ಆಡಿ ಹೇಗೆಲ್ಲ ಓಡುತ್ತೆ ನೋಡಿ! ಆಡಿ ಕಾರೆಂದರೆ ಐಶಾರಾಮಿ ಕಾರು. ಆಡಿ ಅಂದರೆ ವೇಗ. ಆಡಿ ಅಂದರೆ ತಂತ್ರಜ್ಞಾನ. ಆಡಿ ಎಂದರೆ ಸ್ಟೈಲ್. ಆಡಿ ಎಂದರೆ ಜರ್ಮನ್ ಎಂಜಿನಿಯರಿಂಗ್. ಆಡಿ ಕಾರೆಂದರೆ ಹೆದ್ದಾರಿಗೆ ಅಥವಾ ಉತ್ತಮ ರಸ್ತೆಗೆ ಮಾತ್ರ. ಹಾಗಂತ ನೀವು ಅಂದುಕೊಂಡಿರಬಹುದು. ನೀವೇಕೆ ನಾನೇ ಮೊನ್ನೆವರೆಗೂ ಹಾಗೇ ಅಂದುಕೊಂಡಿದ್ದೆ. ಆದರೆ ಕಠಿಣ ಪರಿಸ್ಥಿತಿಯಲ್ಲಿ ಖುದ್ದಾಗಿ ಆಡಿ ಕಾರುಗಳನ್ನು ಪರೀಕ್ಷೆಗೊಡ್ಡಿದ ನಂತರ ನನ್ನ ಅಭಿಪ್ರಾಯ ಬದಲಾಯಿತು. ಬಹುಶಃ ನಿಮ್ಮ ಅಭಿಪ್ರಾಯವೂ ಬದಲಾಗಬಹುದು. ಕೆಟ್ಟ ರಸ್ತೆ, ಆಫ್‌ರೋಡಿಂಗ್, ಭಾರೀ ಸಾಹಸದ ಕಾರು ಚಾಲನೆಗೆ ಎಸ್‌ಯುವಿಗಳೇ ಬೇಕು. ಸಾಮಾನ್ಯ ಕಾರುಗಳು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಅಟಕಾಯಿಸಿಕೊಂಡುಬಿಡುತ್ತವೆ. ಇದು ನಂಬಿಕೆಯಲ್ಲ ಅನುಭವ. ಆಡಿ, ಬಿಎಂಡಬ್ಲ್ಯು, ಬೆಂಝ್ ಕಾರುಗಳು ವೇಗ, ತಂತ್ರಜ್ಞಾನ ಮತ್ತು ಐಶಾರಾಮಿಗೆ ಹೆಸರುವಾಸಿ. ಆದರೆ ಆಡಿ ಕಾರು ಎಂಥ ಕ್ಲಿಷ್ಟಕರ ಪರಿಸ್ಥಿತಿಯನ್ನೂ ದಾಟಿ ನಿಮ್ಮನ್ನು ಗುರಿಮುಟ್ಟಿಸಬಲ್ಲವು ಎಂಬುದನ್ನು ಸಾಬೀತು ಮಾಡಲು ಆಡಿ ಕಂಪನಿಯವರೇ ಚಾಲನಾ ಪರೀಕ್ಷೆಗೆ ಕರೆದಿದ್ದರು. ಆಡಿ ಕ್ಯೂ 3 ಹಾಗೂ ಆಡಿ ಕ್ಯೂ 5 ಕಾರುಗಳನ್ನು ಎಲೆಕ್ಟ್ರಾನಿಕ್ ಸಿಟಿ ಸಮೀಪ ಪರೀಕ್ಷೆಗೆಂದೇ ಸಿದ್ಧಪಡಿಸಲಾದ ಟ್ರ್ಯಾಕ್‌ನಲ್ಲಿ ಚಲಾಯಿಸಿ, ಪರೀಕ್ಷಿಸುವ ಅವಕಾಶ 'ಕನ್ನಡಪ್ರಭ'ಕ್ಕೆ ಲಭ್ಯವಾಗಿತ್ತು. ನಾಲ್ಕು ಚಕ್ರಗಳ ಸಹಾಯದಿಂದ ಕಾರು ಓಡುತ್ತೆ. ಸಾಮಾನ್ಯ ಕಾರುಗಳಲ್ಲಿ ಶಕ್ತಿ ಇರುವುದು (ಮುಂದಿನ ಅಥವಾ ಹಿಂದಿನ) ಎರಡು ಚಕ್ರಗಳಿಗೆ ಮಾತ್ರ. ಕೆಲವು ಕಾರುಗಳಿಗೆ ಮಾತ್ರ ಫೋರ್‌ವ್ಹೀಲ್ ಡ್ರೈವ್ (ನಾಲ್ಕೂ ಚಕ್ರಗಳಿಗೆ ಎಂಜಿನ್ ಶಕ್ತಿ ಪೂರೈಕೆಯಾಗುವ ವ್ಯವಸ್ಥೆ) ವಾಹನಗಳಲ್ಲಿ ಮಾತ್ರ ಇದು ಲಭ್ಯ. ಅಗತ್ಯವಿದ್ದಾಗ ಮಾತ್ರ ಫೋರ್‌ವ್ಹೀಲ್ ಡ್ರೈವ್ ಮಾಡಿಕೊಳ್ಳುವ ವಾಹನಗಳೂ ಇವೆ. ಆಡಿ ಫೋರ್‌ವ್ಹೀಲ್ ಡ್ರೈವ್ ತಂತ್ರಜ್ಞಾನವನ್ನು ಕ್ವಾಟ್ರೊ ಎಂದು ಕರೆಯುತ್ತದೆ. ಆದರೆ ಸಾಮಾನ್ಯ ಫೋರ್‌ವ್ಹೀಲ್ ಡ್ರೈವ್ ತಂತ್ರಜ್ಞಾನಕ್ಕೂ ಆಡಿ ಕಾರುಗಳ ಕ್ವಾಟ್ರೊ ತಂತ್ರಜ್ಞಾನಕ್ಕೂ ವ್ಯತ್ಯಾಸವಿದೆ. ಕ್ವಾಟ್ರೊ ತಂತ್ರಜ್ಞಾನದ ವೈಶಿಷ್ಟ್ಯವೆಂದರೆ ಯಾವ ಚಕ್ರ ನೆಲದೊಂದಿಗೆ ಸಂಪರ್ಕ ಹೊಂದಿಲ್ಲವೊ ಅಥವಾ ನೆಲದೊಂದಿಗೆ ಸಂಪರ್ಕ ಹೊಂದಿಯೂ ವಾಹನವನ್ನು ಮುಂದೆ ದೂಡುವ ಸಾಮರ್ಥ್ಯ ಹೊಂದಿರದ ಅಥವಾ ಅನಗತ್ಯವಾಗಿ ತಿರುಗುವ ಚಕ್ರವನ್ನು ಗುರುತಿಸಿ, ಅದಕ್ಕೆ ಶಕ್ತಿ ವರ್ಗಾಯಿಸದಂತೆ ಅಂದರೆ ಅದು ತಿರುಗದಂತೆ ಮಾಡುವ ಬುದ್ಧಿವಂತಿಕೆ ಕ್ವಾಟ್ರೊ ತಂತ್ರಜ್ಞಾನಕ್ಕಿದೆ. ಈ ಚಕ್ರದ ಶಕ್ತಿಯನ್ನು ಅಗತ್ಯವಿರುವ ಅಥವಾ ಗ್ರಿಪ್ ಹೊಂದಿರುವ ಚಕ್ರಕ್ಕೆ ವರ್ಗಾಯಿಸುವ ಚಾಕಚಕ್ಯತೆಯೂ ಇದಕ್ಕಿದೆ. ಇದರಿಂದಾಗಿ ಈ ಕಾರಿನ ಚಕ್ರಗಳು ಜರ್‌ಜರ್‌ಜರ್ ಎಂದು ಮಣ್ಣು, ಕಲ್ಲುಗಳನ್ನು ಇದ್ದವರ ಮೇಲೆಲ್ಲ ಸಿಡಿಸುವುದಿಲ್ಲ. ಈ ತಂತ್ರಜ್ಞಾನದಿಂದಾಗಿಯೇ ಮೂರು ಅಥವಾ ಎರಡು ಚಕ್ರಗಳ ಮೇಲೆ ಕಾರು ನಿಲ್ಲುವ ಪ್ರಸಂಗ ಬಂದರೂ ಅದನ್ನು ದಾಟಿ ಹೋಗುವ ತಾಕತ್ತು ಕಾರಿಗೆ ಲಭ್ಯವಾಗಿದೆ. ಇದನ್ನು ಪ್ರತ್ಯಕ್ಷವಾಗಿ ಪರೀಕ್ಷಿಸಿ ನೋಡಿದ ಅನುಭವ ನನದಾಗಿದೆ. ಆರಂಭದಿಂದ ಕೊನೆತನಕ ವಿಘ್ನ ಆಡಿ ಕಾರುಗಳನ್ನು ಕಠಿಣ ಪರೀಕ್ಷೆಗೊಳಪಡಿಸಲೆಂದೇ ಎಲೆಕ್ಟ್ರಾನಿಕ್ ಸಿಟಿ ಸಮೀಪ ನಿರ್ಮಾಣ ಹಂತದ ಕಟ್ಟಡದ ಜಾಗದಲ್ಲಿ ವಿಶೇಷ ಟ್ರ್ಯಾಕ್ ನಿರ್ಮಿಸಲಾಗಿತ್ತು. ಆರಂಭದಲ್ಲೇ ಒಂದೆಡೆ ಮಾತ್ರ ಆಳ ಇರುವ ರಸ್ತೆ. ಅದರಲ್ಲಿ ಇಳಿದು ದಾಟುವಾಗ ಕಾರು ಮೂರು ಚಕ್ರಗಳ ಮೇಲೆ ಮಾತ್ರ ಇರುತ್ತದೆ. ಹಾಗಿದ್ದರೂ ನೀವು ನಿಧಾನವಾಗಿ ಅದನ್ನು ದಾಟಿಕೊಂಡು ಹೋಗಬಹುದು. ಅದರ ನಂತರ ಹೆಚ್ಚುಕಡಿಮೆ ಗೋಡೆಯ ಮೇಲೆ ಕಾರು ಓಡಿಸಿದಂತೆ ಓಡಿಸಬೇಕು. ಸಂಪೂರ್ಣವಾಗಿ ಅಡ್ಡವಾಗುವಂಥ ರಸ್ತೆ. ಅದರ ಮೇಲೆ ಎಲ್ ಗುರುತಿನ ತಿರುವು. ಅದನ್ನೂ ಕಾರು ಯಶಸ್ವಿಯಾಗಿ ದಾಟಿತು. ಅದರ ನಂತರದ ಪಾಳಿ ಕೆಸರಿನದ್ದು. ಮಣ್ಣಿಗೆ ಚೆನ್ನಾಗಿ ನೀರುಣಿಸಲಾಗಿತ್ತು. ಸಾಮಾನ್ಯವಾಗಿ ಅಂಥ ಸ್ಥಳಗಳಲ್ಲಿ ಕಾರು ಓಡಿಸುವುದು ದೊಡ್ಡ ಸವಾಲು. ಯಾಕೆಂದರೆ ಕಾರು ಸಂಪೂರ್ಣ ಸ್ಕಿಡ್ ಆಗುತ್ತದೆ ಅಥವಾ ಹೂತುಬಿಡುತ್ತದೆ. ಆದರೆ ಆಡಿ ಕಾರು ಕೊಂಚ ಮಾತ್ರ ಜಾರುತ್ತ ಹೊರಟಿತ್ತು. ಅಷ್ಟರಲ್ಲಿ ಮುಂದಿದ್ದ ಕಾರಿನವ ನಿಲ್ಲಿಸಿಬಿಡಬೇಕೆ? ಕೆಸರಿನ ನಡುವೆ ಕಾರು ನಿರಂತರವಾಗಿ ಚಲಿಸುತ್ತಿದ್ದರೆ ಹೇಗೋ ನಿಭಾಯಿಸಬಹುದು. ಆದರೆ ಕಾರು ನಿಂತರೆ ಕೇಳಬೇಕೆ? ಆದರೆ ಆಡಿ ಕಾರು ಸ್ವಲ್ಪವೂ ಕಷ್ಟವಿಲ್ಲದೆ, ಕೊಂಚವೂ ಪ್ರಯಾಸಪಡದೇ ಹೊರಟು, ಯಶಸ್ವಿಯಾಗಿ ಕೆಸರಿನ ಪ್ರದೇಶವನ್ನೂ ದಾಟಿತು. ನಂತರ ಒಂದೆಡೆ ಎತ್ತರ, ಇನ್ನೊಂದೆಡೆ ತಗ್ಗು, ನಂತರ ತಗ್ಗಿದ್ದ ಕಡೆ ಎತ್ತರ, ಎತ್ತರ ಇದ್ದಕಡೆ ತಗ್ಗು ಇದೆ. ಹೇಗೇ ಕಾರು ಚಲಾಯಿಸಿದರೂ ಕೇವಲ ಎರಡು ಚಕ್ರಗಳ ಮೇಲೆ ಮಾತ್ರ ಕಾರು ನಿಂತಿರುತ್ತದೆ. ಅಂದರೆ ಎರಡು ಚಕ್ರಗಳು ಮಾತ್ರ ನೆಲದೊಂದಿಗೆ ಸಂಪರ್ಕ ಹೊಂದಿರುತ್ತವೆ. ಈ ಎರಡು ಚಕ್ರಗಳು ಮಾತ್ರ ಕಾರನ್ನು ಮುಂದಕ್ಕೆ ಕಳುಹಿಸಬೇಕು. ಅದನ್ನೂ ಆಡಿ ಕಾರು ಕ್ವಾಟ್ರೊ ತಂತ್ರಜ್ಞಾನದ ಸಹಾಯದಿಂದ ಸರಾಗವಾಗಿ ದಾಟಿತು. ಮುಂದೆ ನೋಡಿದರೆ ದೊಡ್ಡ ಹೊಂಡ. ಅದರ ತುಂಬ ನೀರು! ಹೊಂಡಕ್ಕೆ ಇಳಿಸಿದರೆ ಚಕ್ರ ಮುಳುಗುವಷ್ಟು ನೀರು! ನೀರಿನಲ್ಲೇ ಒಂದು ನಿಮಿಷ ಕಾರು ನಿಲ್ಲಿಸಿದೆ. ಆದರೂ ಕಾರು ಹಾಯಾಗಿ ಸ್ಟಾರ್ಟ್‌ನಲ್ಲೇ ನಿಂತಿತ್ತು. ನಂತರ ನಿಧಾನಕ್ಕೆ ಹೊಂಡಕ್ಕೆ ಮೇಲೇರಲು ಆರಂಭಿಸಿದೆ. ನೀರಿನಿಂದ ಹೊರಬಂದ ಕಾರಿನ ಚಕ್ರಗಳು ಒದ್ದೆಯಾಗಿರುತ್ತವೆ. ಮಣ್ಣು ಮತ್ತು ನೀರು ಮಿಶ್ರಣವಾಗಿ ಸ್ಕಿಡ್ ಆಗುತ್ತದೆ. ಆದರೆ ಕಾರು ಒಂದು ಸ್ವಲ್ಪವೂ ಜಾರದೇ ಹೊಂಡದಿಂದ ಸರಾಗವಾಗಿ ಮೇಲೆದ್ದು ಬಂತು. ಆಶ್ಚರ್ಯ! ಅದರ ನಂತರ ಹೆಚ್ಚುಕಡಿಮೆ 90 ಡಿಗ್ರಿ ಘಟ್ಟ ಅಥವಾ ಮಣ್ಣರಾಶಿ. ಅದನ್ನು ಏರಬೇಕು. ಅದನ್ನು ಸರಾಗವಾಗಿ ಏರುತ್ತಿದ್ದರೆ ಮಧ್ಯದಲ್ಲೇ ನಿಲ್ಲಿಸಿ ಎಂಬ ಆದೇಶ ಬಂತು ಕಾರ್ಯಕ್ರಮ ನಿರ್ವಾಹಕರಿಂದ. ನಿಲ್ಲಿಸಿದೆ. ಹಿಲ್‌ಅಸಿಸ್ಟ್ ಅಥವಾ ಹೋಲ್ಡ್ ಎಂಬ ತಂತ್ರಜ್ಞಾನ ಇರುವುದರಿಂದ ಎಂಥ ಸ್ಥಳದಲ್ಲೇ ನಿಲ್ಲಿಸಿ, ಕಾರು ಒಂದಿಂಚೂ ಹಿಂದೆ ಚಲಿಸುವುದಿಲ್ಲ. ಅಂಥ ಏರು ಪ್ರದೇಶದ ಅರ್ಧದಿಂದ ಹೊರಡಿಸಿದರೆ ಕಾರು ಸ್ವಲ್ಪವೂ ತೊಂದರೆ ತೆಗೆದುಕೊಳ್ಳದೇ ಹಾರಟು ಏರು ದಾಟಿತು. ತಕ್ಷಣ ಅಷ್ಟೇ ಇಳಿಜಾರು. ಏರು ಹತ್ತಿಬಂದ ಕಾರಿಗೆ ಇಳಿಜಾರು ಯಾವ ಲೆಕ್ಕ? ಅದನ್ನೂ ಇಳಿಯಿತು. ಇದೆಲ್ಲವನ್ನೂ ಆಡಿ ಕಾರು ಸರಾಗವಾಗಿ ದಾಟಿತ್ತು. ಆಡಿ ಕಾರು ಕೇವಲ ವೇಗವಾದ ಮತ್ತು ಐಶಾರಾಮಿ ಚಾಲನೆಗೆ ಎಂದು ಭಾವಿಸಿದ್ದ ನನಗೆ ಕ್ಲಿಷ್ಟಕರವಾದ ರಸ್ತೆ ಮತ್ತು ನಿಧಾನವಾದ ಚಾಲನೆಗೂ ಆಡಿ ಕಾರು ಎಷ್ಟು ಸೂಕ್ತವಾಗಿ ಎಂಬ ಅನುಭವವಾಗಿತ್ತು. ಐಶಾರಾಮಿ ಕಾರುಗಳಲ್ಲಿ ಆಡಿ ಕಾರು ಭಾರತಕ್ಕಾಗಿಯೇ ಮಾಡಿದಂತಿದೆ. ಗ್ರೌಂಡ್ ಕ್ಲಿಯರೆನ್ಸ್, ಗಟ್ಟಿಮುಟ್ಟುತನಗಳೆಲ್ಲ ಉತ್ತಮವಾಗಿವೆ. ಹಾಗೆಯೇ ಬೆಂಗಳೂರಿನ ಹಂಪ್‌ಗಳನ್ನು ತಾಗಿಸಿಕೊಳ್ಳದೇ ದಾಟುವ ಸಾಮರ್ಥ್ಯವೂ ಇದಕ್ಕಿವೆ. = ವಿನಾಯಕ ಭಟ್ಟ ಮೂರೂರು