ಶುರುವಾಗಿದೆ ಇಸುಝು ಕಾರುಬಾರು ವಾಹನದ ಒಳಾಂಗಣ ವಿನ್ಯಾಸ ಮತ್ತು ವರ್ಣ ಸಂಯೋಜನೆ ಬಗ್ಗೆ ಗಮನಹರಿಸಿದರೆ ಭವಿಷ್ಯದ ದಿನಗಳಲ್ಲಿ ಸದ್ದು ಮಾಡಬಹುದು. ಇಸುಝು ಕಂಪನಿಯ ದೊಡ್ಡ ಕಾರುಗಳು ಮೊದಲ ಬಾರಿಗೆ ಭಾರತೀಯ ಮಾರುಕಟ್ಟೆಗೆ ಕಾಲಿಟ್ಟಿದೆ. ವಾಹನದ ಒಳಾಂಗಣ ವಿನ್ಯಾಸ ಮತ್ತು ವರ್ಣ ಸಂಯೋಜನೆ ಬಗ್ಗೆ ಗಮನಹರಿಸಿದರೆ ಭವಿಷ್ಯದ ದಿನಗಳಲ್ಲಿ ಸದ್ದು ಮಾಡಬಹುದು. ಇಸುಝು ಎಂದಾಕ್ಷಣ ನೆನಪಾಗುವುದು ಮಿನಿ ಲಾರಿ, ಗೂಡ್ಸ್ ಜೀಪ್‌ನಂತಹ ದೊಡ್ಡ ಗಾಡಿಗಳು. ಇದೇ ಮೊದಲ ಬಾರಿಗೆ ಇಸುಝು ಕಂಪನಿಯು ಭಾರತೀಯ ಮಾರುಕಟ್ಟೆಗೆ ಎಸ್‌ಯುವಿ ಬಿಡುಗಡೆ ಮಾಡಿದೆ. ಭಾರತದ ಅತಿ ದೊಡ್ಡ ಎಸ್‌ಯುವಿ ಎಂಬ ಖ್ಯಾತಿಗೆ ಇಸುಝು ಎಂಯು-7 ಒಳಗಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಎಸ್‌ಯುವಿಗೆ ದೊರೆಯುತ್ತಿರುವ ಪ್ರಾಧಾನ್ಯತೆಯಿಂದ ಪುಳಕಿತಗೊಂಡಿರುವ ಜಪಾನ್ ಮೂಲದ ಇಸುಝು ದೊಡ್ಡ ಕಾರುಗಳ ಕ್ಷೇತ್ರದಲ್ಲಿ ಛಾಪು ಮೂಡಿಸಲು ಮುಂದಾಗಿದೆ. ಫೆಬ್ರವರಿ ಮೊದಲ ದಿನದಿಂದ ದೇಶಾದ್ಯಂತ ಮಾರುಕಟ್ಟೆಗೆ ಎಂಯು-7 ಬಂದಿದೆ. ಇದರೊಂದಿಗೆ ಫಾರ್ಚ್ಯುವರ್, ಎಂಡೋವರ್ ಹಾಗೂ ರೆಕ್ಸ್‌ಟಾನ್ ಕಾರುಗಳಿಗೆ ಮತ್ತೊಂದು ಸ್ಪರ್ಧಿ ಹುಟ್ಟಿಕೊಂಡಿದೆ. ಜಾಗತಿಕ ಡೀಸೆಲ್ ಎಂಜಿನ್ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ಇಸುಝು, ತನ್ನದೇ ಎಂಜಿನ್ ಮೂಲಕ ಎಸ್‌ಯುವಿಯತ್ತ ಲಗ್ಗೆ ಇಡಲು ಮುಂದಾಗಿದೆ. ಬೋಣಿಗೆಯಾಗಿರುವ ದೊಡ್ಡ ಗಾತ್ರದ ಐಷಾರಾಮಿ ಕಾರಿನಲ್ಲಿ ಸಣ್ಣಪುಟ್ಟ ದೋಷಗಳನ್ನು ಬಗೆಹರಿಸಿಕೊಂಡರೆ ಉತ್ತಮ ಭವಿಷ್ಯ ಹೊಂದಿದೆ. ಐದು ಮೀಟರ್ ಕಾರಿನ ವ್ಯಾಪಿಗೆ ಸೇರಲು ಕೇವಲ 5 