ಅಜ್ಜಿ ಗುಂಡಿ ಸುತ್ತಮುತ್ತಲೂ ಬೆಟ್ಟ, ಗುಡ್ಡ, ಕಾಡುಗಳು. ಹಸಿರು ಮೆರೆಯುವ ತೋಟಗಳು. ಇದರ ನಡುವೆ ಹರಿಯುವ ಬೆಣ್ಣೆಜಡ್ಡಿ ಹಳ್ಳ. ಕಾಳಿ ನದಿಯನ್ನು ಓಡೋಡಿ ಮುಟ್ಟುವ ತವಕದಲ್ಲಿ ಗುಡ್ಡಬೆಟ್ಟಗಳಿಂದ ಕೆಳಗೆ ಧುಮುಕುತ್ತಾಳೆ ಆಕೆ. ಇಂತಹ ಸಂದರ್ಭದಲ್ಲಿಯೇ ಜಲಪಾತವೂ ಸೃಷ್ಟಿಯಾಗಿದೆ. ಈ ಜಲಪಾತ ಅಷ್ಟೇನೂ ದೊಡ್ಡದಲ್ಲ. 40-50 ಅಡಿ ಎತ್ತರದಿಂದ ಜಲಲ ಜಲಲ ಜಲಧಾರೆಯಾಗಿ ಕುಣಿಯುತ್ತ ಇಳಿಯುತ್ತಾಳೆ. ಜಲಪಾತಕ್ಕೆ ಎರಡು ಹಂತಗಳಿವೆ. ಮೇಲಿನ ಹಂತ ಆರು ಅಡಿ ಎತ್ತರದ್ದಾಗಿದ್ದರೆ ಕೆಳಗಿನದ್ದು ದೊಡ್ಡದು. ಮೊದಲನೇ ಹಂತದ ಬುಡಕ್ಕೆ ಹೋಗಿ ಬೀಳುವ ನೀರಿಗೆ ತಲೆಕೊಟ್ಟು ಕುಳಿತರೆ ಜಲಪಾತಕ್ಕೆ ಬಂದಿದ್ದೂ ಸಾರ್ಥಕ ಎನ್ನಿಸುತ್ತದೆ. ಗುಡ್ಡಗಳನ್ನು ಇಳಿದು ಶ್ರಮಪಟ್ಟು ಬರುವ ಸುಸ್ತೆಲ್ಲ ಒಂದೇಟಿಗೆ ಮಾಯವಾಗುತ್ತದೆ. ಕೆಳಗಿನ ದೊಡ್ಡ ಹಂತ ಹಸಿರು ಹಾವಸೆಗಳಿಂದ ಕೂಡಿಕೊಂಡಿದ್ದು ಬಲು ಸುಂದರವಾಗಿ ಕಾಣುತ್ತದೆ. ವರ್ಷದ 365 ದಿನವೂ ಈ ಜಲಪಾತವನ್ನು ನೋಡಲು ಸಾಧ್ಯ. ಜಲಪಾತದ ಬುಡಕ್ಕೆ ಇಳಿಯುವುದೂ ಸುಲಭ. ಬೇಸಿಗೆಯಲ್ಲಿ ನೀರು ಕಡಿಮೆಯಾಗುತ್ತದೆ. ಆದರೆ ಜಲಪಾತದ ಆಕರ್ಷಣೆ ಹೆಚ್ಚುತ್ತದೆ. ಥಟ್ಟನೆ ನೋಡಿದರೆ ಕೊಡಗಿನ ಅಬ್ಬಿ ಜಲಪಾತವನ್ನು ನೆನಪಿಸುವ ಅಜ್ಜಿಗುಂಡಿ ಜಲಪಾತ ಸೌಂದರ್ಯದಲ್ಲಿ ಶಿಖರಪ್ರಾಯ. ಜಲಪಾತದ ಮೇಲ್ಭಾಗದಲ್ಲಿ ತಾರಗಾರು ಊರಿಗೆ ನೀರಾವರಿ ವ್ಯವಸ್ಥೆಗಾಗಿ ಒಡ್ಡು ನಿರ್ಮಿಸಲಾಗಿದೆ. ಅದರಿಂದ ಬೇಸಿಗೆಯಲ್ಲಿ ಪ್ರವಾಸಿಗರು ಆಗಮಿಸಿದಾಗ, ಸಾಮಾನ್ಯವಾಗಿ ವಾರಾಂತ್ಯದಲ್ಲಿ ಜಲಪಾತಕ್ಕಾಗಿ ನೀರನ್ನು ಬಿಡಲಾಗುತ್ತದೆ. ಮಳೆಗಾಲದಲ್ಲಿ ದುದ್ರರಮಣೀಯವಾಗಿ ಕಾಣುವ ಈ ಅಜ್ಜಿಗುಂಡಿ ಜಲಪಾತ ಚಳಿಗಾಲ ಹಾಗೂ ಬೇಸಿಗೆಯಲ್ಲಿ ಕಿಲಕಿಲ ಕಲರವವನ್ನು ಮಾಡುತ್ತದೆ. ವಾರಾಂತ್ಯದಲ್ಲಿ ಆಗಮಿಸಿ ದಿನವಹಿ ಉಳಿದು ಸವಿಯನ್ನು ಸವಿಯಲು ಇದೊಂದು ಉತ್ತಮ ಪಿಕ್‌ನಿಕ್ ತಾಣ. ಜಲಪಾತದ ತಲೆಯ ಭಾಗದಲ್ಲಿಯೇ ಮನೆಯೊಂದಿದ್ದು ಜಲಪಾತದ ಸೌಂದರ್ಯಕ್ಕೆ ಕಿರೀಟದಂತೆ ಕಾಣಿಸುತ್ತದೆ. ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳನ್ನು ಈ ಪ್ರದೇಶದಲ್ಲಿ ಎಸೆಯುವುದು ನಿಷೇಧ. ಪ್ಲಾಸ್ಟಿಕ್ ಎಸೆದಿದ್ದು ಕಣ್ಣಿಗೆ ಬಿದ್ದರೆ ಸ್ಥಳೀಯರು ದಂಡವನ್ನು ಹಾಕುತ್ತಾರೆ. ಈ ಜಲಪಾತಕ್ಕಾಗಿ ಆಗಮಿಸಿದವರು ಸುತ್ತಮುತ್ತಲ ಸೌಂದರ್ಯವನ್ನು ಆಸ್ವಾದಿಸಬಹುದು. ಜೊತೆಗೆ ಸನಿಹದಲ್ಲೇ ಇರುವ ಬಾವಲಿಗುಹೆ, ಸಾತೊಡ್ಡಿ ಜಲಪಾತ ಸೇರಿದಂತೆ ಅನೇಕ ಪ್ರವಾಸಿ ತಾಣಗಳನ್ನು ನೋಡಬಹುದಾಗಿದೆ. - ವಿನಯ್ ದಂಟಕಲ್