ್ಕ್ ಹೊಂದಿರುವ, ಎಬಿಎಸ್ ವ್ಯವಸ್ಥೆ ಇರುವ ಬ್ರೇಕ್ಗಳನ್ನು ನೀಡಲಾಗಿದೆ. ಇಷ್ಟೆಲ್ಲ ಹೇಳಿದ ಮೇಲೆ ದರ ಹೇಳದಿದ್ದರೆ ಓದುಗರಿಗೆ ಅನ್ಯಾಯ ಮಾಡಿದಂತೆ. ಇದರ ಮಾರುಕಟ್ಟೆ ಬೆಲೆ 16.9 ಲಕ್ಷ!! 12.50 ಲಕ್ಷಕ್ಕೆ ನಿಂಜಾ 1000 ಹಾಗೂ ಝೆಡ್ 1000 ಬೈಕ್ಗಳನ್ನೂ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಕಡಿಮೆ ದರಕ್ಕೆ ಹ್ಯಾರ್ಲಿ ಹ್ಯಾರ್ಲಿ ಡೆವಿಡ್ಸನ್ ಬೈಕರ್ಗಳ ಕನಸು. ಹ್ಯಾರ್ಲಿ ಡೆವಿಡ್ಸನ್ ಬೈಕ್ಗಳೆಂದರೆ ಅಷ್ಟು ಕ್ರೇಜ್. ಆದರೆ ಅವುಗಳ ಆರಂಭಿಕ ಬೆಲೆಯೇ 5 ಲಕ್ಷ. ಇದರಿಂದಾಗಿ ಭಾರತದ ಮಾರುಕಟ್ಟೆಯಲ್ಲಿ ದೊಡ್ಡ ಸಂಖ್ಯೆಯ ಗ್ರಾಹಕರನ್ನು ತಲುಪಲು ಕಂಪನಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ 250-350 ಸಿಸಿ ಬೈಕ್ಗಳನ್ನು ಮಾರುಕಟ್ಟೆಗೆ ಇಳಿಸುವ ಮೂಲಕ ದೊಡ್ಡ ಸಂಖ್ಯೆಯ ಗ್ರಾಹಕರನ್ನು ಸೆಳೆಯಲು ಹ್ಯಾರ್ಲಿ ಡೆವಿಡ್ಸನ್ ಯೋಚನೆ ನಡೆಸಿದೆ. ಪ್ಯಾರಿಸ್ನ ಮಿಲನ್ನಲ್ಲಿ ನಡೆದ ಬೈಕ್ ಶೋನಲ್ಲಿ ಕಂಪನಿ 500 ಸಿಸಿ ಮತ್ತು 750 ಸಿಸಿ ಬೈಕ್ಗಳನ್ನು ಪ್ರದರ್ಶಿಸಿದೆ. ಈ ಬೈಕ್ಗಳು ಹರ್ಯಾಣದ ಭವಾಲ್ನಲ್ಲಿರುವ ಹ್ಯಾರ್ಲಿ ಡೆವಿಡ್ಸನ್ ಪ್ಲಾಂಟ್ನಲ್ಲಿ ಉತ್ಪಾದನೆಯಾಗಲಿವೆ. ಭಾರತದ ಹವಾಮಾನಕ್ಕೆ ಹೊಂದಿಕೊಳ್ಳಲು ಅನುಕೂಲವಾಗುವಂತೆ ಇವಕ್ಕೆ ಲಿಕ್ವಿಡ್ ಕೂಲಿಂಗ್ ವ್ಯವಸ್ಥೆ ಅಳವಡಿಸಲಾಗಿದೆ. 