ಟೇಕಲ್ ಕೋಟೆ ಟೇಕಲ್ ಹೆಸರಿನೊಂದಿಗೇ ಅಂಟಿಕೊಂಡಿದೆ ಕೋಟೆ. ಮೈಸೂರು ಹುಲಿ ಟಿಪ್ಪು ಸುಲ್ತಾನರ ಆಳ್ವಿಕೆಯಲ್ಲಿ ಅವರ ಸಾಮಂತನಾಗಿದ್ದ ತಿಮ್ಮನಾಯಕನಹಳ್ಳಿಯ ... ಟೇಕಲ್ ಹೆಸರಿನೊಂದಿಗೇ ಅಂಟಿಕೊಂಡಿದೆ ಕೋಟೆ. ಮೈಸೂರು ಹುಲಿ ಟಿಪ್ಪು ಸುಲ್ತಾನರ ಆಳ್ವಿಕೆಯಲ್ಲಿ ಅವರ ಸಾಮಂತನಾಗಿದ್ದ ತಿಮ್ಮನಾಯಕನಹಳ್ಳಿಯ ತಿಮ್ಮಪ್ಪ ನಾಯಕನ ಕಟ್ಟಿಸಿದ ಕೋಟೆ (ಕೋಟೆ ತಿಮ್ಮನಾಯಕನಹಳ್ಳಿ) ಅಷ್ಟು ಪ್ರಸಿದ್ಧ. ಇಂಗ್ಲೀಷರ ಸೈನ್ಯದ ದಾಳಿಯಿಂದ ತಪ್ಪಿಸಿಕೊಳ್ಳಲು ತಿಮ್ಮಪ್ಪ ನಾಯಕ 300 ವರ್ಷ ಹಿಂದೆ ತನ್ನ ರಾಜ್ಯ ರಕ್ಷಣೆಗೆ ಗ್ರಾಮದ ಸುತ್ತಲೂ ವಿಶಾಲವಾದ ಕಲ್ಲಿನ ಕೋಟೆಯನ್ನು ನಿರ್ಮಿಸಿದ್ದ. ಅದಲ್ಲದೇ ಅರ್ಧ ಎಕರೆ ವಿಶಾಲ ಬಂಡೆಯ ಮೇಲೆ ಪ್ರತ್ಯೇಕವಾಗಿ ತನ್ನ ರಕ್ಷಣೆಗಾಗಿ 4-5 ಅಡಿ ಅಗಲದ ದಪ್ಪ ಕಲ್ಲುಗಳನ್ನು ಬಳಸಿ ಇನ್ನೊಂದು ಕೋಟೆ ಕಟ್ಟಿಕೊಂಡಿದ್ದ. ಅದಕ್ಕೆ 'ರಕ್ಷಣಾ ಕೋಟೆ' ಎಂದೇ ಈ ಹಿಂದೆ ಕರೆಯಲಾಗುತ್ತಿತ್ತು. ಕೋಟೆ ನಾಲ್ಕೂ ದಿಕ್ಕುಗಳಲ್ಲಿ ಕಾವಲು ಗೋಪುರಗಳನ್ನು ನಿರ್ಮಿಸಲಾಗಿದೆ. ಉತ್ತರದ ಕಡೆ ಹೆಬ್ಬಾಗಿಲು ಇದ್ದು ಕೋಟೆಯ ಒಳಾಂಗಣವು ಚೌಕಾಕಾರವಾಗಿದೆ. ಒಳಾಂಗಣದಲ್ಲಿ ಆಂಜನೇಯಸ್ವಾಮಿ, ಈಶ್ವರ ದೇವರುಗಳ ವಿಗ್ರಹಗಳಿವೆ. ನೂರಾರು ವರ್ಷ ಕಾಲ ಇದಕ್ಕೆ ಪೂಜಾ ಕಾರ್ಯಗಳು ನಡೆಯುತ್ತಾ ಬಂದು ಕಾಲಕ್ರಮೇಣ ವಿಗ್ರಹಗಳೇ ನಾಪತ್ತೆಯಾದವು! (ಕಳ್ಳಕಾಕರ ಪಾಲಾಯಿತು). ಕಲ್ಲಿನ ಬಾಗಿಲಿನ ಎರಡು ಮಂಟಪಗಳು ಈಗಲೂ ಇದ್ದು