ಸಹಸ್ರವಲ್ಲ, ಪಂಚಲಿಂಗ ಸಿದ್ಧನಗುಡ್ಡ, ಉಳವಿ, ಗೋಕರ್ಣ, ಮುರುಡೇಶ್ವರ, ಯಾಣ, ಬನವಾಸಿ, ಸಹಸ್ರಲಿಂಗ... ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಶಿವನ ಕ್ಷೇತ್ರಗಳ ಪಟ್ಟಿ ಹೀಗೆಯೇ ಸಾಗುತ್ತದೆ. ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿಯೂ ಶಿವನ ಕ್ಷೇತ್ರಗಳಿವೆ. ಕೆಲವು ನಾಡಿನಾದ್ಯಂತ ಖ್ಯಾತವಾಗಿದ್ದರೆ, ಹಲವು ಅಜ್ಞಾತವಾಗಿವೆ. ಶಿರಸಿ ತಾಲೂಕಿನ ಸಹಸ್ರಲಿಂಗದ ಸನಿಹದಲ್ಲಿರುವ 'ಪಂಚಲಿಂಗ'ವೂ ಇಂಥ ಅಪರಿಚಿತ ತಾಣಗಳಲ್ಲಿ ಒಂದು. ಸಹಸ್ರಲಿಂಗಕ್ಕೆ ಸರಿಸಾಟಿ ಅಲ್ಲದಿದ್ದರೂ ಆ ಕ್ಷೇತ್ರದಂತೆ ಹೋಲುವ, ಶಾಲ್ಮಲಾ ತೀರದಲ್ಲೇ ಇರುವ ಪುಣ್ಯಸ್ಥಳವಿದು. ಪುರಾಣ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾಗಿರುವ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದಿಂದ ಅತಿ ಸಮೀಪದಲ್ಲಿಯೇ ಪಂಚಲಿಂಗವಿದೆ. ಅದು ಸಹಸ್ರಲಿಂಗ ಕ್ಷೇತ್ರದ ಉತ್ತರ ದಿಕ್ಕಿಗಿದೆ. ಪಂಚಲಿಂಗದಲ್ಲಿ ಎರಡು ದಡಗಳಿವೆ. ವಿಶಾಲವಾಗಿ ಹರಡಿಕೊಂಡಿರುವ ಭೀಮಗಾತ್ರದ ಬಂಡೆಗಲ್ಲುಗಳಿವೆ. ಇವುಗಳ ಮೇಲೆ ಸಹಸ್ರಲಿಂಗ ಕ್ಷೇತ್ರದಲ್ಲಿರುವಂತೆ ಶಿವಲಿಂಗಗಳನ್ನು ಕೆತ್ತಲಾಗಿದೆ. ಜತೆಗೆ ವಿಷ್ಣುವಿನ ಪಾದ, ಸುದರ್ಶನ ಚಕ್ರ, ಗಣಪತಿ, ಬುದ್ಧ ಇತ್ಯಾದಿಗಳನ್ನು ಸೂಕ್ಷ್ಮವಾಗಿ ಕೆತ್ತಲಾಗಿದೆ. ಕೆಲ ಬಂಡೆಗಳ ಮೇಲೆ ಶಿಲಾಲಿಪಿಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಆ ಲಿಪಿ ಯಾವುದು? ಅದರಲ್ಲಿ ಏನು ಬರೆಯಲಾಗಿದೆ ಎಂಬುದನ್ನು ಲಿಪಿ ಶಾಸ್ತ್ರಜ್ಞರೇ ದೃಢಪಡಿಸಬೇಕಷ್ಟೆ. ಹೀಗೆ ನೋಡಿದರೆ ಪಂಚಲಿಂಗ ಇತಿಹಾಸಕಾರರಿಂದಲೂ ಅವಗಣನೆಗೆ ಒಳಗಾಗಿರುವ ಕ್ಷೇತ್ರ ಎನ್ನಬಹುದು. ಈ ಹಿಂದೆ ಪಾಂಡವರು ಈ ಪ್ರದೇಶದಲ್ಲಿ ಸಂಚಾರ ಕೈಗೊಂಡಿದ್ದರು. ಶಿವನ ಪೂಜೆ ಮಾಡುವ ಸಲುವಾಗಿ ಲಿಂಗಗಳನ್ನು ಕೆತ್ತಿದರು ಎಂಬ ದಂತಕತೆಗಳನ್ನು ಸ್ಥಳೀಯರು ಹೇಳುತ್ತಾರೆ. ನಿಸರ್ಗ ರಮಣೀಯ ಪಂಚಲಿಂಗ ಕ್ಷೇತ್ರದಲ್ಲಿ ಪ್ರತಿ ವರುಷವೂ ಶಿವರಾತ್ರಿಯ ದಿನದಂದು ಮಾತ್ರವೇ ಜನಜಂಗುಳಿ ನೆರೆದಿರುತ್ತದೆ. ಅಕ್ಕಪಕ್ಕದ ಊರು, ತಾಲ್ಲೂಕುಗಳ ಸಾವಿರಾರು ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಪೂಜೆ ಅರ್ಪಿಸುತ್ತಾರೆ. ಅಲ್ಲದೇ ಸೋಂದಾ ಸ್ವರ್ಣವಲ್ಲಿಯ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರೂ ಶಿವರಾತ್ರಿಯಂದು ಪಂಚಲಿಂಗದ ಶಿವನ ಸಾನ್ನಿಧ್ಯದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಖಾಸಗಿ ವಾಹನ ಉತ್ತಮ ನೆನಪಿರಲಿ. ಪಂಚಲಿಂಗದಲ್ಲಿ ತಿಂಡಿ-ತಿನಿಸುಗಳಾಗಲಿ, ಶಿವನಿಗೆ ಅರ್ಪಿಸಲು ಹಣ್ಣು-ಕಾಯಿಗಳಾಗಲಿ ಸಿಗಲಾರದು. ಇಲ್ಲಿಗೆ ಬರುವಾಗ ಅವಶ್ಯಕ ವಸ್ತುಗಳನ್ನು ತಂದುಕೊಳ್ಳುವುದು ಉತ್ತಮ. ಈ ಕ್ಷೇತ್ರಕ್ಕೆ ಶಿರಸಿ ಅಥವಾ ಯಲ್ಲಾಪುರದಿಂದ ಹೋಗಬಹುದು. ತಾರೆಹಳ್ಳಿ ಕತ್ರಿಯಲ್ಲಿ ಇಳಿದು ಕೆಲವು ಮಾರು ಸಾಗಿದರೆ ಪಂಚಲಿಂಗ (ಕೆಳಗಿನ ಹಾಸ್ಪುರ) ಎಂಬ ಫಲಕವಿದೆ. ಆ ಮಾರ್ಗದಲ್ಲಿ ಸುಮಾರು ಒಂದೂವರೆ ಕಿ.ಮೀ ಪಾದಯಾತ್ರೆ (ಬೈಕು, ಕಾರು, ಜೀಪುಗಳು ಹೋಗುತ್ತವೆ) ಮಾಡಿದಾಗ ಸಿಗುವುದೇ ಶಾಲ್ಮಲಾ ನದಿ. ಅಲ್ಲೇ ಸಮೀಪದಲ್ಲಿ ಕಾಣವುದೇ ಪಂಚಲಿಂಗ. ಅಲ್ಲಲ್ಲಿ ಆಳವಾದ ಗುಂಡಿಗಳಿವೆ. ಬಂಡೆಗಲ್ಲುಗಳು ಹಾಸುಹೊಕ್ಕಾಗಿ ಮೈ ಚಾಚಿಕೊಂಡಿವೆ. ಹೀಗಾಗಿ ಎಚ್ಚರಿಕೆ ಅಗತ್ಯ. -ಚಿತ್ರ-ಲೇಖನ: ಗಣಪತಿ ಹಾಸ್ಪುರ