ಕಂಡಿಗ ಕಂಡಿರಾ? ಉಡುಪಿಯಿಂದ ಧರ್ಮಸ್ಥಳಕ್ಕೆ ಬರುವ ಯಾತ್ರಿಕರಿಗೆ ಕಾರ್ಕಳದಿಂದ ಬೆಳ್ತಂಗಡಿಗೆ ಸಮೀಪಿಸುವಾಗ ಅಪರೂಪದ ದೇವಾಲಯವೊಂದು ಸಿಗುತ್ತದೆ. ಅದುವೇ ಸಂತಾನ ಗೋಪಾಲಕೃಷ್ಣ ಸನ್ನಿಧಿ. ಇಂಥ ದೇವಾಲಯಗಳು ಅನೇಕವಿಲ್ಲ. ಕರಾವಳಿಯ ಈ ವಿಶಿಷ್ಟ, ಪುರಾತನ ದೇವಾಲಯ ಬೆಳ್ತಂಗಡಿಯಿಂದ ಆರು ಕಿಲೋಮೀಟರ್ ದೂರದ ಬದ್ಯಾರಿಗೆ ಸನಿಹದಲ್ಲಿರುವ ಕಂಡಿಗ ಎಂಬಲ್ಲಿದೆ. ಹೆಸರೇ ಹೇಳುವಂತೆ ಇದು ಮಕ್ಕಳಿಲ್ಲದವರು ಮೊರೆಯಿಟ್ಟರೆ ಕರುಣದಿಂದ ಮೊರೆಯನಾಲಿಸಿ ಸತ್ಸಂತಾನವನ್ನು ಅನುಗ್ರಹಿಸುವ ಸನ್ನಿಧಿ. ಔಷಧೋಪಚಾರ, ವ್ರತಾದಿ ಆಚರಣೆಗಳಿಂದ ಫಲ ಸಿಗದವರಿಗೂ ಇಲ್ಲಿಗೆ ಹರಕೆ ಹೊತ್ತುಕೊಂಡ ಮೇಲೆ ಮನೆಯಲ್ಲಿ ಮಗುವಿನ ಕಿಲಕಿಲ ನಾದ ಕಿವಿದುಂಬಿದ ಅಸಂಖ್ಯ ಉದಾಹರಣೆಗಳಿವೆ. ಹಾಗೆಂದು ಭಕ್ತರನ್ನು ಶೋಷಿಸುವ ಹರಕೆಯ ಪದ್ಧತಿಗಳು ಇಲ್ಲಿಲ್ಲ. ಇಲ್ಲಿ ಗಣಪತಿ ಮತ್ತು ದುರ್ಗೆ ಸನ್ನಿಧಿಯೂ ಇದೆ. ಮದುವೆಯಾಗದೆ ಇರುವವರು ದುರ್ಗಾ ಸನ್ನಿಧಿಗೆ ಹರಕೆ ಹೊತ್ತುಕೊಂಡ ಫಲವಾಗಿ ಜೀವನ ಸಂಗಾತಿ ಸುಲಭವಾಗಿ ದೊರಕಿದ ಉದಾಹರಣೆಗಳಿವೆ. ಶೈವರು ಕಟ್ಟಿಸಿದ ದೇವಸ್ಥಾನ ಸಂತಾನ ಗೋಪಾಲಕೃಷ್ಣನ ಸನ್ನಿಧಿ 600 ವರ್ಷ ಹಿಂದಿನದು ಎನ್ನುತ್ತವೆ ದೇವಾಲಯದಲ್ಲಿರುವ ದಾಖಲೆಗಳು. ಸಂತಾನವಿಲ್ಲದ ಲಿಂಗಾಯತ ದಂಪತಿ ಶೈವರಾದರೂ ಸಂತಾನ ಗೋಪಾಲನಿಗೆ ಹರಕೆ ಹೊತ್ತು ಸಂತಾನ ಪಡೆದ ಪ್ರತೀಕವಾಗಿ ಬಹುಹಿಂದೆ ಈ ದೇವಾಲಯ ಕಟ್ಟಿಸಿದರೆಂಬ ಕಥೆ ಇಲ್ಲಿದೆ. ಮಕ್ಕಳಿಲ್ಲದ ದಂಪತಿಯ ಇಷ್ಟಾರ್ಥ ಸಿದ್ಧಿಯಾಗಲು ಕಾರಣನಾದ ಗೋಪಾಲಕೃಷ್ಣನ ಸೇವೆಗೆ ಎಲ್ಲರಿಗೂ ಅವಕಾಶ ಸಿಗಲೆಂದು ಈ ದೇವಾಲಯದ ನಿರ್ಮಾಣ ಮಾಡಿದರಂತೆ. ಗರ್ಭಗುಡಿಯಲ್ಲಿರುವ ವೇಣುವಿನೋದ ಗೋಪಾಲಕೃಷ್ಣನ ಶಿಲಾವಿಗ್ರಹ ನಯನ ಮನೋಹರವಾಗಿದೆ, ಜೀವಂತಕಳೆಯಿಂದ ಸುಶೋಭಿತವಾಗಿದೆ. ಇತ್ತೀಚಿನವರೆಗೂ ದೇವಾಲಯ ತೀರ ಶಿಥಿಲವಾಗಿತ್ತು. ಆದರೂ ಕಡಂಬು ನೂರಿತ್ತಾಯ ಮನೆತನದವರು ಪ್ರತಿಫಲಾಪೇಕ್ಷೆಯಿಲ್ಲದೆ ನೂರು ವರ್ಷದಿಂದ ದಿನವೂ ಪೂಜಾದಿ ಕೈಂಕರ್ಯ ನಡೆಸಿಕೊಂಡು ಬಂದಿದ್ದಾರೆ. ಒಂದು ವರ್ಷದ ಕೆಳಗೆ ಊರ,ಪರವೂರ ಭಕ್ತಾದಿಗಳು ಸುಮಾರು 35 ಲಕ್ಷ ರು.