ನೋಡಿದ್ದೀರಾ ಇಂಥಾ ಕಾರು ನ್ಯಾನೋದಿಂದ ಆರಂಭಿಸಿ ಟೊಯೊಟಾ ಫಾರ್ಚುನರ್, ಬೆಂಝ್, ಆಡಿ, ಬಿಎಂಡಬ್ಲ್ಯು ಕಂಪನಿಗಳು ಆಕರ್ಷಕ ಶೈಲಿಯ ಕಾರುಗಳನ್ನು ಮಾರುಕಟ್ಟೆಗೆ ಬಿಟ್ಟಿವೆ. ಚೆಂದಕಿಂತ ಚೆಂದ ನಾನೇ ಸುಂದರ ಎಂದು ಸೌಂದರ್ಯದಲ್ಲಿ ಒಂದನ್ನೊಂದು ಮೀರಿಸುವಂತಿವೆ. ದುಡ್ಡೊಂದಿದ್ದರೆ ಯಾವುದನ್ನು ಕೊಳ್ಳಬೇಕು ಎಂದು ನಿರ್ಧರಿಸುವುದು ಸುಲಭವಲ್ಲ. ಈ ದೃಷ್ಟಿಯಿಂದ ನೋಡಿದರೆ ದುಡ್ಡಿಲ್ಲದವನೇ ನಿಶ್ಚಿಂತ! ಆದರೆ, ಈ ಕಾರುಗಳು ಈ ಶೈಲಿಗೆ, ಅದಕ್ಕೆ ಬರುವುದಕ್ಕಿಂತ ಮೊದಲು ಸಾಕಷ್ಟು ಬದಲಾವಣೆಗಳಾಗಿವೆ. ಪ್ರಯೋಗಗಳಾಗಿವೆ. ಈ ಹಾದಿಯಲ್ಲಿ ಕೆಲವು ವಿಚಿತ್ರ ಕಾರುಗಳ ನಿರ್ಮಾಣವೂ ನಡೆದಿದೆ. ಅಂತಹ ಕೆಲವು ವಿಚಿತ್ರ ಕಾರುಗಳ ಚಿತ್ರ ಸಹಿತ ಮಾಹಿತಿ ನಿಮ್ಮ ಓದಿಗಾಗಿ. ಪೀಲ್ ಪಿ50 ಮೂರೇ ಚಕ್ರ. ಎಡಬದಿಗೆ ಒಂದೇ ಬಾಗಿಲು. ಒಂದೇ ಹೆಡ್‌ಲೈಟ್. ಇದರಲ್ಲಿ ಒಬ್ಬರಿಗೆ ಮತ್ತು ವಸ್ತುಗಳ ಚೀಲ ಇರಿಸಿಕೊಳ್ಳುವಷ್ಟು ಜಾಗ ಮಾತ್ರವಿದೆ. ಇದು ಇಂದಿಗೂ ಜಗತ್ತಿನ ಅತ್ಯಂತ ಚಿಕ್ಕ ಕಾರು ಈಗಲೂ ಖರೀದಿಸಬಹುದು. ಆದರೆ ಖರೀದಿಗೂ ಮುನ್ನ ಕೊಂಚ ಯೋಚಿಸಿ. ಯಾಕೆಂದರೆ ಇದಕ್ಕೆ ರಿವರ್ಸ್‌ಗೇರ್ ಇಲ್ಲ.ಈ ಪುಟ್ಟ ಕಾರು ಜನಿಸಿದ್ದು 1962ರಲ್ಲಿ. ಉತ್ಪಾದನೆ ಮಾಡಿದ್ದು ಕೇವಲ 50 ಕಾರುಗಳನ್ನು. ಅವುಗಳಲ್ಲಿ 27 ಇನ್ನೂ ಇವೆ! 2010ರಲ್ಲಿ ಇಂಗ್ಲೆಂಡ್‌ನಲ್ಲಿರುವ ಪೀಲ್ ಎಂಜಿನಿಯರಿಂಗ್ ಲಿಮಿಟೆಡ್ ಕಂಪನಿ ಈ ಕಾರುಗಳ ಮರುಉತ್ಪಾದನೆ ಆರಂಭಿಸಿದೆ. ಹೊಸ ಕಾರು ವಿದ್ಯುತ್ ಚಾಲಿತ ಯಂತ್ರ ಹೊಂದಿದ್ದು, ಕೇವಲ 16 ಕಿ.ಮೀ. ವೇಗದಲ್ಲಿ ಮಾತ್ರ ಚಲಿಸಬಲ್ಲದು. 2011ರಲ್ಲಿ ಪೆಟ್ರೋಲ್ ಎಂಜಿನ್ ಹೊಂದಿರುವ ಕಾರುಗಳ ಉತ್ಪಾದನೆಯೂ ಆರಂಭವಾಗಿದೆ. ಇದನ್ನು 45 ಕಿ.ಮೀ. ವೇಗದಲ್ಲಿ ಚಲಿಸುವಂತೆ ವೇಗನಿಯಂತ್ರಕ ಅಳವಡಿಸಲಾಗಿದೆ. ಬಿಎಂಡಬ್ಲ್ಯು ಇಸೆಟ್ಟಾ ತುಂಬಾ ಚಿಕ್ಕ ಕಾರು. ಇಬ್ಬರಿಗಷ್ಟೇ ಅವಕಾಶ. ಈ ಕಾರಿನ ವೈಶಿಷ್ಟ್ಯವೆಂದರೆ ಇದರ ಮುಂಭಾಗದಲ್ಲೇ ಬಾಗಿಲು! ಒಂದು ಕಾಲದಲ್ಲಿ ಈ ಕಾರು ಸಿಂಗಲ್ ಸಿಲೆಂಡರ್ ವಿಭಾಗದಲ್ಲಿ ಜಗತ್ತಿನಲ್ಲಿ ಅತಿಹೆಚ್ಚು ಮಾರಾಟವಾಗುತ್ತಿದ್ದ ಕಾರಾಗಿತ್ತು ಎಂದರೆ ನೀವು ನಂಬಬೇಕು. ಒಟ್ಟು 1,61,728 ಕಾರುಗಳು ಮಾರಾಟವಾಗಿವೆ. ಈ ಕಾರು 3 ಲೀಟರ್ ಪೆಟ್ರೋಲ್‌ಗೆ 100 ಕಿ.ಮೀ. ಚಲಿಸುತ್ತಿತ್ತು. ಈ ಕಾರು ಕೇವಲ 7.5 ಅಡಿ ಉದ್ದ ಮತ್ತು 4.5 ಅಡಿ ಅಗಲವಾಗಿತ್ತು. 3 ಮತ್ತು 4 ಚಕ್ರ ಎರಡೂ ಮಾದರಿಯಲ್ಲಿ ಕಾರು ಲಭ್ಯವಿತ್ತು. ಸಿಂಗಲ್ ಸಿಲೆಂಡರ್‌ನ 298ಸಿಸಿ ಫೋರ್‌ಸ್ಟ್ರೋಕ್ ಎಂಜಿನ್ ಈ ಕಾರಿಗೆ ಶಕ್ತಿ ತುಂಬಿತ್ತು. ನೋಡಲು ನೀರಿನ ಗುಳ್ಳೆರೀತಿ ಕಾಣಿಸುತ್ತಿದ್ದರಿಂದ ಇದಕ್ಕೆ ಬಬಲ್‌ಕಾರು ಎಂಬ ಹೆಸರೂ ಇತ್ತು. ಆರಂಭದಲ್ಲಿ ಈ ಕಾರಿಗೆ ಮೂರು ಚಕ್ರ (ಮುಂದೆ 2 ಹಿಂದೆ 1) ಇತ್ತು. ಆದರೆ ಕಾರು ಮಗುಚುತ್ತಿತ್ತು. ಆದ್ದರಿಂದ ಆಮೇಲೆ ನಾಲ್ಕು ಚಕ್ರದ ಕಾರನ್ನಾಗಿ ಪರಿವರ್ತಿಸಲಾಯಿತು. ಇಟಾಲಿಯನ್ ಮೂಲದ ಇಸೊ ಸ್ಪಾ ಕಂಪನಿ ಮೊದಲು ಈ ಕಾರನ್ನು ತಯಾರಿಸಿತು. ಇಸೆಟ್ಟಾ ಅಂದರೆ ಇಟಾಲಿಯನ್ ಭಾಷೆಯಲ್ಲಿ ಚಿಕ್ಕದು ಎಂದರ್ಥವಂತೆ. 