ಚಕ್ರ ಇದು ತೀರಾ ಕಾಮನ್ ಬಿಡಿ. ಕಾರು ಅಥವಾ ಬೈಕ್ ಓಡಲು ಎರಡರಿಂದ ನಾಲ್ಕು ಟಯರ್ ಬೇಕು. ಅದಕ್ಕೆ ಆಗಾಗ ಗಾಳಿ ತುಂಬಿಸಬೇಕು. ಅದು ಸವೆಯುತ್ತ ಬಂದಾಗ ಅದನ್ನು ಬದಲಿಸಬೇಕು. ಹೆಚ್ಚಿನ ಕಾರು ಮತ್ತು ಬೈಕ್ ಮಾಲಿಕರಿಗೆ ಇಷ್ಟೇ ಗೊತ್ತಿರುವುದು. ಆದರೆ, ಟಯರನ್ನು ಕೂಡ ಓದಬಹುದು ಎಂಬುದು ನಿಮ್ಗೆ ಗೊತ್ತೇ? ಟಯರ್‌ನಲ್ಲಿ ಒಂದಷ್ಟು ಅಂಕಿ- ಸಂಖ್ಯೆಗಳು ಮತ್ತು ಕಂಪನಿ ಹೆಸರು ಬರೆದುಕೊಂಡಿರುವುದನ್ನು ಗಮನಿಸಿರುತ್ತೀರಿ. ಅದರಲ್ಲಿ ಕಂಪನಿ ಹೆಸರು ಬಿಟ್ಟರೆ ನಿಮಗೆ ಬೇರೇನೂ ಅರ್ಥವಾಗಿರುವುದಿಲ್ಲ. ಅಲ್ಲಿಗೆ ನಿಮ್ಮ ಟಯರ್ ಬಗ್ಗೆ ನಿಮಗೇನೂ ಗೊತ್ತಿಲ್ಲವೆಂದಾಯಿತು. ನಿಮ್ಮ ಕಾರಿನ ಮೈಲೇಜು, ಅದರ ನಿರ್ವಹಣೆ, ರೋಡ್ ಗ್ರಿಪ್, ಚಲಿಸುವಾಗಿನ ಶಬ್ದ ಹೀಗೆ ಪ್ರತಿಯೊಂದು ನಿಮ್ಮ ವಾಹನದ ಟಯರ್ ಮೇಲೂ ನಿರ್ಧಾರವಾಗಿರುತ್ತದೆ. ಟಯರ್ ಮೇಲೆ ಉದಾಹರಣೆಗೆ- 195-55-16 ಆರ್- 87ವಿ ಮಾದರಿಯಲ್ಲಿ ಬರೆಯಲಾಗಿರುತ್ತದೆ. ಬೇರೆ ಬೇರೆ ವಾಹನದ ಟಯರ್‌ಗಳ ಮೇಲೆ ಬೇರೆ ಬೇರೆ ಅಂಕೆಗಳಿರುತ್ತವೆ. ಇದರಲ್ಲೇ ನಿಮ್ಮ ವಾಹನದ ಟಯರ್‌ನ ಸಂಪೂರ್ಣ ಮಾಹಿತಿಯೂ ಅಡಗಿದೆ. 195 ಅಂದರೆ ಟಯರ್‌ನ ಅಗಲ. ಅಂದರೆ ನೆಲಕ್ಕೆ ತಾಗುವ ಭಾಗದ ಅಳತೆ 195 ಮಿ.ಮೀ. ಅಂತ ಅರ್ಥ. ಅದರ ನಂತರ ಇರುವ ಅಂಕಿ ಸೆಕ್ಷನ್ ವಿಡ್ತ್ ಅಥವಾ ಟಯರ್‌ನ ಬದಿಯ ಅಳತೆ. ಅಂದರೆ ನಿಮ್ಮ ರಿಮ್‌ನಿಂದ ಟಯರ್ ನೆಲಕ್ಕೆ ತಾಗುವಲ್ಲಿನ ನಡುವಿನ ಅಂತರ. ಅದರ ನಂತರ ಇರುವ ಅಳತೆ ನಿಮ್ಮ ಟಯರ್‌ನ ಒಳ ವರ್ತುಲದ ಅಳತೆ. ಅದೇ ಗಾತ್ರದ ರಿಮ್‌ಗೆ ಮಾತ್ರ ನೀವು ಆ ಟಯರ್ ಅಳವಡಿಸಬಹುದು. ಅಂದರೆ ನಿಮ್ಮ ವಾಹನದ ರಿಮ್‌ನ ಅಳತೆಯೂ ಇದೇ ಆಗಿರಬೇಕು. 