ಅವೂ ಕೂಡ ಶಿಥಿಲಗೊಂಡಿವೆ. ಸಾಮಂತರ ಮನೆಗಳು ಮತ್ತು ಸೈನ್ಯದ ಆಯುಧಗಳ ಸಂಗ್ರಹಾಲಯಗಳು ನೈರುತ್ಯದ ಕಡೆ ಇದ್ದವು. ವಿಶಾಲವಾದ ತಿಮ್ಮನಾಯಕನಹಳ್ಳಿಯ ಕೆರೆಯೂ ಅದೇ ದಿಕ್ಕಿನಲ್ಲಿದೆ. ಆದರೆ ಕೋಟೆಗೆ ರಕ್ಷಣೆ ಇಲ್ಲ. ಇದೊಂದು ಸಾರ್ವಜನಿಕ ತಾಣವಾಗಿ ಪರಿಣಮಿಸಿದೆ. ನಿಧಿಗಳ್ಳರಿಂದಾಗಿ ಅಡಿಪಾಯಕ್ಕೇ ಧಕ್ಕೆ ಒದಗಿದೆ. ಇದರೊಳಗಿನ ದೇವಾಲಯಗಳು ಮುಜರಾಯಿ ಇಲಾಖೆ ಪಟ್ಟಿಯಲ್ಲಿವೆ. ಕೋಟೆಯನ್ನು ರಕ್ಷಿಸಬೇಕಾದ ಪುರಾತತ್ವ ಇಲಾಖೆಯಾಗಲಿ, ಪೂಜೆಗೆ ವ್ಯವಸ್ಥೆ ಮಾಡಬೇಕಾದ ಮುಜರಾಯಿ ಇಲಾಖೆಯಾಗಲಿ ಕಣ್ಣುಮುಚ್ಚಿ ಕುಳಿತಿವೆ. ಕಳ್ಳಕಾಕರ ಆಟ ಎಲ್ಲ ಕೋಟೆ, ಪುರಾತನ ಸ್ಥಳಗಳಲ್ಲೂ ನಿಧಿಗಳ್ಳರ ಹಾವಳಿ ಇದ್ದದ್ದೇ. ಟೇಕಲ್ ಕೋಟೆ ಕೂಡ ಅದರಿಂದ ಹೊರತಾಗಿಲ್ಲ. ಸುಮಾರು ವರ್ಷ ಕಾಲ ಗ್ರಾಮದ ರಾಮಮೂರ್ತಿಯವರ ಕುಟುಂಬ ಕೋಟೆ ಒಳಗಿದ್ದ ದೇವರುಗಳಿಗೆ ಪೂಜೆ ಪುನಸ್ಕಾರ ನಡೆಸುತ್ತಿತ್ತು. ಅದರಂತೆ ಕೋಟೆಯನ್ನು ರಕ್ಷಿಸುವ ಕಾರ್ಯದಲ್ಲಿ ಬಹುತೇಕ ಈ ಕುಟುಂಬ ನಿರತರಾಗಿತ್ತು. ಆದರೆ ಪುರಾತನ ಕೋಟೆಯಾಗಿರುವುದರಿಂದ ಹಲವರಿಗೆ ನಿಧಿ ಇರುವ ಸಂಶಯ! ನಿಧಿ ಶೋಧನೆಗಾಗಿ ಅನೇಕ ಬಾರಿ ಪ್ರಯತ್ನ ನಡೆಸಿದ ನಿದರ್ಶನಗಳಿವೆ. ಕಲ್ಲು ಮಂಟಪದ ಕೆಳಗೆ ನಿಧಿ ಶೋಧನೆಗಾಗಿ 8 ರಿಂದ 10 ಬಾರಿ ಅಗೆದು ಛಿದ್ರಗೊಳಿಸಲಾಗಿದೆ. ಇದೀಗ ಕೋಟೆಗೆ ಯಾವುದೇ ರಕ್ಷಣೆ ಇಲ್ಲದೆ ಪ್ರತಿದಿನ ಸಾರ್ವಜನಿಕರು ಬಂದು ಹೋಗುವ ಸ್ಥಳವಾಗಿ ಪರಿಣಮಿಸಿದೆ. - ಟೇಕಲ್ ಲಕ್ಷ್ಮೀಶ್