ಚಂದ್ರಗಿರಿ ಧಾರ್ಮಿಕ ಕ್ಷೇತ್ರಗಳ ಸಾನ್ನಿಧ್ಯವೇ ಅಂಥದು. ಅದೆಷ್ಟೇ ಆಯಾಸ, ಬಾಯಾರಿಕೆ ಇದ್ದರೂ ಕ್ಷೇತ್ರ ಮಹತ್ವ ಅದನ್ನು ನಿವಾರಿಸಿಬಿಡುತ್ತದೆ. ಹಾಸನ ಜಿಲ್ಲೆಯ ಶ್ರವಣಬೆಳಗೊಳದ ವಿಂಧ್ಯಗಿರಿ-ಚಂದ್ರಗಿರಿಗಳನ್ನು ಏರಿಳಿದಾಗ ಆಬಾಲವೃದ್ಧರಾದಿಯಾಗಿ ಇಂಥ ಭಾವಪರವಶತೆಗೆ ಎಲ್ಲರೂ ಒಳಗಾಗುತ್ತಾರೆ. ಸುಮಾರು ಇನ್ನೂರೈವತ್ತು ಮೆಟ್ಟಿಲುಗಳನ್ನೇರಿ ಚಂದ್ರಗಿರಿಯ ಜೈನ ಬಸದಿಗಳ ವೀಕ್ಷಣೆಯೆಂದರೆ ಅದೊಂದು ಪವಿತ್ರ ಕಾರ್ಯ. ತ್ಯಾಗದ ಅರ್ಥ, ಅಹಿಂಸೆಯ ಮಹತ್ವಕ್ಕೆ ಇಲ್ಲಿನ ತೀರ್ಥಂಕರರ ಮೂರ್ತಿಗಳು, ಚರಣಗಳು ಬೆಳಕಾಗುತ್ತವೆ. ಜೈನ ಸನ್ಯಾಸಿ/ನಿಯರು ಅಪಾರ ಶ್ರದ್ಧೆ-ಭಕ್ತಿ-ನಂಬಿಕೆಯಿಂದ ಚರಣ ಸೇವೆಯಲ್ಲಿ, ಮೌನವಾಗಿ ತೀರ್ಥಂಕರರ ಸಾನ್ನಿಧ್ಯದಲ್ಲಿರುವ ಕ್ಷಣ ಯಾತ್ರಿಗಳನ್ನು ಕ್ಷಣಕಾಲ ಅಧ್ಯಾತ್ಮದಲ್ಲಿ ತಲ್ಲೀನರಾಗುವಂತೆ ಮಾಡುತ್ತದೆ. ನಿಶ್ಶಬ್ಧದ ಸಾಗರದಲ್ಲಿ ಭಕ್ತಿಯ ಭೋರ್ಗರೆತ ಅಲ್ಲಿರುವುದು. ಚಂದ್ರಗಿರಿ ಏರಿದರೆ ಅಲ್ಲಿನ ಸಮೂಹ ಬಸದಿಗಳಾದ ಶಾಂತಿನಾಥ ತೀರ್ಥಂಕರ, ಬಾಹುಬಲಿ ಸೋದರ ಭರತನ ವಿಗ್ರಹ, ಬಂಡೆಗಲ್ಲಿನ ಮೇಲೆ ಕೊರೆದ ಶಾಸನ 'ಅರಿಷ್ಟನೇಮಿ' ಗಮನ ಸೆಳೆಯುತ್ತವೆ. ಗಂಗರ ಕಾಲದ ಶಿಲ್ಪ ಲಕ್ಷಣ ಹೊಂದಿರುವ ಈ ಮೂರ್ತಿ 10ನೇ ಶತಮಾನದ್ದಾಗಿದೆ. ಶ್ರವಣಬೆಳಗೊಳದಲ್ಲಿ ಭರತನನ್ನು ಪೂಜಿಸುವ ಸಂಪ್ರದಾಯ 10ನೇ ಶತಮಾನದಿಂದ ಆರಂಭವಾಗಿದೆ. ದೊಡ್ಡಬೆಟ್ಟದ ಅಖಂಡಬಾಗಿಲು ಬಳಿ ಭರತನ ಮತ್ತೊಂದು ವಿಗ್ರಹವಿದೆ. ಸುಪಾರ್ಶ್ವನಾಥ ತೀರ್ಥಂಕರ ಬಸದಿ, ಚಂದ್ರನಾಥ ತೀರ್ಥಂಕರ ಬಸದಿಗಳಿವೆ. ಇನ್ನೊಂದು ವಿಶೇಷ-ಪ್ರಧಾನ ಆಕರ್ಷಣೆ ಎಂದರೆ ಚಾವುಂಡರಾಯ ಬಸ್ತಿ. ಐತಿಹಾಸಿಕ, ವಾಸ್ತುಶಿಲ್ಪ ದೃಷ್ಟಿಯಿಂದಲೂ ಕುತೂಹಲಕಾರಿಯಾಗಿರುವ ಬಸ್ತಿ ಇದು. ಚಾವುಂಡರಾಯ ಇಲ್ಲವೇ ಅವನ ಗೌರವಾರ್ಥ ಕಟ್ಟಿಸಿರಬಹುದು. 10ನೇ ಶತಮಾನದ ಗಂಗ ವಾಸ್ತುಶಿಲ್ಪಕ್ಕೆ ಈ ದೇವಳ ಉತ್ತಮ ನಿದರ್ಶನ. ಮೇಲಂತಸ್ತಿನ ಜಿನ ವಿಗ್ರಹ ಪೀಠ ಭಾಗದಲ್ಲಿ ಕೊರೆದಿರುವ ಶಾಸನದಲ್ಲಿ ಚಾವುಂಡರಾಯನ ಮಗನ ಹೆಸರು ಉಲ್ಲೇಖಿಸಲಾಗಿದೆ. ಹೊಯ್ಸಳ ಕಾಲದ ಶಾಸನದಲ್ಲಿ ಈ ಬಸ್ತಿಯನ್ನು 'ತ್ರೈಳೋಕ್ಯ ರಂಜನ' ಎಂದು 'ಬೊಪ್ಪ ಚೈತ್ಯಾಲಯ' ಎಂದೂ ಕರೆಯಲಾಗಿದೆ. ದ್ರಾವಿಡ ಸಂಪ್ರದಾಯದಲ್ಲಿ ಕಟ್ಟಿರುವ ಈ ಬಸ್ತಿಯು ಕನ್ನಡನಾಡಿನಲ್ಲಿಂದು ಕಂಡುಬರುವ ಅತ್ಯಂತ ಸುಂದರವಾದ ಕಗ್ಗಲ್ಲ ದೇವಾಲಯಗಳಲ್ಲೊಂದು. ಇದರ ಗೋಡೆ ಅಲಂಕಾರಯುಕ್ತವಾಗಿದ್ದರೂ ದೇಗುಲದ ಕುಂಬಿ ಹಾಗೂ ಶಿಖರವೆಲ್ಲ ಶಿಲ್ಪದಿಂದೊಡಗೂಡಿದೆ. ಹಂಸಗಳ ಸಾಲು, ಕುದುರೆಗಳ ಲಾಳಾಕಾರದ ಚೈತ್ಯಗಳು, ಸಮುದ್ರ ಕುದುರೆ ಅಥವಾ ಸಿಂಹ ಮುಖವಾಡ ಹೊಂದಿರುವ ಮತ್ಸ್ಯಗಳಲ್ಲದೆ ಅತ್ಯಂತ ಸುಂದರವಾದ ತೀರ್ಥಂಕರರ, ಯಕ್ಷಯಕ್ಷಿಯರ, ಗಂಧರ್ವ ಕಿನ್ನರರ, ಶಿಲಾಭಂಜಕಿಯರ ಉಬ್ಬು ಚಿತ್ರಗಳನ್ನು ಗೋಡೆಯ ಮೇಲ್ಭಾಗ ಅಥವಾ ಕುಂಬಿ ಹೊರಮೈಯಲ್ಲಿ ಕಾಣಬಹುದು. ಕುಂಬಿಯ ರಚನೆಯೂ ಅಷ್ಟೇ ಕುತೂಹಲಕಾರಿ. ಇಲ್ಲಿಯ ಶಾಲಾ ಕೂಟ ಹಾಗೂ ಪಂಜರಗಳು ದ್ರಾವಿಡ ವಾಸ್ತುಗ್ರಂಥಗಳಲ್ಲಿ ವಿವರಿಸಿರುವ ಕಟ್ಟಡ ವಿಭಾಗಗಳಿಗೆ ಉತ್ತಮ ಮಾದರಿ. ದೇವಳದ ಕುಂಬಿಯ ಮೇಲಿರುವ ಉಬ್ಬು