'ಆರ್‌' ಎಂದು ಬರೆದಿದ್ದರೆ ರೇಡಿಯಲ್ ಟಯರ್ ಎಂದರ್ಥ. ಅದರ ನಂತರದ್ದು ಟಯರ್‌ನ ಭಾರ ಹೊರುವ ಸಾಮರ್ಥ್ಯ ಹಾಗೂ ಅದರ ನಂತರ ಇರುವ ಇಂಗ್ಲಿಷ್ ಅಕ್ಷರ ಸ್ಪೀಡ್ ರೇಟಿಂಗ್‌ಗೆ ಸಂಬಂಧಿಸಿದ್ದು. ಸ್ಪೀಡ್ ರೇಟಿಂಗ್ ಟಯರ್ ಸ್ಪೀಡ್ ರೇಟಿಂಗ್ ಕೂಡ ಟಯರ್ ಮೇಲೆಯೇ ನಮೂದಿತವಾಗಿರುತ್ತದೆ. ಅಂದರೆ ಗರಿಷ್ಠ ಎಷ್ಟು ವೇಗವನ್ನು ಟಯರ್ ತಡೆದುಕೊಳ್ಳಬಹುದು ಎಂಬುದು. ಹಲವು ಮಾದರಿಯ ಸ್ಪೀಡ್ ರೇಟಿಂಗ್‌ಗಳಿವೆ. ಎ1ನಿಂದ ವೈ- ಝೆಡ್‌ತನಕದ ಸ್ಪೀಡ್ ರೇಟಿಂಗ್‌ಗಳಿವೆ. ಮುಖ್ಯವಾಗಿ ಬಳಕೆಯಲ್ಲಿರುವ ಕೆಲವನ್ನು ಇಲ್ಲಿ ನೀಡಲಾಗಿದೆ. ಇದರರ್ಥ ನೀವು ಈ ವೇಗದಲ್ಲಿ ವಾಹನ ಚಲಾಯಿಸಿದರೂ ಏನೂ ಆಗುವುದಿಲ್ಲ ಎಂದು ಅರ್ಥವಲ್ಲ. ಆದರೆ ಇಷ್ಟು ವೇಗದಲ್ಲಿ ವಾಹನವನ್ನು ಬಹಳ ಹೊತ್ತು ಚಲಾಯಿಸಿದರೂ ಟಯರ್ ಅದನ್ನು ತಡೆದುಕೊಳ್ಳಬಲ್ಲದು ಎಂದರ್ಥ. ಇಷ್ಟೇ ವೇಗದಲ್ಲಿ ತಿರುವು ಅಥವಾ ಬ್ರೇಕಿಂಗ್ ದೂರವನ್ನು ಇದು ಖಾತರಿಪಡಿಸುವುದಿಲ್ಲ ಎಂಬುದು ನೆನಪಿರಲಿ. ಭಾರ ಹೊರುವ ತಾಕತ್ತು ನಿಮ್ಮ ಟಯರ್‌ನ ಭಾರ ಹೊರುವ ತಾಕತ್ತು ಎಷ್ಟು ಎಂಬುದು ಕೂಡ ಟಯರ್ ಮೇಲೆ ನಮೂದಾಗಿರುತ್ತದೆ. ಭಾರದ ಸರಕು ಸಾಗಿಸುವ ವಾಹನಗಳು ಹೆಚ್ಚು ಭಾರ ಹೊರುವ ಸಾಮರ್ಥ್ಯದ ಟಯರ್‌ಗಳನ್ನು ಬಳಸಬೇಕಾಗುತ್ತದೆ. ಕಡಿಮೆ ಸಾಮರ್ಥ್ಯದ ಟಯರನ್ನು ಹೆಚ್ಚು ಭಾರ ಹೊರಲು ಬಳಸಿದರೆ ಆಗ ಅಪಾಯವಾಗುವ ಸಾಧ್ಯತೆಗಳೇ ಹೆಚ್ಚು. ಆಯ್ಕೆ ಹೇಗೆ? ಇವಿಷ್ಟು ತಿಳಿದುಕೊಂಡರೆ ಸಾಲದು. ನೀವು ಬಿಸಿಲಿನ ನಾಡಲ್ಲಿ ಹೆಚ್ಚು ವಾಹನ ಚಲಾಯಿಸುತ್ತೀರಾ? ಸದಾ ಮಳೆ ಇರುವ ಪ್ರದೇಶದಲ್ಲಿ ಹೆಚ್ಚು ಚಲಾಯಿಸುತ್ತೀರಾ? ನಗರ ಪ್ರದೇಶದಲ್ಲಿ ಹೆಚ್ಚು ಓಡಿಸುತ್ತೀರಾ? ಹೆದ್ದಾರಿಯಲ್ಲಿ ಹೆಚ್ಚು ಓಡಿಸುತ್ತೀರಾ ಎಂಬುದು ಕೂಡಾ ನಿಮ್ಮ ಟಯರ್ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈಗೆಲ್ಲ ಇವುಗಳಿಗೆ ತಕ್ಕಂತೆ ವಿವಿಧ ಮಾದರಿಯ ಟ್ರೆಡ್‌ಗಳನ್ನು ಹೊಂದಿರುವ ಟಯರ್‌ಗಳು ಮಾರುಕಟ್ಟೆಗೆ ಬಂದಿವೆ. ಮಳೆ ಇರುವ ಪ್ರದೇಶದಲ್ಲೇ ಹೆಚ್ಚು ವಾಹನ ಚಲಾಯಿಸುವವರಿಗೆ ಟ್ರೆಡ್‌ಗಳ ನಡುವೆ ಕಾಲುವೆ ಮಾದರಿಯ ಲೈನ್‌ಗಳನ್ನು ಹೊಂದಿರುವ (ನೀರು ಸರಾಗವಾಗಿ ಹರಿದುಹೋಗಲು ಅನುಕೂಲವಾಗುವಂತೆ) ಟಯರ್‌ಗಳು ಬಂದಿವೆ. ಟಯರ್ ನಿರ್ವಹಣೆ ನಿಮ್ಮ ವಾಹನಕ್ಕೆ ಮತ್ತು ನಿಮ್ಮ ಚಾಲನಾ ಪರಿಸ್ಥಿತಿಗೆ ತಕ್ಕಂತೆ ಟಯರ್ ಆಯ್ಕೆ ಮಾಡಿಕೊಂಡರೆ ಮುಗಿಯಲಿಲ್ಲ. ಅದನ್ನು ಸರಿಯಾಗಿ ನಿರ್ವಹಿಸುವ ಜವಾಬ್ದಾರಿ ಕೂಡ ಇದೆ. ಉತ್ತಮ ರಸ್ತೆಯಲ್ಲಿ ಸಂಚರಿಸುವವರಾದರೆ 5000-6000 ಕಿ.ಮೀ.ಗೊಮ್ಮೆ, ಕೆಟ್ಟ ರಸ್ತೆಯಲ್ಲಿ ವಾಹನ ಓಡಿಸುವವರಾಗಿದ್ದರೆ 3000-4000 ಕಿ.ಮೀ. ಗೊಮ್ಮೆ ವೀಲ್‌ಅಲೈನ್‌ಮೆಂಟ್ ಮಾಡಿಸಿಕೊಳ್ಳಿ. ಇಲ್ಲವಾದಲ್ಲಿ ನಿಮ್ಮ ಟಯರ್ ಒಂದೇ ಬದಿಗೆ ಹೆಚ್ಚು ಸವೆದು ಸಮತೋಲನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. 7-15 ದಿನಗಳಿಗೊಮ್ಮೆ ನಿಮ್ಮ ಟಯರ್‌ಗಳ ಗಾಳಿಯ ಒತ್ತಡ ತಪಾಸಣೆ ನಡೆಸಿ. ಇದು ನಿಮ್ಮ ಟಯರ್ ಬಾಳಿಕೆ ಮತ್ತು ನಿಮ್ಮ ಕಾರಿನ ಮೈಲೇಜ್‌ನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಾರುಗಳಿಗಾದರೆ 5000 ಕಿ.ಮೀ.ಗೊಮ್ಮೆ ಟಯರ್ ರೊಟೇಶನ್ ಮಾಡಿಸಿ. ಇದರಿಂದ ಟಯರ್‌ನ ಅಸಮಾನ ಸವೆತ ತಡೆಯಬಹುದು. ಟಯರ್ ಯಾವಾಗ ಬದಲಿಸಬೇಕು? ಇದು ಸಾಕಷ್ಟು ಜನರನ್ನು ಕಾಡುವ ಪ್ರಶ್ನೆ. ಇದಕ್ಕೆ ನಿಮ್ಮ ಟಯರ್‌ನಲ್ಲೇ ಉತ್ತರವಿರುತ್ತದೆ. ಪ್ರತಿ ಟಯರ್‌ನಲ್ಲೂ ಅಲ್ಲಲ್ಲಿ ಕೆಲವು ಚಿನ್ಹೆಗಳಿರುತ್ತವೆ. (ಬೇರೆ ಬೇರೆ ಕಂಪನಿಗಳು ಬೇರೆ ಬೇರೆ ಚಿನ್ಹೆಗಳನ್ನು ಬಳಸುತ್ತವೆ) ನಿಮ್ಮ ಟಯರ್‌ನ ಟ್ರೆಡ್ ನಡುವೆಯೂ ಕೆಲವು ಚಿನ್ಹೆಗಳಿರುತ್ತವೆ. ನಿಮ್ಮ ಟಯರ್ ಸವೆದು ಆ ಚಿನ್ಹೆಯನ್ನು ಸಮೀಪಿಸಿದ್ದರೆ ನೀವು ಟಯರ್ ಬದಲಿಸುವ ಸಮಯ ಬಂದಿದೆ ಎಂದರ್ಥ. ಬದಲಾಯಿಸುವಾಗ ಕನಿಷ್ಠ ಎರಡು ಟಯರ್‌ಗಳನ್ನು ಒಟ್ಟಿಗೆ ಬದಲಿಸಿ. ಅಕ್ಕಪಕ್ಕದಲ್ಲಿ ಹಳೆಯ ಮತ್ತು ಹೊಸ ಟಯರ್ ಬಳಸಬೇಡಿ. - ವಕ್ರದಂತ