ಕೋನಾರ್ಕಿನ ಕೆತ್ತನೆಯ ಕ್ಯಾಲೆಂಡರ್ ಸೂರ್ಯನ ಕುದುರೆ....ಸೂರ್ಯ ದೇಗುಲದ ಸುತ್ತ 24 ಚಕ್ರಗಳಿರುವ ರಥವಿದ್ದು, ಕುದುರೆಯ ಚಿತ್ರಗಳನ್ನು... ಸೂರ್ಯನ ಕುದುರೆ ಈ ವಿಶೇಷ ಸೂರ್ಯ ದೇಗುಲದ ಸುತ್ತ 24 ಚಕ್ರಗಳಿರುವ ರಥವಿದ್ದು, ಕುದುರೆಯ ಚಿತ್ರಗಳನ್ನು ಕೆತ್ತಲಾಗಿದೆ. ರಥಗಳು ಮಾಸಗಳನ್ನು, ಕುದುರೆಗಳು ವಾರಗಳನ್ನು ಹೇಳುತ್ತವೆ. 1250ನೇ ಇಸವಿಯಲ್ಲೇ ಕಬ್ಬಿಣದ ಬೀಮ್‌ಗಳನ್ನು ಬಳಸಿ ಈ ದೇಗುಲ ನಿರ್ಮಿಸಿರುವುದು ವಿಶೇಷ.... ಕಿಚ್ಚು ಹಾಯಿಸುವ 'ಚಂದ್ರಭಾಗ್‌' ಕಡಲ ಬೆನ್ನಿಗಿರುವ ಈ ಕೋನಾರ್ಕ್ ಮಂದಿರಕ್ಕೆ ಎಂಟುನೂರು ವರ್ಷಗಳ ಇತಿಹಾಸ. ಈ ವಿಶಿಷ್ಟ ದೇಗುಲ ಜರ್ಝರಿತಗೊಂಡು ಶತಮಾನವಾಗಿದೆ. ಒರಿಸ್ಸಾ ರಾಜಧಾನಿ ಭುವನೇಶ್ವರದಿಂದ ಪುರಿ ಜಗನ್ನಾಥ ದೇಗುಲ ಮಾರ್ಗವಾಗಿ 60 ಕಿ.ಮೀ. ಸಾಗಿದರೆ ಸಿಗುತ್ತೆ ಈ ಚಿಕ್ಕ ಊರು. ಭಾರತದಲ್ಲಿರುವ ಏಕೈಕ ಸೂರ್ಯ ದೇಗುಲವಿರುವ ಊರೆಂಬ ಹೆಗ್ಗಳಿಕೆಯೂ ಇದಕ್ಕೆ. 1250ರಲ್ಲಿ ಗಂಗವಂಶದ ಮೊದಲನೇ ನರಸಿಂಹ ರಾಜನ ಆಡಳಿತಾವಧಿಯಲ್ಲಿ ನಿರ್ಮಿಸಿದ್ದ ಈ ದೇಗುಲದ ವಾಸ್ತು ಶಿಲ್ಪ ಅಮೋಘ. 12 ಮತ್ತು 13ನೇ ಶತಮಾನದ ಮಧ್ಯಭಾಗದಲ್ಲಿ ನಿರ್ಮಿಸಿದ ಈ ದೇಗುಲದ ತುತ್ತ ತುದಿಯಲ್ಲಿ ನೈಜ ಆಯಸ್ಕಾಂತವಿತ್ತು. ಸಾಮಾನ್ಯವಾಗಿ ನಮ್ಮ ದೇಶದ ಬಹುಮುಖ್ಯ ದೇಗುಲಗಳು ನಾಶವಾಗಿರುವುದು ಸಂಪತ್ತು ಅಥವಾ ಅದ್ಭುತ ಕಲಾಕೃತಿ ಇರುವ ಕಾರಣಕ್ಕೆ. ಆದರೆ, ಈ ಕೋನಾರ್ಕ್‌ನ ಸೂರ್ಯ ಮಂದಿರ ಭಗ್ನಗೊಂಡಿದ್ದು ಆಯಸ್ಕಾಂತದ ಕಾರಣದಿಂದ. ಇದರ ನಾಶಕ್ಕೆ ಮುನ್ನುಡಿ ಬರೆದವರು ವ್ಯಾಪಾರಕ್ಕಾಗಿ ಆಗಮಿಸುತ್ತಿದ್ದ ಪೋರ್ಚುಗೀಸರು. ಇವರ ಹಡಗಿನ ಮೇಲಿರುತ್ತಿದ್ದ ದಿಕ್ಸೂಚಿಯನ್ನು ದೇಗುಲದ ಮೇಲಿದ್ದ ಆಯಸ್ಕಾಂತ ಆಕರ್ಷಿಸುತ್ತಿತ್ತು. ಅದಕ್ಕೇ ಹಡಗು ತನ್ನ ಚಲನೆಯನ್ನೇ ಬದಲಿಸಿ ಸೂರ್ಯ ದೇಗುಲದತ್ತ ಆಕರ್ಷಿತವಾಗುತ್ತಿತ್ತು. ಸಮುದ್ರದಲ್ಲಿ ಹಡಗು ಮನಸ್ಸೋ ಇಚ್ಛೆ ಲಂಗರು ಹಾಕುತ್ತಿದ್ದದ್ದು ಏಕೆಂದು ಗೊಂದಲಗೊಂಡಿದ್ದ ಪೋರ್ಚುಗೀಸರಿಗೆ ಕಾರಣ ತಿಳಿಯಲು ಹೆಚ್ಚು ಕಾಲ ಹಿಡಿಯಲಿಲ್ಲ. ಕೂಡಲೇ ಮಂದಿರದ ಮೇಲಿದ್ದ ನೈಜ ಅಯಸ್ಕಾಂತವನ್ನು ಭಗ್ನಗೊಳಿಸಲು ತಡ ಮಾಡಲಿಲ್ಲ. ಆ ಭರದಲ್ಲೇ ಮಂದಿವನ್ನೂ ಭಗ್ನ ಗೊಳಿಸಿದರು. ಆಗಿನಿಂದ ಸೂರ್ಯ ಮಂದಿರದ ಪತನ ಆರಂಭವಾಯಿತು. ಖಚಿತ ಕಾಲ ನಿರ್ಣಯ ಈ ವಿಶೇಷ ಸೂರ್ಯ ದೇಗುಲದ ಸುತ್ತ 24 ಚಕ್ರಗಳಿರುವ ರಥವಿದ್ದು, ಕುದುರೆಯ ಚಿತ್ರಗಳನ್ನು ಕೆತ್ತಲಾಗಿದೆ. ರಥಗಳು ಮಾಸಗಳನ್ನು, ಕುದುರೆಗಳು ವಾರಗಳನ್ನು ಹೇಳುತ್ತವೆ. 1250ನೇ ಇಸವಿಯಲ್ಲೇ ಕಬ್ಬಿಣದ ಬೀಮ್‌ಗಳನ್ನು ಬಳಸಿ ಈ ದೇಗುಲ ನಿರ್ಮಿಸಿರುವುದು ವಿಶೇಷ. ಸೂರ್ಯನ ಕಾಲಮಾನವನ್ನು ತೋರಿಸುವ ಈ ದೇಗುಲದ ಸುತ್ತ ರಥಗಳು, ಕುದುರೆಗಳನ್ನು ಕಲ್ಲಿನಲ್ಲಿ ಕೆತ್ತಲಾಗಿದೆ. ಈ ರಥದ ಬಳಿ ಉತ್ತರಾಯಣ ಮತ್ತು ದಕ್ಷಿಣಾಯನದ ಭಾಗಗಳಿವೆ. ಜತೆಗೆ ರೇಖಾಂಶ, ಅಕ್ಷಾಂಶವನ್ನೂ ಕಾಣಬಹುದು. ಚಂದ್ರಭಾಗ್ ಕಡಲಿನ ಬೆನ್ನಿಗಿರುವ ಈ ಸೂರ್ಯ ದೇಗುಲದ ಗರ್ಭಗುಡಿ ಮೇಲೆ ಸೂರ್ಯನ ಕಿರಣಗಳು ಬೀಳುತ್ತವೆ. ಇದರಿಂದಲೇ ಗಂಟೆ, ನಿಮಿಷ, ಸೆಕೆಂಡ್‌ಗಳನ್ನು ನಿಖರವಾಗಿ ಗುರುತಿಸಬಹುದು. ಈ ದೇಗುಲದ ಗರ್ಭ ಗುಡಿಯ ನಾಲ್ಕು ದಿಕ್ಕಿನಲ್ಲೂ ಸೂರ್ಯನ ವಿಗ್ರಹಗಳಿವೆ. ಪೂರ್ವದಲ್ಲಿದ್ದ ಸೂರ್ಯನ ವಿಗ್ರಹ ಸಂಪೂರ್ಣ ಭಗ್ನಗೊಂಡಿದ್ದು, ಅದನ್ನು