ಗೋಲ್ಡ್ ಈಸ್ ಓಲ್ಡ್ ಬೆಂಡೋಲೆ, ಝುಮುಕಿ, ಬುಗುಡಿ, ಬುಲಾಕು, ನತ್ತು ಕಾಲಂದುಗೆ, ಅಡ್ಡಿಕೆ, ಕಂಠೀಹಾರ, ಅವಲಕ್ಕಿ ಸರ, ಕಾಲು ಬಳೆ, ಕಾಲ್ಗೆಜ್ಜೆ, ಕಂಕಣ, ಕಡಗ, ಒಡ್ಯಾಣ, ಡಾಬು, ಪದಕದ ಹಾರ, ಹರಳಿನ ಬಳೆಗಳು, ಕೆಂಪಿನ ಸೆಟ್, ಮುತ್ತಿನ ಸೆಟ್, ಹವಳದ ಬಳೆ ಸರ, ಕಿವಿಯೋಲೆ ಇವೆಲ್ಲಾ ಹಿಂದಿನ ಕಾಲದ ಆಭರಣಗಳು. ಇಂದು ಇವನ್ನು ನೋಡುವುದಿರಲಿ, ಇವುಗಳ ಹೆಸರುಗಳನ್ನು ಕೇಳಿದವರೂ ವಿರಳ. ಓಬೀರಾಯನ ಕಾಲದ ಪುರುಷ ಹಾಗೂ ಮಹಿಳೆಯರು ಧರಿಸಿದ್ದ ಆಭರಣಗಳನ್ನು ತುಂಬಾ ಜತನದಿಂದ ಕಾಪಾಡಿಕೊಂಡು ತಮ್ಮ ಬಂಗಾರದ ಅಂಗಡಿಯಲ್ಲಿ ಪ್ರದರ್ಶನಕ್ಕಿಟ್ಟಿದ್ದಾರೆ ಮಾಜಿ ಶಾಸಕ ರಾಜಶೇಖರ್ ಶೀಲವಂತ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೇದಗುಡ್ಡದ ಸರಾಫ್ ಬಜಾರಿನಲ್ಲಿರುವ ಅವರ ಶತಮಾನ ಕಂಡ ಬಂಗಾರದ ಅಂಗಡಿಯಲ್ಲಿ ಈ ಹಳೆಯ ಆಭರಣಗಳು ಶೋಕೇಸನ್ನು ಅಲಂಕರಿಸಿವೆ. ಮಲ್ಲಿಕಾರ್ಜುನ ಶೀಲವಂತ ಹೇಳುವಂತೆ, ಅದೆಷ್ಟೋ ಆಗಿನ ಕಾಲದ ವಸ್ತುಗಳು ಕಣ್ಮರೆಯಾಗುತ್ತಿವೆ. ನಮ್ಮ ಮುಂದಿನ ಪೀಳಿಗೆಯವರ ಸಲುವಾಗಿ ಅವುಗಳನ್ನು ನಾವು ಕಾಪಾಡಿಕೊಂಡು ಬಂದಿದ್ದೇವೆ. ಎಂಥ ಕಷ್ಟ ಕಾಲದಲ್ಲೂ ನಮ್ಮ ತಾತನವರಿಂದ ಹಿಡಿದು ನಮ್ಮ ತಲೆಮಾರಿನವರೆಗೂ ಉಳಿಸಿಕೊಂಡು ಬಂದಿದ್ದೇವೆ. ನೂರೈವತ್ತು ವರ್ಷಗಳ ಹಿಂದಿನ ತಂಜಾವೂರು ಪೇಂಟಿಂಗ್ಸ್‌ಗಳೂ ನಮ್ಮ ಅಂಗಡೀಲಿ ನೋಡಲಿಕ್ಕೆ ಸಿಕ್ತವೆ. ಅಲ್ಲದೇ ನಮ್ಮ ತಾತನವರ ಕಾಲದಿಂದಲೂ ನಮ್ಮ ಅಂಗಡೀಲಿ ಬಂಗಾರವನ್ನು ಉದ್ರಿ(ಕ್ರೆಡಿಟ್ ಆಗಿ) ಕೊಡಲಾಗುತ್ತಿದೆ ಎಂದು ಅಭಿಮಾನದಿಂದ ಹೇಳುತ್ತಾರೆ. ಇದೀಗ ನೆಕ್ಲೇಸ್‌ಗಳ ಕಾಲ, ನೋಡಲು ಬಂಗಾರದಂತಿದ್ದರೂ ಬಂಗಾರವಲ್ಲ. ಒಂದು ಗ್ರಾಂ ಬಂಗಾರದ ಆಭರಣಗಳ ಬೇಡಿಕೆ ಹೆಚ್ಚುತ್ತಿದೆ. ಕಾರಣ ದಿನೇ ದಿನೆ ಮುಗಿಲೆತ್ತರಕ್ಕೆ ಜಿಗಿಯುತ್ತಿರುವ ಬಂಗಾರದ ಬೆಲೆ! ಆದರೂ ಬಂಗಾರದ ಆಭರಣಗಳ ಮೋಹವೇನೂ ಕಡಿಮೆಯಾಗಿಲ್ಲ. ಹಿಂದಿನ ಕಾಲದ ಅಜ್ಜಿಯರು ತೊಡುತ್ತಿದ್ದ ಆಭರಣಗಳು ಈಗಿನ ಮಹಿಳೆಯರಿಗೂ ಗೊತ್ತಿಲ್ಲ ಎಂದು ಬರಹಗಾರ್ತಿ ನಾಗಲಕ್ಷ್ಮೀ ಕಡೂರ ವಿಷಾದದಿಂದ ಹೇಳುತ್ತಾರೆ. ಹಿಂದಿನ ಕಾಲದಲ್ಲಿ ಆಪತ್ತಿಗಾಗುವುದೆಂದು ಹೊಟ್ಟೆ ಬಟ್ಟೆ ಕಟ್ಟಿ ಬೆಳ್ಳಿ-ಬಂಗಾರ ಮಾಡಿಸಿ ಇಡುತ್ತಿದ್ದರು. ಅದಕ್ಕೊಂದು ಮೌಲ್ಯವಿತ್ತು. ಈಗ ಬಂಗಾರದೊಂದಿಗೆ ಗಿಲೀಟಿನ ಒಡವೆಗಳನ್ನು ಸೇರಿಸಿ, ಧರಿಸಿ ತಮ್ಮ ಐಶ್ವರ್ಯ ಪ್ರದರ್ಶಿಸುವವರೆ ಬಹಳ ಮಂದಿ. ಎಲ್ಲದಕ್ಕೂ ಮ್ಯಾಚಿಂಗ್ ಮಾಡಲು ಬಯಸಿ ಮಾರುಕಟ್ಟೆಯಲ್ಲಿ ಸಿಗುವ ಅಗ್ಗದ ಆಭರಣಗಳಿಗೆ ಮಾರು ಹೋಗಿದ್ದಾರೆ. ಇಂಥ ಸಂದರ್ಭದಲ್ಲಿ ಅಂಗಡೀಲಿ ಹಳೆಯ ತಲೆಮಾರಿನ ಆಭರಣಗಳನ್ನಿಟ್ಟು ನೋಡಲು ಸಿಗುತ್ತವೆ ಎನ್ನುವುದೊಂದೆ ಖುಷಿಯ ವಿಚಾರ. ನೋಡಲು ಬಂದವರಿಗೆ ತಾಳ್ಮೆಯಿಂದ ತೋರಿಸುತ್ತಿರುವ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಮಲ್ಲಿಕಾರ್ಜುನ ಅವರ ಸಂಪರ್ಕ ಸಂಖ್ಯೆ- 94481 44800. = ಪ್ರವೀಣರಾಜು ಸೊನ್ನದ