ಲೋಹಲೋಕ... ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಎಡಬಿಡದೇ ಮಳೆ ಸುರಿಯುತ್ತಿದ್ದು, ಆಲಮಟ್ಟಿಯ ಲಾಲಬಹದ್ದೂರ್ ಶಾಸ್ತ್ರೀ ಜಲಾಶಯ ಭರ್ತಿಯಾಗಿದೆ. ಜಲಾಶಯದ ಎಲ್ಲ ಗೇಟ್‌ಗಳನ್ನು ತೆರೆದು ನೀರು ಬಿಡಲಾಗುತ್ತಿದೆ. ಇಲ್ಲಿಗೆ ಆಗಮಿಸಿರುವ ಪ್ರವಾಸಿಗರಿಗೆ ಭೋರ್ಗರೆಯುವ ಜಲಪಾತದ ಅನುಭವವಾಗುತ್ತದೆ. ಎತ್ತರವಾದ, ಕಡಿದಾದ ಗೇಟ್‌ಗಳಿಂದ ನೀರು ಹಾಲ್ನೊರೆಯಂತೆ ಚಿಮ್ಮುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಜಲಾಶದ ಎಡಬಲದ ಸುತ್ತಲಾ ಕಲ್ಲು-ಬಂಡೆಗಳ ಸಾಲು, ನಡುವೆ ಕುರುಚಲು ಹಸಿರಸಿರಿ. ಈ ನಡುವೆ ಹರಿಯುವ ನೀರಿನ ಸೊಬಗಿನ ಚಿತ್ರಣ ಕಣ್ತುಂಬಿಕೊಳ್ಳುವುದೇ ರೋಮಾಂಚನ. ಈ ಸುಂದರ ಜಲಾಶಯದ ದೃಶ್ಯವನ್ನು ದೂರದಿಂದಲೇ ಸವಿಯಬೇಕು. ಏಕೆಂದರೆ, ಭದ್ರತೆ ದೃಷ್ಟಿಯಿಂದ ಈ ಜಲಸಿರಿಯ ದೃಶ್ಯವೈಭವ ಹತ್ತಿರದಿಂದ ಕಣ್ತುಂಬಿಕೊಳ್ಳುವವರಿಗೆ ಅವಕಾಶವಿಲ್ಲ. ನೂರಾರು ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುವ ವಿದೇಶಿ ಹಕ್ಕಿಗಳು ಜಲಚರಗಳನ್ನು ತಮ್ಮ ಕೊಕ್ಕಿನಲ್ಲಿ ಹಿಡಿದು ಮತ್ತೆ ಮತ್ತೆ ಹೊತ್ತೊಯ್ಯುವುದು ಮನಕಾನಂದ ನೀಡುವಂಥ ದೃಶ್ಯ. ಇಲ್ಲಿನ ಸೀತಮ್ಮನ ಗುಡ್ಡದಲ್ಲಿ ನಿಂತು ಹಿನ್ನೀರ ವೈಭವ ಮುದ ನೀಡುತ್ತದೆ. ಬೀಸುವ ಗಾಳಿಗೆ ಫಳಕ್ ಚಳಕ್ ಎಂದು ಅಲೆಅಲೆಯಾಗಿ ಮುತ್ತಿಡುವ ನೀರು ದಡದಲ್ಲಿ ಹೊಸ ನೀರ ಕಾವ್ಯ ಕಟ್ಟುತ್ತಿರುತ್ತದೆ. ಲೋಹ ಕರಗಿ ಕಲೆಯಾಗಿ: ಆಲಮಟ್ಟಿಯ ಸುಂದರ ಉದ್ಯಾನವನದಲ್ಲಿನ ವಿಶೇಷತೆಗಳೆಂದರೆ ಲೋಹದ ಕಲಾಕೃತಿಗಳು. ಮರ, ಗಿಡ, ಪ್ರಾಣಿ, ಪಕ್ಷಿ, ರಾಕ್ಷರ, ಮಹಿಳೆ, ಗೊಂಬೆ, ಎತ್ತುಗಳು, ಕುದುರೆ ಮುಂತಾದ ಕಲಾಕೃತಿಗಳನ್ನು ಸೃಷ್ಟಿಸಿ ಆಲಮಟ್ಟಿ ಡ್ಯಾಂ ಸೊಬಗನ್ನು ಸಿಂಗರಿಸಲಾಗಿದೆ. ಗಂಡ- ಹೆಂಡತಿ- ಮಗು, ಜೇನುಗೂಡು, ಜೇಡರ ಬಲೆ.. ಹೀಗೆ ತರಾವರಿ ಕಲಾಕೃತಿಗಳು ನೋಡುಗರನ್ನು ಹೊಸ ಚಿಂತನಾ ಲೋಕಕ್ಕೆ ಎಳೆದೊಯ್ಯುತ್ತವೆ. ನೋಡಿದ ತಕ್ಷಣ ಇವು ಲೋಕದ್ದವೆಂದು ಕಂಡುಹಿಡಿಯುವುದು ಸಾಧ್ಯವಿಲ್ಲ. ಅಂಥ ವಿಸ್ಮಯ, ಸ್ಮೂಕ್ಷ್ಮತೆ ಇಲ್ಲಿನ ಲೋಹಕಲೆಯಲ್ಲಿ ಸಿದ್ಧಿಸಿದೆ. ಅಂದಹಾಗೆ, ಗದುಗಿನ ಕಲಾವಿದ ಕೃಷ್ಣ ಚಿತ್ರಗಾರ್ ಮತ್ತು ತಂಡ ಇಂಥ ಆಕರ್ಷಕ ಕಲೆಗಳನ್ನು ನಿರ್ಮಿಸಿಕೊಟ್ಟಿದೆ. ಹಿರಿಯ ಕಲಾವಿದ ಸೊಲಬಕ್ಕನವರ್ ಮಾರ್ಗದರ್ಶನ ನೀಡಿದ್ದಾರೆ. ಮುದ್ದೇಬಿಹಾಳದ ಕಬ್ಬಿಣ ರಥ ಶಿಲ್ಪಿ ಪರಶುರಾಮ್ ಪವಾರ್ ಬಳಿ ಒಂದು ತಿಂಗಳ ಕಾಲ ಕಬ್ಬಿಣವನ್ನು ಲೋಹಕೃತಿಗೆ ಇಳಿಸುವ ಬಗ್ಗೆ ತರಬೇತಿ, ಮಾಹಿತಿ ಪಡೆದು ಕೃಷ್ಣ ಇಲ್ಲಿನ ಕಲಾಕೃತಿಗಳನ್ನು ಕಟ್ಟಿಕೊಟ್ಟಿದ್ದಾರೆ. ದೈತ್ಯಾಕಾರದ ಡೈನೋಸಾರ್, ಅನಕೊಂಡ, ಕಾಡು ಪ್ರಾಣಿಗಳ ಕಲಾಕೃತಿಗಳ ಮಧ್ಯೆ ಲೋಹದ ಕಲಾಕೃತಿಗಳ ಪಾರ್ಕ್ ಇಡೀ ಉದ್ಯಾನಕ್ಕೆ ಜೀವಕಳೆ ತಂದಿದೆ. - ಚಿತ್ರ-ಲೇಖನ: ಪ್ರವೀಣರಾಜು ಸೊನ್ನದ @.