ಏರಿತು ಇಕೋ ರೇಟು ಇಕೋಸ್ಪೋರ್ಟ್‌ಗೆ ಗ್ರಾಹಕರ ಭರ್ಜರಿ ಪ್ರತಿಕ್ರಿಯೆಯಿಂದ ಉತ್ಸುಕವಾಗಿರುವ ಫೋರ್ಡ್ ಕಂಪನಿ ವಾಹನದ ದರವನ್ನು ರು. 30-40 ಸಾವಿರ ಏರಿಸಿದೆ. ಇದಕ್ಕೆ ಡಾಲರ್ ದರ ಏರಿಕೆಯ ನೆಪವನ್ನು ಮುಂದಿಡಲಾಗಿದೆ. ಆದರೆ, ಡಾಲರ್ ದರಕ್ಕಿಂತ ಮುಖ್ಯವಾಗಿ, ಇಕೋಸ್ಪೋರ್ಟ್ ವಾಹನಕ್ಕೆ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವ ದೃಷ್ಟಿಯಿಂದ ಕಂಪನಿ ಈ ನಿರ್ಧಾರ ಕೈಗೊಂಡಿದೆ ಎಂಬುದರಲ್ಲಿ ಅನುಮಾನವಿಲ್ಲ. ಇಕೋಸ್ಪೋರ್ಟ್ ವಾಹನದಿಂದ ಆಕರ್ಷಿತರಾದ ದೊಡ್ಡ ಪ್ರಮಾಣದ ಗ್ರಾಹಕರು ವಾಹನವನ್ನು ಬುಕ್ ಮಾಡಿದ್ದರು. ನಿಗದಿತ ಸಮಯದಲ್ಲಿ ಅವರಿಗೆ ಕಾರು ನೀಡಲು ಫೋರ್ಡ್ ಕಂಪನಿ ವಿಫಲವಾಗಿದೆ. ಅದರ ಜತೆಗೆ ವಾಹನದ ಬೆಲೆಯನ್ನೂ ಏರಿಸಿದೆ. ವಾಹನದ ಬಿಡುಗಡೆ ಸಂದರ್ಭದಲ್ಲಿ 4-5 ತಿಂಗಳು ದರದಲ್ಲಿ ಬದಲಾವಣೆ ಇಲ್ಲ ಎಂದು ಸಂಸ್ಥೆ ಮುಖ್ಯಸ್ಥರು ಹೇಳಿದ್ದರು. ಅವರ ಮಾತಿಗೆ ಅವರೇ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಗ್ರಾಹಕರು ದೂರುತ್ತಿದ್ದಾರೆ.