ಕಿಗ್ಗಾ ಕಿಕ್ ಸುಮಾರು 80 ಅಡಿ ಮೇಲಿನಿಂದ ಬಂಡೆಗಳ ಮಧ್ಯೆ ಬಳುಕುತ್ತಾ ಮಿಂಚಿನ ಬಳ್ಳಿಯಂತೆ... ಸುಮಾರು 80 ಅಡಿ ಮೇಲಿನಿಂದ ಬಂಡೆಗಳ ಮಧ್ಯೆ ಬಳುಕುತ್ತಾ ಮಿಂಚಿನ ಬಳ್ಳಿಯಂತೆ ಧುಮ್ಮಿಕ್ಕುವ ನೀರಿಗೆ ಮೈಯೊಡ್ಡಿ ನಿಲ್ಲುವುದೆಂದರೆ ಅದೊಂದು ಅನಿರ್ವಚನೀಯ ಅನುಭವ. ಮಳೆಗಾಲದಲ್ಲಂತೂ ಇದರ ಅಕ್ಕಪಕ್ಕದಲ್ಲಿ ಸೃಷ್ಟಿಯಾಗುವ ಅನೇಕ ತೊರೆಗಳು ಈ ಜಲಪಾತದ ಸೊಬಗನ್ನು ಮತ್ತಷ್ಟು ಇಮ್ಮಡಿಗೊಳಿಸಿಬಿಡುತ್ತವೆ. ಶೃಂಗೇರಿಯಿಂದ ಕೇವಲ 15 ಕಿ.ಮೀ. ದೂರದ ಕಿಗ್ಗಾದಲ್ಲಿದೆ ಸಿರಿಮನೆ ಜಲಪಾತ. ಪುಟ್ಟ ಜಲಪಾತವಾದರೂ ಇದರ ವೈಯಾರಕ್ಕೆ ಮನಸೋಲದವರಿಲ್ಲ. ಜೊತೆಗೆ ಸಾಹಸಿಗರಿಗೆ ತನ್ನನ್ನು ಮೇಲ್ಮುಖವಾಗಿ ಹತ್ತಲು ಅಹ್ವಾನವನ್ನೂ ನೀಡುತ್ತದೆ. ಸಿರಿಮನೆ ಎಂಬುದು ಒಂದು ಮನೆತನದ ಹೆಸರು. ಜಲಪಾತದ ಸಮೀಪವೇ ಸಿರಿಮನೆ ಮನೆತನಕ್ಕೆ ಸಂಬಂಧಿಸಿದ ಕೆಲವು ಮನೆಗಳಿವೆ. ಹಾಗಾಗಿ, ಈ ಜಲಪಾತಕ್ಕೆ 'ಸಿರಿಮನೆ' ಅಂತಲೇ ಹೆಸರು. ಅರಣ್ಯ ಇಲಾಖೆ ಗ್ರಾಮ ಅರಣ್ಯ ಸಮಿತಿ ಮೂಲಕ ಜಲಪಾತ ನಿರ್ವಹಣೆ ಮಾಡುತ್ತಿದೆ. ಎಲ್ಲ ದಿನಗಳಲ್ಲಿ ಇಲ್ಲಿಗೆ ಭೇಟಿ ನಿಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಜಲಪಾತದ ಬುಡದವರೆಗೂ ಮೆಟ್ಟಿಲು ನಿರ್ಮಾಣ ಮತ್ತು ಪ್ರವಾಸಿಗರಿಗೆ ಇತರ ಅಗತ್ಯ ಸೌಲಭ್ಯ ಕಲ್ಪಿಸಿಕೊಟ್ಟಿರುವುದು ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಲು ಕಾರಣಗಳಲ್ಲೊಂದು. ಚಾರಣಪ್ರಿಯರ ಸ್ವರ್ಗ ಈ ಸಿರಿಮನೆ ಜಲಪಾತ ಮತ್ತು ಇಲ್ಲಿನ ಪರಿಸರ. ಇಲ್ಲಿಗೆ ಬಂದರೆ ಮಗೆಬೈಲು ಜಲಪಾತ, ಕಿಗ್ಗಾದ ಪ್ರಸಿದ್ಧ ಮತ್ತು ಕಾರಣಿಕದ ಋಷ್ಯಶೃಂಗೇಶ್ವರ ದೇವಾಲಯ ನೋಡಬಹುದು. ಸಿರಿಮನೆ ಜಲಪಾತದಿಂದ ಅನತಿ ದೂರದಲ್ಲಿರುವ ಇನೊಂದು ಅಜ್ಞಾತ ಜಲಪಾತವೇ ಮಗೆಬೈಲು. ಎಚ್ಚರ ವಹಿಸಿ ಸಿರಿಮನೆ ಪುಟ್ಟ ಜಲಪಾತ. ಇಲ್ಲಿ ಎಷ್ಟು ಉಲ್ಲಾಸವಿದೆಯೋ ಅಷ್ಟೇ ಅಪಾಯವೂ ಇದೆ. ಪಾಚಿ ಕಟ್ಟಿರುವ ಕಲ್ಲುಗಳ ಮೇಲೆ ಕಾಲಿಟ್ಟರೆ ಬಿದ್ದು ಮೈ ಮೂಳೆ ಮುರಿಯುವುದು ಖಚಿತ. ಜೊತೆಗೆ ಪ್ರವಾಸಿಗರು ಪ್ಲಾಸ್ಟಿಕ್ ತ್ಯಾಜ್ಯಗಳಿಂದ ನಿರ್ಮಲ ನೀರನ್ನು ಮಲಿನಗೊಳಿಸುತ್ತಿದ್ದಾರೆ. ಒಡೆದ ಗಾಜಿನ ಬಾಟಲಿಗಳ ಚೂರುಗಳು ಚಿಣ್ಣರ ಚಿನ್ನಾಟಕ್ಕೆ ಸಂಚಕಾರ ನೀಡುತ್ತಿವೆ. ಕಸ ಹಾಕಬೇಡಿ ಎಂಬ ನಾಮಫಲಗಳಿಗೆ ಪ್ರವಾಸಿಗರು ಬೆಲೆಕೊಡದೆ ಹೋಗುತ್ತಿದ್ದಾರೆ. ಪ್ರವಾಸ ಕೈಗೊಳ್ಳುವ ಮುನ್ನ ಈ ವಿಷಯಗಳ ಬಗ್ಗೆ ಗಮನಹರಿಸಿ. ಸಿರಿಮನೆಯವರೆಗೂ ಉತ್ತಮ ಡಾಂಬರು ರಸ್ತೆ ಇದೆ. ಆದರೂ, ಕಿಗ್ಗಾದವರೆಗೆ ಮಾತ್ರ ಬಸ್ ಸೌಕರ್ಯವಿದೆ. ಖಾಸಗಿ ವಾಹನ, ಬಾಡಿಗೆ ಆಟೋ ಇದ್ದಲ್ಲಿ ಕಿಗ್ಗಾದಿಂದ 7 ಕಿ.ಮೀ. ದೂರಕ್ಕೆ ಹೋಗಿ ಜಲಪಾತದ ಸೌಂದರ್ಯ ನೋಡಬಹುದು. ಕಿಗ್ಗಾ ನಂತರ ಕಾಲ್ನಡಿಗೆಯಲ್ಲಿ ಸಾಗುವುದು ಮಜಾ. ಉತ್ತಮ ಕಾಲ್ದಾರಿ, ಹಸಿರು ಪರಿಸರ ಇರುವುದರಿಂದ ಜಲಪಾತ ತಲುಪುವುದೇ ತಿಳಿಯುವುದಿಲ್ಲ. ಆಯಾಸ ಕರಗಿಸಿ ಬಿಡುವ ಶಕ್ತಿ ಸಿರಿಮನೆ ಫಾಲ್ಸ್ ಪರಿಸರಕ್ಕಿದೆ. -ಚಿತ್ರ-ಲೇಖನ: ಸ್ವರೂಪಾನಂದ ಎಂ. ಕೊಟ್ಟೂರು