ಮೂರು ನದಿಗಳ ಮಿಲನ ಕಣ್ಣು ಹಾಯಿಸಿದಷ್ಟು ದೂರ ಕನ್ನಂಬಾಡಿ ಹಿನ್ನೀರು ಹಾಲ್ಗಡಲಂತೆ ಕಾಣುತ್ತದೆ. ಉತ್ತರದ ಕಡೆಯಿಂದ ಹೇಮಾವತಿ, ಪಶ್ಚಿಮದಿಂದ ಕಾವೇರಿ, ದಕ್ಷಿಣದಿಂದ ಲಕ್ಷ್ಮಣ ... ಕಣ್ಣು ಹಾಯಿಸಿದಷ್ಟು ದೂರ ಕನ್ನಂಬಾಡಿ ಹಿನ್ನೀರು ಹಾಲ್ಗಡಲಂತೆ ಕಾಣುತ್ತದೆ. ಉತ್ತರದ ಕಡೆಯಿಂದ ಹೇಮಾವತಿ, ಪಶ್ಚಿಮದಿಂದ ಕಾವೇರಿ, ದಕ್ಷಿಣದಿಂದ ಲಕ್ಷ್ಮಣ ತೀರ್ಥ ನದಿಗಳು ಹರಿದುಬರುವ ದೃಶ್ಯವನ್ನು ನೋಡಲಿಕ್ಕೆ ಎರಡು ಕಣ್ಣೂ ಸಾಲದು. ಹೀಗೆ ಮೂರು ದಿಕ್ಕಿನಿಂದ ಬರುವ ಈ ನದಿಗಳು ಸಂಗಮೇಶ್ವರ ಸನ್ನಿಧಿಯಲ್ಲಿ ಐಕ್ಯವಾಗಿ ಪೂರ್ವ ದಿಕ್ಕಿಗೆ ಹರಿಯುವ ಸ್ಥಳವೇ ಸಂಗಾಪುರ. ಜೀವಂತವಾಗಿ ಹರಿಯುವ ಮೂರು ನದಿಗಳು ಸಂಗಮವಾಗುವುದೇ ಇಲ್ಲಿನ ವಿಶೇಷ. ಮಂಡ್ಯ ಜಿಲ್ಲೆ ಕೆ.ಆರ್. ನಗರ ತಾಲೂಕಿನ ಈ ಸಂಗಾಪುರವು ಕನ್ನಂಬಾಡಿ ಕಟ್ಟೆ ನಿಮಾಣಕ್ಕೂ ಮುನ್ನ ದೊಡ್ಡ ಗ್ರಾಮವಾಗಿತ್ತು. ಈ ಊರಿನ ಸುತ್ತ ಮಳೆಗಾಲದಲ್ಲಿ ನೀರು ತುಂಬಿಕೊಂಡು ದ್ವೀಪವಾಗುತ್ತಿತ್ತು. ಗ್ರಾಮದ ಎತ್ತರ ಸ್ಥಳದಲ್ಲಿ ಪುರಾತನ ಸಂಗಮೇಶ್ವರ ದೇವಸ್ಥಾನವಿತ್ತು. ಈ ಗ್ರಾಮ ಕೆ.ಆರ್. ನಗರ ತಾಲೂಕಿನ ತಿಪ್ಪೂರಿಗೆ ಸಮೀಪವಾಗಿತ್ತು. ಕನ್ನಂಬಾಡಿ ಜಲಾಶಯ ನಿರ್ಮಾಣದ ನಂತರ ಗ್ರಾಮವು ಹಿನ್ನೀರಿನಲ್ಲಿ ಮುಳುಗಿತು. ಆಗ ಇಲ್ಲಿ ವಾಸವಾಗಿದ್ದವರು ಗುಳೆಹೋಗಿ ಎತ್ತರವಾದ ಮೂರು ಸ್ಥಳದಲ್ಲಿ ಊರು ಕಟ್ಟಿಕೊಂಡರು. ತಾವು ವಾಸಿಸುವ ಸ್ಥಳಕ್ಕೆ ಸಂಗಾಪುರ, ಅಂಬಿಗರಹಳ್ಳಿ, ಪುರ ಎಂದು ಹೆಸರಿಟ್ಟುಕೊಂಡರು. ಆದರೆ ವರ್ಷಕ್ಕೊಮ್ಮೆ ಒಂದೆಡೆ ಸೇರಿ ಮನದೈವ ಸಂಗಮೇಶ್ವರನ ಜಾತ್ರೆ ನಡೆಸುವುದನ್ನು ಬಿಡಲಿಲ್ಲ. ಬೇಸಿಗೆ ಕಾಲದಲ್ಲಿ ಸಂಗಮೇಶ್ವರನ ಜಾತ್ರೆಯನ್ನು ತಮ್ಮ ಮೂಲ ಊರಿನಲ್ಲಿ ನಡೆಸುತ್ತಿದ್ದರು. 