ಹಕ್ಕಿ ಬಂತು ಹಕ್ಕಿ! ಕರ್ನಾಟಕದ ಪಕ್ಷಿಧಾಮಗಳಲ್ಲಿ ಮುಖ್ಯವಾದ ರಂಗನತಿಟ್ಟುಗೆ ಭೇಟಿ ಕೊಡಲು ಇದು ಸಕಾಲ. ಜನವರಿಯಿಂದ ಸೆಪ್ಟಂಬರ್‌ವರೆಗೆ ಇಲ್ಲಿಗೆ ವಲಸೆ ಬರುವ ಜಲಪಕ್ಷಿಗಳು ಗೂಡುಕಟ್ಟಿ ಸಂತಾನೋತ್ಪತ್ತಿ ಮಾಡುತ್ತವೆ. ಮಾರ್ಚ್‌ನಿಂದ ಮೇ ಅಂತ್ಯದವರೆಗೆ ಇಲ್ಲಿಗೆ ಭೇಟಿಯಿತ್ತರೆ ವಿವಿಧ ಬಗೆಯ ಪಕ್ಷಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಬಹುದು. ಕಾವೇರಿ ನದಿಯಲ್ಲಿರುವ ಪುಟ್ಟದ್ವೀಪಗಳು ಈ ಪಕ್ಷಿಧಾಮವನ್ನು ರೂಪಿಸಿವೆ. ಈ ದ್ವೀಪಗಳು ಬಿದಿರು, ನೀಲಗಿರಿ, ಅಂಜೂರ, ನೇರಳೆ ಮೊದಲಾದ ಹಣ್ಣಿನ ಮರಗಳಿಂದ ಕೂಡಿದ ಕಾಡುಗಳು. ಇಲ್ಲಿಗೆ ವಲಸೆ ಬರುವ ಪಕ್ಷಿಗಳು ಮುಖ್ಯವಾಗಿ ಜಲಪಕ್ಷಿಗಳಾಗಿದ್ದು, ಮೀನು ಮತ್ತಿತರ ಜಲಪ್ರಾಣಿಗಳನ್ನು ತಿಂದು ಜೀವಿಸುತ್ತಾ ಗೂಡುಕಟ್ಟಿ ಮೊಟ್ಟೆಯಿಟ್ಟು ಮರಿ ಮಾಡುತ್ತವೆ. ಮಳೆಗಾಲದಲ್ಲಿ ನದಿ ತುಂಬಿ ಹರಿಯುವುದರಿಂದ ಗೂಡುಗಳು ನಾಶವಾಗುತ್ತವೆ. ಹಾಗಾಗಿ, ಆ ವೇಳೆಗೆ ಪಕ್ಷಿಗಳ ಸಂಖ್ಯೆ ಇಳಿಮುಖವಾಗಿತ್ತದೆ. ದೋಣಿವಿಹಾರವೂ ಇಲ್ಲಿದೆ. ಪಕ್ಷಿಗಳ ಬಗ್ಗೆ ತಿಳಿದಿರುವ ದೋಣಿಯವನೇ ನಗೆ ಪಕ್ಷಿಗಳನ್ನು ತೋರಿಸಿ ಅವುಗಳ ಹೆಸರನ್ನು ಪರಿಚಯಿಸುತ್ತಾನೆ. ಅಂತೆಯೇ ಇಲ್ಲಿನ ಕಚೇರಿಯಲ್ಲಿ ಪಕ್ಷಿಗಳ ಚಿತ್ರಗಳೊಂದಿಗೆ ಅವುಗಳ ಬಗ್ಗೆ ವಿವರಣೆಯಿರುವ ಪುಟ್ಟ ಪುಸ್ತಕವೂ ಲಭ್ಯವಿದೆ. ಇಲ್ಲಿ ಪಕ್ಷಿಗಳನ್ನು ಸೂಕ್ಷ್ಮವಾಗಿ, ಹೆಚ್ಚು ಹೊತ್ತು ನೋಡಲು ಹಾಗೂ ಛಾಯಾಚಿತ್ರ ತೆಗೆಯಲು ಹೆಚ್ಚು ಅನುಕೂಲವಿದೆ. ಸ್ಥಿರಚಿತ್ರ ಕ್ಯಾಮೆರಾ ಹಾಗೂ ವಿಡಿಯೋ ಕ್ಯಾಮೆರಾಗಳಿಗೆ ಬೇರೆ ಬೇರೆ ದರಗಳಿರುತ್ತವೆ. ಝೂಮ್ ಹೆಚ್ಚಿಸುವ ಕ್ಯಾಮೆರಾಗಳಾದರೆ ಛಾಯಾಚಿತ್ರ ತೆಗೆಯಲು