ಹೆಣ್ಮಕ್ಕಳೇ ಜೋರು ಗುರು! ಪರೀಕ್ಷಾ ಫಲಿತಾಂಶಗಳ ಸಂದರ್ಭದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಎಂಬ ಶೀರ್ಷಿಕೆಯನ್ನು ಪ್ರತಿ ಪತ್ರಿಕೆಯಲ್ಲೂ ಓದಿರುತ್ತೀರಿ. ಈಗ ವಾಹನ ಚಾಲನೆಯಲ್ಲೂ ಪುರುಷರಿಗಿಂತ ಮಹಿಳೆಯರೇ ವಾಸಿ ಎಂದು ಮತ್ತೊಂದು ಸಮೀಕ್ಷೆ ಸಾರಿ ಹೇಳಿದೆ. ಸುರಕ್ಷಿತ ಹಾಗೂ ನಿಯಮ ಪ್ರಕಾರ ಚಾಲನೆಗೆ ಮಹಿಳೆಯರು ಎತ್ತಿದ ಕೈ ಎಂದು ನಾನಾ ಸಮೀಕ್ಷೆಗಳಲ್ಲಿ ಈಗಾಗಲೇ ಓದಿರುತ್ತೀರಿ. ಆದರೆ ವಾಹನ ಚಾಲನೆ ಸುರಕ್ಷತೆಗೆ ಸಂಬಂಧಿಸಿದಂತೆ ಪ್ರತಿಷ್ಠಿತ ಅಂಟಾನ್ ಆಸಿಪ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಹೆಣ್ಮಕ್ಕಳೇ ಜೋರು ಗುರು! ಮಹಿಳಾ ಚಾಲಕರು ಪುರುಷರಿಗಿಂತ ಶೇ.20ರಷ್ಟು ಉತ್ತಮವಾಗಿ ವಾಹನ ಚಾಲನೆ ಮಾಡುತ್ತಾರೆ ಎಂದು ಸಮೀಕ್ಷೆ ಹೇಳಿದೆ. ಇದಲ್ಲದೇ ಯುವಕರಿಗಿಂತ ವೃದ್ಧರೇ ಸುರಕ್ಷಿತವಾಗಿ ವಾಹನ ಓಡಿಸುತ್ತಾರೆ. 18ರಿಂದ 25 ವರ್ಷದ ಯುವಕರು ಅಪಘಾತ ಮಾಡಿಕೊಳ್ಳುವುದು ಹೆಚ್ಚು. ಇದಲ್ಲದೇ ಧೂಮಪಾನ ಮಾಡುವವರು ಹೊಲಸಾಗಿ ಹೊಗೆ ಬಿಡುವ ರೀತಿಯಲ್ಲಿಯೇ ಕೆಟ್ಟದಾಗಿ ವಾಹನ ಚಲಾಯಿಸುತ್ತಾರೆ ಎಂದು ಇದೇ ಸಮೀಕ್ಷೆ ಹೇಳಿದೆ. ಪೋಲೋ ಜಿಟಿಗೆ ಸ್ವಾಗತ ಯುರೋಪಿನ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ಫೋಕ್ಸ್‌ವ್ಯಾಗನ್ ಭಾರತೀಯ ಮಾರುಕಟ್ಟೆಗೆ ಪೋಲೋ ಜಿಟಿ ಕಾರನ್ನು ಬಿಡುಗಡೆಮಾಡಿದೆ. ಪೋಲೋ ಜಿಟಿಯು 1.6 ಲೀಟರ್‌ನ 4 ಸಿಲಿಂಡರ್ ಟಿಡಿಐ ಎಂಜಿನ್ ಹೊಂದಿದೆ. 1598 ಸಿಸಿ ಎಂಜಿನ್ ಸಾಮರ್ಥ್ಯ ಹೊಂದಿರುವ ಕಾರು, 105 ಪಿಎಸ್ ಶಕ್ತಿ ಹೊಂದಿದೆ. ಕಂಪನಿ ಹೇಳುವ ಪ್ರಕಾರ ಪ್ರತಿ ಲೀಟರ್‌ಗೆ 19.78 ಕಿ.