1942ರಲ್ಲಿ ಮೂಲ ದೇಗುಲದ ಮಾದರಿಯಲ್ಲೇ ಹೊಸ ಗ್ರಾಮಗಳಿಗೆ ಹತ್ತಿರವಿರುವ ಎತ್ತರವಾದ ಸ್ಥಳದಲ್ಲಿ ದೇಗುಲ ನಿರ್ಮಿಸಿ, ಮೂಲ ದೇಗುಲದಲ್ಲಿದ್ದ ಸಂಗಮೇಶ್ವರನ ಲಿಂಗವನ್ನೇ ತಂದು ಪ್ರತಿಷ್ಠಾಪಿಸಿದರು. ಸಂಗಮೇಶ್ವರ ದೇಗುಲವಿರುವ ಜಾಗ ಪ್ರಶಾಂತವಾಗಿದ್ದು ವಿಶಾಲವಾಗಿದೆ. ಸುತ್ತಲೂ ಹಸಿರು, ಕನ್ನಂಬಾಡಿಕಟ್ಟೆಯ ಹಿನ್ನೀರಿನಿಂದ ಮೈ-ಮನ ಪುಳಕಗೊಳ್ಳುತ್ತದೆ. ಗುಡಿಯೊಳಗಿರುವ ಸಂಗಮೇಶ್ವರ ಪ್ರತಿರೂಪವಾದ ಶಿವಲಿಂಗ ಆನಂದಮಯವಾಗಿದೆ. ಮಲೈಮಹದೇಶ್ವರರಿಂದಲೇ ಪೂಜಿತವಾದ ಈ ಶಿವಲಿಂಗವನ್ನು ಸ್ವತಂತ್ರ ಸಿದ್ಧಲಿಂಗೇಶ್ವರರೂ ಪೂಜಿಸಿದ್ದಾರೆ. ಅಷ್ಟೇ ಅಲ್ಲದೆ, ಸಂಗಾಪುರವು ಮಲೈ ಮಹದೇಶ್ವರರು ನಡೆದಾಡಿದ ಪುಣ್ಯಭೂಮಿಯೂ ಆಗಿದೆ. ಉತ್ತರದಿಂದ ಬಂದ ಅವರು ಇಲ್ಲಿ ಪವಾಡವನ್ನು ಮೆರೆದು ಪ್ರವಾಹವಿದ್ದ ಕಾವೇರಿ ನದಿಯನ್ನು ಈಜಿ ಆಚೆ ದಡ ಸೇರಿದರು. ಈ ಭಾಗದ ನೂರಾರು ಹಳ್ಳಿಗಳ ಉತ್ಸವ- ಜಾತ್ರೆಗಳಿಗೆ ದೇವರನ್ನು ಮೆರೆಸಲು ಇಲ್ಲಿಗೆ ತಂದು ಉತ್ಸವ ಮೂರ್ತಿಗಳನ್ನು ಪವಿತ್ರ ಜಲದಲ್ಲಿ ಶುಚಿರ್ಭೂತಗೊಳಿಸುವ ಸಂಪ್ರದಾಯವಿದೆ. ಹೋಮ- ಹವನ ನೆರವೇರಿಸಿ, ತಾವೂ ಶುದ್ಧರಾಗಿ, ಪವಿತ್ರ ಜಲದೊಂದಿಗೆ ದೇವರಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಊರಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯುವ ಸಂಪ್ರದಾಯವನ್ನು ಇಂದಿಗೂ ಪಾಲಿಸುತ್ತಿದ್ದಾರೆ.