ಝೆಡ್ 4 ಸ್ವರ್ಗ ಅತ್ಯಾಕರ್ಷಕ ನೋಟ. ತ್ವರಿತ ಓಟ. ಇದು 'ಬಿಎಂಡಬ್ಲ್ಯು ಝೆಡ್4' ಎಂಬ ಸ್ಪೋರ್ಟ್ಸ್ ಕಾರಿನ ಟ್ರೇಡ್‌ಮಾರ್ಕ್. ಅತ್ಯಾಕರ್ಷಕ ನೋಟ. ತ್ವರಿತ ಓಟ. ಇದು 'ಬಿಎಂಡಬ್ಲ್ಯು ಝೆಡ್4' ಎಂಬ ಸ್ಪೋರ್ಟ್ಸ್ ಕಾರಿನ ಟ್ರೇಡ್‌ಮಾರ್ಕ್. ಸ್ಟೈಲು, ಪವರ್, ಆಕರ್ಷಣೆ ಮತ್ತು ತಂತ್ರಜ್ಞಾನವೇ ಇದರಲ್ಲಿ ಮುಖ್ಯ. ಬಿಎಂಡಬ್ಲ್ಯು ಸಂಸ್ಥೆ ಇಂಥ ಅತ್ಯಾಕರ್ಷಕ ಝೆಡ್ 4 ಮಾದರಿಯನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಬಿಎಂಡಬ್ಲ್ಯು ಸಂಸ್ಥೆಯ ಕಾರುಗಳ ಪುಣೆಯ ಡೀಲರ್ ವಾರಿಯಾ ಮೋಟರ್ಸ್‌ನಲ್ಲಿ ಈ ಕಾರನ್ನು ಮೊದಲ ಬಾರಿಗೆ ಅನಾವರಣ ಮಾಡಿದ್ದು, 'ಕನ್ನಡಪ್ರಭ' ಇದಕ್ಕೆ ಸಾಕ್ಷಿಯಾಯಿತು. ಭಾರತದಾದ್ಯಂತ ಬಿಎಂಡಬ್ಲ್ಯು ಶೋರೂಂಗಳಲ್ಲಿ ಈ ಕಾರು ಲಭ್ಯವಿದೆ. ಝೆಡ್4 ಸ್ಪೋರ್ಟ್ಸ್ ಕಾರು. ಕೇವಲ ಇಬ್ಬರು ಮಾತ್ರ ಇದರಲ್ಲಿ ಕುಳಿತುಕೊಳ್ಳಬಹುದು. ಆದರೆ ಗಾತ್ರದಲ್ಲಿ ಹೆಚ್ಚುಕಡಿಮೆ ಇನ್ನೋವಾದಷ್ಟೇ ಉದ್ದ. ಎತ್ತರ ತುಂಬಾ ಕಡಿಮೆ. ಇದರಲ್ಲಿ ಕೇವಲ ಒಂದು ಬಟನ್ ಒತ್ತಿದರೆ ಟಾಪ್ ತೆರೆದುಕೊಂಡು, ಸ್ಪೋರ್ಟ್ಸ್ ಕಾರಿನ ನಿಜವಾದ ಸ್ವರೂಪ ಅನುಭವಕ್ಕೆ ಬರುತ್ತದೆ. ಮಳೆ, ಧೂಳು ಇದ್ದಾಗ ಇನ್ನೊಂದು ಬಟನ್ ಒತ್ತಿದರೆ ಹಾರ್ಡ್ ಟಾಪ್ ತನ್ನಿಂದ ತಾನೇ ಮುಚ್ಚಿಕೊಳ್ಳುತ್ತದೆ. ಇದರ ಆಂತರಿಕ ವಿನ್ಯಾಸ ಅತ್ಯಂತ ಐಷಾರಾಮಿ. ಝೆಡ್ 4 ಆಲ್ಪೈನ್ ವೈಟ್ (ನಾನ್ ಮೆಟಾಲಿಕ್ ಪೇಂಟ್), ಮಿನರಲ್ ಗ್ರೇ, ಗ್ಲೇಸಿಯರ್ ಸಿಲ್ವರ್, ವೆಲೆನ್ಸಿಯಾ ಆರೇಂಜ್, ಬ್ಲ್ಯಾಕ್‌ಫೈರ್, ಕ್ರಿಮ್ ಸನ್‌ಡ್ರಾಪ್, ಡೀಪ್ ಬ್ಲ್ಯೂ, ಸೀ, ಮಿನರಲ್ ವೈಟ್ ಮತ್ತು ಓರಿಯನ್ ಸಿಲ್ವರ್ ಹೀಗೆ 8 ಮೆಟಾಲಿಕ್ ಬಣ್ಣಗಳಲ್ಲಿ ಲಭ್ಯ. ವೆಲೆನ್ಸಿಯಾ ಆರೇಂಜ್ ಬಣ್ಣ ಬೇಕಾದಲ್ಲಿ ಡಿಸೈನ್ಡ್ ಟು ಟ್ರ್ಯಾಕ್ಷನ್ ಎಂಬ ಉತ್ಕೃಷ್ಟ ಮಾದರಿ ಝೆಡ್4ನಲ್ಲಿ ಮಾತ್ರ ಲಭ್ಯವಿದೆ. ಡಿಸೈನ್ಡ್ ಟು ಟ್ರ್ಯಾಕ್ಷನ್ ಮಾದರಿಯಲ್ಲಿ ಸೀಟು ಹಾಗು ಆಂತರಿಕ ವಿನ್ಯಾಸದಲ್ಲೂ ವ್ಯತ್ಯಾಸವಿದೆ. ಹೆಡ್‌ಲೈಟ್‌ಗಳಿಗೆ ಅತ್ಯಾಕರ್ಷಕ ಡೇ ರನ್ನಿಂಗ್ ಎಲ್‌ಇಡಿ ಲೈಟ್ ನೋಡಿದ ತಕ್ಷಣ ನಿಮ್ಮನ್ನು ಆಕರ್ಷಿಸುತ್ತದೆ. ವಿಶೇಷವಾಗಿ ವಾಹನದ ಭಾರ ಮುಂದಿನ ಹಾಗೂ ಹಿಂದಿನ ಚಕ್ರಕ್ಕೆ ಸಮನಾಗಿ ಹಂಚಿಹೋಗುವಂತೆ ವಿನ್ಯಾಸಿಸಲಾಗಿದೆ. ಚಾಲಕನಿಗೆ ಸ್ಪೋರ್ಟ್ ಸೀಟ್ ಹೊಂದಿದ್ದು ಚಾಲನೆಗೆ ಅತ್ಯುತ್ತಮ ರೀತಿಯಲ್ಲಿ ನೆರವಾಗಲಿದೆ. ಒಳಭಾಗದಲ್ಲಿ ಸನ್‌ರಿಫ್ಲೆಕ್ಟಿವ್ ತಂತ್ರಜ್ಞಾನದ ಲೆದರ್ ಅಪ್‌ಹೋಲ್‌ಸ್ಟ್ರಿಗಳಿರುವುದರಿಂದ ಬಿಸಿಲಿನಲ್ಲಿ ನಿಲ್ಲಿಸಿದರೂ ಅದು ಬಿಸಿಯಾಗದು. ಇದರಿಂದ ಪೂರ್ಣವಾಗಿ ಓಪನ್‌ಟಾಪ್ ಡ್ರೈವಿಂಗ್ ಆನಂದಿಸಬಹುದು. ಕಾಕ್‌ಪಿಟ್ ಚಾಲಕನ ಕಡೆಗಿದ್ದು, ಮುಖ್ಯವಾದ ನಿಯಂತ್ರಕಗಳನ್ನು ಸುಲಭವಾಗಿ ದೊರೆಯುವಂತಿದೆ. ಈ ಕಾರು ಅತ್ಯಂತ ಶಕ್ತಿಶಾಲಿ. ಕೇವಲ 5.1 ಸೆಕೆಂಡ್‌ಗಳಿಂದ 100 ಕಿ.