ಅರ್ಧನಾರೀಶ್ವರ ಸಮುದ್ರ ಮಟ್ಟದಿಂದ 1500 ಅಡಿ ಎತ್ತರದಲ್ಲಿದೆ ಕಾರಿಂಜ ಬೆಟ್ಟ. ದೂರದಿಂದ ವೀಕ್ಷಿಸಿದಾಗ ಏಕಶಿಲಾ ಬೆಟ್ಟದಂತೆ ಭಾಸವಾಗುತ್ತದೆ. ಶಿವನಿಗೂ, ಪಾರ್ವತಿಗೂ ಪ್ರತ್ಯೇಕ ದೇವಸ್ಥಾನವಿರುವುದು ಇಲ್ಲಿನ ವೈಶಿಷ್ಟ್ಯ. ಗುಡ್ಡದ ನಡುವೆ ಪಾರ್ವತಿ ಹಾಗೂ ಗುಡ್ಡದ ತುತ್ತತುದಿಯಲ್ಲಿ ಶಿವನಿಗೆ ಶಿಲಾಮಯ ಗರ್ಭಗುಡಿಯಿದೆ. ಗುಡ್ಡದ ಕೆಳಗಿನಿಂದ ಮೇಲಿನ ಶಿವ ದೇವಸ್ಥಾನ ತನಕ ಸುಮಾರು 500ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಿ ದರ್ಶನ ಮಾಡುವುದು ದೈವಭಕ್ತರಿಗೆ ಹಾಗೂ ಏಕದಿನ ಪಿಕ್‌ನಿಕ್ ಇಟ್ಟುಕೊಂಡವರಿಗೆ ಸೂಕ್ತ ಆಯ್ಕೆ. ಇತ್ತೀಚೆಗೆ ಕಾರಿಂಜ ಬೆಟ್ಟದ ಅರ್ಧದವರೆಗೆ, ಅಂದರೆ ಪಾರ್ವತಿ ದೇವಸ್ಥಾನ ತನಕ ಉತ್ತಮ ಡಾಂಬರು ರಸ್ತೆ ನಿರ್ಮಾಣವಾಗಿದೆ. ಪೌರಾಣಿಕ ಹಿನ್ನೆಲೆ ಈ ಕ್ಷೇತ್ರವನ್ನು ಕೃತ ಯುಗದಲ್ಲಿ ರೌದ್ರಗಿರಿ, ತ್ರೇತಾ ಯುಗದಲ್ಲಿ ಗಜೇಂದ್ರಗಿರಿ, ದ್ವಾಪರದಲ್ಲಿ ಭೀಮಶೈಲವೆಂದು ಕರೆಯುತ್ತಿದ್ದರೆಂಬ ಐತಿಹ್ಯವಿದೆ. ಇಡೀ ಬೆಟ್ಟ ಪ್ರದೇಶ ಸುಮಾರು 25 ಎಕರೆ ವ್ಯಾಪಿಸಿದೆ. ಇಡೀ ಕ್ಷೇತ್ರವನ್ನು ಕೊಡ್ಯಮಲೆಯ ದಟ್ಟ ಅರಣ್ಯ ಆವರಿಸಿಕೊಂಡಿದೆ. ಹೀಗಿದೆ ನೋಡಿ ಕ್ಷೇತ್ರ ಮೊದಲು ಬೆಟ್ಟದ ಬುಡದಲ್ಲಿರುವ ಗದೆಯ ಆಕಾರದ ವಿಶಾಲ 'ಗದಾತೀರ್ಥ' ಕಾಣಸಿಗುತ್ತದೆ. ಸುಮಾರು 237 ಮೀ. ಉದ್ದ 55 ಮೀ. ಅಗಲದ ಶುದ್ಧ ನೀರಿನ ಕೊಳವಿದು. ಇಲ್ಲಿ ಜಲಪ್ರೋಕ್ಷಣೆ ಮಾಡಿಕೊಂಡು ಬೆಟ್ಟ ಹತ್ತಲು ಶುರು ಮಾಡಬಹುದು. ಇಲ್ಲಿಂದ ಬೃಹತ್ ಬಂಡೆಯ ಮೆಟ್ಟಿಲು ಏರುತ್ತಾ ಸಾಗಿದರೆ ಪಾರ್ವತಿ ಗುಡಿ ಸಿಗುತ್ತದೆ. ನಡುವೆ ವಿನಾಯಕ ಗುಡಿಯನ್ನೂ ಕಾಣಬಹುದು. ನಡು ನಡುವೆ, ಕಾಡಿನಿಂದ ಬರುವ ವಾನರ ಸೇನೆಯೂ ಸ್ವಾಗತಿಸುತ್ತದೆ. ಕಡಿದಾದ ದಾರಿ ಪಾರ್ವತಿ ದರ್ಶನದ ನಂತರ ತೀರಾ ಕಡಿದಾದ ಸುಸಜ್ಜಿತ 142 ಮೆಟ್ಟಿಲುಗಳನ್ನು ಹತ್ತಿ ಹೋದರೆ ಅಲ್ಲಿ 'ಉಕ್ಕಡದ ಬಾಗಿಲು' ಕಾಣಸಿಗುತ್ತದೆ. ಇದು ಕಲ್ಲಿನಿಂದ ಮಾಡಿದ ದ್ವಾರ. ಅಲ್ಲಿಂದ ಮುಂದಕ್ಕೆ ಬಂಡೆ ಹಾಗೂ ಕುರುಚಲು ಮರ-ಗಿಡಗಳ ನಡುವೆ 118 ಮೆಟ್ಟಿಲುಗಳನ್ನು ಹತ್ತುತ್ತಾ ಸಾಗಿದರೆ ಬೆಟ್ಟದ ತುದಿಯಲ್ಲಿದೆ ಶಿಲಾಮಯ ಶಿವ ದೇವಸ್ಥಾನ. ಅದಕ್ಕೂ ಮೊದಲು ಮೆಟ್ಟಿಲುಗಳ ಪಕ್ಕ ಉಂಗುಷ್ಟ ತೀರ್ಥ, ಜಾನು ತೀರ್ಥ ಸಿಗುತ್ತದೆ. ಈ ಪುಟ್ಟ ಕೆರೆಗಳನ್ನು ಹಾಗೂ ಕೆಳಗಿನ ಗದಾತೀರ್ಥವನ್ನು ಮಹಾಭಾರತ ಕಾಲದಲ್ಲಿ ಭೀಮಸೇನ ನಿರ್ಮಿಸಿದ ಎಂಬ ನಂಬಿಕೆ. ವರ್ಷದ ಎಲ್ಲಾ ದಿನ ಬೆಟ್ಟದ ತುದಿಯಲ್ಲಿರುವ ಈ ಕೆರೆಗಳಲ್ಲಿ ನೀರು ಬತ್ತದಿರುವುದು ವಿಶೇಷ. ದೇವಳ ಪಕ್ಕದಲ್ಲಿರುವ 'ಹಂದಿಕೆರೆ'ಯೂ ಅರ್ಜುನನಿಂದಾಗಿ ಉಂಟಾಯಿತು ಎಂಬ ಕತೆಯಿದೆ. ಬೆಟ್ಟ ವಿಶೇಷಗಳು ಬೆಟ್ಟದ ತುದಿಯ ಶಿವ ದೇವಸ್ಥಾನದಿಂದ ನಾಲ್ಲೂ ದಿಕ್ಕಿನಲ್ಲಿ ಹಚ್ಚ ಹಸಿರು ದೃಶ್ಯ ವೈಭವ. ಇಲ್ಲಿಂದ ಕೆಳಗಿನ ಬೃಹತ್ ಶಿಲಾಬೆಟ್ಟದತ್ತ ಕೂಗಿಕೊಂಡರೆ ಸ್ಪಷ್ಟ ಪ್ರತಿಧ್ವನಿ ನೀಡುವ ಪ್ರತಿಧ್ವನಿ ಕಲ್ಲು ಇದೆ. ಸತ್ಯ ಪ್ರಮಾಣ ಮಾಡುತ್ತಿದ್ದ ಸೀತಾದೇವಿ ಪ್ರಮಾಣ ಕಲ್ಲು ಇದೆ. ವಾನರ ಸೇನೆಗೆ ನಿತ್ಯ ಅನ ನೈವೇದ್ಯ ನೀಡುವುದು ಇನೊಂದು ವಿಶೇಷ. ದೇವಸ್ಥಾನದ ಸುತ್ತಮುತ್ತ ಚಾರಣ ಕೈಗೊಳ್ಳಬಹುದಾದ ಸಾಕಷ್ಟು ತಾಣಗಳಿವೆ. ಉತ್ಸವ ಶಿವರಾತ್ರಿ ಇಲ್ಲಿನ ಪ್ರಧಾನ ಉತ್ಸವ. ನಾಲ್ಕು ದಿನ ನಡೆಯುತ್ತದೆ. ಜಾತ್ರೆ ವೇಳೆ ಗುಡ್ಡದ ಮೇಲಿನಿಂದ ಶಿವನ ವಿಗ್ರಹವನು ಪಾರ್ವತಿ ದೇವಸ್ಥಾನಕ್ಕೆ ತರುವ ಮೂಲಕ ಶಿವ-ಪಾರ್ವತಿಯರ ಭೇಟಿ ನಡೆಯುತ್ತದೆ. ಆಟಿ ಅಮವಾಸ್ಯೆ, ಶ್ರಾವಣ ಅಮವಾಸ್ಯೆಯೂ ವಿಶೇಷ. ಹೀಗೆ ಬನ್ನಿ ದಕ್ಷಿಣ ಕನಡ ಜಿಲ್ಲೆ ಬಂಟ್ವಾಳ ತಾಲೂಕು ಕಾವಳಮೂಡೂರು ಗ್ರಾಮದಲ್ಲಿದೆ ಕಾರಿಂಜ. ಮಂಗಳೂರಿನಿಂದ 35 ಕಿ.ಮೀ. ಹಾಗೂ ಬಂಟ್ವಾಳದಿಂದ 14 ಕಿ.ಮೀ. ಬಂಟ್ವಾಳದಿಂದ ಧರ್ಮಸ್ಥಳ ಕಡೆಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ 10 ಕಿ.ಮೀ. ನಂತರ ಸಿಗುವ 'ವಗ್ಗ' ಎಂಬಲ್ಲಿಂದ ಬಲಕ್ಕೆ 4 ಕಿ.ಮೀ. ಕೊಡ್ಯಮಲೆ ರಕ್ಷಿತಾರಣ್ಯದ ನಡುವಿನ ಡಾಂಬರು ರಸ್ತೆಯಲ್ಲಿ ಸಾಗಬೇಕು. - ಚಿತ್ರ, ಬರಹ: ಕೃಷ್ಣಮೋಹನ ತಲೆಂಗಳ.