ನವದೆಹಲಿಯ ಪ್ರಾಚ್ಯ ವಸ್ತು ಸಂಗ್ರಹಾಲಯದಲ್ಲಿಡಲಾಗಿದೆ. ಈ ಚಾರಿತ್ರಿಕ ಮಹತ್ವವಿರುವ ಈ ದೇಗುವ 1913ರಲ್ಲಿ ಬಹುತೇಕ ಕುಸಿಯ ತೊಡಗಿತು. ಮುಖ್ಯ ಮಂಟಪದ ಕಲ್ಲುಗಳು ಬೀಳತೊಡಗಿದವು. ಅಂದಿನಿಂದ ಈ ದೇಗುಲ ಪ್ರವೇಶಕ್ಕೆ ನಿರ್ಬಂಧ ಹೇರಲಾಯಿತು. ಕೇಂದ್ರ ಪುರಾತತ್ವ ಇಲಾಖೆ 2008 ರಲ್ಲಿ ಈ ಐತಿಹಾಸಿಕ ಸೂರ್ಯ ಮಂದಿರವನ್ನು ಪುನರುಜ್ಜೀವನಗೊಳಿಸಿದ್ದು, ತನ್ನ ಗತವೈಭವ ಮರಳಿ ಪಡೆದಿದೆ. ಈಗ ಪ್ರವಾಸಿಗರ ಪ್ರವೇಶಕ್ಕೂ ಮುಕ್ತವಾಗಿದೆ. ಹೋಗೋದು ಹೇಗೆ? ಬೆಂಗಳೂರಿನಿಂದ ಭುವನೇಶ್ವರಕ್ಕೆ ವಿಮಾನವಿದೆ. ಹಾಗೆಯೇ ರೈಲಿನಲ್ಲೂ ಹೋಗಬಹುದು. ಭುವನೇಶ್ವರದಿಂದ 60 ಕಿ.ಮೀ. ದೂರದಲ್ಲಿ ಕೋನಾರ್ಕ್ ಇದ್ದು, ಬಸ್‌ಗಳು ಸಾಕಷ್ಟಿವೆ. ಸೂರ್ಯನ ಕಿರಣಗಳು ದೇಗುಲದ ಮೇಲೆ ಬೀಳುವ ಸಮಯ ಬೆಳಿಗ್ಗೆ 6 ಗಂಟೆಯೊಳಗೆ ಈ ದೇಗುಲವನ್ನು ವೀಕ್ಷಿಸಿದರೆ ಒಳ್ಳೆಯದು. ಮತ್ತೇನು ನೋಡಬಹುದು? ಒರಿಸ್ಸಾ ಒಂದರ್ಥದಲ್ಲಿ ವಿಶಿಷ್ಟ ಪ್ರವಾಸಿ ತಾಣಗಳಲ್ಲೊಂದು. ಕೋನಾರ್ಕ್‌ನ ಕೂಗಳತೆ ದೂರದಲ್ಲಿಯೇ ಪುರಿ ಜಗನ್ನಾಥ ದೇಗುಲವಿದೆ. ಅಲ್ಲಿಂದ 40 ಕಿ.ಮೀ. ಸಾಗಿದರೆ ಭಾರತದ ಅತ್ಯಂತ ಉದ್ದದ ಚಿಲಕ್ ಸರೋವರವಿದೆ. ಇಲ್ಲಿ ಮೂರು ಗಂಟೆಗಳ ದೋಣಿಯಲ್ಲಿ ವಿಹರಿಸಬಹುದಾಗಿದ್ದು. ತಿಮಿಂಗಿಲಗಳನ್ನೂ ಕಾಣಬಹುದು. ಭುವನೇಶ್ವರದಲ್ಲಿ ಮತ್ತೇನು ವಿಶೇಷ? ಭುವನೇಶ್ವರ ನಗರದಲ್ಲೇ ಹಲವಾರು ಪ್ರವಾಸಿ ತಾಣಗಳಿವೆ. ಬೌದ್ಧ ಗುಹೆಯೂ ಇದರಲ್ಲಿ ಒಂದು. ನಂದನ್ ಕಾನ್ ಎಂಬ ಅತ್ಯಾಕರ್ಷಕ ಮೃಗಾಲಯವಿದೆ. ಪುರಿ ಜಗನ್ನಾಥನಿಗಿಂತ ಪುರಾತನ ಲಿಂಗರಾಜು ಟೆಂಪಲ್‌ವೂ ಮುಖ್ಯ ಸ್ಥಳವೇ. ಉಗಮ ಶ್ರೀನಿವಾಸ್