ಸೇಂಟ್ ಮೇರಿಸ್ ದ್ವೀಪ ಸುಂದರ ಬೋಟ್‌ನೊಳು ಸಮುದ್ರದಲ್ಲಿ ಪ್ರಯಾಣ. ಅಲೆಗಳ ನರ್ತನವನ್ನು ಕಣ್ಣಂಚಲ್ಲಿ ಕ್ಲಿಕ್ಕಿಸಿದ ಅನುಭವ. ಜೀವನದುದ್ದಕ್ಕೂ ನೆನಪಲ್ಲುಳಿಯುವ ಅಪೂರ್ವ ಗಳಿಗೆ. ಈ ರೋಮಾಂಚನವನ್ನು ಸವಿಯಲು ಸೇಂಟ್ ಮೇರಿಸ್ ದ್ವೀಪಕ್ಕೆ ಒಮ್ಮೆ ಪ್ರಯಾಣಿಸಿ. ಈ ದ್ವೀಪಕ್ಕೆ ಭೇಟಿ ಕೊಡಬೇಕಾದರೆ ಉಡುಪಿ ಜಿಲ್ಲೆಯಲ್ಲಿರುವ ಮಲ್ಪೆ ಬೀಚ್‌ನಿಂದ ಹಡಗಿನಲ್ಲಿ ಸಾಗಬೇಕು. ಉಡುಪಿ ಪಟ್ಟಣ ಮಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿದೆ. ಇಲ್ಲಿಂದ 6 ಕಿ.ಮೀ. ಮಲ್ಪೆ ಮೀನುಗಾರಿಕಾ ಬಂದರಿಗೆ. ಇಲ್ಲಿಂದ ಸುಮಾರು ಅರ್ಧ ಗಂಟೆ ಹಡಗಿನಲ್ಲಿ ಪಯಣಿಸಿದರೆ, ಸೇಂಟ್ ಮೇರಿಸ್ ತೀರಕ್ಕೆ ಬಂದಿಳಿಯುತ್ತೇವೆ. ಅಂದ ಹಾಗೆ ಹಡಗಿನಲ್ಲಿ ಪಯಣಿಸುವುದು ಅಪೂರ್ವ ಅನುಭವ. ಜೊತೆಯಲ್ಲಿ ಗೆಳೆಯರಿದ್ದರಂತೂ ಕೇಳುವುದೇ ಬೇಡ. ಕಡಲಿನ ನರ್ತನದ ನಡುವೆ ಗೆಳೆಯರ ಮೋಜು ಮಸ್ತಿಯ ನಡುವೆ ಸೇಂಟ್ ಮೇರಿಸ್ ದ್ವೀಪ ತಲುಪಿದ್ದೇ ಗೊತ್ತಾಗದು. ಮಲ್ಪೆ ಕಡಲ ಕಿನಾರೆಯಿಂದ ಬೆಳಗ್ಗೆ 10ರಿಂದ ಸಂಜೆ 4.30ರವರೆಗೂ ಬೋಟ್‌ಗಳು ಓಡಾಟ ನಡೆಸುತ್ತವೆ. ದ್ವೀಪದ ಆಸುಪಾಸಿನಲ್ಲಿ ಯಾವುದೇ ಅಂಗಡಿ ಅಥವಾ ಅವಶ್ಯಕ ವಸ್ತುಗಳು ಕಾಣಸಿಗದು. ಆದ್ದರಿಂದ ಮೊದಲೇ ಕೊಂಡು ಹೋಗುವುದು ಉತ್ತಮ. ಇಲ್ಲೇನಿದೆ ವಿಶೇಷ? ಸುತ್ತ ಸಮುದ್ರ, ನೀಲಿ, ಹಸಿರು ಬಣ್ಣದಿಂದ ಕಂಗೊಳಿಸುವ ನೀರು ಬಂಡೆಗಪ್ಪಳಿಸುವುದನ್ನು ನೋಡುವುದೇ ಆನಂದ. ಇದಲ್ಲದೆ ದ್ವೀಪದಲ್ಲಿ ಆಕರ್ಷಕ ಕಲ್ಲುಗಳನ್ನು ಕಾಣಬಹುದು. ಇದರೊಡನೆ ಸುತ್ತಲೂ ತೆಂಗಿನ ಮರದ ಸಾಲು, ಪ್ರಾಕೃತಿಕ ಕೆತ್ತನೆಯ ಕಲ್ಲು ಬಂಡೆಗಳನ್ನು ಕಾಣಬಹುದು. ಅಂದ ಹಾಗೆ ಇದು ನೈಸರ್ಗಿಕವಾದ ಕಪ್ಪು ಶಿಲೆಯಾಗಿದೆ. ನಮ್ಮ ದೇಶದಲ್ಲೇ ಈ ರೂಪದ ಶಿಲೆಗಳನ್ನು ಇಲ್ಲಿ ಬಿಟ್ಟು ಬೇರೆಲ್ಲೂ ಕಾಣಲೂ ಸಾಧ್ಯವಿಲ್ಲ. ಈ ಶಿಲೆಗೆ ಆರು ಮುಖ. ಆದ್ದರಿಂದಲೇ ಇದನ್ನು ಷಡ್ಭುಜೀಯ ರೂಪದ ಕಪ್ಪುಶಿಲೆ ಎಂದು ಕರೆಯುತ್ತಾರೆ. ದೇಶದ 26 ಭೌಗೋಳಿಕ ಸ್ಮಾರಕಗಳಲ್ಲಿ ಸೇಂಟ್ ಮೇರಿಸ್ ಸಹ ಒಂದು. ಮಾತ್ರವಲ್ಲದೆ ಪ್ರಮುಖ ಜೀಯೋ ಪ್ರವಾಸೋದ್ಯಮ ಕೇಂದ್ರವೆಂದು ಗುರುತಿಸಲ್ಪಟ್ಟಿದೆ. ಕೆಲವರಿಗೆ ಸಮುದ್ರದಲ್ಲಿ ಚಿಪ್ಪುಗಳ ಸಂಗ್ರಹದ ಹವ್ಯಾಸವಿರುತ್ತದೆ. ಅಂಥವಿರಿಗೆ ಈ ದ್ವೀಪ ದಾರಿ ಮಾಡಿಕೊಟ್ಟಂತೆ. ಅನೇಕ ಜಾತಿಯ ಮೀನುಗಳೂ ಕಾಣಸಿಗುತ್ತವೆ. ಜೀವಂತ ಶಂಖ ಹುಳಗಳೂ, ದೊಡ್ಡ ಗಾತ್ರದ ಏಡಿಗಳನ್ನೂ ನೋಡಿ ಕ್ಯಾಮೆರಾ ಹಸಿವಿಗಿಷ್ಟು ಆಹಾರ ಒದಗಿಸಬಹುದು. ಬಹುಕಾಲದ ಹಿಂದೆ ನಡೆದ ಜ್ವಾಲಾಮುಖಿಯ ಸ್ಫೋಟ ಈ ದ್ವೀಪದಲ್ಲಿನ ಕಪ್ಪುಶಿಲೆಯ ಹುಟ್ಟಿಗೆ ಕಾರಣವಂತೆ. ಅಲ್ಲದೆ ಹಿಂದೆ ಪೋರ್ಚುಗೀಸ್ ನಾವಿಕ ವಾಸ್ಕೋ ಡಿ ಗಾಮ ತನ್ನ ಸಮುದ್ರಯಾನದ ಸಮಯದಲ್ಲಿ ಈ ದ್ವೀಪ ತಲುಪಿದ್ದ. ಈ ದ್ವೀಪದಲ್ಲಿ ಕ್ರಿಸ್ತನ ಕ್ರಾಸ್ ಚಿಹ್ನೆಯನ್ನು ಹಾಕಿ ಮುಂದೆ ಕೇರಳದ ಕಡೆಗೆ ಪಯಣಿಸಿದನು ಎಂಬುದು ಇತಿಹಾಸ. -ನವೀನ್ ಭಟ್, ಇಳಂತಿಲ ಚಿತ್ರಗಳು: ಅಭಿಷೇಕ್