ಅನುಕೂಲ. ಏಕೆಂದರೆ, ಪಕ್ಷಿಗಳ ಸಮೀಪ ಹೋಗುತ್ತಿದ್ದಂತೆ ಅವು ಹಾರಿಹೋಗುತ್ತವೆ. ಆದ್ದರಿಂದ ಕೊಂಚ ದೂರದಿಂದಲೇ ಕ್ಯಾಮೆರಾ ಲೆನ್ಸ್ ಝೂಮ್ ಮಾಡಿ ಪಕ್ಷಿಗಳ ಛಾಯಾಚಿತ್ರ ತೆಗೆಯುವುದೊಳ್ಳೇದು. ರಂಗನತಿಟ್ಟುವಿನಲ್ಲಿ ಕಂಡುಬರುವ ಪಕ್ಷಿಗಳಲ್ಲಿ ಬಣ್ಣದ ಕೊಕ್ಕರೆ ಅಥವಾ ಪೇಂಟೆಡ್ ಸ್ಟಾರ್ಕ್ ದೊಡ್ಡ ಗಾತ್ರದ್ದು. ಹಳದಿ ಬಣ್ಣದ ದೊಡ್ಡ ಕೊಕ್ಕು, ಕಿತ್ತಳೆ ಬಣ್ಣದ ಬೋಳುತಲೆ, ಕಪ್ಪು ರೆಕ್ಕೆಗಳು, ನಸಗೆಂಪು ಬಣ್ಣದ ಬಾಲಗಳನ್ನು ಹೊಂದಿದೆ. ಮರಗಳು, ಬಂಡೆಗಳ ಮೇಲೂ ಗುಂಪುಗಳಲ್ಲಿ ಕಂಡುಬರುತ್ತದೆ. ತೆರೆದ ಕೊಕ್ಕಿನ ಕೊಕ್ಕರೆ ಬೂದು ಮಿಶ್ರಿತ ಬಿಳಿ ಬಣ್ಣದ ಮೈಯ್ಯನ್ನೂ ಕಪ್ಪು ರೆಕ್ಕೆಗಳನ್ನೂ ಹೊಂದಿದ್ದು, ಪೂರ್ತಿ ಮುಚ್ಚಿದ್ದರೂ ಮಧ್ಯೆ ತೆರೆದಿರುವಂಥ ಕೊಕ್ಕನ್ನು ಹೊಂದಿರುತ್ತದೆ. ಇದೂ ಮರಗಳ ಮೇಲೆ ಗುಂಪುಗಳಲ್ಲಿರುತ್ತದೆ. ಯುರೇಷಿಯಾದ ಚಮಚ ಕೊಕ್ಕು ಹಕ್ಕಿ ಹಿಮಬಿಳಿ ಬಣ್ಣದ ಮೈ ಹೊಂದಿದ್ದು, ಚಮಚದಾಕಾರದ ಕಪ್ಪು-ಹಳದಿ ಉದ್ದದ ಕೊಕ್ಕಿನಿಂದ ಆಕರ್ಷಿಸುತ್ತದೆ. ಕಪ್ಪುತಲೆಯ ಬಿಳಿ ಐಬಿಸ್ ಕೂಡ ಗುಂಪುಪ್ರಿಯ. ಇದಕ್ಕೆ ನೀಳವಾದ ಡೊಂಕಾಗಿ ಬಾಗಿರುವ ಕೊಕ್ಕಿದೆ. ನೀರುಕಾಗೆ ಅಥವಾ ಲಿಟ್ಲ್ ಕಾರ್ಮೋರೆಂಟ್ ಕಪ್ಪುಬಣ್ಣದ, ಕೊಕ್ಕೆಯಂಥ ತುದಿಯುಳ್ಳ, ಉದ್ದನೆಯ ಕಪ್ಪು ಕೊಕ್ಕುಳ್ಳ ಪಕ್ಷಿ. ವಿವಿಧ ಬಗೆಯ ಹೆರಾನ್ ಪಕ್ಷಿಗಳೂ ಇಲ್ಲಿವೆ. ಕಂದುಬಣ್ಣದ ಮೈಯ ಬಿಳಿರೆಕ್ಕೆಗಳ ಪಾಂಡ್ ಹೆರಾನ್ ಸಾಮಾನ್ಯವಾಗಿ ಒಂಟಿಯಾಗಿರುತ್ತದೆ. ನೈಟ್ ಹೆರಾನ್ ಕಪ್ಪು ಕಿರೀಟದ ತಲೆ, ಬೂದುಬಣ್ಣದ ರೆಕ್ಕೆಗಳು ಹಾಗೂ ಬಿಳಿಯ ದೇಹ ಹೊಂದಿದ್ದು, ಪೊದೆಗಳ ಮೇಲೂ ಮರಗಳ ಮೇಲೂ ಇರಲು ಇಷ್ಟಪಡುತ್ತದೆ. ಇವಲ್ಲದೆ, ಸನ್‌ಬರ್ಡ್, ಮ್ಯಾಗ್‌ಪೀ ರೋಬಿನ್, ಪ್ಯಾರಡೈಸ್ ಪ್ಲೈಕ್ಯಾಚರ್, ಬೀ ಈಟರ್, ಬಾರ್‌ಬೆಟ್, ಹೂಪೋ, ವ್ಯಾಗ್‌ಟೇಲ್, ಮುನಿಯ, ವೀವರ್‌ಪಕ್ಷಿ ಮೊದಲಾದ ಅನೇಕ ಪುಟ್ಟ ಪಕ್ಷಿಗಳನ್ನು ರಂಗನತಿಟ್ಟುವಿನ ಉಪವನದಲ್ಲಿ ನೋಡಬಹುದು. ತಿಂಡಿ- ತಿನಿಸು- ವಸತಿ ಉಪವನದಲ್ಲಿ ಕಾಫಿ- ತಿಂಡಿಗಳು ದೊರೆಯುವ ಉಪಹಾರ ಮಂದಿರವಿದೆ. ಉಪವನವು ಸುಂದರವಾದ ಹಾದಿ, ಮರಗಿಡಗಳು, ತಾವರೆ ಹೂವಿನ ಕೊಳ ಹೊಂದಿದೆ. ಆಹ್ಲಾದಕರ ವಾತಾವರಣ ಮನಸ್ಸು ಹಿಡಿದಿಡುತ್ತದೆ. ದೋಣಿ ವಿಹಾರ ಕೇಂದ್ರದ ಬಳಿ ಒಂದು ಮರದ ಮೇಲೆ ಇರಿಸಿರುವ ವಿವಿಧ ಪಕ್ಷಿಗಳ ಪ್ರತಿಕೃತಿಗಳು ಮನ ಸೆಳೆಯುತ್ತವೆ. ಅಂತೆಯೇ, ಪಕ್ಷಿಗಳ ಚಿತ್ರ ಹಾಗೂ ವಿವರಣೆಗಳುಳ್ಳ ಹಲವಾರು ಫಲಕಗಳಿವೆ. ಬೆಳಗ್ಗೆ ಇಲ್ಲವೇ ಸಂಜೆ ಭೇಟಿಯಿತ್ತರೆ ಪಕ್ಷಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಬಹುದು. ಬೆಳಗ್ಗೆ ಎಂಟೂವರೆಯಿಂದ ಸಂಜೆ 6 ರವರೆಗೆ ಪಕ್ಷಿಧಾಮ ತೆರೆದಿರುತ್ತದೆ. ಮೈಸೂರು ಅಥವಾ ಶ್ರೀರಂಗಪಟ್ಟಣದಲ್ಲಿ ವಾಸ್ತವ್ಯಕ್ಕೆ ಸೌಲಭ್ಯವಿದೆ. ಶ್ರೀರಂಗಪಟ್ಟಣದಲ್ಲಿ ಅಂಬ್ಲೀ ರೆಸಾರ್ಟ್, ಮಯೂರ ಹೋಟೆಲ್‌ಗಳು ತಂಗಲು ಸೂಕ್ತ. ಹೀಗೆಬನ್ನಿ... ರಂಗನತಿಟ್ಟು ಪಕ್ಷಿಧಾಮ ಮಂಡ್ಯ ಜಿಲ್ಲೆಯಲ್ಲಿದೆ. ಶ್ರೀರಂಗಪಟ್ಟಣದಿಂದ 8 ಕಿ.ಮೀ., ಮೈಸೂರಿನಿಂದ 19 ಕಿ.ಮೀ., ಬೆಂಗಳೂರಿನಿಂದ 128 ಕಿ.ಮೀ. ಅಂತರದಲ್ಲಿದೆ. ಮೈಸೂರು ಅಥವಾ ಶ್ರೀರಂಗಪಟ್ಟಣಕ್ಕೆ ಬಸ್‌ನಲ್ಲಿ ಬಂದು ಅಲ್ಲಿಂದ ಖಾಸಗಿ ವಾಹನದಲ್ಲಿ ಬರಬಹುದು. ಬೆಂಗಳೂರಿನಿಂದ ಬರುವುದಾದರೆ ಮದ್ದೂರು- ಮಂಡ್ಯ-ಶ್ರೀರಂಗಪಟ್ಟಣ ದಾರಿಯಲ್ಲಿ ಹೋಗಿ, ಪಶ್ಚಿಮವಾಹಿನಿ ಸೇತುವೆ ಬಳಿ ಬಲಕ್ಕೆ ತಿರುಗಿ 1 ಕಿ.ಮೀ. ಬಳಿಕ ಬಲಕ್ಕೆ ತಿರುಗಿ ಸಾಗಿದರೆ ಪಕ್ಷಿಧಾಮ ಸಮೀಪಿಸಬಹುದು.