ವೆಚ್ಚ ಮಾಡಿ ನೂತನ ಗರ್ಭಗುಡಿ, ಗೋಪುರ, ಪಾಕಶಾಲೆ ನಿರ್ಮಿಸಿ ಪುನರ್ ಪ್ರತಿಷ್ಠಾ ವಿಧಿಗಳನ್ನು ನೆರವೇರಿಸಿದ್ದಾರೆ. ಇಲ್ಲಿ ಬೆಳಗ್ಗೆ ಮಾತ್ರ ಪೂಜೆ ನಡೆಯುತ್ತದೆ. ಹುಣ್ಣಿಮೆಯ ರಾತ್ರಿ ಸತ್ಯನಾರಾಯಣ ಪೂಜೆಯೊಂದಿಗೆ ರಂಗಪೂಜೆ ನಡೆಸಲಾಗುತ್ತಿದೆ. ವೃಶ್ಚಿಕ ಅಥವಾ ಮಕರಮಾಸದಲ್ಲಿ ಬರುವ ಕಿರಿಷಷ್ಠಿ (2014ರ ಜನವರಿ 14)ಯಂದು ವಾರ್ಷಿಕ ಜಾತ್ರೋತ್ಸವವು ವೈಭವದಿಂದ ನಡೆಯುತ್ತದೆ. ಗೋಕುಲಾಷ್ಠಮಿಯಂದು ಶ್ರೀಕೃಷ್ಣ ಲೀಲೋತ್ಸವದೊಂದಿಗೆ ಪೂಜೆ ಮಾಡುವ ಸಂಪ್ರದಾಯವಿದೆ. ಜಾತ್ರೆ ಸಂದರ್ಭ ಮಹಾರಂಗಪೂಜೆ, ಅನ್ನ ಸಂತರ್ಪಣೆಯಂತಹ ಸೇವೆ ನಡೆಸುವುದು ಇಷ್ಟಾರ್ಥ ಸಿದ್ಧಿಪ್ರದವೆನಿಸಿದೆ. ಅಪರೂಪವಾದ ಊದುವ ಬಲಮುರಿ ಶಂಖವೂ ಇದೇ ದೇಗುಲದಲ್ಲಿದೆ. ಸೇವಾರ್ಥವಾಗಿ ದೇವಾಲಯದ ಅರ್ಚಕ ರಂಗನಾಥ ನೂರಿತ್ತಾಯ (ಮೊ: 9945286345) ಅವರನ್ನು ಸಂಪರ್ಕಿಸಬಹುದು. ಪಾಯಸ ಪ್ರಿಯ ಹಾಲಿನಿಂದ ತಯಾರಿಸಿದ ಪಾಯಸದ ಸಮರ್ಪಣೆ ಸಂತಾನ ಗೋಪಾಲಕೃಷ್ಣನಿಗೆ ಅತಿ ಮೆಚ್ಚಿನ ಹರಕೆ. ಅದಕ್ಕೆ ಇಲ್ಲಿ ಸ್ವೀಕರಿಸುವ ಮೊತ್ತ ಕೇವಲ ನೂರು ರುಪಾಯಿ. ಹಾಗೆಯೇ ಹುಣ್ಣಿಮೆಯಂದು ನಡೆಯುವ ರಂಗಪೂಜೆ ಎಂಬ ವಿಶೇಷ ಸೇವೆಗೂ ಅವಕಾಶವಿದೆ. ರಾತ್ರಿ ದೇವರ ಮುಂದೆ ಬಾಳೆಲೆಗಳಲ್ಲಿ ಅನ್ನದ ಮುದ್ದೆ ಬಡಿಸಿ ಅದರ ನಡುವೆ ತೆಂಗಿನಕಾಯಿ ಹೋಳಿನಲ್ಲಿ ದೀಪ ಉರಿಸಿ ವಾದ್ಯ, ಘಂಟಾನಿನಾದದಲ್ಲಿ ಸೇವೆಯನ್ನು ಅರ್ಪಿಸಲಾಗುತ್ತದೆ. ಇದಕ್ಕೆ ಕೇವಲ ಎರಡು ಸಾವಿರ ರುಪಾಯಿ ಸೇವಾಶುಲ್ಕ. ಭಕ್ತರು ಇಚ್ಛಿಸಿದರೆ ಅನ್ನ ಸಂತರ್ಪಣೆಯನ್ನೂ ಮಾಡಿಸಬಹುದು. ಅಲ್ಲದೆ ಸಂತಾನವಾದ ಬಳಿಕ ಮಗುವನ್ನು ದೇವರ ಮುಂದೆ ತಮಗಿಷ್ಟವಾದ ವಸ್ತುವಿನಲ್ಲಿ ತುಲಾಭಾರ ಮಾಡಿಸಬಹುದು. ಹೂವಿನ ಪೂಜೆ, ಶ್ರೀಕೃಷ್ಣಾಷ್ಟೋತ್ತರ ಸೇವೆಗಳೂ ಈ ದೇವರಿಗೆ ಪ್ರಿಯವಾದುದೇ. - ಚಿತ್ರ-ಲೇಖನ: ಪ. ರಾಮಕೃಷ್ಣ ಶಾಸ್ತ್ರಿ