ನವೀನತೆ ಸ್ಪರ್ಶ ಕಂಡ ಓಂ ಬೀಚ್ ಜಗತ್ಪ್ರಸಿದ್ಧ ಸಮುದ್ರ ಕಿನಾರೆಗಳಲ್ಲಿ ಗೋಕರ್ಣದ ಓಂ ಬೀಚ್ ಕೂಡ ಒಂದು. ಇದು ಹೆಚ್ಚು... ಜಗತ್ಪ್ರಸಿದ್ಧ ಸಮುದ್ರ ಕಿನಾರೆಗಳಲ್ಲಿ ಗೋಕರ್ಣದ ಓಂ ಬೀಚ್ ಕೂಡ ಒಂದು. ಇದು ಹೆಚ್ಚು ಪ್ರಚಾರಕ್ಕೆ ಬರಲು ಕಾರಣವಾದದ್ದು ವಿದೇಶಿ ಪ್ರವಾಸಿಗರ ಆಗಮನದಿಂದ. ವರ್ಷದಿಂದ ವರ್ಷಕ್ಕೆ ಇವರ ಸಂಖ್ಯೆ ಅದಿಕಗೊಂಡಂತೆ ವಿದೇಸಿಗರ ವೀಕ್ಷಣೆಗೆಂದೋ, ದಿನದ ಜಂಜಾಟದಿಂದ ಬೇಸತ್ತು ಬೇಜಾರು ಕಳೆಯಲೆಂದೋ, ದೇಸಿ ಪ್ರವಾಸಿಗರೂ ಭೇಟಿ ನೀಡತೊಡಗಿದರು. ಕ್ರಮೇಣ ಓಂ ಬೀಚ್ ಸರ್ವರ ಪಾಲಿಗೆ ಸ್ವರ್ಗ ಎನಿಸತೊಡಗಿತು. ಆದರೆ ಎಷ್ಟೇ ನೋಡಿದರೂ ಕರಗದ ಸೌಂದರ್ಯ ರಾಶಿಯ ಈ ಪ್ರದೇಶದಲ್ಲಿ ಬೋಳು ಗುಡ್ಡ, ಮರಗಳ ರಾಶಿ, ನೊರೆ ನೊರೆಯಾಗಿ ಬಂದು ಹೋಗುವ ಅಲೆಗಳು ಮತ್ತು ವಿದೇಶಿಗರ ಅರೆನಗ್ನ ಅವತಾರಗಳನ್ನು ಬಿಟ್ಟರೆ ಹೇಳಿಕೊಳ್ಳುವಂಥ ಹೊಸದೇನೂ ಹುಟ್ಟಿಕೊಂಡಿರಲಿಲ್ಲ. ಈಗ ಈ ಜಾಗದ ಚಿತ್ರಣವೇ ಬದಲಾಗಿದೆ. ಬೀಚ್ ಕೇವಲ ಮೋಜಿನ ತಾಣವಾಗಬಾರದು. ಅದು ಉಲ್ಲಾಸ, ಮನರಂಜನೆಯ ಹಾಗೂ ಶೈಕ್ಷಣಿಕ ಆಸಕ್ತಿಯನ್ನು ಹುಟ್ಟಿಸುವಂಥ ತಾಣವಾಗಿ ಬೆಳೆಯಬೇಕೆಂಬ ಉದ್ದೇಶದಿಂದ ಹೊಸ ಪ್ರಯೋಗಗಳೊಂದಿಗೆ ಪ್ರವಾಸಿಗರ ಮೂಲ ಸೌಕರ್ಯಕ್ಕೆ ಮತ್ತು ಸೌಂದರ್ಯಕ್ಕೆ ಮೆರಗು ನೀಡಲು ಒತ್ತು ನೀಡಲಾಗಿದೆ. ಬೀಚ್ ರಸ್ತೆಯ ಮೇಲ್ಭಾಗದ ಗುಡ್ಡದಲ್ಲಿ ಸುಂದರ ಉದ್ಯಾನವನ ನಿರ್ಮಾಣಗೊಂಡಿದೆ. ಸೂರ್ಯಾಸ್ತ ವೀಕ್ಷಣೆಗೆ ಪ್ಯಾರಾಗೋಲ್, ಸಂತಸಕ್ಕೆ ಹೂದೋಟ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಆಕರ್ಷಣೀಯವಾಗಿ ಕಾಣುವುದೆಂದರೆ ಕಲ್ಲಿನ ಕಲಾತ್ಮಕ ಆಸನಗಳು. ಸ್ಥಳೀಯವಾಗಿ ಸಿಗುವ ಕಲ್ಲು, ಚಿಪ್ಪು, ಹೆಂಚು ಮತ್ತು ಟೈಲ್ಸ್ ಚೂರುಗಳನ್ನು ಬಳಸಿ ಇವುಗಳನ್ನು ನಿರ್ಮಿಸಲಾಗಿದೆ. ಕಪ್ಪೆ ಚಿಪ್ಪುಗಳ ಕಲಾಕೃತಿಗಳು, ಬೆಣಚು ಕಲ್ಲಿನಿಂದ ತಯಾರಿಸಲ್ಪಟ್ಟ ವಿವಿಧ ಆಸನಗಳು ಕಲಾವಿದರ ಕೈಚಳಕಕ್ಕೆ ಸಾಕ್ಷಿಯಾಗಿವೆ. ಸಾಕಷ್ಟು ಶ್ರಮವಹಿಸಿ ಕಲ್ಲಿನ ಚೂರುಗಳನ್ನು ಓರಣವಾಗಿ ಜೋಡಿಸಿ, ಅವುಗಳಿಗೆ ಕಲಾತ್ಮಕ ರೂಪ ನೀಡಿದ್ದು ಉದುಪುಡಿ ಅವರ ಮಾರ್ಗದರ್ಶನದಲ್ಲಿ ಮತ್ತು ಕಲಾವಿದ ವಂದಾಲ ಸಂಗಡಿಗರ ಮುತುವರ್ಜಿಯಿಂದ ಓಂ ಬೀಚ್‌ನ ತೀರಗಳು ಸುಂದರ ರೂಪ ತಾಳಿವೆ. -ಎ.ಎಸ್ ಹುಲಗೇರಿ, ಹುನಗುಂದ