ಸೇಲ್ ಆಗ್ತಿಲ್ಲ! ಭಾರತೀಯ ವಾಹನ ಮಾರುಕಟ್ಟೆಯ ಬಿಡಿಭಾಗಗಳೆಲ್ಲ ಕಳಚಿ ದಯನೀಯ ಪರಿಸ್ಥಿತಿ ತಲುಪುತ್ತಿವೆ.... ಭಾರತೀಯ ವಾಹನ ಮಾರುಕಟ್ಟೆಯ ಬಿಡಿಭಾಗಗಳೆಲ್ಲ ಕಳಚಿ ದಯನೀಯ ಪರಿಸ್ಥಿತಿ ತಲುಪುತ್ತಿವೆ. ಪೆಟ್ರೋಲಿಯಂ ದರದ ವಿಪರೀತ ಏರಿಕೆ, ಆರ್ಥಿಕ ಕುಸಿತದಿಂದ 2013-14ನೇ ಆರ್ಥಿಕ ವರ್ಷದ ಮೊದಲ 4 ತಿಂಗಳಲ್ಲಿ ಕಾರು ಹಾಗೂ ದ್ವಿಚಕ್ರ ಮಾರಾಟದಲ್ಲಿ ಸಿಕ್ಕಾಪಟ್ಟೆ ಇಳಿಕೆಯಾಗಿದೆ. ಕಳೆದ ವರ್ಷದ ನಷ್ಟವನ್ನು ತುಂಬಿಕೊಳ್ಳಲು ಆಲೋಚಿಸಿದ್ದ ಮಾರುಕಟ್ಟೆ ಮತ್ತೆ ಮಕಾಡೆ ಮಲಗಿದೆ. ಸ್ಕೂಟರ್ ಒಂದನ್ನು ಹೊರತುಪಡಿಸಿ ಉಳಿದೆಲ್ಲ ವಾಹನಗಳು ಶೇ.5ರ ಆಸುಪಾಸಿನ ಪ್ರಮಾಣದಲ್ಲಿ ವ್ಯಾಪಾರ ಕುಸಿತ ಕಂಡಿವೆ. ಕಳೆದ ಆರ್ಥಿಕ ವರ್ಷದಲ್ಲೂ ಶೇ.7ರಷ್ಟು ವ್ಯಾಪಾರ ಕುಸಿದಿದ್ದರಿಂದ ಭಾರತೀಯ ಅಟೋಮೊಬೈಲ್ ಉದ್ಯಮ ಕಂಗೆಟ್ಟಿತ್ತು. ಉದ್ಯಮವು ಶೇ.13ರಷ್ಟು ಬೆಳವಣಿಗೆ ಕಾಣಲಿದೆ ಎಂದು ಸೊಸೈಟಿ ಆಫ್ ಇಂಡಿಯನ್ ಅಟೋಮೊಬೈಲ್ ಮ್ಯಾನ್ಯುಫ್ಯಾಕ್ಚರರ್ಸ್‌ನ ನಿರೀಕ್ಷಿಸಿತ್ತು. ಆದರೆ ಆರ್ಥಿಕ ವರ್ಷದ ಮೊದಲಾರ್ಧದ ವರದಿ ಪ್ರಕಾರ ಮುಂದಿನ ದಿನಗಳು ಮತ್ತಷ್ಟು ಕತ್ತಲಾಗುವ ಮುನ್ಸೂಚನೆ ನೀಡಿದೆ. ಆದರೆ ಭಾರತೀಯ ಎಸ್‌ಯುವಿಗಳ ಬೂಮ್ ಹಿನ್ನೆಲೆಯಲ್ಲಿ ರಫ್ತು ಪ್ರಮಾಣದಲ್ಲೊಂದು ಅಲ್ಪಮಟ್ಟಿನ ಏರಿಕೆಯಾಗಿದೆ. ಪೆಟ್ರೋಲಿಯಂ ದರದಲ್ಲಿ ಸುಧಾರಣೆ ತರುವ ಕೇಂದ್ರ ಸರ್ಕಾರದ ಭರವಸೆ ಅನುಷ್ಠಾನಕ್ಕೆ ಬರಲಿಲ್ಲ. ಮತ್ತೊಂದೆಡೆ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಸಮವಾಗಿಸಬೇಕೆಂಬ ಉದ್ಯಮಗಳ ಲಾಬಿಗೂ ಸಂಪೂರ್ಣ ಬೆಂಬಲ ದೊರೆತಿಲ್ಲ. ಈ ವರ್ಷದ ಡಿಸೆಂಬರ್ ಅಂತ್ಯದೊಳಗೆ ಡೀಸೆಲ್ ಹಾಗೂ ಪೆಟ್ರೋಲ್ ದರವನ್ನು ಸಮವಾಗಿಸಲು ಪ್ರಸಕ್ತ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಇಂದಿನ ಮಾರುಕಟ್ಟೆ ದರದ ಪ್ರಕಾರ, ಸುಮಾರು ರು. 