ಚಿತ್ರಗಳಲ್ಲಿ ಒಂದೆರಡು ಈ ನಾಡಿನ ಅತ್ಯಂತ ಸುಂದರ ಮೂರ್ತಿಗಳ ಸಾಲಿನಲ್ಲಿ ನಿಲ್ಲುವುವು. ದೇಗುಲ ಒಳಭಾಗವೆಲ್ಲ ಸರಳ ಸುಂದರ. ಗರ್ಭಗುಡಿಯಲ್ಲಿರುವ ನೇಮಿನಾಥನ ವಿಗ್ರಹವನ್ನು ಹೊಯ್ಸಳ ಕಾಲದ ಹೆಸರಾಂತ ಶಿಲ್ಪಿಗಳಲ್ಲೊಬ್ಬನಾದ ಗಣಾಚಾರಿ ರಚಿಸಿದ್ದಾರೆ. ಈ ಗಣಾಚಾರಿಗೆ 'ರೂವಾರಿಗಳ ಮುಖತಿಳಕ' ಎಂಬ ಬಿರುದಿತ್ತು. ನವರಂಗದಲ್ಲಿರುವ ಯಕ್ಷ ಸರ್ವಾಹ್ಣ ಹಾಗೂ ಯಕ್ಷಿ ಅಂಬಿಕೆಯರ ವಿಗ್ರಹಗಳು ಹೊಯ್ಸಳ ಶಿಲ್ಪಶೈಲಿಯಲ್ಲಿದೆ. ದಕ್ಷಿಣ ಪೂರ್ವದಲ್ಲಿರುವ ಒಂದು ಇಕ್ಕಟ್ಟಾದ ಸೋಪಾನ ನಮ್ಮನ್ನು ಮೇಲಂತಸ್ತಿಗೆ ಕೊಂಡೊಯ್ಯುವುದು. ಅಲ್ಲಿ ಜಿನದೇವಣನು ಪ್ರತಿಷ್ಠಾಪಿಸಿದ ಸುಪಾರ್ಶ್ವನಾಥನ ವಿಗ್ರಹವಿದೆ. ಭಗವಾನ್ ಆದಿನಾಥ ತೀರ್ಥಂಕರರ ಬಸದಿಯಲ್ಲಿ ಆದಿನಾಥರು, ಗೋಮೇದ ಯಕ್ಷಿ, ಯಕ್ಷಿ ಕೂಷ್ಮಾಂಡಿನಿದೇವಿ ವಿಗ್ರಹಗಳಿವೆ. ಅನಂತನಾಥ ತೀರ್ಥಂಕರರ ಬಸದಿಯೂ ಅತ್ಯಂತ ಆಕರ್ಷಕ. ಕಟ್ಟಡದ ಕಲ್ಲಿನ ಆಧಾರ ಸ್ತಂಭಗಳು ಗಮನ ಸೆಳೆಯುತ್ತವೆ. ಮಜ್ಜಿಗಣ ಬಸದಿ, ಗಂಟೆಗಂಬ ಪಾರ್ಶ್ವನಾಥ ತೀರ್ಥಂಕರ ಬಸದಿ, ಶ್ರುತಕೇವಲಿ ಭದ್ರಬಾಹುಸ್ವಾಮಿ, ಶಾಸನಗಳು ಗಮನ ಸೆಳೆಯುವ ಅಂಶಗಳನ್ನು ಹೊಂದಿವೆ. ಇದೇ ಬೆಟ್ಟದಲ್ಲಿ ಚಂದ್ರಗಿರಿ ಗುಹೆ ಮತ್ತು ಚರಣ, ಆಚಾರ್ಯ ಕುಂದಕುಂದರ ಪಾದಗಳನ್ನೂ ಕಾಣಬಹುದು. ಶ್ರವಣಬೆಳಗೊಳಕ್ಕೆ ಭೇಟಿ ನೀಡುವವರು ಇದೇ ಜಿಲ್ಲೆಯಲ್ಲಿರುವ ಹೊಯ್ಸಳರ ಶಿಲ್ಪಕಲಾ ಸೌಂದರ್ಯದ ಬೇಲೂರು ಮತ್ತು ಹಳೇಬೀಡು ಐತಿಹಾಸಿಕ ದೇಗುಲಗಳನ್ನು ಕಣ್ತುಂಬಿಕೊಳ್ಳಬಹುದು. -ಶಿವಮೊಗ್ಗ ಗಿರಿಧರ್