ಸೆಡಾನ್‌ಗೆ ಹೊಸ ರೂಪ ಪ್ರತಿಷ್ಠಿತ ಹುಂಡೈ ಕಂಪನಿಯು ಎಕ್ಸೆಂಟ್ ಸೆಡಾನ್‌ನ ಹೊಸ ರೂಪ ಪರಿಚಯಿಸಿದೆ. ಈ ಮೊದಲು ಮಾರುಕಟ್ಟೆಯಲ್ಲಿದ್ದ ಎಕ್ಸೆಂಟ್ ಕಾರಿನ ಸ್ವರೂಪ ಹಾಗೂ ಸಾಮರ್ಥ್ಯ ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ತರಲಾಗಿದೆ. ಎಕ್ಸೆಂಟ್ ಸೆಡಾನ್ ತಕ್ಕ ಮಟ್ಟಿಗೆ ಭಾರತದಲ್ಲಿ ಯಶಸ್ವಿಯಾಗಿದ್ದರೂ ಯಾವುದೇ ಬದಲಾವಣೆ ಮಾಡದೇ ಮಾರುಕಟ್ಟೆಗೆ ತರಲಾಗುತ್ತಿದೆ ಎಂಬ ಆರೋಪವಿತ್ತು. ಈಗ ಆಕರ್ಷಕ ಸ್ವರೂಪದಲ್ಲಿ ಬಂದಿರುವ ಎಕ್ಸೆಂಟ್ ತಕ್ಕಮಟ್ಟಿಗೆ ವರ್ನಾ ಫ್ಲೂಡಿಕ್ ವಿನ್ಯಾಸದಲ್ಲಿ ಕಾಣುತ್ತಿದೆ. ಹುಂಡೈನ ಫ್ಲೂಡಿಕ್ ವಿನ್ಯಾಸ ಖ್ಯಾತವಾಗಿರುವುದು ಇದಕ್ಕೆ ಪ್ರೇರಣೆಯಾಗಿರಬಹುದು. ಹೊಸ ಕಾರಿಗೆ 1.1 ಲೀ ಯು2 ಯುಆರ್‌ಡಿಐ ಡೀಸೆಲ್ ಮತ್ತು 1.2 ಲೀ ಕಪ್ಪಾ ಡ್ಯುಯಲ್ ವಿಟಿವಿಟಿ ಪೆಟ್ರೋಲ್ ಎಂಜಿನ್ ಬಳಸಲಾಗಿದೆ. ಹೆಡ್‌ಲ್ಯಾಂಪ್, ಬಂಪರ್, ಡೋರ್ ಹ್ಯಾಂಡಲ್ಸ್, ಅಲೈ ವ್ಹೀಲ್ಸ್, ಎಲ್‌ಇಡಿ ಸ್ಟಾಪ್ ಲ್ಯಾಂಪ್ ಸೇರಿದಂತೆ ಒಟ್ಟು 15ಕ್ಕೂ ಅಧಿಕ ಭಾಗಗಳಲ್ಲಿ ವಿನ್ಯಾಸ ಬದಲಿಸಲಾಗಿದೆ. ಆರು ಬಣ್ಣದಲ್ಲಿ ಕಾರು ಲಭ್ಯವಿದ್ದು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್‌ನಲ್ಲಿ ತಲಾ 4 ಮಾದರಿಗಳನ್ನು ಬಿಡುಗಡೆಮಾಡಲಾಗಿದೆ. ಆಟೋಮೆಟಿಕ್ ಟ್ರಾನ್ಸಿಷನ್ ಇರುವ ಎರಡು ಪೆಟ್ರೋಲ್ ಮಾದರಿಗಳನ್ನೂ ಮಾರುಕಟ್ಟೆಗೆ ಬಿಡಲಾಗಿದೆ. ಪೆಟ್ರೋಲ್ ಮಾದರಿಯ ಆರಂಭಿಕ ಬೆಲೆ ರು. 4.71 ಲಕ್ಷ ಹಾಗೂ ಡೀಸೆಲ್ ಮಾದರಿಯ ಆರಂಭಿಕ ಬೆಲೆ ರು. 5.66 ಲಕ್ಷ ಎಂದು ನಿಗದಿಮಾಡಲಾಗಿದೆ.