ಮೀ. ವೇಗ ತಲುಪಬಲ್ಲದು. ಎಂಜಿನ್‌ನಲ್ಲಿ 2 ಟರ್ಬೋ ಚಾರ್ಜರ್, ಹೈ ಪ್ರಿಸಿಷನ್ ಇಂಜೆಕ್ಷನ್ ಹೊಂದಿದೆ. ಇದರ ಟಾಪ್‌ಸ್ಪೀಡ್ 250. ನಮ್ಮಲ್ಲಿ ಅಂಥ ರಸ್ತೆಗಳಿವೆಯೋ ಇಲ್ಲವೋ ಎಂಬುದು ನಿಮಗೆ ಬಿಟ್ಟ ವಿಚಾರ. ಈ ಕಾರು 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಗಳನ್ನು ಹೊಂದಿದ್ದು, ಪರಿಸ್ಥಿತಿಗೆ ತಕ್ಕ ಗೇರ್ ಬದಲಾಯಿಸಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಯಾವುದೇ ಸಮಯದಲ್ಲಿ ಯಾವುದೇ ಗೇರ್‌ನಲ್ಲಿ ಟ್ರಾನ್ಸ್‌ಮಿಷನ್ ಎಂಜಿನ್‌ನೊಂದಿಗೆ ಪರಿಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಇದರಿಂದ ಪೂರ್ಣ ಶಕ್ತಿ ಮತ್ತು ಸಾಮರ್ಥ್ಯ ಬಳಕೆಯಾಗುತ್ತದೆ. ಝೆಡ್4 ಅತ್ಯಾಧುನಿಕ ಸುರಕ್ಷಾ ಲಕ್ಷಣಗಳೊಂದಿಗೆ ಲಭ್ಯವಿದ್ದು, ಎಂಥ ಸಂದರ್ಭದಲ್ಲೂ ರಕ್ಷಣೆ ನೀಡುವ ನಾಲ್ಕು ಏರ್‌ಬ್ಯಾಗ್‌ಗಳು, ಡೈನಾಮಿಕ್ ಸ್ಟೆಬಿಲಿಟಿ ಕಂಟ್ರೋಲ್, ಕಾರ್ನರಿಂಗ್ ಬ್ರೇಕ್ ಕಂಟ್ರೋಲ್, ಬ್ರೇಕ್ ಅಸಿಸ್ಟ್, ರೋಲ್‌ಓವರ್ ಪ್ರೊಟೆಕ್ಷನ್ ಸಿಸ್ಟಂ, ಸೈಡ್ ಇಂಪ್ಯಾಕ್ಟ್ ಪ್ರೊಟೆಕ್ಷನ್, ಇಂಪ್ಯಾಕ್ಟ್ ಅಬ್ಸಾರ್ಬರ್ ಹೊಂದಿರುವ ಹಿಂಬದಿ ಮತ್ತು ಮುಂಬದಿ ಬಂಪರ್‌ಗಳನ್ನು ಹೊಂದಿದೆ. ಝೆಡ್4 ಡ್ರೈವಿಂಗ್ ಎಕ್ಸ್‌ಪೀರಿಯೆನ್ಸ್ ಕಂಟ್ರೋಲ್ ಸ್ವಿಚ್ ಹೊಂದಿದ್ದು, ಚಾಲಕರು ವಿವಿಧ ಚಾಲನೆಯ ಪರಿಸ್ಥಿತಿಗೆ ಅನುಗುಣವಾಗಿ ಮಾದರಿಗಳಿಗೆ ಬದಲಿಸಿಕೊಳ್ಳಬಹುದು. ಕಂಫರ್ಟ್, ಸ್ಪೋರ್ಟ್ಸ್ ಮತ್ತು ಸ್ಪೋರ್ಟ್ಸ್1 ಡ್ರೈವಿಂಗ್ ಆಯ್ಕೆಗಳು ಲಭ್ಯವಿದೆ. ಈ ಕಾರಿನ ಇನ್ನೊಂದು