ಡಿಸೈನ್ ಡಿಸಿ ಆಡಳಿತದಲ್ಲಿ ಡಿಸಿ ಅಂದ್ರೆ ಡಿಸ್ಟ್ರಿಕ್ಟ್ ಕಮಿಷನರ್. ವಿದ್ಯುತ್ ಕ್ಷೇತ್ರದಲ್ಲಿ ಡಿಸಿ ಅಂದ್ರೆ ಡೈರೆಕ್ಟ್ ಕರೆಂಟ್. ಪತ್ರಿಕೋದ್ಯಮದಲ್ಲಿ ಡಿಸಿ ಅಂದ್ರೆ ಡಬಲ್ ಕಾಲಂ. ವಾಹನ ಕ್ಷೇತ್ರದಲ್ಲಿ ಡಿಸಿ ಅಂದ್ರೆ...?? ದಿಲೀಪ್ ಛಾಬ್ರಿಯಾ! ದಿಲೀಪ್ ಛಾಬ್ರಿಯಾ ಅಂದ್ರೆ ಸಾಕಷ್ಟು ಮಂದಿಗೆ ಗೊತ್ತಾಗಲಿಕ್ಕಿಲ್ಲ. ಆದ್ರೆ ಡಿಸಿ ಡಿಸೈನ್ಡ್ ವಾಹನಗಳು ಅಂದ್ರೆ ಕೆಲವರಿಗಾದರೂ ಗೊತ್ತಾಗಬಹುದು. ಅಂತಹ ವೈಶಿಷ್ಟ್ಯ ಅವರದ್ದು. ಅವರದ್ದು ಸ್ವಂತ ವಾಹನ ತಯಾರಿಕಾ ಕಂಪನಿಯಿಲ್ಲ. ಬೇರೆ ಬೇರೆ ಕಂಪನಿಗಳು ಮಾರುಕಟ್ಟೆಗೆ ಬಿಡುಗಡೆ ಮಾಡಿದ ವಾಹನಗಳನ್ನು ಕಂಪನಿಯವರು ಕೂಡ ಇದು ನಮ್ಮದೇ ಕಂಪನಿ ಕಾರಾ ಎಂದು ಅಚ್ಚರಿಪಡುವಂತಹ ರೀತಿಯಲ್ಲಿ ಅದನ್ನು ಮರುನಿರ್ಮಾಣ ಅಥವಾ ಮರುವಿನ್ಯಾಸಗೊಳಿಸುವಲ್ಲಿ ಡಿಸಿ ಖ್ಯಾತರು. ಡಿಸಿ ಡಿಸೈನ್ ವಿಶೇಷವೆಂದರೆ ಅಂತಹ ಇನ್ನೊಂದು ಕಾರು ಇರುವುದಿಲ್ಲ. ಪ್ರತಿಯೊಂದು ಹೊಸ ಕಾರು ಬಂದಾಗಲೂ ಅವರೇ ಅದರ ಹೊಸ ವಿನ್ಯಾಸವೊಂದನ್ನು ಸೃಷ್ಟಿಸಿ ಮಾರುಕಟ್ಟೆಯಲ್ಲಿ ಪ್ರದರ್ಶಿಸುತ್ತಾರೆ. ಗ್ರಾಹಕರು ವಾಹನ ತೆಗೆದುಕೊಂಡು ಬಂದರೆ ಮಾತ್ರ ಅವರಿಗೆ ಬೇಕಾದಂತೆ ಅದನ್ನು ವಿನ್ಯಾಸಗೊಳಿಸಿ ಕೊಡುತ್ತಾರೆ. ಆದರೆ ಡಿಸಿ ವಿನ್ಯಾಸದ ವಾಹನಗಳನ್ನು ರಸ್ತೆಯಲ್ಲಿ ಓಡಿಸಿಕೊಂಡು ಹೋದರೆ ಎಲ್ಲರೂ ನಿಮ್ಮತ್ತ ತಿರುಗಿ ತಿರುಗಿ ನೋಡುವುದು ಖಂಡಿತ. ಅಂತಹ ವಿಶಿಷ್ಟ ಶೈಲಿ ಡಿಸಿಯದ್ದು. ಡಿಸಿ ಅಥವಾ ದಿಲೀಪ್ ಛಾಬ್ರಿಯಾ ಅಮೆರಿಕದ ಡೆಟ್ರಾಯ್ಟ್‌ನಲ್ಲಿರುವ ಜನರಲ್ ಮೋಟಾರ್ಸ್ ವಿನ್ಯಾಸ ಕೇಂದ್ರದಲ್ಲಿ 1 ವರ್ಷ ಕೆಲಸ ಮಾಡಿದ ನಂತರ 1983ರಲ್ಲಿ ಭಾರತಕ್ಕೆ ವಾಪಸಾದರು. ಅವರು ಮೊದಲು ಆರಂಭಿಸಿದ್ದು ಕಾರುಗಳ ಆ್ಯಕ್ಸೆಸರಿ ಕಂಪನಿ. 