ಮಿಲಿ ಮೀಟರ್ ಕಡಿಮೆ ಗಾತ್ರವನ್ನು ಹೊಂದಿರುವ ಎಂಯು-7 ಫಾರ್ಚ್ಯುನರ್‌ಗಿಂತ ಹೆಚ್ಚಿನ ಉದ್ದ ಹಾಗೂ ಅಗಲವಾಗಿದೆ. ಟ್ರಾಫಿಕ್ ಕಿರಿಕಿರಿಯನ್ನು ತಲೆಗೆ ಹಾಕಿಕೊಂಡರೆ ಬೆಂಗಳೂರಿನಂತಹ ನಗರದಲ್ಲಿ ಓಡಿಸುವುದು ಅಲ್ಪ ಮಟ್ಟಿಗೆ ಕಷ್ಟವಾಗಬಹುದು. ಚೆನ್ನೈನಲ್ಲಿರುವ ಹಿಂದೂಸ್ತಾನ್ ಮೋಟಾರ್ಸ್‌ನಲ್ಲಿ ಗಾಡಿಯನ್ನು ಅಸೆಂಬಲ್ ಮಾಡಲಾಗುತ್ತಿದ್ದು, 2016ರವರೆಗೆ ಸ್ವಂತ ಉತ್ಪಾದನಾ ಘಟಕದಲ್ಲಿಯೇ ತಯಾರಿಸಲು ಕಾಯಬೇಕಿದೆ. ಭಾರತೀಯ ಮಾರುಕಟ್ಟೆಗೆ ಕಾಲಿಡುವ ಮುಂಚೆಯೇ ತೈವಾನ್‌ನಿಂದ ಸುಮಾರು 50ಕ್ಕೂ ಅಧಿಕ ಕಾರುಗಳು ಈಗಾಗಲೇ ದೇಶಕ್ಕೆ ಆಮದಾಗಿವೆ. ಭಾರತದಲ್ಲಿಯೇ ಉತ್ಪಾದನೆ ಪ್ರಾರಂಭವಾದ ಬಳಿಕ 2014ರಲ್ಲಿ ಎರಡು ಸಾವಿರ ಕಾರುಗಳ ಮಾರಾಟದ ನಿರೀಕ್ಷೆಯಲ್ಲಿ ಇಸುಝು ಇದೆ. ಭವಿಷ್ಯದಲ್ಲಿ ಇದನ್ನು 5 ಸಾವಿರಕ್ಕೆ ಏರಿಸುವ ಗುರಿಯನ್ನು ಕಂಪನಿಯ ಮಾರುಕಟ್ಟೆಯ ವಿಭಾಗ ಹೊಂದಿದೆ. ಈಗ ಮಾರುಕಟ್ಟೆಯಲ್ಲಿರುವ ಎಸ್‌ಯುವಿಗಳಲ್ಲಿ ಮುಂಬದಿ ಹಾಗೂ ಎರಡನೇ ಸಾಲಿನ ಸೀಟಿನಲ್ಲಿ ಆರಾಮಾಗಿ ಕೂರಬಹುದು. ಆರು ಮತ್ತು ಏಳನೇ ಸೀಟಿನಲ್ಲಿ ಕೂರಲು ಅಲ್ಪ ಮಟ್ಟಿಗೆ ಕಷ್ಟವಾಗುತ್ತಿತ್ತು. ಆದರೆ ಎಂಯು-7ವಿನಲ್ಲಿ ಇಲ್ಲಿಯೂ ತಕ್ಕಮಟ್ಟಿಗೆ ಜಾಗವಿದ್ದು, ಹಿಂಬದಿ ಸೀಟಿನ ವಿಂಡೋ ಕೂಡ ದೊಡ್ಡದಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಇತರ ಎಸ್‌ಯುವಿಗಳಲ್ಲಿ ಕೊನೆಯ ಸಾಲಿನ ವಿಂಡೋ ಗ್ಲಾಸ್ ಸಣ್ಣದಿತ್ತು. ಆದರೆ ಇಸುಝು ಕಂಪನಿಯು ಗಾಡಿಯ ಸಾಮರ್ಥ್ಯ ಹಾಗೂ ಜಾಗದ ಬಗ್ಗೆ ತಲೆಕೆಡಿಸಿಕೊಂಡಷ್ಟು ಒಳ ವಿನ್ಯಾಸದ ಬಗ್ಗೆ ಆಲೋಚಿಸಿದಂತಿಲ್ಲ. ಮುಂದಿನ ಗ್ರಿಲ್ ತನ್ನ ಎಂದಿನ ಇಸುಝು ಶೈಲಿಯ ಕ್ಲೋಸಪ್ ಜಾಹೀರಾತಿನಲ್ಲಿ ಹಲ್ಲು ಕಿಸಿಯುವಂತೆ ರೂಪಿಸಲಾಗಿದೆ. ಇದೇ ಮಾದರಿಯಲ್ಲಿ ಪಿಕಪ್, ಮ್ಯಾಕ್ಸ್ ಡಿ ಹಾಗೂ ಅವರ ದೊಡ್ಡ ವಾಹನಗಳಲ್ಲಿಯೂ ಕಾಣಬಹುದು. ಈ ವಿನ್ಯಾಸವು ಅಷ್ಟೊಂದು ವೈಬ್ರಂಟ್ ಆಗಿ ಕಾಣುತ್ತಿಲ್ಲ. ಇನ್ನು ಒಳ ವಿನ್ಯಾಸದ ಬಗೆಗಂತೂ ಕಿಂಚಿತ್ ಕೂಡ ಗಮನ ನೀಡಿಲ್ಲ. ಜಪಾನಿಗಳು ಎಂದಿನಂತೆ ತಮ್ಮ ಜಿಪುಣತನವನ್ನು ಮುಂದುವರೆಸಿದ್ದಾರೆ. ವಿನ್ಯಾಸ ಆಕರ್ಷಕವಲ್ಲ ಇಂದು ನಾಲ್ಕೈದು ಲಕ್ಷ ದರದಲ್ಲಿ ದೊರೆಯುವ ಕಾರಿನ ಸ್ಟೈರಿಂಗ್‌ನಲ್ಲೇ ಆಡಿಯೋ, ಬ್ಲ್ಯೂಟೂತ್, ಹವಾನಿಯಂತ್ರಕ ಹಾಗೂ ಇತರ ಕಂಟ್ರೋಲರ್‌ಗಳಿರುತ್ತವೆ. ಇದರ ಜತೆಗೆ 24 ಲಕ್ಷ ಖರ್ಚು ಮಾಡುವ ಗ್ರಾಹಕರು ಆ ಮೊತ್ತಕ್ಕೆ ಹೊಂದುವ ಅತ್ಯಾಕರ್ಷಕ ಡ್ಯಾಶ್‌ಬೋರ್ಡ್‌ನ್ನು ನಿರೀಕ್ಷಿಸುತ್ತಾರೆ. ಆದರೆ ಸಣ್ಣ ಕಾರಿಗೆ ಹೋಲಿಸುವಂತಹ ಒಳ ವಿನ್ಯಾಸವನ್ನು ಇದು ಹೊಂದಿಲ್ಲ. ಟಚ್ ಸ್ಕ್ರೀನ್ ಡ್ಯಾಶ್‌ಬೋರ್ಡ್ ನೀಡಿದ್ದರೂ ಅದರ ಫಿಟ್ಟಿಂಗ್ ಸಮರ್ಪಕವಾಗಿಲ್ಲ. ಎಸಿ ನಿಯಂತ್ರಕಗಳು ಕೂಡ ಆಕರ್ಷಕವಾಗಿಲ್ಲ. ಪ್ಲಾಸ್ಟಿಕ್‌ಗಳನ್ನು ಹೆಚ್ಚು ಬಳಸಿರುವುದರಿಂದ ವಿನ್ಯಾಸವು ಮಬ್ಬಾಗಿ ಕಾಣುತ್ತದೆ. ಉತ್ತಮ ಬಣ್ಣ ಹೊಂದಾಣಿಕೆ ಮಾಡಲು ವಿಫಲವಾಗಿರುವುದರಿಂದ ಐಷಾರಾಮಿ ಲುಕ್ ಹೊಂದಲು ವಿಫಲವಾಗಿದೆ. ಒಳ ವಿನ್ಯಾಸದ ಬಗ್ಗೆ ನಿರ್ಲಕ್ಷ್ಯ ತಾಳಿರುವುದನ್ನು ಒಪ್ಪಿಕೊಳ್ಳುವ ಇಸುಝು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಟಕಾಶಿ ಕಿಕುಚಿ, 'ಭವಿಷ್ಯದಲ್ಲಿ ಈ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ. ಇದು ನಮ್ಮ ಮೊದಲ ಪ್ರಯತ್ನವಾಗಿದೆ. ಭಾರತೀಯ ಗ್ರಾಹಕರಿಗೆ ವಿಶಾಲವಾದ ಎಸ್‌ಯುವಿ ನೀಡುವುದು ನಮ್ಮ ಉದ್ದೇಶಲಾಗಿತ್ತು' ಎಂದಿದ್ದಾರೆ. ಹೈದ್ರಾಬಾದ್‌ನಲ್ಲಿ ನೂತನ ಉತ್ಪಾದನಾ ಘಟಕ ಪ್ರಾರಂಭಿಸಲಾಗುತ್ತಿದ್ದು, 2016ರ ವೇಳೆಗೆ ಕಾರ್ಯಾಚರಣೆ ಆರಂಭವಾಗಲಿದೆ. ಅಲ್ಲಿಯವರೆಗೆ ಹಿಂದೂಸ್ತಾನ್ ಮೋಟಾರ್ಸ್‌ನಲ್ಲಿಯೇ ಅಸೆಂಬಲ್ ಮಾಡಲಾಗುವುದು. ಈ ಯೋಜನೆಗೆ 1600 ಕೋಟಿ ಬಂಡವಾಳ ಹೂಡಲಾಗಿದ್ದು, 2020ರೊಳಗೆ 3 ಸಾವಿರ ಕೋಟಿ ಹೂಡಿಕೆ ಮಾಡುವ ಗುರಿ ಹೊಂದಲಾಗಿದೆ. ಆದರೆ ಯಾವುದೇ ಕಾರಣಕ್ಕೂ ಎಸ್‌ಯುವಿನಿಂದ ಸಣ್ಣ ಕಾರುಗಳ ವಿಭಾಗದತ್ತ ಚಿತ್ತವಹಿಸುವುದಿಲ್ಲ ಎಂದು ಅವರು 'ಬೈಟು ಕಾಫಿ'ಗೆ ತಿಳಿಸಿದ್ದಾರೆ. 2016 ಅಲ್ಲಿಯವರೆಗೆ ಹಿಂದೂಸ್ತಾನ್ ಮೋಟಾರ್ಸ್‌ನಲ್ಲಿ ಅಸೆಂಬಲ್ 2020 ರಲ್ಲಿ 3 ಸಾವಿರ ಕೋಟಿ ರುಪಾಯಿ ಹೂಡಿಕೆ ಗುರಿ ಪ್ರತ್ಯೇಕ ಎ.ಸಿ ಮೂರು ಲೀಟರ್ ಟರ್ಬೋ ವಿಜಿಎಸ್ ಡೀಸೆಲ್ ಎಂಜಿನ್ ಹೊಂದಿರುವ ಈ ಕಾರು 3600 ಆರ್‌ಪಿಎಂ ಶ್ರೇಣಿಯನ್ನು ಹೊಂದಿದೆ. ಕಾರು ನೋಡಲು ಎಂಡೋವರ್‌ನಂತೆ ಗೋಚರಿಸಿದರೂ ವೀಲ್‌ಬೇಸ್ ಸರಿಸುಮಾರು 3050 ಮಿ.ಮೀ ಉದ್ದ ಇರುವುದರಿಂದ ಅತಿ ದೊಡ್ಡ ಎಸ್‌ಯುವಿ ಶ್ರೇಣಿಗೆ ಇದು ಸೇರಿದೆ. ಇದಲ್ಲದೇ 210 ಮಿ.ಮೀ ಗ್ರೌಂಡ್ ಕ್ಲೀಯರನ್ಸ್‌ನ್ನು ಕೂಡ ಎಂಯು-7 ಹೊಂದಿದೆ. 4್ಢ2 ರೇರ್ ಡ್ರೈವ್ ಹೊಂದಿರುವ ಎಸ್‌ಯುವಿಯ ಸ್ಟೈರಿಂಗ್ ಹೈಡ್ರಾಲಿಕ್ ಪವರ್ ಹೊಂದಿದೆ. ಈ ಕಾರಿನ ಮತ್ತೊಂದು ವಿಶೇಷವೆಂದರೆ ಮುಂದಿನ ಸೀಟುಗಳಿಗೆ ಇರುವ ಎರಡು ಎಸಿ ಹೊರತುಪಡಿಸಿ ಮಧ್ಯದ ಸೀಟಿನಲ್ಲಿ ಕುಳಿತವರಿಗೆ ಪ್ರತ್ಯೇಕ ಎರಡು ಎಸಿಗಳಿದ್ದು, ಮಧ್ಯದಲ್ಲಿ ಅದಕ್ಕೆ ನಿಯಂತ್ರಕವೂ ಇದೆ. ಇದರ ಜತೆಗೆ ಚಾಲಕನಿಗೆ ಕಾಣದಂತೆ ವಿಡಿಯೋ ಔಟ್‌ಪುಟ್ ಕೂಡ ಇದೆ. -ರಾಧೆ