ಕಂಡರಿಯದ ಪಾಂಡಿಚರಿತೆ ನಿಮ್ಮ ಮನಸ್ಸು ನಿತ್ಯ ಜಂಜಡಗಳಿಂದ ಕೊಂಚ ವಿಶ್ರಾಂತಿ ಬಯುಸುತ್ತಿದೆಯೇ? ಹಾಗಿದ್ದರೆ ತಕ್ಷಣ ಹೊರಡಿ ಪಾಂಡಿಚೇರಿಗೆ. ನಿಮ್ಮ ಮನಸ್ಸು ನಿತ್ಯ ಜಂಜಡಗಳಿಂದ ಕೊಂಚ ವಿಶ್ರಾಂತಿ ಬಯುಸುತ್ತಿದೆಯೇ? ಕುಟುಂಬದವರೊಂದಿಗೆ ದೇವಸ್ಥಾನ, ಚರ್ಚ್, ಆಶ್ರಮಗಳನ್ನು ಸುತ್ತಿಬರುವ ಆಸೆಯೇ ನಿಮ್ಮವಳಿಂದ ಶಾಪಿಂಗ್ ಹೋಗಬೇಕೆಂಬ ವರಾತವೇ? ಕಡಲ ಕಿನಾರೆಯಲ್ಲಿ ಹಿಪ್ಪಿಗಳಂತೆ ವಿಹರಿಸುತ್ತಾ ವಿಹಂಗಮ ದಿಗಂತದಕ್ಕೆ ಮುಖಾಮುಖಿಯಾಗುವ ಹುಕ್ಕಿಯೇ? ಹಾಗಿದ್ದರೆ ತಕ್ಷಣ ಹೊರಡಿ ಪಾಂಡಿಚೇರಿಗೆ. ಪಾಂಡಿಚೇರಿ ಅವರವರ ಭಾವಕ್ಕೆ ರುಚಿ-ಅಭಿರುಚಿಗಳಿಗೆ ಲಾಯಕ್ಕಾದ ತಾಣ. ಅಲ್ಲಿ ಪ್ರವಾಸಿಗರಿಗೆ ಎಲ್ಲವೂ ಉಂಟು. ಬೀಚ್ ಲೈಫ್ ಎಂಜಾಯ್ ಮಾಡೊದಕ್ಕೆ ವಿಶಾಲ ಸಮುದ್ರ ತಟವೇ ಇದೆ. ಆದರೆ ಗೋವಾದಂತೆ ಬೀಚ್ ಲೈಫ್ ಅತಿರೇಕಗೊಂಡಿಲ್ಲ. ಇಲ್ಲಿ ದೇವಸ್ಥಾನ, ಆಶ್ರಮಗಳುಂಟು. ಆದರೆ ವಿಪರೀತ ಭಾವೋದ್ರೇಕವಿಲ್ಲ. ಪೂಜೆ ಪುನಸ್ಕಾರಗಳಿಗೆ ಪೀಡಿಸುವವರಿಲ್ಲ. ಪಾಂಡಿಚೇರಿ ಪೇಟೆ ಪಟ್ಟಣಗಳ ಆಧುನಿಕ ಬದುಕನ್ನು ತನ್ನೊಡಲಲ್ಲಿ ಕಟ್ಟಿಕೊಂಡಿದ್ದರೂ ಮುಂಬೈ, ಕೊಲ್ಕತಾಗಳಂತೆ ಕ್ಷಣಕ್ಷಣಕ್ಕೂ ಅವಾಂತರ ಅಪಾಯಗಳನ್ನು ತಂದೊಡ್ಡಬಲ್ಲ ಭ್ರಮಾಲೋಕವಲ್ಲ. ಧ್ಯಾನಸ್ಥ ಮನಸ್ಸುಗಳಿಗೆ ಏಕಾಂತ ಹೆಣೆದುಕೊಡುವ ಪ್ರಶಾಂತ ಸ್ಥಿತ್ಯಂತರಗಳಿಗೆ ಧಕ್ಕೆಯಾಗದಂತೆ ಆಧುನಿಕತೆಯನ್ನು ಹದಗೊಳಿಸಿಕೊಂಡು ಬೆಳೆದ ಸುಂದರ ಪ್ರಚ್ಛನ್ನ ಪ್ರದೇಶ ಇದು. ಹೀಗೆ ಭಾರತದ ಎಲ್ಲ ನಗರಗಳಿಗಿಂತ ಭಿನ್ನವಾಗಿ ಬಹುರೂಪಿಯಾಗಿರುವ ಪಾಂಡಿಚೆರಿಯ ಭೇಟಿ ಅಪರೂಪವಾಗಿ, ಅವಿಸ್ಮರಣೀಯ. ಪಾಂಡಿಚೆರಿಗೆ ಇಂಥ ಅನನ್ಯತೆ ಸಿದ್ಧಿಸಿದ್ದು ಮುಖ್ಯವಾಗಿ ಮೂರು ಕಾರಣಗಳಿಂದಾಗಿ. ಒಂದು-ಫ್ರೆಂಚ್ ಕಾಲನಿ. ಎರಡು-ಅರವಿಂದಾಶ್ರಮ. ಮೂರು-ಕಲ್ಪನಾ ವಿಲಾಸದ ಭಾವತಂರಗಗಳನ್ನು ಬಡಿದೆಬ್ಬಿಸಿ ಅನುಕ್ಷಣವೂ ಅನಂತತೆಯ ಮೂರ್ತರೂಪ ಅನಾವರಣಗೊಳಿಸುವ ಅಲ್ಲಿಯ ಬಂಗಾಳ ಕೊಲ್ಲಿ ಮಹಾ ಸಮುದ್ರದ ಅಲೆಗಳ ಸಾಮ್ರಾಜ್ಯ! ಪಾಂಡಿಚೆರಿ ಹಿಂದೆ ಫ್ರೆಂಚರ ವಸಾಹತುವಾಗಿದ್ದ ಪ್ರದೇಶ. ಆ ಕಾಲದ ವಾಸ್ತುಶಿಲ್ಪ, ಫ್ರೆಂಚರ ಮಾದರಿ ಮನೆಗಳು, ಅಲ್ಲಿಯ ಹೂದೋಟ, ಫ್ರೆಂಚರ ಶಾಂತ ನಡೆನುಡಿ, ವಿಶಿಷ್ಟ ಜೀವನ ಶೈಲಿಯನ್ನು ಇಂದಿಗೂ ಬಿಂಬಿಸುವ ಅಲ್ಲಿಯ ಫ್ರೆಂಚ್ ಕಾಲನಿಯಲ್ಲಿ ಹೀಗೆ ಸುತ್ತಾಡಿ ಬಂದರೆ ಫ್ರಾನ್ಸಿನ ಆರ್ಬೋಮಿಸ್‌ನಲ್ಲೋ, ಸೇಂಟ್ ಎಮಿಲಿಯನಲ್ಲೋ ಸುತ್ತಾಡಿ ಬಂದ ಅನುಪಮ ಅನುಭವ. ಇನ್ನು ತಮ್ಮ ಯೋಗ, ಆಧ್ಯಾತ್ಮ ಸಾಧನೆಗಳೊಂದಿಗೆ ಸ್ವಾತಂತ್ಯ್ಯ ಹೋರಾಟದ ಧೀಃಶಕ್ತಿಯನ್ನು ಸಂಘಟಿಸಿ ಬದುಕಿನ ಅಂತಃ ಸ್ವತ್ವ ಮತ್ತು ಅರಿವುಗಳ ದೀಪ್ತಿ ಬೆಳಗಿದ ಗುರು ಶ್ರೀಅರವಿಂದರ ಕರ್ಮಭೂಮಿಯಾಗಿಯೂ ಪಾಂಡಿಚೆರಿಗೆ ಸಿದ್ಧಿ ಪ್ರಸಿದ್ಧಿಗಳು ಲಭಿಸಿದವು. ಅರವಿಂದರ ಮತ್ತು ಅವರ ಒಡನಾಡಿ ಮದರ್ ಅವರ ಪ್ರಭಾವ ಇಂದಿಗೂ ಎಷ್ಟು ದಟ್ಟವಾಗಿದೆ ಎಂದರೆ ಅಲ್ಲಿರುವ ಅರವಿಂದಾಶ್ರಮಕ್ಕೆ ಅಸಂಖ್ಯಾತ ಭಕ್ತರು ಬಂದು ಮನಸ್ಸನ್ನು ನಿರ್ಲಿಪ್ತದತ್ತ, ಏಕಾಂತದತ್ತ ಒಪ್ಪಿಸಿಕೊಳ್ಳಲು ಪ್ರಯತ್ನಿಸುವುದುಂಟು. ಪಾಂಡಿಚೆರಿಯ ವಾಸ್ತವ್ಯ ಏಕತಾನತೆಯಿಂದ ದೂರವಾಗಿ ಮಧುರವಾಗಲು ಹಗಲಿರುಳೂ ಅಲ್ಲಿಯ ಭೋರ್ಗರೆಯುವ ನೀಳ ಸಾಗರದ ರಸಸ್ವಾದ ಅನುಭವಿಸಬೇಕೆಂದರೆ ಅಲ್ಲಿಯ ವಿಂಡ್ ಫ್ಲವರ್ ರೆಸಾರ್ಟ್‌ನಲ್ಲಿ ತಂಗಬೇಕು. ಅಲ್ಲಿ ಸಮುದ್ರದ ಅಲೆಗಳ ಹೊರತು ಉಳಿದೆಲ್ಲವೂ ನಿಶ್ಯಬ್ಧ. ವರ್ತುಲಾಕಾರವಾಗಿ ಬೆಸೆದಿರುವ ಕಾಟೇಜ್‌ಗಳ ನಡುನಡುವೆ ಹಸಿರಿನ ಹೂದೋಟಗಳ ಗುಚ್ಛ. ಅಲ್ಲಿಯ ದುಬಾರಿ ವಿಲ್ಲಾಗಳಲ್ಲಿ ಕುಳಿತು ಕರ್ಟೈನ್ ಸರಿಸಿದರೆ ಸಾಕು, ಅಥವಾ ಹಿತ್ತಿಲೊಳಗೆ ಕಾಲಿಟ್ಟರೆ ಸಾಕು, ನಿಮ್ಮನ್ನು ಎದುರುಗೊಳ್ಳವುದು ಸಮುದ್ರದ ಅಲೆಯ ನಿತ್ಯ ನರ್ತನ. ಹನಿಮೂನ್ ಜೋಡಿಗಳಾದರಂತೂ ಅನವರತವೂ ಪಿಸುಮಾತು. ಮುಗಿಯದ ಸರಸ. ನಿಲ್ಲದ ಸಲ್ಲಾಪ! ಹೀಗಾಗಿ ವಿಂಡ್ ಫ್ಲವರ್‌ನಲ್ಲಿ ಕಳೆಯುವ ಅನು ಕ್ಷಣವೂ ಸಂಗೀತ ಸರಿಗಮದಂತೆ, ಭಾವನೆಗಳ ಇಂಪಾದ ಶೃತಿ ಮೀಟಿದಂತೆ. ಅಲ್ಲಿಯ ಪ್ರತಿ ವಿಲ್ಲಾಗಳಿಗೂ ಪ್ರತ್ಯೇಕ ಈಜುಕೊಳವಿರುವುದರಿಂದ ಸಂಗಾತಿಯೊಂದಿಗೆ ನೀರಿಗಿಳಿದು ಮೀನಿನಂತೆಯೇ ಮಿಲನದಲ್ಲಿ ಮೈ ಮರೆಯುವ ಸುಯೋಗ. ನಡುನಡುವೆಯೇ ಭಾವೋಲ್ಲಾಸಕ್ಕೆ ತಂಪಾದ ಬಿಯರ್. ಡೈನಿಂಗ್ ಹಾಲ್‌ನಲ್ಲಂತೂ ಸದಾ ತರಹೇವಾರಿ ಊಟ ತಿಂಡಿಗಳ ನಿತ್ಯ ಸಂತೆ. ಜೋಡಿಹಕ್ಕಿಯಂತೆ ಲಲ್ಲೆಗರೆಯುತ್ತಾ, ಬೋಟ್ ರೈಡ್ ನಡೆಸುವುದಕ್ಕೂ ವಿಂಡ್ ಫ್ಲವರ್‌ನಲ್ಲಿ ಸಕಲ ಸೌಲಭ್ಯ. ವಿಂಡ್ ಫ್ಲವರ್‌ನ ವೈಶಿಷ್ಟ್ಯ ಪೂರ್ಣ ಸ್ಪಾದಲ್ಲಿ ದಣಿದ ಮೈಮನಗಳಿಗೆ ಚೈತನ್ಯ ನೀಡಲು ಅಭ್ಯಂಜನ, ಬಾಡಿ ಮಸಾಜ್, ವ್ಯಾಯಾಮ ಸೇವೆ ನೀಡಲು ನುರಿತ ಸಿಬ್ಬಂದಿ ಸದಾ ರೆಡಿ. ಇವೆಲ್ಲವುಗಳ ಫಲಶೃತಿಯಾಗಿ ನಿಮ್ಮ ಪಾಂಡಿಚೆರಿ ಪಯಣ ಸುಮಧುರ ಅಷ್ಟೇ ಸುಂದರ. ಅಂದಹಾಗೆ, ಬೆಂಗಳೂರಿನಿಂದ ಪಾಂಡಿಚೆರಿಗೆ 374 ಕಿಲೋಮೀಟರ್. ವಿಂಡ್ ಫ್ಲವರ್ ದೂ.ಸಂಖ್ಯೆ: 09731869977, 08040842222 ವೆಬ್‌ಸೈಟ್: ..