ಕಾರ್ ಕೊಳ್ಳಿ ಕೇಂದ್ರದಲ್ಲಿ ಜೂನ್‌ನಲ್ಲಿ ಅಧಿಕಾರಕ್ಕೆ ಬರಲಿರುವ ನೂತನ ಸರ್ಕಾರ ವಾಹನೋದ್ಯಮದ ಮೇಲೆ ಪ್ರೀತಿ ಇರಿಸಿಕೊಂಡರೆ ಕಾರು ... ಕೇಂದ್ರದಲ್ಲಿ ಜೂನ್‌ನಲ್ಲಿ ಅಧಿಕಾರಕ್ಕೆ ಬರಲಿರುವ ನೂತನ ಸರ್ಕಾರ ವಾಹನೋದ್ಯಮದ ಮೇಲೆ ಪ್ರೀತಿ ಇರಿಸಿಕೊಂಡರೆ ಕಾರು ಖರೀದಿದಾರರಿಗೆ ಇದು ಶುಭಕಾಲ! ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಇಳಿಸಿರುವುದರ ಫಲವಾಗಿ ಇಂದು ಕಾರು ಮಾರುಕಟ್ಟೆಯಲ್ಲಿ ಸಂಚಲನ ಮೂಡಿದೆ. ಕಳೆದ ಮೂರು ಆರ್ಥಿಕ ವರ್ಷಗಳಲ್ಲಿ ಕಂಡಿರುವ ದುಃಸ್ವಪ್ನಗಳನ್ನು ಮರೆಯುವ ಪ್ರಯತ್ನಕ್ಕೆ ಉದ್ಯಮ ಮುಂದಾಗಿದೆ. ಪರಿಣಾಮವಾಗಿ ಪೈಪೋಟಿಗೆ ಬಿದ್ದಂತೆ ಕಾರುಗಳ ದರವನ್ನು ಗಣನೀಯವಾಗಿ ಇಳಿಸುತ್ತಿವೆ. 10 ಸಾವಿರ ರುಪಾಯಿಯಿಂದ ನಾಲ್ಕು ಲಕ್ಷದವರೆಗೂ ದರ ಇಳಿಕೆಯಾಗಿದೆ! ಒಂದು ಸಮಸ್ಯೆಯೆಂದರೆ ದರ ಪಟ್ಟಿಯಲ್ಲಿ ಹೆಚ್ಚು ಇಳಿಕೆ ಕಂಡಿರುವ ಕಾರುಗಳು ತಕ್ಷಣ ಮಾರುಕಟ್ಟೆಯಲ್ಲಿ ದೊರೆಯುವುದಿಲ್ಲ. ಇಂದು ದರ ಕಡಿಮೆಯಾಗಿದೆ ಎಂದು ಬುಕಿಂಗ್ ಮಾಡಿ ಕೈ ಸುಟ್ಟುಕೊಳ್ಳುವ ಸಾಧ್ಯತೆಯೂ ಇದೆ. ಏಕೆಂದರೆ ಡೆಲಿವರಿ ಸಮಯದಲ್ಲಿ ಮಾರುಕಟ್ಟೆಯ ಬೆಲೆಯನ್ನು ಗ್ರಾಹಕರಿಂದ ಪಡೆಯುವುದು ಪ್ರತೀತಿ. ಬಹುತೇಕ ಡೀಸೆಲ್ ಕಾರುಗಳನ್ನು ಪಡೆಯಲು ಕನಿಷ್ಠ 2 ತಿಂಗಳ ಕಾಲ ಕಾಯಬೇಕಿದೆ. ಈಗಾಗಲೇ ಬುಕಿಂಗ್ ಮಾಡಿದವರಿಗೆ ಈ ದರಪಟ್ಟಿಯಿಂದ ದೊಡ್ಡ ಲಾಭವಾಗಲಿದೆ. ಇದರಿಂದಾಗಿ ಕೇಂದ್ರ ಸರ್ಕಾರದ ಅಬಕಾರಿ ಸುಂಕ ಇಳಿಕೆಯ ಲಾಭ ಈಗಾಗಲೇ ವಾಹನಗಳನ್ನು ಬುಕ್ ಮಾಡಿದವರಿಗೆ ಹೆಚ್ಚಾಗಿ ದೊರೆಯಲಿದೆ. ಇಂದು ಬುಕ್ ಮಾಡುವ ಗ್ರಾಹಕನ ಅದೃಷ್ಟ ಚೆನ್ನಾಗಿದ್ದರೆ ಈ ದರ ಇಳಿಕೆಯ ಲಾಭ ದೊರೆಯಬಹುದಷ್ಟೆ. ಜೂನ್‌ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸರ್ಕಾರ ಅಬಕಾರಿ ಸುಂಕವನ್ನು ಏರಿಸದೇ ಇದ್ದರೆ ಇದೇ ದರಪಟ್ಟಿಯನ್ನು ಕನಿಷ್ಠ ಒಂದು ವರ್ಷದವರೆಗೆ ನಿರೀಕ್ಷಿಸಬಹುದು. ಪ್ರಸ್ತುತ ಸರ್ಕಾರದ ಮೊದಲ 4 ವರ್ಷದ ಆಡಳಿತದಲ್ಲಿ ಆಟೋಮೊಬೈಲ್ ಉದ್ಯಮವು ಗೋಗರೆದರೂ ಅಬಕಾರಿ ಸುಂಕ ಇಳಿಸುವ ಬದಲಿಗೆ ತನ್ನ ಜನಪ್ರಿಯ ಯೋಜನೆಗಳ ಹಣ ಸಂಗ್ರಹಣಕ್ಕಾಗಿ ಏರಿಸುತ್ತಲೇ ಸಾಗಿತ್ತು. ಈಗ ಚುನಾವಣೆಯ ಕಾರಣದಿಂದ ಸುಂಕವನ್ನು ಇಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಆದ್ದರಿಂದ ಈ ಸುಂಕ ಇಳಿಕೆಯ ನಿಜ ಭವಿಷ್ಯ ತಿಳಿಯುವುದು ಜೂನ್ ತಿಂಗಳಿನಲ್ಲಿ. ಸಾಮಾನ್ಯವಾಗಿ ನೂತನ ತೆರಿಗೆ ನೀತಿಯು ಏಪ್ರಿಲ್ ಒಂದರಿಂದ ಜಾರಿಗೆ ಬರುತ್ತದೆ. ಆದರೆ ಸುಂಕ ಇಳಿಕೆ ನೆಪದಲ್ಲಿ ಕಳೆದ ಮೂರು ವರ್ಷದ ಕೆಟ್ಟ ಕನಸನ್ನು ಮರೆಯಲು ಫೆಬ್ರವರಿಯಿಂದಲೇ ಹೊಸ ದರಪಟ್ಟಿಯನ್ನು ಅನ್ವಯ ಮಾಡಲು ಉದ್ಯಮ ನಿರ್ಧರಿಸಿದೆ. ಒಂದೂವರೆ ತಿಂಗಳ ಮಟ್ಟಿಗೆ ಸುಂಕದ ದೃಷ್ಟಿಯಿಂದ ಸಣ್ಣ ಪ್ರಮಾಣದನಷ್ಟವಾದರೂ ಕೊನೆಯ ತ್ರೈಮಾಸಿಕ ಹಾಗೂ ಮುಂದಿನ ಆರ್ಥಿಕ ವರ್ಷದ ಬೆಳವಣಿಗೆ ದೃಷ್ಟಿಯಿಂದ ಇದು ಸಹಕಾರಿಯಾಗಲಿದೆ. ಈಗಾಗಲೇ ಮಾರುತಿ ಸುಝುಕಿ, ಟಾಟಾ, ಶೆವರ್ಲೆ ವೋಕ್ಸ್‌ವ್ಯಾಗನ್, ಹುಂಡೈ, ಫೋರ್ಡ್, ಮಹೀಂದ್ರಾ, ಹೋಂಡಾ, ನಿಸಾನ್ ಹಾಗೂ ಆಡಿ ಸಂಸ್ಥೆಗಳು ಹ್ಯಾಚ್‌ಬ್ಯಾಕ್, ಸೆಡಾನ್ ಹಾಗೂ ಎಸ್‌ಯುವಿಗಳ ದರವನ್ನು ಗಣನೀಯವಾಗಿ ಇಳಿಸಿವೆ. ಕೆಲ ಎಸ್‌ಯುವಿಗಳು ದರವನ್ನು ಶೇ.9ರವರೆಗೆ ಇಳಿಸಿದರೆ, ಉದ್ಯಮದ ಸರಾಸರಿ ಇಳಿಕೆ ಶೇ.3ರಿಂದ ಶೇ.6ರಷ್ಟು. ಮೊನ್ನೆ ಮಂಡನೆಯಾಗಿರುವುದು ಮಧ್ಯಂತರ ಬಜೆಟ್ ಆಗಿರುವುದರಿಂದ ಜೂನ್ ನಂತರ ದರ ಬದಲಾಗಬಹುದು ಎಂಬ ಸೂಚನೆಯನ್ನು ನೀಡಿವೆ. ಸುಂಕದಲ್ಲಿ ಶೇ.4ರಿಂದ ಶೇ.6ರಷ್ಟು ಇಳಿಕೆ ಮಾಡಿದ್ದರೂ ಅದೇ ಪ್ರಮಾಣದ ದರ ಇಳಿಕೆಯನ್ನು ಸಂಸ್ಥೆಗಳು ಮಾಡಿಲ್ಲ. ಯಾರು ಎಷ್ಟು ಇಳಿಸಿದ್ದಾರೆ? ಬಿಎಂಡಬ್ಲ್ಯೂ, ಆಡಿಯಂತಹ ಐಷಾರಾಮಿ ಕಾರುಗಳ ಬೆಲೆ 2ರಿಂದ 4 ಲಕ್ಷದವರೆಗೂ ಇಳಿದಿದೆ. ಬೈಕ್‌ಗಳ ದರ ಇಳಿಕೆಯು 10 ಸಾವಿರದೊಳಗೆ ಇದೆ. ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಫೋರ್ಡ್ ಸಂಸ್ಥೆ 1.07 ಲಕ್ಷದವರೆಗೂ ದರ ಇಳಿಕೆ ಮಾಡಿದೆ. ಇಕೋಸ್ಪೋರ್ಟ್ ದರದಲ್ಲಿ 25 ಸಾವಿರ, ಫಿಗೋ 23ಸಾವಿರ ಹಾಗೂ ಎಂಡೋವರ್ ಐಷಾರಾಮಿ ಕಾರಿನ ಬೆಲೆ 1.07ಲಕ್ಷದಷ್ಟು ಇಳಿದಿದೆ. ಟಾಟಾ ಸಂಸ್ಥೆಯು 6300ರಿಂದ 1.50 ಲಕ್ಷದವರೆಗೂ ಇಳಿಸಿದ್ದು, ಟಾಟಾ ಸಫಾರಿ ಹಾಗೂ ವಿಸ್ತಾ ದರದಲ್ಲಿ ದೊಡ್ಡ ಇಳಿಕೆಯಾಗಲಿದೆ. ಭಾರತದ ದೊಡ್ಡ ಕಾರು ಉತ್ಪಾದಕ ಸಂಸ್ಥೆಯಾದ ಮಾರುತಿ ಸುಝುಕಿ ಕೂಡ ತನ್ನ ಪ್ರಮುಖ ಕಾರುಗಳ ದರವನ್ನು ಅಲ್ಪ ಪ್ರಮಾಣದಲ್ಲಿ ಇಳಿಸಿದೆ. ಮೊನ್ನೆ ತಾನೆ ಬಿಡುಗಡೆಯಾದ ಬಂದ ಸೆಲೆರಿಯೊ ದರದಲ್ಲಿ 14 ರಿಂದ 29 ಸಾವಿರ ಇಳಿಸಲಾಗಿದೆ. ಇದರಿಂದ ರಸ್ತೆಗೆ ಇಳಿಯುವ ಮುಂಚೆಯೇ ಈ ಕಾರಿನ ದರದಲ್ಲಿ ಇಳಿಕೆಯಾದಂತಾಗಿದೆ. ಇನ್ನು ರಿಟ್ಝ್, ಡಿಝೈರ್, ಸ್ವಿಫ್ಟ್, ಎರ್ಟಿಗಾ ಹಾಗೂ ವ್ಯಾಗನ್ ಆರ್ ದರದಲ್ಲಿಯೂ 16 ಸಾವಿರದಿಂದ 63 ಸಾವಿರದವರೆಗೆ ಇಳಿಸಲಾಗಿದೆ. ಫೋಕ್ಸ್‌ವ್ಯಾಗನ್‌ನ ಪೋಲೊ, ವೆಂಟೊ ಹಾಗೂ ಜೆಟ್ಟಾ ಬೆಲೆಯಲ್ಲಿ ಇಳಿಕೆಯಾಗಿದ್ದು, 14 ಸಾವಿರದಿಂದ 51 ಸಾವಿರದವರೆಗೆ ಕಡಿತಮಾಡಲಾಗಿದೆ. ಮಹೀಂದ್ರಾ ಕಂಪನಿಯ ಸಣ್ಣ ಕಾರುಗಳಲ್ಲಿ 14 ಸಾವಿರ ಹಾಗೂ ಎಕ್ಸ್‌ಯುವಿನಲ್ಲಿ 49 ಸಾವಿರ ಹಾಗೂ ರೆಕ್ಸ್ಟಾನ್‌ಗೆ 92 ಸಾವಿರ ಇಳಿಕೆಮಾಡಲಾಗಿದೆ. ಹುಂಡೈನಲ್ಲಿ 10 ಸಾವಿರದಿಂದ 1.35ಲಕ್ಷದವರೆಗೆ ನಾನಾ ಮಾದರಿ ಕಾರಿನ ಬೆಲೆಯಲ್ಲಿ ಕಡಿತವಾಗಿದೆ. ನಿಸಾನ್ ಸಂಸ್ಥೆಯು ಎಲ್ಲ ತನ್ನ ಎಲ್ಲ ಕಾರುಗಳಿಗೆ ಶೇ.4ರಿಂದ ಶೇ.6ರಷ್ಟು ಬೆಲೆ ಕಡಿಮೆ ಮಾಡಲು ನಿರ್ಧರಿಸಿದೆ. ಒಂದು ಆಶ್ಚರ್ಯವೆಂದರೆ ರೆನೋ ಕಂಪನಿಯು ಡೆಸ್ಟರ್ ಕಾರಿನ ದರ ಇಳಿಕೆಗೆ ಯಾವುದೆ ಚಿಂತನೆ ನಡೆಸಿಲ್ಲ. -ರಾಧೆ