ಗಾಜಿನ ದೇಗುಲ ಹೊಸನಗರ ತಾಲೂಕು ಎಂದಾಕ್ಷಣ ಬಿದನೂರು ಕೋಟೆ, ಚಕ್ರಾ ಡ್ಯಾಂ, ಅಂಬುತೀರ್ಥ, ಹುಂಚ ಜೈನ ಬಸದಿಯಂಥ ಪ್ರಮುಖ ಪ್ರವಾಸೋದ್ಯಮ ತಾಣಗಳು ಕಣ್ಮುಂದೆ ನಿಲ್ಲುತ್ತವೆ. ಬಾಳೆಬರೆ, ಚಕ್ರಾ, ಹಿಡ್ಲುಮನೆಯಂಥ ಜಲಪಾತಗಳ ಸದ್ದು ಕವಿಯಲ್ಲಿ ಗುಂಯ್‌ಗುಟ್ಟುತ್ತದೆ. ಆದರೆ, ರಾಮಾಯಣದ ನಂಟಿರುವ ಕಾರಣಗಿರಿ ಸಿದ್ಧಿವಿನಾಯಕ ದೇವಸ್ಥಾನವೂ ಇವುಗಳ ಸಾಲಿನಲ್ಲಿ ಈಗ ಹೆಸರು ಮಾಡುತ್ತಿದೆ. ಹೌದು. ಹೊಸನಗರ ತಾಲೂಕಿನ ಕಾರಣಗಿರಿ ಗ್ರಾಮದ ಬಳಿ ಮೈದಳೆದಿರುವ ಈ ದೇಗುಲ ಸಿದ್ಧಿಕ್ಷೇತ್ರಗಳಲ್ಲೊಂದು. ವಿಂಧ್ಯೆಯನ್ನು ದಾಟಿ ದಕ್ಷಿಣಕ್ಕೆ ಕಾಲಿಸಿದ ಮೊದಲ ಉತ್ತರ ಭಾರತೀಯ ಅಗಸ್ತ್ಯ ಮುನಿಗಳ ತಪೋಭೂಮಿ ಮತ್ತು ಅಗಸ್ತ್ಯ ಪೂಜಿತ ವಿನಾಯಕನ ತಾಣವಿದು. ಅತ್ರಿ ಮುನಿಯಿಂದ ಬೀಳ್ಕೊಂಡ ರವಿವಂಶದ ಚಕ್ರವರ್ತಿ, ಅಯೋಧ್ಯೆ ಅರಸ ದಶರಥನ ಪುತ್ರ ಶ್ರೀರಾಮ ಸಂಚರಿಸಿದ ಪುಣ್ಯಭೂಮಿ. ಸೀತಾ ವಿಯೋಗದ ನಂತರ ಅಗಸ್ತ್ಯರ ಅಣತಿಯಂತೆ ಕೆರೆಯಲ್ಲಿರುವ ವಿನಾಯಕನನ್ನು ಪ್ರಾರ್ಥಿಸಿ ಪುನಃ ಬರುವ ಸಂಕಲ್ಪ ಮಾಡಿಕೊಂಡು ಹೊರಟ ರಾಮ- ಲಕ್ಷ್ಮಣರಿಂದ ಪಂಪಾತೀರದತ್ತ ಪಯಣಿಸಿದರೆಂಬ ಮಾತಿದೆ. 2006ರ ಜ.18ರಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳಿಂದ ಶಿಲಾನ್ಯಾಸ ಕಂಡ ರಾಜಗೋಪುರ ಹೈಕೋರ್ಟ್ ನ್ಯಾಯವಾದಿ ಸೂರೆಘಟ್ಟದ ಗಂಗಾಧರ ಐತಾಳರ ಸಂಕಲ್ಪದಿಂದ ಕೋಟ್ಯಂತರ ರು. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಗಾಜಿನ ಚೂರುಗಳ ವಿನ್ಯಾಸ ಹೊರನೋಟದಿಂದ ಇದು ಮಾಮೂಲಿ ದೇಗುಲವೆನಿಸಿಕೊಳ್ಳಬಹುದು. ಆದರೆ, ಇದರ ವಿಶೇಷ ಗುರುತಿಸಬೇಕಿರುವುದು ದೇಗುಲದ ರಾಜಗೋಪುರಕ್ಕೆ ನೀಡಿರುವ ವಿವಿಧ ಬಣ್ಣದ ಗಾಜಿನ ಚೂರುಗಳ ವಿನ್ಯಾಸ ಹಾಗೂ ಚಿತ್ರಕಲಾ ಕೌಶಲಕ್ಕೆ ಎಂಬುದು ಗಮನೀಯ. ತಮಿಳುನಾಡಿನಿಂದ ಶಿಲ್ಪಿಗಳನ್ನು ಕರೆತಂದು ನಿರ್ಮಿಸಿದ ರಾಜಗೋಪುರದ ಒಳಭಾಗದ ಜಗಲಿ ಮತ್ತು ಗೋಡೆಗಳಿಗೆ ದೆಹಲಿಯ ಕುಶಲಕರ್ಮಿಗಳು ಗಾಜಿನ ಚೂರುಗಳಿಂದ ವಿನ್ಯಾಸಗೊಳಿಸಿದ್ದಾರೆ. ಡಾ.ರಾಜ್‌ಕುಮಾರ್, ರಾಮಕೃಷ್ಣ ಹೆಗಡೆ, ಎಸ್.ಬಂಗಾರಪ್ಪ ಮತ್ತಿತರ ಗಣ್ಯರು ದೇಗುಲಕ್ಕೆ ಭೇಟಿ ನೀಡಿದ್ದಾರೆ. ಶಿವಮೊಗ್ಗದಿಂದ ಹೊಸನಗರಕ್ಕೆ ತೆರಳುವ ಮಾರ್ಗದಲ್ಲಿ ಬಲಗಡೆಯಲ್ಲಿ ವಿರಾಜಮಾನವಾಗಿರುವ 80 ಅಡಿಯ ಮಹಾಗೋಪುರದ ನೋಟವೇ ಮನದಲ್ಲಿ ಭಕ್ತಿ ಮೇಳೈಸುವಂತಿದೆ. ಕಾರ್ತಿಕ ಮಾಸದ ಪಾಡ್ಯದಿಂದ ಶುದ್ಧ ಸಪ್ತಮಿಯವರೆಗೆ ರಾತ್ರಿ ಕಾರ್ತಿಕ ದೀಪೋತ್ಸವ, ವೈಶಾಕ ಶುದ್ಧ ಪಾಡ್ಯದಿಂದ ಪಂಚಮಿಯವರೆಗೆ 5 ದಿನ ನಡೆಯುವ ರಥೋತ್ಸವ ಕಾರ್ಯಕ್ರಮಗಳು ಕಾರಣಗಿರಿಯ ವಿಶೇಷ. ರೂಟ್ ಮ್ಯಾಪ್ ಶಿವಮೊಗ್ಗದಿಂದ ಹೊಸನಗರ (60 ಕಿ.ಮೀ.) ಮಾರ್ಗವಾಗಿ ಚಲಿಸಬೇಕು. ಹೊಸನಗರದಿಂದ ನಗರ (16 ಕಿ.ಮೀ.)ಕ್ಕೆ ಹೋಗುವ ಮಾರ್ಗ ಮಧ್ಯೆದಲ್ಲಿ ಕಾರಣಗಿರಿ (7 ಕಿ.ಮೀ.) ತಲುಪಬಹುದು. - ಗಿರಿಧರ್ ಗಾಡಿಕೊಪ್ಪ