2-3 ವರ್ಷದಲ್ಲಿಯೇ ಅವರು ಭಾರತದಲ್ಲಿ ಕಾರುಗಳ ಆ್ಯಕ್ಸೆಸರಿಗಳ ದೊಡ್ಡ ಉತ್ಪಾದಕರಾಗಿ ಹೊರಹೊಮ್ಮಿದರು. ಆದರೆ ಕೇವಲ ಆ್ಯಕ್ಸೆಸರಿ ಅಥವಾ ಬಿಡಿಭಾಗಗಳ ಉತ್ಪಾದಕರಾಗಷ್ಟೇ ಇರುವುದು ಡಿಸಿಗೆ ಬೇಕಾಗಿರಲಿಲ್ಲ. ಅವರು 1993ರಲ್ಲಿ ಕಾರುಗಳ ವಿನ್ಯಾಸ ಮತ್ತು ಕಾರುಗಳ ನವೀಕರಣ (ಮಾಡಿಫೈಯಿಂಗ್) ಕೇಂದ್ರವನ್ನೇ ಆರಂಭಿಸಿದರು. ಅಲ್ಲಿಂದ ಈಚೆಗೆ ಡಿಸಿಡಿ (ದಿಲೀಪ್ ಚಾಬ್ರಿಯಾ ಡಿಸೈನ್ಸ್) ಎಂದೇ ಖ್ಯಾತಿ ಗಳಿಸಿದೆ. ಒಂದು ಕಾರಿನ ಆಂತರಿಕ ಹಾಗೂ ಬಾಹ್ಯವಿನ್ಯಾಸವನ್ನು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿಕೊಡುವ ಕ್ಷಮತೆ ಡಿಸಿಗಿದೆ. ನವೀಕರಿಸಿದ ಕಾರುಗಳು ಅಂದರೆ ಜನ ಮುಗಿಬಿದ್ದು ನೋಡುವಂತಾಗಿದೆ. ಆದರೆ ಮುಗಿಬಿದ್ದು ಕೊಳ್ಳುವಂತಿಲ್ಲ. ಕಾರಣ ಕೊಂಚ ದುಬಾರಿ. ಆದರೆ ಕೊಟ್ಟ ಹಣಕ್ಕೆ ಖಂಡಿತ ಮೋಸವಿಲ್ಲ. ಹೊಸ ಕಾರು ಖರೀದಿಸಿ ಅದಕ್ಕೆ ಡಿಸಿ ಡಿಸೈನ್ ಮಾಡಿಸಬೇಕೆಂದರೆ ಆ ಕಾರಿನ ಅರ್ಧ ದುಡ್ಡು ತೆರಲು ನೀವು ಸಿದ್ಧರಿರಬೇಕು. ಡಿಸಿ ಇಲ್ಲಿಯವರೆಗೆ 600 ವಿಶೇಷ ವಿನ್ಯಾಸದ ಕಾರುಗಳನ್ನು ರೂಪಿಸಿದ್ದು, ಸೂಪರ್ ಕಾರುಗಳಿಂದ ಅಂಬಾಸಿಡರ್‌ವರೆಗಿನ ಕಾರುಗಳನ್ನು ಮರುವಿನ್ಯಾಸಗೊಳಿಸಿದ್ದಾರೆ. ಆಸ್ಟನ್ ಮಾರ್ಟಿನಿ, ಜನರಲ್ ಮೋಟಾರ್ಸ್ ಮತ್ತು ರೆನೊ ಕಂಪನಿಗೆ ಕಾರುಗಳ ವಿನ್ಯಾಸ ರೂಪಿಸಿಕೊಡುತ್ತಿದ್ದು, ಇತ್ತೀಚೆಗೆ ವಿಮಾನಗಳ ಆಂತರಿಕ ವಿನ್ಯಾಸ ಮಾದರಿಯನ್ನೂ ಡಿಸಿ ರೂಪಿಸಲು ಆರಂಭಿಸಿದ್ದಾರೆ. -ವಕ್ರದಂತ