ವಿಶೇಷವೆಂದರೆ ಇದರಲ್ಲಿ ಸ್ಟೆಪ್ನಿ ಅಥವಾ ಬದಲಿ ಟಯರ್ ಎಂಬುದೇ ಇಲ್ಲ! ರನ್ ಫ್ಲಾಟ್ ಟಯರ್ ವ್ಯವಸ್ಥೆ ಇರುವುದರಿಂದ ಗಾಳಿ ಹೋಗಿ ಟಯರ್ ಸಂಪೂರ್ಣ ಫ್ಲಾಟ್ ಆದರೂ ನೀವು ಕಾರು ಚಲಾಯಿಸಿಕೊಂಡು ಹೋಗಬಹುದು. ಹೀಗಾಗಿ ಸ್ಟೆಪ್ಣಿಯನ್ನೇ ಈ ಕಾರಲ್ಲಿ ಇಡಲಾಗಿಲ್ಲ. ಝೆಡ್4 ಆನ್‌ಬೋರ್ಡ್ ಡ್ರೈವರ್ ಇನ್‌ಫಾರ್ಮೇಷನ್ ಸಿಸ್ಟಂ, 8.8 ಇಂಚು ಹೈ-ರೆಸಲ್ಯೂಷನ್ ಟಚ್ ತಂತ್ರಜ್ಞಾನ ಹೊಂದಿರುವ ಡಿಸ್ಪ್ಲೇ, ನೇವಿಗೇಷನ್ ಸಿಸ್ಟಂ, ಬ್ಲೂಟೂಥ್ ಮತ್ತು ಯುಎಸ್‌ಬಿ ಸಾಧನಗಳ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಇದೆ. ಇವುಗಳನ್ನು ಕೇವಲ ನಿಮ್ಮ ಧ್ವನಿಯ ಮೂಲಕವೇ ನಿಯಂತ್ರಿಸಬಹುದು. ಕಾರು ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಬಿಎಂಡಬ್ಲ್ಯು ಗ್ರೂಪ್ ಇಂಡಿಯಾದ ಅಧ್ಯಕ್ಷ ಫಿಲಿಪ್, 'ಹೊಸ ಝೆಡ್4 ಚೈತನ್ಯ ಮತ್ತು ಸೌಂದರ್ಯ ಪ್ರಜ್ಞೆ, ಎಂದೂ ರಾಜಿಯಾಗದ ಶೈಲಿಯಲ್ಲಿ ತಂದಿದೆ. ಬಿಎಂಡಬ್ಲ್ಯು ಸಂಸ್ಥೆ ಎಷ್ಟು ಕಾರುಗಳನ್ನು ಮಾರಾಟ ಮಾಡಿದೆ ಎಂಬುದಕ್ಕಿಂತ ಎಷ್ಟು ಗುಣಮಟ್ಟದ ಕಾರುಗಳನ್ನು ಮಾರಿದೆ ಮತ್ತು ಗ್ರಾಹಕರ ಸಂತೃಪ್ತಿಯ ಮಟ್ಟದ ಬಗ್ಗೆ ಹೆಚ್ಚು ಗಮನಹರಿಸುತ್ತದೆ. ಝೆಡ್4 ಭಾರತದಲ್ಲಿ ಅತ್ಯಂತ ಹೆಚ್ಚು ಮಾರಾಟವಾಗುತ್ತದೆ ಎಂಬ ಗುರಿ ಸಂಸ್ಥೆಗಿಲ್ಲ. ಆದರೆ ಬಿಎಂಡಬ್ಲ್ಯು ಬ್ರ್ಯಾಂಡ್‌ನ ಮೌಲ್ಯ ಹೆಚ್ಚಳಕ್ಕೆ ಇದು ಸಹಕಾರಿಯಾಗಲಿದೆ' ಎಂದರು. - ವಿನಾಯಕ ಭಟ್ಟ ಮೂರೂರು