ಹಂಪಿಯ ತಂಪು ವಿಜಯನಗರ ಸಾಮ್ರಾಜ್ಯದಲ್ಲಿನ ಗತವೈಭವವನ್ನು ಕಣ್ತುಂಬುವಂತೆ ಮಾಡುವ ಐತಿಹಾಸಿಕ ಸ್ಥಳ ಹಂಪಿ. ಇಂಥ ಪರಿಸರದಲ್ಲಿರುವ ಕನ್ನಡ ವಿವಿಯೂ ಹಂಪಿಯಲ್ಲಿರುವ ವಾಸ್ತುಶಿಲ್ಪಗಳ ಮಾದರಿಯಲ್ಲೇ ವಿವಿಧ ಕಟ್ಟಡಗಳನ್ನು ಹೊಂದಿರುವುದು ಹಾಗೂ ವಿವಿಧ ವಿಭಾಗಗಳಿಗೆ, ರಸ್ತೆಗಳಿಗೆ ಮತ್ತು ಪಾರ್ಕ್‌ಗಳಿಗೆ ಕನ್ನಡದ, ಕನ್ನಡಿಗರ ಹೆಸರನ್ನಿಟ್ಟಿರುವುದು ಹೆಮ್ಮೆಯ ವಿಷಯ. ಹೊಸಪೇಟೆಯಿಂದ 16 ಕಿ.ಮೀ. ಅಂತರದಲ್ಲಿರುವ ವಿವಿಗೆ ನಿತ್ಯ ಮುಕ್ತ ಸಂಚಾರಕ್ಕೆ ಸರ್ಕಾರಿ ಬಸ್ ವ್ಯವಸ್ಥೆ ಇದೆ. ಆದರೆ ಸದ್ಯ ಪ್ರವಾಸಿಗರು ಇಲ್ಲಿಗೆ ಬರುವ ಕನಸನ್ನೂ ಕಾಣದ ಮಟ್ಟಿಗೆ ಬಿಸಿಲು ಸುರಿಯುತ್ತಿದೆ. ಇಂಥ ಸ್ಥಿತಿಯಲ್ಲೂ ವಿವಿಯೊಳಗೆ ಎಲ್ಲೆಲ್ಲೂ ಹಚ್ಚಹಸಿರು, ಕಟ್ಟಡಗಳಿಗೆ ಹೊದಿಕೆಯ ರೂಪದಲ್ಲಿ ಗಿಡ, ಮರಗಳು ಅಪ್ಪಿಕೊಂಡು ನೋಡುಗರಿಗೆ ದಾರಿ ತಪ್ಪಿ ಮಲೆನಾಡ ಕಡೆಯೇನಾದರೂ ಬಂದಿದ್ದೇವಾ ಎಂಬ ಅನುಮಾನ ಮೂಡದೇ ಇರದು. ಎಲ್ಲೆಲ್ಲೂ ಕನ್ನಡ ಕಂಪು ವಿವಿಯ ಆಡಳಿತ ಕಚೇರಿಯೂ ಆಕರ್ಷಕವೇ. ಹಾಗೇ ಮುಂದೆ ಬಂದರೆ ಕುಮಾರ ರಾಮ ವನ, ಇದರ ಮುಂದಿನ ದಾರಿಯೇ ಕವಿರಾಜ ಮಾರ್ಗ. ಅಲ್ಲಿಂದ ಮುಂದೆ ಹಕ್ಕ-ಬುಕ್ಕ ವನ, ತ್ರಿಪದಿ ವೃತ್ತ, ವನಸಿರಿ ಇತ್ಯಾದಿ ನಾಮಕರಣಗಳು ಸ್ವಾಗತಿಸುತ್ತವೆ. ಎಲ್ಲೆಲ್ಲೂ ಹಚ್ಚ ಹಸಿರು, ಹಕ್ಕಿಗಳ ಕಲರವ, ಅಲ್ಲಲ್ಲಿ ನವಿಲಗರಿ, ಗ್ರಂಥಾಲಯದ ಆವರಣದಲ್ಲಿರುವ ಶಿಲ್ಪಕಲೆ ಮನಕ್ಕೆ ಮುದ ನೀಡುತ್ತವೆ. ನವರಂಗ ಮತ್ತು ವನಸಿರಿ ದ್ವಾರದಲ್ಲಿ ಕಾಣಸಿಗುವ ಚಿತ್ರಗಳಿಗೆ ಕಲಾವಿದ ಮಕಾಳೆ ಜೀವ ತುಂಬಿದ್ದಾರೆ. ಪ್ರಸ್ತುತ ಜಾನಪದ ತಜ್ಞ, ಬುಡಕಟ್ಟು ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಹಿ.ಚಿ. ಬೋರಲಿಂಗಯ್ಯ ಕುಲಪತಿಗಳಾಗಿದ್ದು, ಹಸಿರು ಚೆಂದನವನಕ್ಕೆ ಬೆಳಕು ಚೆಲ್ಲುವಲ್ಲಿ ಇವರ ಪಾತ್ರವೂ ಪ್ರಮುಖದ್ದಾಗಿದೆ. ವಿಶ್ವವಿದ್ಯಾಲಯದಲ್ಲಿರುವ ಜಾನಪದ ವಿಭಾಗದ ಕಡೆ ಚಲಿಸುವ ದಾರಿಯಲ್ಲೇ ಈ ಶಿಲ್ಪವನವಿದ್ದು, ಪ್ರವಾಸಿಗರಾಗಿ ವಿಶ್ವವಿದ್ಯಾಲಯಕ್ಕೆ ಬಂದರೆ ಇತ್ತ ಬರದೆ ಹೋಗಬೇಡಿ. ಶಿಲ್ಪವೈಭವ ವಿಶ್ವವಿದ್ಯಾಲಯ ರೂಪ ತಾಳುವ ಮೊದಲು ದೊಡ್ಡ ದೊಡ್ಡ ಕಲ್ಲು ಬಂಡೆಗಳು ಕಡಿಯಲಾರದಂತೆ ಇಲ್ಲಿ ನಿಂತಿದ್ದವು. ಅವಕ್ಕೇ ಜೀವ ತುಂಬಿ ಸೃಜನಶೀಲತೆ ಮೆರೆದಿದ್ದಲ್ಲದೆ ವನಕ್ಕೊಂದು ವೈಭವ ತರಲಾಗಿದೆ. ಕಲ್ಲಿನಲ್ಲಿ ಸಿದ್ಧಗೊಂಡಿರುವ ಮೊಸಳೆ, ಮೀನು, ವಿಜಯನಗರ ಲಾಂಛನ, ಯೋಗ ಮಾಡುತ್ತಿರುವ ಮಹಿಳೆ, ಆನೆಯಂಥ ಬಂಡೆಯಲ್ಲಿ ಅನೆಯನ್ನು ಕೆತ್ತಿರುವುದು, ದೊಡ್ಡದಾದ ಆಮೆ, ಅದರ ಮೇಲೆ ಮೀನು ಮತ್ತು ಕಪ್ಪೆ ಇರುವುದೂ, ಮೂರು ಭಾವನಾತ್ಮಕ ಮುಖಗಳುಳ್ಳ ಶಿಲ್ಪಗಳು, ವಿವಿಯ ಲಾಂಛನ, ಹಿರಿದಾದ ಮುಖ ಹೊಂದಿರುವ ಬಂಡೆ, ಮೈತುಂಬಾ ಬಳೆಯಲಂಕಾದ ಮಹಿಳೆಯ ಶಿಲ್ಪ, ಒಳದಾರಿ, ತನ್ನಷ್ಟಕ್ಕೆ ತಾನು ಮಲಗಿದಂತಿರುವ ಕಲ್ಲು, ಆ ಕಲ್ಲಿನ ಮೇಲೆ ಕುಳಿತಂತಿರುವ ಓತಿಕ್ಯಾತ ಹಾಗೂ ಹಲ್ಲಿ! ಸುತ್ತ ಚೆಂದದ ಹುತ್ತಗಳು, ಜಾನಪದ ಕಲೆಯ ಅನೇಕ ದೃಶ್ಯಗಳು, ಅನೇಕ ಭಂಗಿಗಳಲ್ಲಿರುವ ಗಣೇಶ, ಹಾಗೂ ವಿವಿಧ ಭಾವನೆಯ ಚಿತ್ತಾರಗಳು, ಎತ್ತ ನೋಡಿದರೂ ಕಲ್ಲು ಬಂಡೆ, ಹಚ್ಚಹಸಿರ ಗಿಡ ಮರ. ಡಿ.ಆರ್. ಸುರೇಂದ್ರನಾಥ್