ಬೊಂಬಾಟ್ ಬೈಕ್ ನ್ಯಾನೋ ಬಂದುಬಿಟ್ಟರೆ ಬೈಕುಗಳ ಮಾರುಕಟ್ಟೆ ಕುಸಿಯುತ್ತದೆ. ಬೈಕು ಕೊಳ್ಳೋರೆಲ್ಲ ನ್ಯಾನೋ ಕೊಳ್ಳುತ್ತಾರೆ ಎಂಬ ಭಾವನೆ ಇತ್ತು. ಆದರೆ ನ್ಯಾನೋ ಮಾರುಕಟ್ಟೆಗೆ ಬಂದ ನಂತರ ದುಬಾರಿ ಬೈಕುಗಳ (ನ್ಯಾನೋಗಿಂತ ಹೆಚ್ಚಿನ ದರದ) ಬಗ್ಗೆ ಗ್ರಾಹಕರ ಒಲವು ಹೆಚ್ಚಿದೆ. ಇದಕ್ಕೆ ತಕ್ಕಂತೆ 1-3 ಲಕ್ಷ ದರದಲ್ಲಿ ಶಕ್ತಿಶಾಲಿ ಬೈಕ್‌ಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ. ಹ್ಯೂಸಂಗ್, ಹ್ಯಾರ್ಲಿ ಡೆವಿಡಸನ್ ಮುಂತಾದ ದುಬಾರಿ (ಆರಂಭಿಕ ಮಾದರಿಯ ಬೆಲೆ 5 ಲಕ್ಷ) ಬೈಕುಗಳು ಕೂಡ ಭಾರತೀಯ ಮಾರುಕಟ್ಟೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇನ್ನೂ ಸ್ವಲ್ಪ ಕಡಿಮೆ ದರದ ಬೈಕುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಉತ್ಸುಕವಾಗಿವೆ. ಕೆಟಿಎಂ ಡ್ಯೂಕ್ ಬೈಕುಗಳು ಈಗಾಗಲೇ ಈ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯಲು ಕೊಂಚಮಟ್ಟಿಗೆ ಯಶಸ್ವಿಯಾಗಿದೆ. 2014ರಲ್ಲಿ 200-400 ಸಿಸಿ ಶಕ್ತಿಶಾಲಿಯಾದ ಆದರೆ ಅತ್ಯಂತ ದುಬಾರಿಯೂ ಅಲ್ಲದ ಬೈಕುಗಳು ಮಾರುಕಟ್ಟೆ ಪ್ರವೇಶಿಸಲಿವೆ. ದುಬಾರಿ ಮತ್ತು ಶಕ್ತಿಶಾಲಿ ಬೈಕುಗಳ ಮಾರುಕಟ್ಟೆಯಲ್ಲಿ ಹ್ಯಾರ್ಲಿ ಡೆವಿಡ್‌ಸನ್‌ಗೆ ಡಿಎಸ್‌ಕೆ ಹ್ಯೂಸಂಗ್ ಪಾಪೋಟಿ ನೀಡುತ್ತಿದೆ. ಆದರೆ ಕೇವಲ ದುಬಾರಿ ಅಥವಾ ಖಯಾಲಿ ಇರುವವರು ಮಾತ್ರ ಖರೀದಿಸುವಂತಹ ಬೈಕುಗಳ ಹೊರತಾಗಿ ಬೈಕುಗಳ ಬಗ್ಗೆ ಆಸಕ್ತಿ ಇರುವ ಮಧ್ಯಮ ವರ್ಗದ ಗ್ರಾಹಕರ ಮೇಲೂ ದೃಷ್ಟಿ ಹರಿಸಲು ಡಿಎಸ್‌ಕೆ ಹ್ಯೂಸಂಗ್ ನಿರ್ದರಿಸಿದೆ. 2014ರಲ್ಲಿ ಅಂತಹ 2 ಮಾದರಿಯ ಬೈಕುಗಳನ್ನು ಭಾರತದ ಮಾರುಕಟ್ಟೆಗೆ ಬಿಡಲು ಕಂಪನಿ ನಿರ್ಧರಿಸಿದೆ. ಜಿವಿ250 ಬೈಕು ಮೊದಲು ಬರಲಿದ್ದು, ನಂತರ ಜಿಡಿ 250ಎನ್ ಬರಲಿದೆ. 