ಮೀ. ಇಂಧನ ಕ್ಷಮತೆಯನ್ನು ಹೊಂದಿದೆ. ಪೆಟ್ರೋಲ್‌ನಲ್ಲಿ 6 ಹಾಗೂ ಡೀಸೆಲ್‌ನಲ್ಲಿ 4 ಮಾದರಿಗಳನ್ನು ಕಂಪನಿಯು ಮಾರುಕಟ್ಟೆಗೆ ಬಿಟ್ಟಿದೆ. ಪೋಲೋ ಜಿಟಿ ಟಿಡಿಐ ಕಾರುಗಳು ಮಾರುಕಟ್ಟೆಯಲ್ಲಿ ರು. 8.08 ಲಕ್ಷಕ್ಕೆ ಬಿಳಿ, ಕೆಂಪು ಹಾಗೂ ಕಪ್ಪು ಬಣ್ಣದಲ್ಲಿ ಲಭ್ಯ. 'ಅತ್ಯಾಧುನಿಕ ಹಾಗೂ ಅತ್ಯಂತ ದಕ್ಷ ವಾಹನಗಳನ್ನು ಭಾರತೀಯ ಗ್ರಾಹಕರಿಗೆ ನೀಡಬೇಕು ಎನ್ನುವುದು ಕಂಪನಿಯ ಉದ್ದೇಶ. ನೂತನ ಪೋಲೋ ಜಿಟಿ ಕಾರು ಬಲಷ್ಠ ಹಾಗೂ ಅಸಾಧಾರಣ ಚಾಲನೆ ವ್ಯವಸ್ಥೆಯನ್ನು ಹೊಂದಿದೆ' ಎಂದು ಕಂಪನಿಯ ಭಾರತ ವಿಭಾಗದ ಆಡಳಿತ ನಿರ್ದೇಶಕ ಅರವಿಂದ್ ಸಕ್ಸೇನಾ ಅಭಿಪ್ರಾಯಪಟ್ಟಿದ್ದಾರೆ. ಆಲ್ಟೋ ಮ್ಯೂಸಿಕ್ ಎಡಿಷನ್ ಮಾರುತಿ ಸುಝುಕಿ ಸಂಸ್ಥೆಯು ಮಾರುತಿ-800 ಕಾರುಗಳ ಉತ್ಪಾದನೆ ನಿಲ್ಲಿಸಿದ ಮೇಲೆ ಆಲ್ಟೋ ಮೇಲೆ ಹೆಚ್ಚಿನ ವ್ಯಾಮೋಹ ಬೆಳಿಸಿಕೊಂಡಿರುವುದು ಗೊತ್ತಿದೆ. ಆ ಮೂಲಕ ದೇಶದ ಮಧ್ಯಮ ವರ್ಗದ ಕಂಪನಿಯಾಗಿಯೇ ಉಳಿಯಲು ಸಾಹಸ ಪಡುತ್ತಿದೆ. ಈಗ ಆಲ್ಟೋ-ಕೆ ಕಾರಿನಲ್ಲಿ ಮ್ಯೂಸಿಕ್ ಎಡಿಷನ್ ಅನ್ನು ಕಂಪನಿ ಬಿಡುಗಡೆಮಾಡಿದೆ. ದಸರಾ ಹಬ್ಬದ ವೇಳೆಗೆ ಇದು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಇದಲ್ಲದೇ ಹಳೆಯ ಆಲ್ಟೋ-ಕೆಯನ್ನು ಕೊಟ್ಟು ಮ್ಯೂಸಿಕ್ ಎಡಿಷನ್ ಪಡೆಯುವ ಅವಕಾಶವನ್ನು ಕಂಪನಿ ನೀಡುತ್ತಿದೆ. ಅಂದಹಾಗೆ, ಈ ಕಾರಿನಲ್ಲಿ ಹೆಚ್ಚುವರಿಯಾಗಿ ಸುಮಾರು ರು. 18 ಸಾವಿರ ಮೌಲ್ಯದ ನಾನಾ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ಅದರಲ್ಲೂ ಮ್ಯೂಸಿಕ್‌ಗೆ ಸಂಬಂಧಿಸಿದ ಡಿಸೈನ್ ಹಾಗೂ ಸಿಸ್ಟಮ್‌ಗಳನ್ನು ಹಾಕಲಾಗಿದೆ. ಅಂದಹಾಗೆ, ಈ ವಿಶೇಷ ಕಾರು ಬಿಳಿ ಮತ್ತು ಬೆಳ್ಳಿ ಬಣ್ಣದಲ್ಲಿ ಲಭ್ಯವಿದೆ. ಜೆವಿಸಿ ಸ್ಟಿರಿಯೋ ಪ್ಲೇಯರ್, ಫ್ರಂಟ್ ಸ್ಪೀಕರ್, ಗಾಡಿಯ ಹೊರಭಾಗದಲ್ಲಿ ಮ್ಯೂಸಿಕ್‌ನ ಗ್ರಾಫಿಕ್ಸ್, ಆ್ಯಂಬಿಯಂಟ್ ಲೈಟಿಂಗ್ ಅನ್ನು ನೀಡಲಾಗಿದೆ.