ದೇವರೇ ಗತಿ! ಸೈಕಲ್ ಶಾಪ್ ಮುಂದಿರುವ ಮರಕ್ಕೆ ನೇತುಹಾಕಿರುವ ಬೋರ್ಡ್ ಆ ರಸ್ತೆಯಲ್ಲಿ ಸಂಚರಿಸುವ ಸಾವಿರಾರು ಜನರ ಆಕರ್ಷಣೆ. ಕ್ಷಣಕಾಲ ಬೋರ್ಡ್ ಅನ್ನೇ ದಿಟ್ಟಿಸಿದ ಮೇಲೆ ಫ್ಯಾನ್ಸಿ ಐಟಂ ತರಹ ಲಕ್ಷಾಂತರ ಹೆಸರಿರುವ ಈ ಕಾಲದಲ್ಲೂ ಇಂತಹ ಹೆಸರನ್ನೇಕೆ ಇಟ್ಟರು ಎನ್ನುವ ಯೋಚನೆ ನೋಡುಗರ ಮನದಲ್ಲಿ ಮೂಡುತ್ತದೆ. ಅಷ್ಟಕ್ಕೂ ಆ ಮರಕ್ಕೆ ನೇತುಹಾಕಿರುವ ಬೋರ್ಡ್‌ನಲ್ಲಿರುವ ಹೆಸರಾದರೂ? 'ದೇವರೇ ಗತಿ ಸೈಕಲ್ ಶಾಪ್‌'! ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿಯ ರಾಮನಗರ ರಥಬೀದಿಯಲ್ಲಿನ ಈ ವಿಲಕ್ಷಣ ಹೆಸರಿನ ಸೈಕಲ್‌ಶಾಪ್ ಬೋರ್ಡ್ ಹಲವರ ಫೇಸ್‌ಬುಕ್‌ನಲ್ಲೂ ಸ್ಥಾನ ಗಳಿಸಿಕೊಂಡಿದೆ. ದೂರದೂರಿನ ಅಸಕ್ತರು ಇಲ್ಲಿಗೆ ಬಂದು ಬೋರ್ಡ್ ನೋಡಿಹೋಗುತ್ತಾರೆ. ಅಷ್ಟೊಂದು ಫೇಮಸ್ ಆಗಿಬಿಟ್ಟಿದೆ ದೇವರೆಗತಿ ಸೈಕಲ್ ಶಾಪ್. ಈ ಸೈಕಲ್ ಶಾಪ್ ಓನರ್ ಹೆಸರು ಸೈಯದ್ ಗೌಸ್. ಬೆಳಿಗ್ಗೆಯಿಂದ ಸಂಜೆ ತನಕವೂ ಸೈಕಲ್ ಶಾಪ್‌ನಲ್ಲಿ ದುಡಿದು, ರಾತ್ರಿ ಪಟ್ಟಣದ ಖಾಸಗಿ ಎಣ್ಣೆಮಿಲ್‌ನಲ್ಲಿ ಗಸ್ತು ತಿರುಗುವ ಕಾಯಕ. ಕೌಟುಂಬಿಕ ಕಾರಣಗಳಿಂದಾಗಿ ಸದ್ಯ ಒಬ್ಬಂಟಿ. ತನ್ನಂತೆ ಒಬ್ಬಂಟಿಯಾಗಿರುವವರಿಗೆ ಈತನ ದೇವರೆಗತಿ ಸೈಕಲ್ ಶಾಪೇ ಗತಿ! 'ಯಾಕಪ್ಪ ಈ ಹೆಸರಿಟ್ಟಿರಿ' ಎಂದರೆ ಗೌಸ್ ತತ್ವಜ್ಞಾನಿಯಂತೆ ಹೇಳುತ್ತಾರೆ, 'ಯಾವುದೇ ಧರ್ಮೀಯರು ಪೂಜಿಸಿ ಪ್ರಾರ್ಥಿಸುವುದು ಕಣ್ಣಿಗೆ ಕಾಣದ ಆ ದೇವರನ್ನು. ನಮ್ಮ ಕೊನೆಗಾಲದಲ್ಲಿ ಹೆಂಡತಿ, ಮಕ್ಕಳು, ಸಂಬಂಧಿಕರ್ಯಾರು ನೆರವಿಗೆ ಬಾರದಿದ್ದಾಗ ಕೊನೆಗೆ ನಮಗೆ ಆಸರೆಯಾಗುವುದೇ ಆ ದೇವರು. ಹುಟ್ಟಿನಿಂದ ಕೊನೆಗಾಲದವರೆಗೂ ನಮ್ಮ ಜೊತೆಯಾಗಿರುವ ದೇವರೇ ನಮಗೆ ಗತಿ ಸಾರ್. ಅದಕ್ಕೆ ನಾನು ನನ್ನ ಸೈಕಲ್ ಶಾಪ್‌ಗೂ ದೇವರೆ ಗತಿ ಎಂದು ಹೆಸರು ಇಟ್ಟಿರುವೆ. ಶಾಪ್‌ಗೆ ಇಟ್ಟಿರುವ ಹೆಸರಿನಲ್ಲಿ ನಾನು ಯಾವ ಜಾತಿಗೆ ಸೇರಿದವನು ಎಂದು ಗುರುತಿಸುವಂತಾಗಬಾರದು. ಇಟ್ಟಿರುವ ಹೆಸರು ಎಲ್ಲರಿಗೂ ಇಷ್ಟವಾಗುವಂತಿರಬೇಕು' - ಹುಳ್ಳಿ ಪ್ರಕಾಶ