ಸಾಮಾಜಿಕ ಮಾರ್ಗ ಆಟೊಮೊಬೈಲ್ ಉದ್ಯಮದಲ್ಲಿ ಯಶ ಗಳಿಸಲು ಸಾಮಾಜಿಕ ತಾಣದಲ್ಲೂ ಬಂಡವಾಳ ಹೂಡಬೇಕಿದೆ! ಮಾರುಕಟ್ಟೆ ತಜ್ಞರ ಪ್ರಕಾರ, 2015ರಷ್ಟೊತ್ತಿಗೆ ಬರೋಬ್ಬರಿ ರು. 10 ಸಾವಿರ ಕೋಟಿಯಷ್ಟು ಹಣವನ್ನು ಸಾಮಾಜಿಕ ತಾಣದಲ್ಲಿ ಹೂಡಬೇಕಿದೆ. ಪ್ರಸ್ತುತ ಭಾರತೀಯ ಆಟೊಮೊಬೈಲ್ ಉದ್ಯಮವು ಸಾಮಾಜಿಕ ತಾಣಕ್ಕಾಗಿ ರು. 1200 ಕೋಟಿ ಖರ್ಚು ಮಾಡುತ್ತಿದೆ. ಗ್ರಾಹಕ ಸ್ನೇಹಿ ಸೇವೆ ನೀಡುವ ಉದ್ದೇಶದಿಂದ ಬಹುತೇಕ ಎಲ್ಲ ಆಟೊಮೊಬೈಲ್ ಕಂಪನಿಗಳು ಸಾಮಾಜಿಕ ತಾಣದಲ್ಲಿ ತಮ್ಮದೇ ಪೇಜ್‌ಗಳನ್ನು ಹೊಂದಿವೆ. ಭಾರತೀಯ ಯುವ ಜನಾಂಗ ಹಾಗೂ ಮಧ್ಯಮವರ್ಗ ಅಂತರ್ಜಾಲದಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದೆ. ಇದಲ್ಲದೇ ದೈನಂದಿನ ಸುದ್ದಿಗಳನ್ನು ತಿಳಿಯಲು ಅಂತರ್ಜಾಲ ಮಾಧ್ಯಮಗಳತ್ತ ವಾಲುತ್ತಿದ್ದಾರೆ. ಇವೆಲ್ಲ ಕಾರಣಗಳಿಂದ ಸಾಮಾಜಿಕ ತಾಣಗಳಾದ ಫೇಸ್‌ಬುಕ್, ಟ್ವೀಟರ್ ಸೇರಿದಂತೆ ಇತರ ಅಪ್ಲಿಕೇಷನ್‌ಗಳು ಪ್ರತಿಯೊಬ್ಬರಿಗೂ ಹತ್ತಿರವಾಗುತ್ತಿವೆ. ಆದ್ದರಿಂದ ಹೊಸ ಗ್ರಾಹಕರನ್ನು ಸೆಳೆಯಲು ಹಾಗೂ ಪ್ರಸ್ತುತ ಇರುವ ಗ್ರಾಹಕರ ಸಮಸ್ಯೆಗಳನ್ನು ಆಲಿಸಲು ಸಾಮಾಜಿಕ ತಾಣದಲ್ಲಿ ಹಾಜರಿರುವುದು ಪ್ರತಿಷ್ಠಿತ ಕಂಪನಿಗಳಿಗೆ ಅನಿವಾರ್ಯವಾಗಲಿದೆ. ಈ ವಿಚಾರ ಅಸೋಸಿಯೇಟೆಡ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಆಫ್ ಇಂಡಿಯಾ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಅಂದಹಾಗೆ, ಸಾಮಾಜಿಕ ತಾಣದಲ್ಲಿ ಉದ್ಯಮಗಳು ಖರ್ಚು ಮಾಡುವುದು ಕೇವಲ ಉತ್ತಮ ಸೇವೆ ನೀಡಲಲ್ಲ. ಮಾರುಕಟ್ಟೆಯನ್ನು ವಿಸ್ತರಿಸಲು ಹಾಗೂ ಯುವಜನರಿಗೆ ಉತ್ಪನ್ನಗಳ ಕುರಿತಂತೆ ಮನಮುಟ್ಟುವ ಹಾಗೆ ಮಾಹಿತಿ ನೀಡಲು ಸಾಮಾಜಿಕ ತಾಣಕ್ಕಿಂತ ಉತ್ತಮ ವೇದಿಕೆಯಿಲ್ಲ ಎನ್ನುವುದು ಸಂಸ್ಥೆಯ ಅಭಿಪ್ರಾಯ.