500ಸಿಸಿ ಬೈಕ್ಗೆ 4.5 ಲಕ್ಷ ದರ ಅಂದಾಜಿಸಲಾಗಿದ್ದು, ಇದು ಸದ್ಯಕ್ಕೆ ಹ್ಯಾರ್ಲಿ ಡೆವಿಡ್ಸನ್ ಕಂಪನಿಯ ಅತ್ಯಂತ ಕಡಿಮೆ ದರದ ಬೈಕ್ ಆಗಿರಲಿದೆ. ಇದನ್ನು ನೋಡಿದರೆ 2014ರ ಅಂತ್ಯದೊಳಗೆ 350 ಸಿಸಿ ಬೈಕ್ಗಳು ಬಂದರೂ ಅಚ್ಚರಿಯಿಲ್ಲ. ಥಂಡರ್ ಬರ್ಡ್ ಸ್ಟಾರ್ಮ್ ಈ ಬೈಕ್ನ ದರ ಮಿನಿ ಎಸ್ಯುವಿ ಅಥವಾ ಟಾಟಾ ಸಫಾರಿ ಸ್ಟಾರ್ಮ್, ಮಹೀಂದ್ರಾ ಎಕ್ಸ್ಯುವಿಗಳ ಆರಂಭಿಕ ಮಾದರಿ ಕಾರುಗಳಿಗಿಂತ ಹೆಚ್ಚು! ಮಿನಿ ಎಸ್ಯುವಿಗಳು 9-11 ಲಕ್ಷಗಳಲ್ಲಿ ದೊರೆಯುತ್ತವೆ. ಆದರೆ ಈ ಬೈಕ್ನ ಶೋರೂಂ ಬೆಲೆಯೇ 13 ಲಕ್ಷ! ಹಾಗೆಯೇ ಈ ಬೈಕು ನಮ್ಮ ಸಣ್ಣ ಕಾರುಗಳಿಗಿಂತ (800ಸಿಸಿ-1500ಸಿಸಿ) ಹೆಚ್ಚು ಸಾಮರ್ಥ್ಯದ 1,699ಸಿಸಿ ಎಂಜಿನ್ ಹೊಂದಿದೆ. ಲಿಕ್ವಿಡ್ ಕೂಲ್ಡ್, ಫ್ಯುಯೆಲ್ ಇಂಜೆಕ್ಟೆಡ್ ಎಂಜಿನ್ ಸಹಾಯದಿಂದ ಈ ಬೈಕು ಪ್ರತಿ ಗೇರ್ನಲ್ಲೂ ಬಿಲ್ಲಿನಿಂದ ಹೊರಟ ಬಾಣದಂತೆ ಮುನ್ನುಗ್ಗುತ್ತದೆ. ಅಷ್ಟು ವೇಗದಿಂದ ಮುನ್ನುಗ್ಗುವ ಬೈಕನ್ನು ನಿಯಂತ್ರಿಸಲು ಮುಂಬದಿಗೆ ಎರಡು ಡಿಸ್ಕ್ ಮತ್ತು ಹಿಂಬದಿಗೆ ಒಂದು ಡಿಸ್ಕ್ ಬ್ರೇಕ್ಗಳನ್ನು ನೀಡಲಾಗಿದ್ದು, ಎಬಿಎಸ್ ಕೂಡ ಇದೆ. ಹಿಂಬದಿ ಟಯರ್ ತುಂಬಾ ಅಗಲ ಇರುವುದರಿಂದ ಬ್ಯಾಲೆನ್ಸ್ ಅತ್ಯುತ್ತಮವಾಗಿದೆ. ಹೆದ್ದಾರಿಗಳಲ್ಲಿ ವೇಗವಾಗಿ ಹೋಗುವಾಗ ಇತರ ವಾಹನಗಳನ್ನು ಹಿಂದಿಕ್ಕುವಾಗ ಅತ್ಯಂತ ಸುಲಭವಾಗಿ ಆಚೆ-ಈಚೆ ಚಲಾಯಿಸಬಹುದು. ಆದರೆ ದೊಡ್ಡ ತಿರುವುಗಳನ್ನು ದಾಟುವಾಗ ನಿಧಾನಿಸುವುದು ಅನಿವಾರ್ಯ. ಇಲ್ಲವಾದಲ್ಲಿ ನಿಮ್ಮ ನಿರೀಕ್ಷೆಗೆ ತಕ್ಕಂತೆ ಬೈಕ್ ತಿರುಗದಿರುವ ಅಪಾಯವಿದೆ. ಈ ಬೈಕ್ನ ಹೆಸರು ಟ್ರಿಂಪ್ ಥಂಡರ್ಬರ್ಡ್ ಸ್ಟಾರ್ಮ್. ಶಕ್ತಿ ಮತ್ತು ವೇಗದ ದೃಷ್ಟಿಯಿಂದ ಇದು ಬಿರುಗಾಳಿಯೇ. ಆದರೆ ಇದನ್ನೇ ನೀವು ನಗರ ಪ್ರದೇಶದಲ್ಲಿ ಚಲಾಯಿಸಲು ಹೊರಟಿರೋ ಅದೊಂದು ದೊಡ್ಡ ಸಾಹಸವೇ ಸರಿ. ಯಾಕೆಂದರೆ ಈ ಬೈಕ್ ಅತ್ಯಂತ ಕಡಿಮೆ ಎಕ್ಸಿಲರೇಟರ್ ತಿರುವಿದರೂ ಹೆಚ್ಚು ವೇಗ ಪಡೆಯುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ನಿಧಾನವಾಗಿ ಹೋಗುವಾಗ ಎಂಜಿನ್ನ ವೈಬ್ರೇಷನ್ ಹೆಚ್ಚಿರುತ್ತದೆ. ಅಲ್ಲದೇ ಬೈಕ್ ಅತ್ಯಂತ ಭಾರವಾಗಿರುವುದರ ಜತೆಗೆ 22 ಲೀ. ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಹೊಂದಿರುವುದರಿಂದ ಪಾರ್ಕಿಂಗ್ ಸ್ಥಳಗಳಿಂದ ಹೊರತೆಗೆಯುವುದೇ ದೊಡ್ಡ ಕಷ್ಟವಾಗಬಹುದು. ಒಬ್ಬರೇ ಇದನ್ನು ನಿಭಾಯಿಸುವುದು ಕೂಡ ಕಷ್ಟವಾಗಬಹುದು. ಇನ್ನು ಹಿಂಬದಿ ಸವಾರ ಈ ಬೈಕ್ನಲ್ಲಿ ಬೇಡದ ಅತಿಥಿ. ಕುಳಿತರೆ ಕಷ್ಟಪಡಬೇಕಾದೀತು. ಮೋಜುಮಸ್ತಿಗೆ ಮಾತ್ರ ಟ್ರಿಂಪ್ ಥಂಡರ್ಬರ್ಡ್ ಸ್ಟಾರ್ಮ್ ಬೈಕ್ ನಗರ ಸಂಚಾರಕ್ಕಾಗಿ ಅಲ್ಲವೇ ಅಲ್ಲ. ದೂರದ ಪ್ರಯಾಣ, ಮೋಜು, ಮಸ್ತಿ ಮತ್ತು ಬೈಕ್ ಕ್ರೇಜ್ ಇರುವವರಿಗಾಗಿ ಮಾತ್ರ. ಹತ್ತಿರದ, ನಿಧಾನದ ಪ್ರಯಾಣಕ್ಕೆ ಇದನ್ನು ತೆಗೆದುಕೊಂಡು ಹೋದರೆ ಪ್ರಯಾಣ ದುಃಖಕರವಾಗಿರುವುದಲ್ಲಿ ಅನುಮಾನವಿಲ್ಲ. ಬೈಕ್ ಕ್ರೇಜ್ ಇರುವ ಶ್ರೀಮಂತರನ್ನು ಗಮನದಲ್ಲಿರಿಸಿಕೊಂಡೇ ಈ ಬೈಕ್ ಸಿದ್ಧಪಡಿಸಲಾಗಿದೆ. ವಿದೇಶಗಳಲ್ಲಿ ಬೈಕ್ ಕ್ರೂಜ್ (ಪ್ರವಾಸ) ಪ್ರಸಿದ್ಧವಾಗಿದೆ. ಭಾರತದಲ್ಲಿ ಆ ಪ್ರಮಾಣದಲ್ಲಿಲ್ಲ. ಅಲ್ಲದೇ ಇಲ್ಲಿನ ರಸ್ತೆಗಳು ಕೂಡ ಅತಿವೇಗದ ಬೈಕಿಂಗ್ಗೆ ಸೂಕ್ತವಾಗಿಲ್ಲ. ಆದ್ದರಿಂದ ಈ ಬೈಕ್ಗೆ ಗ್ರಾಹಕರನ್ನು ಹುಡುಕುವುದು ಕಂಪನಿಗೆ ಕೊಂಚ ಕಷ್ಟವಾಗಬಹುದು. ಸುಝುಕಿ ಇನಾಜುಮಾ ಈ ಬಗ್ಗೆ ಹಿಂದೆ ಇದೇ ಪುಟದಲ್ಲಿ ಬರೆಯಲಾಗಿತ್ತು. ಈಗ ಬಂದಿರುವ ಸುದ್ದಿ ಪ್ರಕಾರ ಸುಝುಕಿ ಇನಾಜುಮಾ ಜ.27ರಂದು ಭಾರತದ ಮಾರುಕಟ್ಟೆ ಪ್ರವೇಶಿಸಲಿದೆ. ಆದರೆ ಇದರ ಬೆಲೆ ಮಾತ್ರ 3.14 ಲಕ್ಷ! ಸುಝುಕಿ ಇನಾಜುಮಾ ಬೈಕ್ ಭಾರತದಲ್ಲಿ ಉತ್ಪಾದನೆಯಾಗುತ್ತಿಲ್ಲದ ಕಾರಣ ಅದರ ದರ ಈ ಪ್ರಮಾಣದಲ್ಲಿ ಹೆಚ್ಚಾಗಿದೆ ಎನ್ನಲಾಗಿದೆ. ಇದೇ ದರದಲ್ಲಿ ಬೈಕ್ ಕಂಪನಿಗಳ 350-500 ಸಿಸಿ ಬೈಕ್ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಡ್ಯೂಕ್, ಹೋಂಡಾ ಸಿಬಿಆರ್ಗಳು ಸಿಂಗಲ್ ಸಿಲೆಂಡರ್ ಎಂಜಿನ್ ಹೊಂದಿರುವುದು ಕೂಡ ಅವುಗಳ ದರ ಕಡಿಮೆಯಾಗಲು ಕಾರಣ. ಆದರೆ ಸುಝುಕಿ ಇನಾಜುಮಾ ಎರಡು ಸಿಲೆಂಡರ್ ಎಂಜಿನ್ ಹೊಂದಿದೆ. ಅಲ್ಲದೇ ಈ ಬೈಕ್ನಲ್ಲಿ ಎಬಿಎಸ್ ನೀಡದಿರಲು ಕೂಡ ಕಂಪನಿ ನಿರ್ಧರಿಸಿದೆ. ಇದನ್ನೆಲ್ಲ ಗಮನಿಸಿದರೆ ಇನಾಜುಮಾ ದರ ಹೆಚ್ಚಾಯಿತು ಎಂದೇ ಹೇಳಬಹುದು. ಕಾಂಟಿನೆಂಟಲ್ ಜಿಟಿ ರಾಯಲ್ ಎನ್ಫೀಲ್ಡ್ ಭಾರತದ ಬೈಕ್ ಉದ್ಯಮದಲ್ಲಿ ದೊಡ್ಡ ಹೆಸರು. 6-8 ತಿಂಗಳು ಕಾದು ಕುಳಿತಾದರೂ ರಾಯಲ್ ಎನ್ಫೀಲ್ಡ್ ಕೊಳ್ಳುವ ಭಕ್ತರಿದ್ದಾರೆ. ಈವರೆಗೆ ರಾಯಲ್ ಎನ್ಫೀಲ್ಡ್ಗೆ ಪೈಪೋಟಿ ಕೊಡುವ ಬೈಕ್ಗಳಿರಲಿಲ್ಲ. ಅವರು ಆಡಿದ್ದೇ ಆಟ. ಆದರೆ ಈಗ ವಿದೇಶಿ ಕಂಪನಿಗಳು 250ಸಿಸಿಯಿಂದ 1000 ಸಿಸಿವರೆಗಿನ ಬೈಕುಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ. ಹೀಗಾಗಿ ದೊಡ್ಡ ಬೈಕ್ಗಳ ಮಾರುಕಟ್ಟೆ ಮೊದಲಿನಷ್ಟು ಸುಲಭವಲ್ಲ. ಇದನ್ನು ಮನಗಂಡಿರುವ ರಾಯಲ್ ಎನ್ಫೀಲ್ಡ್ 'ಕಾಂಟಿನೆಂಟಲ್ ಜಿಟಿ' ಎಂಬ ಹೆಸರಿನ ಬೈಕ್ ಮಾರುಕಟ್ಟೆಗೆ ಪರಿಚಯಿಸಿದೆ. ರಾಯಲ್ ಎನ್ಫೀಲ್ಡ್ನ ಈವರೆಗಿನ ಬೈಕ್ಗಳಲ್ಲೇ ಕಾಂಟಿನೆಂಟಲ್ ಜಿಟಿಯ ವಿನ್ಯಾಸ ಅತ್ಯಂತ ವಿಶಿಷ್ಟವಾಗಿದೆ. ಇದು 535 ಸಿಸಿ ಎಂಜಿನ್ ಹಾಗೂ 5 ಗೇರ್ಗಳನ್ನು ಹೊಂದಿದೆ. ಬೈಕ್ ಚಲಾಯಿಸುವಾತ ಕುಳಿತುಕೊಳ್ಳುವ ಶೈಲಿಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಫುಟ್ರೆಸ್ಟ್ ಹಿಂದಕ್ಕೆ ಅಳವಡಿಸಿರುವುದರಿಂದ ಸ್ಪೋರ್ಟ್ಸ್ಬೈಕ್ ಓಡಿಸಿದ ಮಾದರಿಯಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಚಿಕ್ಕ ಹ್ಯಾಂಡಲ್ಗಳಿರುವುದರಿಂದ ಬೈಕ್ ಓಡಿಸುವಾತ ಕಷ್ಟಪಟ್ಟು ಕುಳಿತಂತೆ ಭಾಸವಾದರೂ, ನಿಜವಾಗಲೂ ಬೈಕ್ ಓಡಿಸುವಾಗ ಅಷ್ಟೇನೂ ಕಷ್ಟವಾಗದು ಎನ್ನುತ್ತದೆ ಕಂಪನಿ. ಹಿಂದೆ ಮತ್ತು ಮುಂದೆ ಡಿಸ್ಕ್ ಬ್ರೇಕ್ಗಳನ್ನು ನೀಡಲಾಗಿದ್ದು, ಕೇವಲ ಒಬ್ಬರಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶ ಇರುವ ಸೀಟು ಅಳವಡಿಸಲಾಗಿದೆ. ಅಗತ್ಯವಿದ್ದಲ್ಲಿ ಇಬ್ಬರು ಕುಳಿತುಕೊಳ್ಳುವ ಸೀಟು ಅಳವಡಿಸಿಕೊಳ್ಳಬಹುದು. ಹೊಸ ಚಾಸಿ ಅಳವಡಿಸಿದ್ದರಿಂದ ರಾಯಲ್ ಎನ್ಫೀಲ್ಡ್ನ ಇತರ ಬೈಕ್ಗಳಲ್ಲಿ ಇರುವಂತೆ ಕಾಂಟಿನೆಂಟಲ್ ಡಿಟಿಯಲ್ಲಿ ಎಂಜಿನ್ ವೈಬ್ರೇಷನ್ ಕಡಿಮೆ ಮಾಡಲು ಕಂಪನಿ ಯಶಸ್ವಿಯಾಗಿದೆ. ನಿಧಾನವಾಗಿ ಓಡಿಸಲು ಕೂಡ ಈ ಬೈಕ್ ಅನುಕೂಲವಾಗಿದೆ. ಇದರ ಮಾರುಕಟ್ಟೆ ಬೆಲೆ 2.5 ಲಕ್ಷ. ಈ ಬೈಕನ್ನು ನೀವು ನಿಮ್ಮ ಹೃದಯದ ಕರೆಗೆ ಓಗೊಟ್ಟು ಕೊಳ್ಳಬೇಕೇ ಹೊರತು ಲೆಕ್ಕಾಚಾರದ ದೃಷ್ಟಿಯಿಂದಲ್ಲ. = ವಕ್ರದಂತ