ನಿಸಾನ್ ನಂ.1 ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಝುಕಿ ತನ್ನ ಅಧಿಪತ್ಯ ಮುಂದುವರಿಸಿದ್ದರೂ ರಫ್ತು ಪ್ರಮಾಣದಲ್ಲಿ 3ನೇ ... ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಝುಕಿ ತನ್ನ ಅಧಿಪತ್ಯ ಮುಂದುವರಿಸಿದ್ದರೂ ರಫ್ತು ಪ್ರಮಾಣದಲ್ಲಿ 3ನೇ ಸ್ಥಾನಕ್ಕೆ ಕುಸಿದಿದೆ. ಮಾರುತಿಯ ಸ್ಥಾನವನ್ನು ನಿಸಾನ್ ಅಲಂಕರಿಸಿದೆ. ಕಳೆದ ಆರ್ಥಿಕ ವರ್ಷಕ್ಕಿಂತ ಶೇ.16ರಷ್ಟು ರಫ್ತು ಕುಸಿತ ಕಂಡಿರುವ ಮಾರುತಿ ಸುಝುಕಿಯು 2013-14ನೇ ಆರ್ಥಿಕ ವರ್ಷದಲ್ಲಿ 99,832 ಕಾರುಗಳನ್ನು ವಿದೇಶಕ್ಕೆ ಕಳುಹಿಸಿದೆ. ಶೇ.17ರಷ್ಟು ಬೆಳವಣಿಗೆ ಕಂಡಿರುವ ನಿಸಾನ್ ರಫ್ತು ಪ್ರಮಾಣವನ್ನು 1.18 ಲಕ್ಷಕ್ಕೆ ಏರಿಸಿಕೊಂಡಿದೆ. ಆದರೆ ದಕ್ಷಿಣ ಕೊರಿಯಾದ ಹುಂಡೈ ಕಂಪನಿಯ ಮೊದಲ ಸ್ಥಾನ ಮಾತ್ರ ಅಬಾಧಿತ. ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 2.04 ಲಕ್ಷ ಕಾರುಗಳನ್ನು ಹುಂಡೈ ರಫ್ತು ಮಾಡಿತ್ತು. ಮೊದಲು ಆಫ್ರಿಕನ್ ಹಾಗೂ ಯುರೋಪಿಯನ್ ದೇಶಗಳೇ ಮಾರುತಿ ಸುಝುಕಿಯ ಟಾರ್ಗೆಟ್. ಆದರೆ ಆ ದೇಶದಲ್ಲಿನ ನಿಯಮ ಬದಲಾವಣೆ ಹಾಗೂ ತೆರಿಗೆ ನೀತಿಗಳಿಂದ ಮಾರುತಿ ಸುಝುಕಿಯ ರಫ್ತಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಡಟ್ಸನ್‌ನ ಯಶಸ್ಸು ಕೂಡ ನಿಸಾನ್‌ನ ರಫ್ತು ಪ್ರಮಾಣ ಏರಿಕೆಗೆ ಕಾರಣವಾಗಿದೆ. ಇದಲ್ಲದೇ ಪ್ರಸಕ್ತ ಕಳೆದ ಆರ್ಥಿಕ ವರ್ಷದಿಂದ ಬ್ರೆಜಿಲ್ ಸೇರಿದಂತೆ 14 ದೇಶಗಳಿಗೆ ಎಂಜಿನ್ ಬಿಡಿಭಾಗಗಳನ್ನು ರಫ್ತು ಮಾಡಲಾಗುತ್ತಿದೆ. ಈತನ್ಮಧ್ಯ ಏಪ್ರಿಲ್‌ನಲ್ಲಿ ನಿಸಾನ್ ಕಾರುಗಳ ಮಾರಾಟವು ಶೇ.328ರಷ್ಟು ಹೆಚ್ಚಾಗಿದೆ. ಕಳೆದ 2013ರ ಏಪ್ರಿಲ್‌ನಲ್ಲಿ ಕೇವಲ 1239 ಕಾರುಗಳನ್ನು ಮಾರಿದ್ದ ನಿಸಾನ್ ಈ ವರ್ಷದ ಏಪ್ರಿಲ್‌ನಲ್ಲಿ 5,301 ಕಾರುಗಳನ್ನು ಮಾರಿದೆ. ಮತ್ತೊಂದು ವಿಶೇಷವೆಂದರೆ, ಭಾರತದಲ್ಲಿ ಮಾರಾಟವಾಗುವ ನಿಸಾನ್ ಕಾರುಗಳಿಗಿಂತ ರಫ್ತಾಗುವ ಪ್ರಮಾಣವೇ ಹೆಚ್ಚಿದೆ. ಭಾರತದ ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿರುವ ಕಾರು ಕಂಪನಿಗಳಲ್ಲಿ ರಫ್ತು ಪ್ರಮಾಣವೇ ಹೆಚ್ಚಿರುವ ಏಕೈಕ ಕಂಪನಿಯೆಂದರೆ ನಿಸಾನ್.