1956-62ರ ಅವಧಿಯಲ್ಲಿ ಈ ಕಾರು ಭರ್ಜರಿ ಜನಪ್ರಿಯತೆ ಗಳಿಸಿತ್ತು. ಆರಂಭದಲ್ಲಿ ತಯಾರಿಸಲಾದ ಇಸೆಟ್ಟಾ ಕಾರುಗಳಿಗೆ ರಿವರ್ಸ್ ಗೇರ್ ಕೂಡ ಇರಲಿಲ್ಲವಂತೆ! ಇನ್ನೂ ಒಂದು ವಿಚಿತ್ರವೆಂದರೆ ಈ ಕಾರನ್ನು ರೂಪಿಸಿದ ಇಟಾಲಿಯನ್ ಕಂಪನಿ ಫ್ರಿಡ್ಜ್‌ಗಳನ್ನು ತಯಾರಿಸುವ ಕಂಪನಿಯಾಗಿತ್ತು! ಬಹುಶಃ ಅದಕ್ಕಾಗಿಯೇ ಕಾರಿನ ಮುಂಭಾಗವನ್ನೇ ಬಾಗಿಲಾಗಿ ಮಾಡಿರಬೇಕು! ಇಂದಿಗೂ ಇಸೆಟ್ಟಾ ಕಾರುಗಳನ್ನು ದುರಸ್ತಿ ಮಾಡುವ ಸಂಸ್ಥೆಗಳಿವೆ! ಡೆವಿಸ್ ಡೆವನ್ ಯಾವ ದಿಕ್ಕಿನಿಂದಲೂ ಕಾರಿನಂತೆ ಕಾಣದು. ಥಟ್ಟನೆ ನೋಡಿದರೆ ಬೋಟಿನಂತೆ ಕಾಣುತ್ತದೆ. ಆದರೆ ಇದು ಕಾರು. ಪ್ಲೀಸ್ ನಂಬಿ. ಇದಕ್ಕಿದ್ದಿದ್ದು ಮೂರೇ ಚಕ್ರ! ಈ ಕಾರು ಉತ್ಪಾದನೆಯಾಗಿದ್ದು 1940-48ರಲ್ಲಿ. ಮೊದಲು ಇದನ್ನು ತಯಾರಿಸಿದ್ದು ಫ್ರಾಂಕ್ ಕುರ್ತಿಸ್ ಎಂಬಾತ. ಈ ಕಾರನ್ನು ಕೇವಲ 13 ಅಡಿ ಜಾಗದಲ್ಲಿ ತಿರುಗಿಸಬಹುದಾಗಿತ್ತು. ಕಾರಿಗಿಂತ ಒಂದೆರಡು ಇಂಚು ಹೆಚ್ಚು ಜಾಗ ಇದ್ದಲ್ಲಿ ಪಾರ್ಕ್ ಮಾಡಬಹುದಾಗಿತ್ತು. ಪ್ರತಿ ಗಂಟೆಗೆ 80 ಮೈಲಿಯಷ್ಟು ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿತ್ತು. ಆದರೆ ಕಾರು ಮಾರುಕಟ್ಟೆಗೆ ಬರುವ ಮೊದಲೇ ಈತನ ಮೇಲೆ ಕೆಲವು ಪ್ರಕರಣಗಳು ದಾಖಲಾಗಿ, ಜೈಲಿಗೆ ಹೋದ. ಅಷ್ಟೊತ್ತಿಗಾಗಲೇ 15 ಕಾರುಗಳನ್ನು ನಿರ್ಮಿಸಿದ್ದ. ಗ್ಯಾರಿ ಡೆವಿಸ್ ಎಂಬವರು ಇದನ್ನು ಖರೀದಿಸಿದರು. ಅವರು ಅಲ್ಯೂಮಿನಿಯಂ ಬಾಡಿ ನಿರ್ಮಿಸಿ, ಕೇವಲ 13 ಕಾರುಗಳನ್ನು ಮಾತ್ರ ತಯಾರಿಸಿದರು. ಈ ಕಾರಿಗೆ ಜನರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತಂತೆ. ದಿನಕ್ಕೆ 50 ಕಾರುಗಳಂತೆ ಬುಕಿಂಗ್ ಆಗುತ್ತಿತ್ತು. ಆದರೆ ಹೂಡಿಕೆದಾರರಿಂದ ಸಂಗ್ರಹಿಸಿದ ಹಣಕ್ಕೆ ಪ್ರತಿಫಲ ನೀಡದಿರುವುದು ಮತ್ತು ಉದ್ಯೋಗಿಗಳಿಗೆ ವೇತನ ನೀಡದಿರುವುದಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿ, ಗ್ಯಾರಿ ಡೆವಿಸ್ 1948ರಲ್ಲಿ ಕಂಪನಿಯನ್ನೇ ಮುಚ್ಚಬೇಕಾಯಿತು. ತೆರಿಗೆ ಹಣಕ್ಕಾಗಿ 1950ರಲ್ಲಿ ಕಂಪನಿಯನ್ನು ಮಾರಾಟಮಾಡಲಾಯಿತು. ಸಿಟ್ರಾನ್ 2 ಸಿವಿ ಕೊಗೊಲಿನ್ ಅತ್ಯಂತ ವಿಚಿತ್ರವಾದ ಕಾರು ಇದು. ಇದಕ್ಕೆ ಹಿಂಭಾಗವೇ ಇಲ್ಲ! ಎರಡೂ ಮುಂಭಾಗ!! ಇದೊಂಥರ ಹಿಂದೂ ಬಾಲ ಮುಂದೂ ಬಾಲ ಕ್ಯಾಂಪುಸ್ಕನ್ ಮರಿ! ಸ್ವತಃ ಮಾಲೀಕನಿಗೂ ಮುಂಭಾಗ ಯಾವುದು ಎಂಬುದನ್ನು ಥಟ್ಟನೆ ಹೇಳುವುದು ಕಷ್ಟವಾಗಬಹುದು. ಆದರೆ ನೀವು ಚಿಂತಿಸಬೇಕಿಲ್ಲ. ಯಾಕೆಂದರೆ ಈ ಕಾರನ್ನು ಎರಡೂ ಕಡೆಯೂ ಚಲಾಯಿಸಬಹುದು! ನೀವು ಯಾವ ಕಡೆಗೆ ಹೋಗಬೇಕೊ ಆ ಕಡೆಗೆ ಕುಳಿತು ಚಲಾಯಿಸಿಕೊಂಡು ಹೋದರಾಯಿತು. ತಿರುಗಿಸುವ ಜಂಜಾಟವೇ ಇಲ್ಲ. ಫ್ರೆಂಚ್‌ನ ನಗರವೊಂದರಲ್ಲಿ ಈ ಕಾರು ಇತ್ತು. ಅದೇ ನಗರದ ಕೊಗೊಲಿನ್ ಹೆಸರನ್ನೇ ಇದಕ್ಕೆ ನೀಡಲಾಗಿದೆ. ಎರಡೂ ಮುಂಭಾಗಗಳಲ್ಲಿ ನಡುವಿನಲ್ಲಿ ಜೋಡಿಸಿಯೇ ಈ ಕಾರು ಸಿದ್ಧಪಡಿಸಲಾಗಿದೆ. ಹೀಗಾಗಿ ಎರಡೂ ಮುಂಭಾಗವೇ. ಇದನ್ನು ಸಿದ್ಧಪಡಿಸಿದ ವ್ಯಕ್ತಿ ಅಗ್ನಿಶಾಮಕ ದಳದಲ್ಲಿ ಕೆಲಸಮಾಡುತ್ತಿದ್ದ. ಬೆಂಕಿ ಅವಘಡಗಳು ಸಂಭವಿಸಿದಾಗ ಸಣ್ಣ ಮತ್ತು ರಶ್ ಇರುವ ಪ್ರದೇಶದಲ್ಲಿ ಓಡಾಡಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಈ ರೀತಿ ತಯಾರಿಸಿದ್ದಾಗಿ ಅವರು ಹೇಳಿಕೊಂಡಿದ್ದರು. -ವಕ್ರದಂತ