ಕೊಟ್ಟೂರು ಮಾಲೆ ಈ ದಿನಗಳಲ್ಲಿ ಕೊಟ್ಟೂರಿಗೆ ಕಾಲಿಟ್ಟಿರೊ, ಒಂದು ಬಗೆಯ ವಿಸ್ಮೃತಿಗೆ ಒಳಗಾಗುತ್ತೀರಿ.ನಿಮಗೆ ಎದುರಾಗುವ ಬಹುತೇಕರು ಶ್ವೇತವಸ್ತ್ರಧಾರಿಗಳು. ಕತ್ತಿನಲ್ಲಿ ರುದ್ರಾಕ್ಷಿ ಮಾಲೆ, ಹೆಗಲ ಮೇಲೊಂದು ಕೆಂಪು ವಸ್ತ್ರ. ಇವರ ನಡೆ-ನುಡಿಗಳೂ ಭಿನ್ನ. ಇವರೆಲ್ಲಾ ತಮ್ಮ ಮಾತು ಆರಂಭಿಸುವುದು ಮತ್ತು ಮುಗಿಸುವುದು 'ಗುರು ಸ್ವಾಮಿ' ಎನ್ನುವ ಗೌರವಪೂರ್ವಕ ಸಂಭೋದನೆಯಿಂದ. ಬಳ್ಳಾರಿ ಜಿಲ್ಲೆ ಕೊಟ್ಟೂರು ಹಾಗೂ ಸುತ್ತಮುತ್ತಲಿನ ಜನ ತಮ್ಮ ಮನೆ-ಮನ ದೇವರಾದ ಗುರು ಕೊಟ್ಟೂರೇಶ್ವರನಿಗೆ ಭಕ್ತಿ ಸಮರ್ಪಿಸುವುದು ಹೀಗೆ ಮಾಲಾಧಾರಿಗಳಾಗಿ! ಮಾಲಾಧಾರಣೆ ಉದ್ದೇಶ ಕೊಟ್ಟೂರೇಶ್ವರನಿಗೆ ಭಕ್ತಿ ಸಮರ್ಪಿಸುವುದು. ಆದರೆ ಅಂತರಂಗ ಶುದ್ಧಿಯ ಮಹೋನ್ನತ ಆಶಯವೂ ಇದರ ಹಿಂದಿದೆ. ದಶಕಗಳ ಹಿಂದೆ ಆರಂಭವಾದ ಈ ಮಾಲಾಧಾರಣೆಯ ಪೂರ್ಣಾವಧಿ 45 ದಿನ. ಆದರೆ ಈಗ ಭಕ್ತರು ಅನುಕೂಲಕ್ಕೆ ತಕ್ಕಂತೆ ಕಾಲಮಿತಿ ಬದಲಾಯಿಸಿಕೊಂಡಿದ್ದಾರೆ. ಈಗ 21,11,9,5 ದಿನಗಳ ಅವಧಿಗೂ ಮಾಲೆ ಧರಿಸುವ ಪರಿಪಾಠ ಬೆಳೆದುಬಂದಿದೆ. ದಿನಚರಿ ನಸುಕಿನ ಜಾವ ಮೈ ಕೊರೆಯುವ ಚಳಿಯಲ್ಲಿಯೂ ತಣ್ಣೀರು ಸ್ನಾನ ಮಾಡಿ, ಪೂಜೆ-ಪುನಸ್ಕಾರಗಳಿಗೆ ಅಣಿಯಾಗುತ್ತಾರೆ. ಸ್ಥಳೀಯರಾದರೆ ಡೋಣೂರು ಚಾನುಕೋಟಿ ಮಠದ ಸಮುದಾಯ ಭವನದಲ್ಲಿ ಪೂಜೆಗೆ ಧಾವಿಸುತ್ತಾರೆ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು ಹಾಗೂ ಪ್ರಶಾಂತ ಅಜ್ಜನವರು ಇದರ ನೇತೃತ್ವ ವಹಿಸಿಕೊಳ್ಳುತ್ತಾರೆ. ನೆರೆದ ಭಕ್ತರಿಂದ ಮಂತ್ರಪಠಣ, ಸಾಮೂಹಿಕ ಭಜನೆ, ಧ್ಯಾನ, ಜಪ, ಲಿಂಗಾಭಿಷೇಕ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಗಳು ತಾಸುಗಟ್ಟಲೆ ನಿರಾಂತಕವಾಗಿ ಸಾಗುತ್ತದೆ. ಇದೇ ಪ್ರಕ್ರಿಯೆ ಗೋಧೂಳಿ ಸಮಯದಲ್ಲೂ ಮರುಕಳಿಸುತ್ತದೆ. ಈ ನಡುವಿನ ಸಮಯದಲ್ಲಿ ಗುರುಬಸವನ ನಾಮ ಸ್ಮರಣೆಯಲ್ಲೇ ಮಾಲಾಧಾರಿಗಳು ಕಾಲ ಕಳೆಯುತ್ತಾರೆ. ಇಲ್ಲಿಗೇ ಬರಬೇಕಿಲ್ಲ ಪರಸ್ಥಳದವರೂ ಮಾಲಾಧಾರಿಗಳಾಗಬಹುದು. ಅದಕ್ಕೆಂದು ಶ್ರೀಕ್ಷೇತ್ರಕ್ಕೇ ಬರಬೇಕೆಂಬ ನಿಯಮ ಇಲ್ಲ. ಬದಲಾಗಿ ಭಕ್ತರು ತಮ್ಮ-ತಮ್ಮ ಊರುಗಳಲ್ಲಿರುವ ಗುರುಗಳಿಂದ ರುದ್ರಾಕ್ಷಿ ಧಾರಣೆ ಮಾಡಿಸಿಕೊಂಡು, ಪೂಜೆ ಪುನಸ್ಕಾರಗಳ ವಿಧಿ-ವಿಧಾನಗಳನ್ನು ಅರಿತುಕೊಂಡರೆ ಸಾಕು. ಅದನ್ನು ಅನುಸರಿಸಿ ತಾವು ಇದ್ದ ಸ್ಥಳದಲ್ಲಿಯೇ ಪೂಜಾ ಕಾರ್ಯಗಳನ್ನು ನೆರವೇರಿಸಿಕೊಳ್ಳಬಹುದು. ಹಾಗಾಗಿಯೇ ಇಂದು ನೆರೆಯ ದಾವಣಗೆರೆ, ರಾಣೆಬೆನ್ನೂರು, ಕೊಪ್ಪಳ, ಗದಗ, ಗುಲ್ಬರ್ಗ ಸೇರಿದಂತೆ ಇತರೆಡೆಗಳಲ್ಲೂ ಗುರುಬಸವನ ಮಾಲಾಧಾರಿಗಳನ್ನು ಕಾಣುತ್ತೇವೆ. ದೀಕ್ಷೆ ಅಗತ್ಯ ಮಾಲಾಧಾರಣೆ ಮಾಡುವರು ಕಡ್ಡಾಯವಾಗಿ ಲಿಂಗದೀಕ್ಷೆ ತೆಗೆದುಕೊಳ್ಳಬೇಕು. ದುಶ್ಚಟಗಳಿಂದ ದೂರ ಇರಬೇಕು. ಮನೆಯಿಂದ ಹೊರಗಡೆ ತಿಂಡಿ-ತಿನಿಸುಗಳನ್ನು ಮುಟ್ಟಕೂಡದು. ಬರಿಗಾಲಲ್ಲಿ ನಡೆದಾಡಬೇಕು. ರುದ್ರಾಕ್ಷಿ ಮಾಲೆ ಧರಿಸಬೇಕಾಗುತ್ತದೆ. ಇನ್ನೊಬ್ಬರೊಂದಿಗೆ ಮಾತಿಗೆ ಇಳಿಯುವಾಗ 'ಗುರು ಸ್ವಾಮಿ' ಎಂದೇ ಸಂಭೋದಿಸಬೇಕು. ಕಠಿಣ ಶಬ್ದಗಳನ್ನು ಬಳಿಸಿದರೆ ಅನ್ಯರ ಮನಸ್ಸಿಗೆ ನೋವುಂಟಾಗುತ್ತದೆ ಎನ್ನುವುದು ಇದರ ಹಿಂದಿನ ಉದ್ದೇಶ. ಮುಕ್ತಾಯ ಹೇಗೆ? ಕಾರ್ತೀಕ ಮಾಸದ ಆರಂಭದ ದಿನ ಮಾಲೆ ಧರಿಸಿದರೆ, ತೆಗೆಯುವುದು ಸರಿಯಾಗಿ 45ನೇ ದಿನ ನಡೆಯುವ ಕೊಟ್ಟೂರೇಶ್ವರನ ಕಾರ್ತಿಕೋತ್ಸವ ಹಾಗೂ 'ಲಕ್ಷ ದೀಪೋತ್ಸವ'ದ ಮಾರನೇ ದಿನ (ಈ ವರ್ಷದ ಕಾರ್ತೀಕೋತ್ಸವ ಡಿ.16ರಂದು ನಡೆಯಲಿದೆ). ಸ್ವಾಮಿಯ ಭಕ್ತರು ಎಲ್ಲಿಯೇ ಮಾಲೆಯನ್ನು ಹಾಕಿದ್ದರೂ ಮುಕ್ತಾಯಕ್ಕೆ ಮಾತ್ರ ಗುರು ಕೊಟ್ಟೂರೇಶ್ವರನ ಸನ್ನಿದ್ಧಿಗೆ ಬರಲೇಬೇಕು. ಪರಿಣಾಮವಾಗಿ ಅಂದು ಸಾವಿರಾರು ಮಾಲೆಧಾರಿಗಳ ದಿಬ್ಬಣ, ಜಾತ್ರೆ ಕೊಟ್ಟೂರಿನಲ್ಲಿರುತ್ತದೆ. ಮುಂಜಾನೆ ಪೂಜೆ-ಪುನಸ್ಕಾರಗಳನ್ನು ಮುಗಿಸಿಕೊಂಡ ನಂತರ ಮಾಲೆಧಾರಿಗಳು ತಮ್ಮ ಮಾಲೆಯನ್ನು ಕಳಚುತ್ತಾರೆ. ಆದರೆ ಈ ನಡುವಿನ ಅವಧಿಯಲ್ಲಿ ಬೆಳೆಸಿಕೊಂಡ ಉತ್ತಮ ಗುಣಗಳನ್ನು ಮುಂದುವರೆಸುವ ಇಚ್ಛೆ ಈ ಭಕ್ತರ ಮನಸ್ಥಿತಿಯ ಮೇಲೆ ಅವಲಂಬಿತವಾಗಿರತ್ತದೆ ಎಂಬುವುದು ವಾಸ್ತವ. ಮಾಲೆ ಧರಿಸಲು ಯಾವ ಅಡ್ಡಿಯೂ ಇಲ್ಲ ಗುರು ಕೊಟ್ಟುರೇಶ್ವರ ಪಂಚಗಣಾಧೀಶ್ವರರಲ್ಲಿ ಒಬ್ಬ. ಬಸವೋತ್ತರ ಪರಂಪರೆಯಲ್ಲಿ ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ವಿರುದ್ದ ದುಡಿದ ಶರಣರಲ್ಲಿ ಪ್ರಮುಖ. ಆದ್ದರಿಂದ ಈತನಲ್ಲಿ ಜಾತಿ ವ್ಯವಸ್ಥೆಗೆ ಅವಕಾಶವಿಲ್ಲ. ಅದು ಈ ಮಾಲೆಧಾರೆ ಆಚರಣೆಯಲ್ಲೂ ಮೇಳೈಸಿ, ಸರ್ವ ಧರ್ಮ ಸಮನ್ವಯತೆ ಸಾಧಿಸುವಲ್ಲಿ ಪ್ರಮುಖ ಮೈಲುಗಲ್ಲಾಗಿದೆ. ಅನ್ಯ ಧರ್ಮೀಯರು, ಸರ್ವಜಾತಿಯವರೂ ಈ ಮಾಲಾಧಾರಣೆಗೆ ಅರ್ಹರು. ಗೃಹಸ್ಥನಾಗಿದ್ದರೂ ಚಿಂತೆಯಿಲ್ಲ, ಗುರುಬಸವನಲ್ಲಿ ಶ್ರದ್ಧೆ ಭಕ್ತಿ ಇಟ್ಟುಕೊಂಡು ವ್ರತ ಆಚರಿಸಿದರೆ ಸಾಕು. ಈಗಾಗಿ ಶ್ರೀ ಗುರುವಿನ ಮಾಲೆಯನ್ನು ಕಿರಿಯರಿಂದ ಹಿಡಿದು ವಯೋವೃದ್ದರು, ವ್ರತ, ತಪಸ್ಸಾಗಿ ಸ್ವೀಕರಿಸುತ್ತಾರೆ. ವರ್ಷದಿಂದ ವರ್ಷಕ್ಕೆ ಮಾಲಧಾರಿಗಳ ಸಂಖ್ಯೆ ದುಪ್ಪಟ್ಟಾಗುತ್ತಿದೆ. - ಸ್ವರೂಪಾನಂದ ಎಂ.ಕೊಟ್ಟೂರು