15 ವ್ಯತ್ಯಾಸವಿದೆ. ಇದನ್ನು ಸರಿದೂಗಲು ಇನ್ನು ಕನಿಷ್ಠ ಒಂದು ವರ್ಷ ಹಿಡಿಯಬಹುದು. ಮತ್ತೊಂದೆಡೆ ಪೆಟ್ರೋಲ್ ಬೆಲೆಯಲ್ಲಿ ಆ ಪ್ರಮಾಣದ ಇಳಿಕೆ ಆಗದಿರುವುದೂ ಕಾರು ಹಾಗೂ ಮೋಟಾರ್ ಬೈಕ್ ಉದ್ಯಮಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಇದರ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಕುಸಿತ ಕಂಡಿದೆ. ಸರ್ಕಾರಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ನಿಯಂತ್ರಿಸಲು ಹೇಗೆ ಸಾಧ್ಯವಾಗುತ್ತಿಲ್ಲವೋ ಅದೇ ರೀತಿಯಲ್ಲಿ ವಾಹನ ಉತ್ಪಾದನೆ ವೆಚ್ಚದ ಏರಿಕೆ ಮೇಲೂ ನಿಗಾ ಇಡಲು ಉದ್ಯಮಿಗಳಿಗೆ ಸಾಧ್ಯವಾಗುತ್ತಿಲ್ಲ. ವಿಚಿತ್ರವೆಂದರೆ ವಾಹನ ಮಾರಾಟದಲ್ಲಿ ಇಳಿಕೆಯಾಗಿದ್ದರೂ ಉತ್ಪಾದನೆಯಲ್ಲಿ ವ್ಯಾಪಕ ಏರಿಕೆಯಾಗಿದೆ. ಕಳೆದ ಆರ್ಥಿಕ ವರ್ಷದ ಈ ಸಂದರ್ಭದಲ್ಲಿ 15.63 ಲಕ್ಷ ವಾಹನ ಉತ್ಪಾದಿಸಿದ್ದರೇ, ಪ್ರಸ್ತುತ 16.91 ಲಕ್ಷ ವಾಹನಗಳನ್ನು ಮಾರುಕಟ್ಟೆಗೆ ಬಿಡಲಾಗಿದೆ. ಉದ್ಯಮಿಗಳ ಲಬೋ ಲಬೋ... ಕಳೆದ ಆರ್ಥಿಕ ವರ್ಷದ ಮೊದಲ 4 ತಿಂಗಳ ಬಳಿಕ ಶೇ.8.18ರಷ್ಟು ಮಾರುಕಟ್ಟೆಯಲ್ಲಿ ಅಭಿವೃದ್ಧಿಯಾಗಿತ್ತು. ಒಟ್ಟಾರೆ ದೇಶೀಯ ಮಾರುಕಟ್ಟೆಯಲ್ಲಿ ಶೇ.8.6 ಋಣಾತ್ಮಕ ಬೆಳವಣಿಗೆ ಕಂಡಿದೆ. ಸ್ಕೂಟರ್‌ನಲ್ಲಿ ಮಾತ್ರ ಶೇ.14.77ರಷ್ಟು ನಿರೀಕ್ಷಿತವಾಗಿ ಮಾರಾಟವಾಗಿದೆ. ಇನ್ನುಳಿದಂತೆ ಎಲ್ಲ ವಿಭಾಗದಲ್ಲಿ ಋಣಾತ್ಮಕ ಬೆಳವಣಿಗೆ ದಾಖಲಾಗಿದೆ. ಪ್ರಯಾಣಿಕ ವಾಹನಗಳಲ್ಲಿ ಶೇ.5.30 ಹಾಗೂ ಕಾರುಗಳಲ್ಲಿ ಶೇ.5.80ರಷ್ಟು ಋಣಾತ್ಮಕ ಬೆಳವಣಿಗೆ ಕಂಡಿದೆ. ಎಸ್‌ಯುವಿ ಮಾರುಕಟ್ಟೆಯಲ್ಲಿ ಡಸ್ಟರ್ ಹಾಗೂ ಇಕೋಸ್ಪೋರ್ಟ್‌ನ ಯಶಸ್ಸಿನ ಬಳಿಕವೂ ಕಾರಿನ ಮಾರುಕಟ್ಟೆ ತೀವ್ರ ಕುಸಿತಕಂಡಿದೆ. ಇದಕ್ಕೆ ವೈರುಧ್ಯವಾಗಿ ಉದ್ಯಮಿಗಳ ಒಕ್ಕೂಟವು ಶೇ.13ರ ಬೆಳವಣಿಗೆಯ ನಿರೀಕ್ಷೆಯಲ್ಲಿತ್ತು. ಇನ್ನು ವಾಣಿಜ್ಯ ವಾಹನಗಳ ವ್ಯಾಪಾರದಲ್ಲಿ ಶೇ.20ರ ಅಭಿವೃದ್ಧಿಯ ನಿರೀಕ್ಷೆಯಲ್ಲಿದ್ದ ಒಕ್ಕೂಟವು ಶೇ.12.71 ಋಣಾತ್ಮಕ ಅಭಿವೃದ್ಧಿಯ ಫಲಿತಾಂಶ ಎದುರಿಸಬೇಕಿದೆ. ಡೀಸೆಲ್ ಬೆಲೆಯಲ್ಲಿನ ಏರಿಕೆಯ ಇದಕ್ಕೆ ಪ್ರಮುಖ ಕಾರಣ ಎಂದು ಒಕ್ಕೂಟ ಹೇಳಿಕೊಂಡಿದೆ. ಇನ್ನು ಮೂರು ಚಕ್ರ ವಾಹನಗಳ ಮಾರುಕಟ್ಟೆಯಲ್ಲೂ ಶೇ.4.71ರಷ್ಟು ಇಳಿಕೆಯಾಗಿದೆ. ಆದರೆ, ಇವೆಲ್ಲ ಕಹಿ ಸುದ್ದಿಯ ನಡುವೆ ಮಾರುಕಟ್ಟೆಯಲ್ಲಿ ಒಂದು ಸಿಹಿ ಸುದ್ದಿಯಿದೆ. ಭಾರತದಿಂದ ರಫ್ತಾಗುತ್ತಿರುವ ವಾಹನದ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಶೇ.12.35 ಹಾಗೂ ಮೂರು ಚಕ್ರ ವಾಹನದಲ್ಲಿ ಶೇ.33ರಷ್ಟು ಏರಿಕೆಯಾಗಿದೆ. ಇದಕ್ಕೆ ಪ್ರಮುಖ ಕಾರಣ ರೆನೊ ಡಸ್ಟರ್ ಹಾಗೂ ಫೋರ್ಡ್ ಇಕೋಸ್ಪೋರ್ಟ್ ಕಾರುಗಳು ದಕ್ಷಿಣ ಆಫ್ರಿಕ ಸೇರಿದಂತೆ ಕೆಲ ದೇಶಗಳ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದು. ಒಕ್ಕೂಟದ ಹೇಳಿಕೆಯ ಪ್ರಕಾರ, ಕೇಂದ್ರ ಸರ್ಕಾರದ ಪ್ರಸ್ತುತ ನಿಯಮದಂತೆ ಮಾರುಕಟ್ಟೆಯಲ್ಲಿ ಯಾವುದೇ ಚೇತರಿಕೆ ಕಾಣುವ ಲಕ್ಷಣವಿಲ್ಲ. ಮುಂದಿನ ಅರ್ಧವಾರ್ಷಿಕಕ್ಕೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ. - ರಾಧೆ