ಕಂಜೂಸ್ ಕ್ಯಾಪ್ಟಿವಾ ಜನರಲ್ ಮೋಟಾರ್ಸ್ ಕಂಪನಿ ಭಾರತದಲ್ಲಿ ಗ್ರಾಹಕರ ಒಲವು ಗಳಿಸುವಲ್ಲಿ ಹೆಚ್ಚೇನೂ ಯಶಸ್ವಿಯಾಗಿಲ್ಲ... ಜನರಲ್ ಮೋಟಾರ್ಸ್ ಕಂಪನಿ ಭಾರತದಲ್ಲಿ ಗ್ರಾಹಕರ ಒಲವು ಗಳಿಸುವಲ್ಲಿ ಹೆಚ್ಚೇನೂ ಯಶಸ್ವಿಯಾಗಿಲ್ಲ. ಇದ್ದುದರಲ್ಲಿ ಹೊಸ ಸೇಯ್ಲ್ ಸೆಡಾನ್ ಕೊಂಚ ಮಟ್ಟಿಗೆ ಪರ್ವಾಗಿಲ್ಲ. ಕ್ರೂಝ್ ಉತ್ತಮವಾದ ಕಾರಾದರೂ ಕಾಲಕ್ಕೆ ತಕ್ಕಂತೆ ಬದಲಾಗದೇ ಹಿಂದುಳಿದೆ. ಕ್ಯಾಪ್ಟಿವಾ ದುಬಾರಿ ಕಾರು. ಇದರ ದರ ಆಡಿ, ಬೆಂಝ್ ಕಂಪನಿಗಳಿಗೆ ಸಮನಾಗಿದೆ. ಅಷ್ಟು ಹಣ ಕೊಟ್ಟು ಈ ಕಾರು ಖರೀದಿಸುವ ಬದಲು ಆ ಕಂಪನಿಗಳ ಕಾರನ್ನೇ ಖರೀದಿಸಬಹುದಲ್ಲ ಎಂದು ನೀವು ಯೋಚಿಸಬಹುದು. ಯಾಕೆಂದರೆ ಮ್ಯಾನುವಲ್ ಗೇರ್‍ನ ಕ್ಯಾಪ್ಟಿವಾ ಶೋರೂಂ ದರ ದಿಲ್ಲಿಯಲ್ಲಿ ರು.25,13,528, ಆಟೋಗೇರ್ ಕ್ಯಾಪ್ಟವಾಗೆ ರು.27,36,192. ಈ ದರಕ್ಕೆ ಅವುಗಳಲ್ಲಿ 7 ಸೀಟರ್ ಆಯ್ಕೆಯಿಲ್ಲ ಎಂಬುದೊಂದೇ ಈ ಕಾರಿನ ಪ್ಲಸ್ ಪಾಯಿಂಟ್. ಶೆವರ್ಲೆ ಕ್ಯಾಪ್ಟಿವಾ ಹೊಸ ಮಾದರಿಯನ್ನು ಜನರಲ್ ಮೋಟಾರ್ಸ್ ಬಿಡುಗಡೆ ಮಾಡಿದೆ. ಇದು ಹಳೆ ಮಾದರಿಯ ಅಪ್‍ಡೇಟೆಡ್ ಮಾದರಿಯಷ್ಟೇ. ಇದರಲ್ಲಿ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಎಲ್‍ಇಡಿ ಬ್ರೇಕ್‍ಲೈಟ್‍ಗಳಿವೆ. ಈಗ ರು. 8-10 ಲಕ್ಷದ ಕಾರುಗಳಿಗೇ ಡೇಟೈಂ ರನಿಂಗ್ ಲೈಟುಗಳು ಬಂದಿರುವ ಕಾಲದಲ್ಲಿ ಕ್ಯಾಪ್ಟಿವಾಗೆ ಅದನ್ನು ನೀಡಲು ಕಂಪನಿ ಕಂಜೂಸ್‍ತನ ಮಾಡಿದಂತಿದೆ. ಹೊಸ ಮಾದರಿ ಎಂದು ಕಂಪನಿ ಹೇಳಿಕೊಂಡಿದ್ದರೂ, ಹೊಸ ಮಾದರಿಯಲ್ಲಿ ತೀರಾ ಹೊಸದೇನೂ ಕಾಣುತ್ತಿಲ್ಲ.