ಅರೆ! ಜೋಗಿಮಟ್ಟಿ ಚಿತ್ರದುರ್ಗ ಎಂದಾಕ್ಷಣ ಕೋಟೆ ಕೊತ್ತಲಗಳು, ವೀರವನಿತೆ ಒನಕೆ ಓಬವ್ವ, ರಾಜಾವೀರ ಮದಕರಿ ನಾಯಕ ಅವರ ನೆನಪುಗಳು ಥಟ್ಟನೆ ಬರುತ್ತವೆ. ದುರ್ಗ ಎಂದರೆ ಇಷ್ಟೇ ಅಲ್ಲ. ಇಲ್ಲಿ ಕಾಶ್ಮೀರವನ್ನು ನೆನಪಿಸುವ, ಊಟಿಯಲ್ಲಿದ್ದೇವೆ ಎಂದು ಭ್ರಮೆ ಹುಟ್ಟಿಸುವ ಸುಂದರ, ದಟ್ಟ ಕಾನನದಿಂದ ಆವೃತವಾದ ಗಿರಿಧಾಮವೂ ಇದೆ. ಹೆಸರು ಜೋಗಿಮಟ್ಟಿ. ಸಮುದ್ರ ಮಟ್ಟದಿಂದ 1323 ಮೀಟರ್ ಎತ್ತರವಿರುವ, ನಗರದ ಗಡಿಬಿಡಿ, ಗದ್ದಲಗಳಿಂದ ದೂರವಿದ್ದು, ಒಮ್ಮೆಯಾದರೂ ಪ್ರಶಾಂತ ಪರಿಸರ ಬಯಸುವವರಿಗೆ ಜೋಗಿಮಟ್ಟಿ ಗಿರಿಧಾಮ ಪ್ರಶಸ್ತ ತಾಣ. ಬಿರು ಬೇಸಿಗೆಯ ಈ ದಿನಗಳಲ್ಲಿ ಚಾರಣ ಸಾಹಸಿಗರಿಗಂತೂ ಕೈ ಬೀಸಿ ಕರೆಯುವ ಆಹ್ಲಾದಕರ ಪ್ರದೇಶವಿದು. ತಂಪಾದ ಹವೆ, ಪ್ರಕೃತಿಯ ರಮ್ಯ ನೋಟ, ಹಚ್ಚನೆಯ ಹುಲ್ಲುಗಾವಲು, ಪ್ರಶಾಂತ ವಾತಾವರಣ ಈ ಗಿರಿಧಾಮದ ವೈಶಿಷ್ಟ್ಯಗಳು. ಪ್ರಕೃತಿಪ್ರಿಯರು, ಶಾಂತಿ ಪ್ರಿಯರು ಸಹಜವಾಗಿಯೇ ಬಯಸುವಂಥ, ಮೆಚ್ಚುವಂಥ ಚೆಲುವಿನ ತಾಣವಿದು. ಮೈಸೂರು ಮಹಾರಾಜರಾಗಿದ್ದ ಜಯಚಾಮರಾಜೇಂದ್ರ ಒಡೆಯರು ಚಿತ್ರದುರ್ಗಕ್ಕೆ ಬಂದಾಗಲೆಲ್ಲ ಜೋಗಿಮಟ್ಟಿಯಲ್ಲಿರುವ ಬ್ರಿಟಿಷರ ಕಾಲದ ಬಂಗಲೆಯಲ್ಲಿ ಸ್ವಲ್ಪ ಕಾಲ ವಿಶ್ರಾಂತಿ ಪಡೆಯುತ್ತಿದ್ದರು. ಗಿಡಮೂಲಿಕೆಗಳು ಇಲ್ಲಿನ ಅರಣ್ಯ ಪ್ರದೇಶದಲ್ಲಿ ಔಷಧೀಯ ಗಿಡಮೂಲಿಕೆಗಳು ಹೇರಳವಾಗಿ ದೊರೆಯುತ್ತವೆ. ನವಿಲು, ಜಿಂಕೆಗಳು, ಚಿರತೆ, ಕರಡಿಗಳ ಆವಾಸ ಸ್ಥಾನವಿದು. ನಗರದಿಂದ ಗಿರಿಧಾಮದವರೆಗೆ ತಲುಪಲು ಟಾರ್ ರಸ್ತೆಯಿದೆ. ಹೋಗಲು ಅರಣ್ಯ ಇಲಾಖೆಯ ಅನುಮತಿ ಪಡೆದುಕೊಳ್ಳಬೇಕು. ಹಸಿರುಡುಗೆಯುಟ್ಟು ಕಂಗೊಳಿಸುವ ಸಸ್ಯರಾಶಿಯು ರಸ್ತೆಯ ಎರಡೂ ಬದಿಯಲ್ಲಿದೆ. ಜೋಗಿಮಟ್ಟಿ ಗುಡ್ಡದ ಮೇಲೊಂದು ಮರಡಿ ಇದ್ದು, ಅದನ್ನು ಜೋಗಿಮರಡಿ ಎಂದು ಕರೆಯುತ್ತಾರೆ. ಅದರ ಕೆಳಭಾಗದಲ್ಲಿ ಅರಣ್ಯ ಇಲಾಖೆಯವರು ಪ್ರವಾಸಿಗರಿಗಾಗಿ ನಿರ್ಮಿಸಿರುವ ಬಂಗಲೆಗಳು ಇವೆ. ಸಮೀಪದಲ್ಲೇ ಕುಮಾರನಕಟ್ಟೆ ಎಂಬ ಕೆರೆ ಇದೆ. ಇದೇ ಪರಿಸರದಲ್ಲಿ ಒಕ್ಕಲಿಗನಕಟ್ಟೆ ಎಂಬ ಪುಟ್ಟ ಜಲಾಶಯವಿದೆ. ಹೆಸರಿನ ಹಿಂದೆ... ಜೋಗಿಮಟ್ಟಿಯ ಮೇಲೆ ನಿಂತು ಸುತ್ತಮುತ್ತಲ ಪ್ರದೇಶವನ್ನು ವೀಕ್ಷಿಸುವುದೇ ಒಂದು ದೃಶ್ಯಕಾವ್ಯದ ಅನುಭವ. ಜೋಗಿ ಮರಡಿ ಮೇಲೆ ಇರುವ ಸಮಾಧಿ ಜನೋಪಕಾರಿಯಾಗಿದ್ದ ಜೋಗಿಯೊಬ್ಬನದು. ಅವನು ಜನ- ಜಾನುವಾರುಗಳಿಗೆ ವೈದ್ಯ ಮಾಡುತ್ತಿದ್ದ ಎಂದು ಹೇಳುತ್ತಾರೆ. ಆದ್ದರಿಂದ ಆತನ ಹೆಸರಿನಲ್ಲಿ ಜೋಗಿ ಮರಡಿ ಎಂದು ಕರೆದದ್ದು ನಂತರ ಜೋಗಿಮಟ್ಟಿ ಎಂದಾಗಿದೆ. ಜೋಗಿಮಟ್ಟಿಯಲ್ಲಿ ಒಂದು ರಾತ್ರಿ ಕಳೆದರೆ ಬೆಳಗಿನ ಜಾವ ಊಟಿ ಅಥವಾ ಕಾಶ್ಮೀರದಲ್ಲಿದ್ದಂತೆ ಅನುಭವವಾಗುತ್ತದೆ. ಉಳಿದುಕೊಳ್ಳಲು ಬಯಸುವವರು ಅರಣ್ಯ ಇಲಾಖೆಯ ಪರವಾನಗಿ ಪಡೆಯಬೇಕು. ಬಂಗಲೆಯಲ್ಲಿ ಊಟದ ವ್ಯವಸ್ಥೆ ಇರುವುದಿಲ್ಲ. ಜೋಗಿಮಟ್ಟಿಗೆ ಹೋಗುವ ಮಾರ್ಗ ಮಧ್ಯದಲ್ಲಿ ಬಲಭಾಗಕ್ಕೆ ತಿರುಗಿದರೆ ಆಳದಲ್ಲಿ ಬಂಡೆಗಳಿಂದ ಆವೃತವಾದ ಜಾಗದಲ್ಲಿ ಹಿಮವತ್ ಕೇದಾರ ಎಂಬ ಪುಟ್ಟ ಜಲಪಾತವಿದೆ. ಇಲ್ಲಿ ಸಣ್ಣ ಗುಹೆ, ಅದರಲ್ಲಿ ಶಿವಲಿಂಗ ಇದೆ. ಇಲ್ಲಿ ಧುಮ್ಮಿಕ್ಕುವ ನೀರು ಬಸವನ ಬಾಯಿಯಿಂದ ಬೀಳುವುದು ವಿಶೇಷ. ಮಳೆಗಾಲದಲ್ಲಿ ಈ ಜಲಪಾತ ಜೋರಾಗಿ ಸುರಿಯುತ್ತದೆ. ಜೋಗಿಮಟ್ಟಿಗೆ ತೆರಳಲು ಸ್ವಂತ ವಾಹನವೇ ಅಗತ್ಯ. ಹೀಗೆಬನ್ನಿ... ಜೋಗಿಮಟ್ಟಿ ಗಿರಿಧಾಮ ಚಿತ್ರದುರ್ಗದಿಂದ 14 ಕಿ.ಮೀ. ದೂರದಲ್ಲಿದೆ. ಚಿತ್ರದುರ್ಗ ನಗರದಿಂದ ಜೋಗಿಮಟ್ಟಿ ರಸ್ತೆ ಮೂಲಕ ತಲುಪಬೇಕು. ಸೂಕ್ತ ರಸ್ತೆ ಮಾರ್ಗವಿದೆ. -ಚಿತ್ರ-ಲೇಖನ: ಕ.ಮ. ರವಿಶಂಕರ