ಅತ್ತಿರ ಹತ್ತಿರ ಬಾ ಎಂಬತ್ತು ಅಡಿ ಎತ್ತರದ ಶೋಲಯಾರ್ ಬೆಟ್ಟದಿಂದ ಧುಮುಕುವ ಈ ಜಲಪಾತದ ನೀರ ಹನಿಗಳು ನೊರೆ ನೊರೆಯಾಗಿ ಬೆಳ್ಳಿ ಝರಿಗಳಂತೆ ಎಳೆ ಬಿಸಿಲಿಗೆ ಹೊಳೆವ ಪರಿ ಚಿತ್ತಾಕರ್ಷಕ. ಎಂಬತ್ತು ಅಡಿ ಎತ್ತರದ ಶೋಲಯಾರ್ ಬೆಟ್ಟದಿಂದ ಧುಮುಕುವ ಈ ಜಲಪಾತದ ನೀರ ಹನಿಗಳು ನೊರೆ ನೊರೆಯಾಗಿ ಬೆಳ್ಳಿ ಝರಿಗಳಂತೆ ಎಳೆ ಬಿಸಿಲಿಗೆ ಹೊಳೆವ ಪರಿ ಚಿತ್ತಾಕರ್ಷಕ. ಇದು ಕೇರಳದ ಅತ್ತಿರಪಲ್ಲಿ ಜಲಪಾತ. ಎತ್ತರದ ಬಂಡೆಗಳನ್ನು ಬಳಸಿ ಕೆಳಗೆ ಹರಿಯುವ ಇದರ ನೀರು ಭರತಪುಳ ಅಥವಾ ಚಾಲಕ್ಕುಡಿ ನದಿಯಾಗಿ ಸಾಗುತ್ತದೆ. ನದಿಗೆ ಈ ಭಾಗದಲ್ಲಿ ಅಣೆಕಟ್ಟು ನಿರ್ಮಿಸಿ ಜಲವಿದ್ಯುತ್ ಉತ್ಪಾದಿಸಲಾಗುತ್ತಿದೆ. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿರುವ ಅತ್ತಿರಪಲ್ಲಿ, ಕೊಚ್ಚಿಯಿಂದ ಈಶಾನ್ಯಕ್ಕೆ 70 ಕಿ.ಮೀ. ದೂರದಲ್ಲಿದೆ. ಸನಿಹದಲ್ಲಿರುವ ಪಟ್ಟಣ ವಳಾಚಿಲ್. ಇಲ್ಲಿಂದ ಬಸ್ ಅಥವಾ ಖಾಸಗಿ ವಾಹನದಲ್ಲಿ ಶೋಲಯಾರ್ ಬೆಟ್ಟದ ಬಳಿಗೆ ಬರಲು ಮೂವತ್ತು ಕಿ.ಮೀ. ಪಯಣ. ಪಶ್ಚಿಮ ಘಟ್ಟದ ಶಾಖೆಯೇ ಆಗಿರುವ ಈ ಬೆಟ್ಟದಲ್ಲಿ ನಿತ್ಯ ಹರಿಧ್ವರ್ಣದ ಕಾಡಿದೆ. ಬೃಹತ್ ಗಾತ್ರದ ಮರಗಳಿವೆ. ಇದರಲ್ಲಿ 319 ಜಾತಿಯ ಸಸ್ಯಗಳನ್ನು ಗುರುತಿಸಲಾಗಿದೆ. ಸನಿಹದಲ್ಲಿರುವ ಚಹಾ ತೋಟಗಳ ಸೊಬಗು ಮನ ಸೆಳೆಯುತ್ತದೆ. ಮಣಿರತ್ನಂ ಅವರ ರಾವಣ್, ಹಿಂದಿಯ ದಿಲ್ಸೇ ಸೇರಿದಂತೆ ಹಲವು ಚಲನಚಿತ್ರಗಳು ಈ ಜಲಪಾತದ ಪರಿಸರದಲ್ಲಿ ಚಿತ್ರೀಕರಣವಾಗಿವೆ. ಜಲಪಾತವು ಮಳೆಗಾಲ ಆರಂಭದಲ್ಲಿ ಮೈ ತುಂಬಿಕೊಳ್ಳುತ್ತದೆ. ಜನವರಿ ತನಕ ಅದರ ರುದ್ರ ರಮಣೀಯ ಸೌಂದರ್ಯವನ್ನು ಸವಿಯಬಹುದು. ನದಿ ಕೂಡ ಸಂದರ್ಶನಕ್ಕೆ ಯೋಗ್ಯವಾಗಿದೆ. ಸಿಹಿನೀರಿನಲ್ಲಿ ಬದುಕುವ 85 ಜಾತಿಯ ಮೀನುಗಳು ಅದರಲ್ಲಿವೆ. ಅಳಿವಿನಂಚಿಗೆ ತಲಪಿದ ಕ್ಯಾನೇ ಆಮೆಗಳಿವೆ. ಶೋಲಯಾರ್ ಕಾಡಿನಲ್ಲಿ ಅನೇಕ ಜಾತಿಯ ಪ್ರಾಣಿಗಳಿವೆ. ಸಿಂಹಬಾಲದ ಕೋತಿ ಮತ್ತು ನೀಲಗಿರಿ ಲಂಗೂರ್ ಪ್ರಮುಖ ಆಕರ್ಷಣೆಯಾಗಿವೆ. ರಾತ್ರಿ ಈ ಅರಣ್ಯದಲ್ಲಿರುವ ವನ್ಯಮೃಗಗಳು ನದಿಗೆ ನೀರು ಕುಡಿಯಲು ಬರುವ ಕಾರಣ ಈ ವೇಳೆಯಲ್ಲಿ ವಾಹನ ಸಂಚಾರವನ್ನು ಅರಣ್ಯ ಇಲಾಖೆ ನಿಷೇಧಿಸಿದೆ. ಹಗಲು ವೀಕ್ಷಣೆಗೆ ಪ್ರವೇಶ ಧನವಿಲ್ಲ. ಚಾರಣದ ಸೊಬಗು ಸವಿಯುತ್ತ ಜಲಪಾತದ ಬಳಿಗೆ ಹೋಗಬಹುದು. ಬೆಂಗಳೂರಿನಿಂದ ಕೊಚ್ಚಿಯ ಮೂಲಕ ಈ ಜಲಪಾತ ವೀಕ್ಷಣೆಗೆ ಹೋಗಲು 509 ಕಿ.ಮೀ. ದೂರದ ಹಾದಿಯಿದೆ. ವಸತಿಗೆ ಹತ್ತಿರದ ಪಟ್ಟಣ ವಳಾಚಿಲ್ ಅನುಕೂಲವಾಗಿದೆ. ವಳಾಚಿಲ್ ಜಲಪಾತವೂ ಇಲ್ಲಿಗೆ ಸನಿಹದಲ್ಲಿದ್ದು, ಅದನ್ನೂ ನೋಡಬಹುದು. -ಪ. ರಾಮಕೃಷ್ಣ ಶಾಸ್ತ್ರಿ