2003ರಲ್ಲಿ ಡಿಎಸ್‌ಕೆ ಹ್ಯೂಸಂಗ್ ಕಂಪನಿ ಅಕ್ವಿಲಾ 250 ಬೈಕನ್ನು ಮಾರುಕಟ್ಟೆಗೆ ಬಿಟ್ಟಿತ್ತು. ಆದರೆ ಆಗಿನ ಸ್ಥಿತಿಯಲ್ಲಿ ಅದು ಅತ್ಯಂತ ದುಬಾರಿ ಎನಿಸಿಕೊಂಡಿತ್ತು. ಆದರೆ ಈಗ ಶಕ್ತಿಶಾಲಿ ಬೈಕ್‌ಗಳಲ್ಲಿ ಆರಂಭಿಕ ಮಾದರಿ ಬೈಕುಗಳಿಗೆ ಉತ್ತಮ ಬೇಡಿಕೆ ಇದೆ. ಇದನ್ನು ಮನಗಂಡು ಜಿವಿ 250 ಬೈಕನ್ನು ಮಾರುಕಟ್ಟೆಗೆ ಬಿಡಲು ಕಂಪನಿ ನಿರ್ಧರಿಸಿದೆ. ಜಿವಿ250 ಅಮೆರಿಕನ್ ಕ್ರೂಸರ್ ಮಾದರಿಯಲ್ಲಿದ್ದು, ವಿ ಟ್ವಿನ್ ಮೋಟರ್ ಮತ್ತು ದೊಡ್ಡ ಪೆಟ್ರೋಲ್ ಟ್ಯಾಂಕ್ ಹೊಂದಿದೆ. ಗಾಳಿ ಮತ್ತು ಆಯಿಲ್ ಕೂಲ್ಡ್ ಹೊಂದಿರುವ 8 ವಾಲ್ವ್ ಮೋಟರ್ 25.4 ಪಿಎಸ್ ಶಕ್ತಿ ಉತ್ಪಾದಿಸತ್ತದೆ. 5 ಗೇರ್‌ಗಳು ಇರಲಿವೆ. ಕಂಪನಿ 2 ಲಕ್ಷದ ಆಸುಪಾಸಿನಲ್ಲಿ ದರ ನಿಗದಿಪಡಿಸಿದರೆ ರಾಯಲ್ ಎನ್‌ಫೀಲ್ಡ್‌ಗೆ ಉತ್ತಮ ಪೈಪೋಟಿ ನೀಡಬಹುದು. ಜಿಡಿ 250ಎನ್ ಬೈಕ್ ನೋಡಲು ಕೆಟಿಎಂ ಡ್ಯೂಕ್ ಮಾದರಿಯಲ್ಲಿದೆ. ಭಾರತೀಯ ಗ್ರಾಹಕರು ಇಂತಹ ಮಾದರಿಯನ್ನೇ ಹೆಚ್ಚು ಇಷ್ಟಪಡುವುದು. ಇದರ ಬೆಲೆ 1.6 ಲಕ್ಷ ಆಸುಪಾಸಿನಲ್ಲಿರಲಿದೆ. ಇದು ಸಿಂಗಲ್ ಸಿಲೆಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 29 ಪಿಎಸ್ ಶಕ್ತಿ ಉತ್ಪಾದಿಸಬಲ್ಲದು. 6 ಗೇರ್‌ಗಳನ್ನು ಹೊಂದಿದ್ದು, ಹಿಂಬದಿಗೆ ಮೊನೊ (ಏಕೈಕ) ಶಾಕ್‌ಆಬ್ಸರ್ಬರ್ ಹೊಂದಿದೆ. ಮುಂದೆ ಮತ್ತು ಹಿಂದೆ ಪೆಟಲ್ ಮಾದರಿ ಡಿಸ್ಕ್ ಬ್ರೇಕ್‌ಗಳನ್ನು ಒದಗಿಸಲಾಗಿದೆ. ಇದರ ಜತೆಗೆ ಬಜಾಜ್ 200ಎಸ್‌ಎಸ್ 1.1.6 ಲಕ್ಷ ದರದಲ್ಲಿ ಮಾರುಕಟ್ಟೆಗೆ ಬರಲಿದೆ. ಇದು ಪಲ್ಸರ್ 200ಎನ್‌ಎಸ್ ಮಾದರಿಯಂತೆಯೇ ಇರಲಿದ್ದು, ಕೆಟಿಎಂ ಡ್ಯೂಕ್‌ನ ಎಲ್‌ಇಡಿ ಇಂಡಿಕೇಟರ್‌ಗಳು, ಎಲೆಕ್ಟ್ರಾನಿಕ್ ಫ್ಯುಯೆಲ್ ಇಂಜೆಕ್ಟರ್, ಎಬಿಎಸ್, ಟ್ವಿನ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್ ಇರಲಿದೆ. ಇದರ ಜತೆಗೆ ಪಲ್ಸರ್ 375 ಕೂಡ ಇದೇ ವರ್ಷ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ. ಯಮಹಾ 250, ಹೀರೋ ಕರೀಝ್ಮಾ ಆರ್, ಕರೀಝ್ಮಾ ಝೆಡ್‌ಎಂಆರ್, ಕೆಟಿಎಂ ಆರ್‌ಸಿ 390, ಕೆಟಿಎಂ ಆರ್‌ಸಿ 200, ಹೋಂಡಾ ಸಿಬಿಆರ್ 300ಆರ್, ಹೀರೋ ಇಂಪಲ್ಸ್ 225, ಸುಝುಕಿ ಇನಾಝುಮಾ ಜಿಡಬ್ಲ್ಯು 250 (ಇನ್ನಷ್ಟೇ ಬಿಡುಗಡೆಯಾಗಬೇಕಿರುವ ಜೈಹಿಂದ್ ಸಿನಿಮಾದಲ್ಲಿ ಸಲ್ಮಾನ್‌ಖಾನ್ ಇದನ್ನು ಚಲಾಯಿಸಿದ್ದಾರೆ) ಕೂಡ 2014ರಲ್ಲಿ ಮಾರುಕಟ್ಟೆಗೆ ಬರಲಿವೆ. -ವಿನು